‘ಇಸ್ಲಾಮಿಕ್ ಉಗ್ರವಾದ ಕೊನೆಯಾಗಲೇ ಬೇಕು’ ಸಿಐಎಗೆ ಟ್ರಂಪ್ ತಾಕೀತು, ಭಾರತಕ್ಕೆ ಸಿಕ್ಕಿತೇ ಇನ್ನಷ್ಟು ಸ್ಫೂರ್ತಿ

ಡಿಜಿಟಲ್ ಕನ್ನಡ ಟೀಮ್:

ಸದ್ಯ ಜಾಗತಿಕ ಮಟ್ಟದ ಸಮಸ್ಯೆಯಾಗಿರುವ ಭಯೋತ್ಪಾದನೆಯನ್ನು ಹತ್ತಿಕ್ಕುವ ಬಗ್ಗೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಟ್ಟಿ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ‘ಇಸ್ಲಾಮಿಕ್ ಸ್ಟೇಟ್ (ಐಎಸ್) ನಂತಹ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡದೆ ನಮ್ಮ ಮುಂದೆ ಬೇರೆ ದಾರಿಯೇ ಇಲ್ಲ’ ಎಂದು ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ)ಗೆ ಟ್ರಂಪ್ ತಾಕೀತು ಮಾಡಿದ್ದಾರೆ. ಆ ಮೂಲಕ ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಕುರಿತಾಗಿ ಟ್ರಂಪ್ ಯಾವ ರೀತಿ ಹೆಜ್ಜೆ ಇಡಲಿದ್ದಾರೆ ಎಂಬ ಸೂಚನೆಗಳು ಸಿಕ್ಕಿವೆ.

ಮೊದಲಿನಿಂದಲೂ ಭಯೋತ್ಪಾದನೆ ವಿರುದ್ಧ ತಮ್ಮ ಬಿಗಿ ನಿಲುವನ್ನು ವ್ಯಕ್ತಪಡಿಸುತ್ತಲೇ ಬಂದಿರುವ ಟ್ರಂಪ್, ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಹತ್ತಿಕ್ಕುವ ಬಗ್ಗೆ ಧ್ವನಿ ಎತ್ತಿದ್ದಾರೆ. ಇದರೊಂದಿಗೆ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರಿಗಿಂತಲೂ ಟ್ರಂಪ್ ಐಎಸ್ ಸಂಘಟನೆ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.

ಭಯೋತ್ಪಾದನೆ ಸಮಸ್ಯೆ ನಿಗ್ರಹದ ವಿಷಯವಾಗಿ ಭಾನುವಾರ ಸಿಐಎ ಮುಖ್ಯ ಕಚೇರಿಯಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಹೇಳಿರುವುದಿಷ್ಟು…

‘ಸುದೀರ್ಘ ಕಾಲದಿಂದ ನಾವು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಇಷ್ಟು ದೀರ್ಘಾವಧಿಯಲ್ಲಿ ನಾವು ಯಾವುದೇ ಯುದ್ಧವನ್ನು ಮಾಡಿಲ್ಲ. ನಮ್ಮ ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲಿ ನಾವು ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಿಲ್ಲ. ಹೀಗಾಗಿ ನಾವು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸಾಧ್ಯವಾಗಿಲ್ಲ.

ಐಎಸ್ಐಎಸ್ ನಂತಹ ಉಗ್ರ ಸಂಘಟನೆಗಳ ಸಮಸ್ಯೆಯಿಂದ ನಾವು ಹೊರ ಬರಲೇಬೇಕು. ಇದರ ಹೊರತಾಗಿ ನಮ್ಮ ಮುಂದೆ ಬೇರೆ ಯಾವುದೇ ದಾರಿ ಇಲ್ಲ. ಭಯೋತ್ಪಾದನೆ ಎಂಬ ಸಮಸ್ಯೆ ಭೂಮಿಯಿಂದಲೇ ಕಿತ್ತೊಗೆಯಬೇಕು.

ಇದೊಂದು ಅಧರ್ಮದ ಮಾರ್ಗವಾಗಿದ್ದು, ಇದರ ದುರುದ್ದೇಶದ ಪ್ರಮಾಣ ಎಷ್ಟರ ಮಟ್ಟಿಗಿದೆ ಎಂಬುದು ಈವರೆಗೂ ನಮ್ಮ ಅರಿವಿಗೆ ಬಂದಿಲ್ಲ. ಈ ಭಯೋತ್ಪಾದನೆ ಹತ್ತಿಕ್ಕಬೇಕಾದರೆ ಯುದ್ಧ ಮಾಡಲೇಬೇಕು. ಇದರ ಮತ್ತೊಂದು ಪರಿಣಾಮಗಳನ್ನು ನಾವು ಎದುರಿಸಲೇಬೇಕಿದೆ. ಇಲ್ಲವಾದರೆ ಈ ಭಯೋತ್ಪಾದನೆ ಸಮಸ್ಯೆ ಜತೆಗಿನ ಈ ತಿಕ್ಕಾಟವನ್ನು ಹೀಗೆ ಮುಂದುವರಿಸುತ್ತಲೇ ಇರಬೇಕಾಗುತ್ತದೆ. ರಾಕ್ಷಸನಂತೆ ಬೆಳೆಯುತ್ತಿರುವ ಈ ಭಯೋತ್ಪಾದನೆಯನ್ನು ಹತ್ತಿಕ್ಕುವ ಅತ್ಯುತ್ತಮ ಕಾರ್ಯವನ್ನು ಮಾಡಲೇಬೇಕಿದೆ. ಅದಕ್ಕೆ ಸಮಯ ಈಗ ಬಂದಿದ್ದು, ಭಯೋತ್ಪಾದನೆ ನಿರ್ಮೂಲನೆ ಆಗಲೇಬೇಕು.

ಈ ದೇಶ ಸುರಕ್ಷಿತವಾಗಿರಲು ಸಿಐಎನ ಪಾತ್ರ ಪ್ರಮುಖವಾಗಿದೆ. ಭಯೋತ್ಪಾದನೆಯಂತಹ ಸಮಸ್ಯೆಯನ್ನು ತೊಡೆದುಹಾಕುವಲ್ಲಿ ಈ ಸಂಸ್ಥೆಯ ಪಾತ್ರ ಮಹತ್ವದ್ದಾಗಲಿದೆ. ಭಯೋತ್ಪಾದನೆ ಜತೆಗೆ ಇತರೆ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಸಿಐಎ ಶ್ರಮಿಸುತ್ತಿದ್ದು, ನಾನು ಈ ಸಂಸ್ಥೆಯ ಬೆಂಬಲಕ್ಕೆ ನಿಲ್ಲುತ್ತೇನೆ.’

ಹೀಗೆ ಉಗ್ರವಾದದ ವಿರುದ್ಧ ಗಟ್ಟಿ ಧ್ವನಿ ಎತ್ತಿರುವ ಡೊನಾಲ್ಡ್ ಟ್ರಂಪ್ ಅವರ ನಿಲುವು ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ಬೆನ್ನಲ್ಲೇ ಭಯೋತ್ಪಾದನೆ ಹಾಗೂ ಅದಕ್ಕೆ ಪ್ರೋತ್ಸಾಹಿಸುತ್ತಿರುವ ರಾಷ್ಟ್ರಗಳ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಭಾರತ ಹಲವು ವರ್ಷಗಳಿಂದ ಧ್ವನಿ ಎತ್ತುತ್ತಲೇ ಬಂದಿದೆ. ಆದರೆ ಭಾರತದ ಧ್ವನಿಗೆ ಸೂಕ್ತ ಪ್ರತಿಕ್ರಿಯೆ ಈವರೆಗೂ ಬಂದಿಲ್ಲ. ಭಯೋತ್ಪಾದನೆ ವಿಷಯವಾಗಿ ಪಾಕಿಸ್ತಾನದ ಜತೆಗೆ ಭಾರತ ತಿಕ್ಕಾಟ ನಡೆಸುತ್ತಿರುವ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರ ಈ ನಿಲುವು ಹೊಸ ಭರವಸೆಗಳನ್ನು ಮೂಡಿಸಿದ್ದು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಅಮೆರಿಕದಿಂದ ಸೂಕ್ತ ಬೆಂಬಲ ಸಿಗುವ ನಿರೀಕ್ಷೆಗಳು ಮೂಡಿವೆ.

Leave a Reply