ಸಚಿವ ಜಾರಕಿಹೊಳಿ ಮನೆಯಲ್ಲಿ ಸಿಕ್ತು ₹ 150 ಕೋಟಿ- 12 ಕೆ.ಜಿ ಚಿನ್ನ, ಯಡಿಯೂರಪ್ಪ ಜೆಡಿಎಸ್ ಬಾಗಿಲು ತಟ್ಟಿದ್ರು: ಹೆಚ್ಡಿಕೆ, ಕೇಂದ್ರ ಬಜೆಟ್ ಮುಂದೂಡಿಕೆ ಇಲ್ಲ, ಸರ್ಕಾರದ ವಿರುದ್ಧ ಡಿವಿಎಸ್ ಗುಡುಗು

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 121ನೇ ಜಯಂತಿ ಅಂಗವಾಗಿ ಸೋಮವಾರ ವಿಧಾನಸೌಧದಲ್ಲಿ ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ ಜಾರ್ಜ್.

ಡಿಜಿಟಲ್ ಕನ್ನಡ ಟೀಮ್:

ರಮೇಶ್ ಜಾರಕಿಹೊಳಿ ಐಟಿ ದಾಳಿ

ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಅವರ ಮನೆ ಮೇಲೆ ಕಳೆದ ಶುಕ್ರವಾರದಿಂದ ಮೂರು ದಿನಗಳ ಕಾಲ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಗಳು ದಾಖಲೆ ಇಲ್ಲದ ₹ 150 ಕೋಟಿ ಹಣ ಹಾಗೂ 12 ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ತೆರಿಗೆ ಇಲಾಖೆ ಅಧಿಕಾರಿಗಳು ಗೋಕಾಕ್ ಹಾಗೂ ಬೆಂಗಳೂರಿನಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದು, ಈ ವೇಳೆ ಅನೇಕ ಆಸ್ತಿ ಪಾಸ್ತಿ, ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಿದ್ದರು. ಈ ವೇಳೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಮತ್ತು ಚಿನ್ನ ಸಿಕ್ಕಿದೆ. ದಾಖಲೆ ಇಲ್ಲದ ಹಣ ಮತ್ತು ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಸಚಿವರು ಸೂಕ್ತ ದಾಖಲೆ ಒದಗಿಸಿದರೆ ಅದನ್ನು ಮರಳಿ ನೀಡುವುದಾಗಿ ತೆರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಯಡಿಯೂರಪ್ಪಗೆ ಹೆಚ್ಡಿಕೆ ಟಾಂಗ್

‘ಬಿಜೆಪಿ ಪಕ್ಷದ ನಿಷ್ಠೆ, ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಒಮ್ಮೆ ಜೆಡಿಎಸ್ ಪಕ್ಷದ ಬಾಗಿಲು ತಟ್ಟಿದ್ದರು…’ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪನವರು 2005ರಲ್ಲೇ ನನ್ನನ್ನು ಭೇಟಿ ಮಾಡಿದ್ದರು. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಜೆಡಿಎಸ್ ಪಕ್ಷ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಈಗ ಪಕ್ಷದ ನಿಷ್ಠೆ ಬಗ್ಗೆ ಮಾತನಾಡುತ್ತಿದ್ದಾರೆ. ಯಡಿಯೂರಪ್ಪನವರ ಜತೆಗೆ ಶೋಭಾ ಕರಂದ್ಲಾಜೆ ಹಾಗೂ ರಾಮಚಂದ್ರೇ ಗೌಡ ಅವರು ಸಹ ಜೆಡಿಎಸ್ ಪಕ್ಷ ಸೇರಲು ಮುಂದಾಗಿದ್ದರು’ ಎಂದು ಹೇಳಿದ್ದಾರೆ.

ಇನ್ನು ಸೋಮವಾರ ನಡೆದ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷ ಗೆಲ್ಲಬಲ್ಲ 130 ಕ್ಷೇತ್ರಗಳು ಹಾಗೂ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ ವೇಳೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಪಕ್ಷ ಎಲ್ಲಿ ಗೆಲ್ಲುವ ಅವಕಾಶ ಹೊಂದಿದೆ. ಅಲ್ಲಿ ವರ್ಚಸ್ಸಿರುವ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದನ್ನು ಚರ್ಚಿಸಲು ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಜತೆಗೆ ಸದಸ್ಯರಾದ ಜಿ.ಟಿ ದೇವೇಗೌಡ, ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶಂಪುರ್. ಬಿ.ಎಂಫಾರೂಕ್, ಟಿ.ಎ ಶರವಣ, ಮಧುಬಂಗಾರಪ್ಪ, ಅಲ್ಕೋಡು ಹನುಮಂತಪ್ಪ, ಶ್ರೀಮಂತ ಪಾಟೀಲ ಬಾಗಿ ಹಾಗೂ ವೆಂಕಟರಾವ್ ನಾಡಗೌಡ ಭಾಗವಹಿಸಿದ್ದರು.

ಕೇಂದ್ರ ಬಜೆಟ್ ಮುಂದೂಡಿಕೆ ಇಲ್ಲ

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಫೆ.1ರಂದು ನಿಗದಿಯಾಗಿರುವ ಕೇಂದ್ರ ಬಜೆಟ್ ಅನ್ನು ಮುಂದೂಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆ ಮೂಲಕ ಬಜೆಟ್ ಮುಂದೂಡುವ ಪ್ರಯತ್ನದಲ್ಲಿದ್ದ ವಿರೋಧ ಪಕ್ಷಗಳಿಗೆ ತೀವ್ರ ಹಿನ್ನಡೆ ಎದುರಾಗಿದೆ. ಎಂ.ಎಲ್ ಶರ್ಮಾ ಎಂಬುವರರು ಸುಪ್ರೀಂ ಕೋರ್ಟ್ ನಲ್ಲಿ ಈ ಅರ್ಜಿ ಸಲ್ಲಿಸಿದ್ದರು. ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯ ಫೆ.1ರಂದು ಕೇಂದ್ರ ಬಜೆಟ್ ನಿಂದ ಈ ರಾಜ್ಯಗಳ ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳುವ ಮೂಲಕ ಅರ್ಜಿಯನ್ನು ವಜಾಗೊಳಿಸಿದೆ.

ಲೋಕಾಯುಕ್ತಕ್ಕೆ ನ್ಯಾ.ವಿಶ್ವನಾಥಶೆಟ್ಟಿ ಹೆಸರು ಪುನರ್ ಸಲ್ಲಿಕೆ

ನೂತನ ಲೋಕಾಯುಕ್ತರನ್ನಾಗಿ ನ್ಯಾ. ವಿಶ್ವನಾಥಶೆಟ್ಟಿ ಅವರನ್ನೇ ನೇಮಕ ಮಾಡಲು ಸೂಕ್ತ ವಿವರಣೆಗಳ ಜತೆ ರಾಜ್ಯಪಾಲರಿಗೆ ಮರು ಮನವಿ ಸಲ್ಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ನೇತಾಜಿ ಸುಭಾಷ್ ಚಂದ್ರಬೋಸ್ ಅವರ 121ನೇ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ನೇತಾಜಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಮುಖ್ಯಮಂತ್ರಿಗಳು, ‘ರಾಜ್ಯ ಸರ್ಕಾರ ಲೋಕಾಯುಕ್ತ ಹುದ್ದೆಗೆ ನ್ಯಾ.ವಿಶ್ವನಾಥಶೆಟ್ಟಿ ಅವರ ಹೆಸರನ್ನು ಹೆಸರನ್ನು ಈಗಾಗಲೇ ಕಳುಹಿಸಿತ್ತು. ಆದರೆ ರಾಜ್ಯಪಾಲರು ಕೆಲವೊಂದು ಸ್ಪಷ್ಟನೆ ಬಯಸಿ ಕಡತ ವಾಪಸ್ ಕಳುಹಿಸಿದ್ದಾರೆ. ರಾಜ್ಯಪಾಲರ ಸಂಶಯಗಳನ್ನು ನಿವಾರಿಸಲು ಸೂಕ್ತ ಸ್ಪಷ್ಟನೆ ನೀಡಲಾಗುವುದು’ ಎಂದರು.

ಸರ್ಕಾರದ ವಿರುದ್ಧ ಡಿವಿಎಸ್ ಟೀಕೆ

ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರದಿಂದ ಪರಿಹಾರ ತರುವುದು ರಾಜ್ಯ ಸರ್ಕಾರದ ಹೊಣೆ. ಇದನ್ನು ತರಲು ಸಾಧ್ಯವಿಲ್ಲ ಎಂದಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ಕೊಡಲಿ. ನಾವು ಹೋಗಿ ಪರಿಹಾರ ಹಣ ರಾಜ್ಯಕ್ಕೆ ಬರುವಂತೆ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ. ಬರದ ಪರಿಸ್ಥಿತಿಯಲ್ಲಿ ಕೇವಲ ಪರಿಹಾರದ ಮನವಿ ಸಲ್ಲಿಸಿ ಸುಮ್ಮನಾಗುವುದಲ್ಲ. ಕೇಂದ್ರದ ಬೆನ್ನು ಹತ್ತಬೇಕು. ಜವಾಬ್ದಾರಿ ತಗೋಬೇಕು. ಪರಿಹಾರ ಬಂದಿಲ್ಲ ಅಂತ ಸುಮ್ಮನಿರೋದಲ್ಲ.ಅದನ್ನು ತರುವ ಕೆಲಸ ನಿಮ್ಮದು. ಇಲ್ಲಿ ಕೂತ್ಕೊಂಡು ದೋಷಾರೋಪಣೆ ಮಾಡೋದು ಸರಿಯಲ್ಲ ಎಂದು ಮುಖ್ಯಮಂತ್ರಿಗಳ ವಿರುದ್ಧ ಸದಾನಂದ ಗೌಡರು ವಾಗ್ದಾಳಿ ನಡೆಸಿದರು.

Leave a Reply