ಪುಟ್ಟಪರ್ತಿ ಸಾಯಿಬಾಬಾರ ಮೇಲೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಕಣ್ಣಿಟ್ಟಿತ್ತೇಕೆ?

 

ಡಿಜಿಟಲ್ ಕನ್ನಡ ವಿಶೇಷ:

ಅಮೆರಿಕದ ಖ್ಯಾತ ಗುಪ್ತಚರ ಸಂಸ್ಥೆ ಸಿಐಎ (ಸೆಂಟ್ರಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ), 2000ನೇ ಇಸ್ವಿವರೆಗಿನ ಹಲವು ರಹಸ್ಯ ಕಡತಗಳನ್ನು ಸಾರ್ವಜನಿಕಗೊಳಿಸಿದೆ. ಬರೋಬ್ಬರಿ 9,30,000ದಷ್ಟು ದಾಖಲೆಗಳು ಇಲ್ಲಿವೆ.

ಭಾರತಕ್ಕೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಸಿಐಎ ಹೇಗೆ ಎಚ್ಚರಿಕೆ ವಹಿಸಿತ್ತು ಎಂಬುದೂ ಇಲ್ಲಿ ತಿಳಿದುಬರುತ್ತದೆ. ಅದರಲ್ಲಿ ಆಸಕ್ತಿಕರವಾಗಿರೋದು ‘ಇಂಡಿಯಾಸ್ ಸಾಯಿಬಾಬಾ’ ಅನ್ನೋದೊಂದು ಕಡತ. ಸಿಐಎ ಕೆಲಸವೆಂದರೆ ರಹಸ್ಯಾತಿರಹಸ್ಯ ಬೆಂಬತ್ತಿ ಹೋಗಿ ಕಾರ್ಯಾಚರಣೆಗಳನ್ನು ನಡೆಸುವುದು ಮಾತ್ರವಲ್ಲ. ಬದಲಿಗೆ ಜಾಗತಿಕ ವಿದ್ಯಮಾನಗಳು ಜಗತ್ತನ್ನು ಹೇಗೆಲ್ಲ ಪ್ರಭಾವಿಸುತ್ತಿವೆ ಎಂಬ ಅಧ್ಯಯನಗಳಲ್ಲೂ ಅದು ತೊಡಗಿಸಿಕೊಳ್ಳುತ್ತದೆ. ಜಗತ್ತಿನ ಸಾಂಸ್ಕೃತಿಕ ಟ್ರೆಂಡ್ ಗಳ ಬಗ್ಗೆ ಸಿಐಎ ಅಧ್ಯಯನ ಮಾಡುತ್ತಿದ್ದಾಗ ಅವರಿಗೆ ಭಾರತದ ಸಾಯಿಬಾಬಾ ಜನಪ್ರಿಯತೆ ಒಂದು ಸ್ವಾರಸ್ಯದ ಅಂಶವಾಗಿ ಕಾಡಿದೆ.

ಪುಟಪರ್ತಿಯ ಸಾಯಿಬಾಬಾ ಜಗತ್ತಿಗೆ ಒಪ್ಪಿತವಾಗುವ ಹೊಸ ಧರ್ಮವೊಂದನ್ನು ಹುಟ್ಟುಹಾಕುವ ಸಾಧ್ಯತೆ ಇದೆ ಅಂತ ಅಭಿಪ್ರಾಯ ತಾಳಿತ್ತು ಸಿಐಎ! ಅದರ ಒಟ್ಟಾರೆ ಗ್ರಹಿಕೆ ಈ ವಿಷಯದಲ್ಲಿ ಹೀಗಿತ್ತು-

‘ಸಾಯಿಬಾಬಾರ ಮಂತ್ರ-ತಂತ್ರಗಳಿಗೆಲ್ಲ ವೈಜ್ಞಾನಿಕ ಬೆಂಬಲ ಇಲ್ಲವೆನ್ನುವುದು ಬೇರೆ ಮಾತು. ಆದರೆ ಜನರಂತೂ ದೊಡ್ಡ ಪ್ರಮಾಣದಲ್ಲಿ ನಂಬುತ್ತಿದ್ದಾರೆ. ಅಲ್ಲದೇ ಸಾಯಿಬಾಬಾ ತಮ್ಮನ್ನು ಕಲ್ಕಿಯ ಅವತಾರ ಎಂದೂ ಬಿಂಬಿಸಿಕೊಳ್ಳುತ್ತಿದ್ದಾರೆ. ಕೇವಲ ಹಿಂದುಗಳಲ್ಲದೇ ಎಲ್ಲ ಧರ್ಮಗಳ ಜನರೂ ಇವರ ಭಕ್ತರಾಗುತ್ತಿದ್ದಾರೆ. ಬಹು ಸಂಸ್ಕೃತಿ- ಬಹು ನಂಬಿಕೆಗಳ ಭಾರತದಲ್ಲಿ ಭಿನ್ನ ನಂಬಿಕೆಗಳ ಜನರನ್ನೆಲ್ಲ ಒಂದಾಗಿ ಸೆಳೆಯುವ ಜನಪ್ರಿಯತೆ ಸಾಯಿಬಾಬಾಗಿದೆ. ಮತಬ್ಯಾಂಕಿಗಾಗಿ ರಾಜಕಾರಣಿಗಳೂ ಇವರ ದರ್ಶನ ಪಡೆಯುತ್ತಿದ್ದಾರೆ. ಭಾರತದ ಪ್ರಧಾನಿ ನರಸಿಂಹರಾವ್ ಅವರು 1991ರಲ್ಲಿ ಸಾಯಿಬಾಬಾ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಪಾರ ಸಂಪನ್ಮೂಲ, ಉಚಿತ ಆರೋಗ್ಯ ಯೋಜನೆ ಹಾಗೂ ರಾಜಕೀಯ ಸಂಪರ್ಕಗಳಿರುವುದರಿಂದ ಜಗತ್ತನ್ನು ಆವರಿಸಿಕೊಳ್ಳುವ ಮತ್ತೊಂದು ಧರ್ಮ ಇಲ್ಲಿ ಹುಟ್ಟುವ ಸಾಧ್ಯತೆ ಇದೆ..’

ಉಳಿದಂತೆ ಭಾರತದ ವಿಷಯದಲ್ಲಿ ಸಿಐಎನ ಏಳು-ಬೀಳುಗಳು ಹೀಗೆ ಬಹಿರಂಗವಾಗಿವೆ…

  • 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಬಹುದೆಂಬ ಯಾವ ಸುಳಿವೂ ಸಿಐಎಗೆ ಇರಲಿಲ್ಲ.
  • ಅದಕ್ಕೂ ಹಿಂದೆ, 1971ರ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಸಹ ಭಾರತದ ಕುರಿತ ಗುಪ್ತಚರ ಮಾಹಿತಿ ಸಂಗ್ರಹದಲ್ಲಿ ಅಮೆರಿಕ ವೈಫಲ್ಯ ಎದುರಿಸಿದ್ದರಿಂದ ಅಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸ್ಸಿಂಜರ್ ಎದುರು ಆಯ್ಕೆಗಳು ಬಹಳ ಕಡಿಮೆ ಇದ್ದವು.
  • ಸೆಪ್ಟೆಂಬರ್ 1948ರ ವೇಳೆಗೆಲ್ಲ ನೇತಾಜಿ ಸುಭಾಷ್ ಚಂದ್ರ ಬೋಸ್ ಮೃತರಾಗಿದ್ದರೆಂಬುದನ್ನು ಸಿಐಎ ನಂಬಿತ್ತು.
  • ಭಾರತ- ಪಾಕಿಸ್ತಾನಗಳ ನಡುವಿನ ಅಣ್ವಸ್ತ್ರ ಪೈಪೋಟಿ ಬಗ್ಗೆ ಅಮೆರಿಕ ಎಷ್ಟು ಹೆದರಿತ್ತೆಂದರೆ, 1980ರ ವೇಳೆಗೆ ಉಪಖಂಡದ ಆತಂಕ ನಿವಾರಣೆಗೆ ವಿಶೇಷ ನ್ಯೂಕ್ಲಿಯರ್ ರಾಯಭಾರಿ ಆಯೋಜನೆಗೆ ಸಹ ಯೋಚಿಸಿತ್ತು.

Leave a Reply