ಜಲ್ಲಿಕಟ್ಟು ಪ್ರತಿಭಟನೆ: ಕಲ್ಲು ತೂರಾಟ, ಲಾಠಿಚಾರ್ಜ್- ಪರಿಸ್ಥಿತಿ ಉದ್ವಿಗ್ನ, ಕರ್ನಾಟಕದಲ್ಲಿ ನಿಧಾನವಾಗಿ ಮೂಡುತ್ತಿದೆ ಕಂಬಳ ಪರ ಧ್ವನಿ

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ವಾರದಿಂದ ಜಲ್ಲಿಕಟ್ಟು ಆಚರಣೆಗೆ ಸಂಬಂಧಿಸಿದಂತೆ ಚೆನ್ನೈನ ಮರಿನಾ ಬೀಚ್ ನಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿದೆ. ಪರಿಣಾಮ ಕಲ್ಲುತೂರಾಟ ನಡೆಸಿ, ಪೊಲೀಸ್ ಠಾಣೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಜಲ್ಲಿಕಟ್ಟು ಆಚರಣೆಗೆ ಭಾನುವಾರ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡುವಂತೆ ಸೋಮವಾರ ಚೆನ್ನೈ ಪೊಲೀಸರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಆದರೆ ಜಲ್ಲಿಕಟ್ಟು ಆಚರಣೆಗೆ ಶಾಶ್ವತ ಪರಿಹಾರ ಸಿಗಬೇಕು ಎಂಬ ಕಾರಣಕ್ಕೆ ಪ್ರತಿಭಟನೆ ಮುಂದುವರೆದಿತ್ತು. ಜ.26ರಂದು ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಮರಿನಾ ಬೀಚ್ ನಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಲು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ತಿಕ್ಕಾಟ ಹೆಚ್ಚಾದ ಪರಿಣಾಮ ಪರಿಸ್ಥಿತಿ ಕೈಮೀರಿತು. ಈ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದ್ದು, ಪೊಲೀಸರು ಸಹ ಲಾಠಿ ಚಾರ್ಜ್ ಮಾಡಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ಕಿಡಿಗೇಡಿಗಳು ಪೊಲೀಸ್ ಠಾಣೆಗೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಲವು ಯುವ ಮುಖಂಡರು, ‘ಪ್ರತಿಭಟನೆ ಮುಕ್ತಾಯವಾಗಿದೆ, ನಮಗೆ ಜಯ ಸಿಕ್ಕಿದೆ, ಎಲ್ಲರು ತಮ್ಮ ಮನೆಗಳಿಗೆ ತೆರಳಿ’ ಎಂಬ ಹೇಳಿಕೆಯನ್ನು ಕೊಟ್ಟರು. ಆದರೂ ಸಹ ಕೆಲವು ಪ್ರತಿಭಟನಾಕಾರರು ತಮ್ಮ ಪಟ್ಟು ಬಿಡದಿದ್ದಾಗ ಪೊಲೀಸರು ಬಲವಂತವಾಗಿ ಅವರನ್ನು ತೆರವು ಮಾಡಲು ಮುಂದಾದರು. ‘ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದರು. ಇದಕ್ಕೆ ಪ್ರತಿಯಾಗಿ ಜನರನ್ನು ಚದುರಿಸಲು ಲಾಠಿ ಪ್ರಯೋಗಿಸಲಾಯಿತು’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..

‘ಪರಿಸ್ಥಿತಿ ಹಿಂಸೆಗೆ ತಿರುಗುವಲ್ಲಿ ಪಾಕ್ ಪ್ರೇರಿತ ಐಎಸ್ಐ ಕೈವಾಡವಿದೆ. ಅದಲ್ಲದಿದ್ದರೆ ಜಲ್ಲಿಕಟ್ಟು ಬಗ್ಗೆ ಪ್ರತಿಭಟಿಸುತ್ತಿದ್ದವರ ಕೈಯಲ್ಲಿ ಹಫೀಜ್ ಸಯೀದ್ ಪರ ಭಿತ್ತಿಪತ್ರಗಳು ಹೇಗೆ ಕಾಣಿಸಿಕೊಂಡವು’ ಎಂದು ಬಿಜೆಪಿ ನೇತಾರ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

ಮತ್ತೊಂದೆಡೆ ಜಲ್ಲಿಕಟ್ಟು ಕುರಿತ ಸುಗ್ರೀವಾಜ್ಞೆಯನ್ನು ಹೊರಡಿಸಲು ತಮಿಳುನಾಡಿನಲ್ಲಿ ವಿಶೇಷ ಅಧಿವೇಶನವನ್ನು ಕರೆಯಲಾಗಿದ್ದು, ಸಂಜೆ 5 ಗಂಟೆಗೆ ಆರಂಭವಾಗಲಿದೆ. ಇನ್ನು ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದ ಪರಿಣಾಮ ಕೆಲವು ಶಾಲೆಗಳು ರಜೆ ಘೋಷಿಸಿದವು. ಕೆಲವೆಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಬಂದ್ ವಾತಾವರಣ ನಿರ್ಮಾಣವಾಗಿದೆ.

ಇದೇ ವೇಳೆ ಪೇಟಾ ಸಂಸ್ಥೆ ವಿರುದ್ಧ ನಟ ಕಮಲ್ ಹಾಸನ್ ಕಿಡಿಕಾರಿದ್ದು, ‘ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಆಚರಣೆಯನ್ನು ತಡೆಯುವ ಬದಲು, ಅಮೆರಿಕದಲ್ಲಿ ಅಧ್ಯಕ್ಷರು ಕೂತು ನೋಡುವ ಗೂಳಿ ಕಾಳಗವನ್ನು ಹೋಗಿ ನಿಷೇಧಿಸಿ’ ಎಂದು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗೆ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಗಾಗಿ ತೀವ್ರ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ನಡೆಸಲಾಗುವ ಕಂಬಳ ಕ್ರೀಡೆಯನ್ನು ಉಳಿಸಿಕೊಳ್ಳಲು, ನಿಧಾನವಾಗಿ ಧ್ವನಿ ಮೂಡುತ್ತಿದೆ. ಜಲ್ಲಿಕಟ್ಟುವಿನಂತೆ ಕಂಬಳ ಕ್ರೀಡೆಯಲ್ಲೂ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂಬ ಕಾರಣಕ್ಕಾಗಿ ಕಂಬಳವನ್ನು ನಿಷೇಧಿಸಲಾಗಿದ್ದು, ಕಂಬಳ ಕ್ರೀಡೆ ಉಳಿಸಿಕೊಳ್ಳುವ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಈ ಕ್ರೀಡೆ ವೇಳೆ ಎಮ್ಮೆಗಳಿಗೆ ಯಾವುದೇ ರೀತಿಯ ಹಾನಿ ಹಾಗೂ ಹಿಂಸೆಯನ್ನು ಮಾಡಲಾಗುವುದಿಲ್ಲ. ಹೀಗಾಗಿ ಕಂಬಳ ಕ್ರೀಡೆಗೆ ಆಚರಣೆ ನೀಡಬೇಕು ಎಂಬ ಮಾತುಗಳು ಹಾಗೂ ಅಭಿಪ್ರಾಯಗಳು ಸಮಾಜಿಕ ಜಾಲ ತಾಣ ಹಾಗೂ ಮಾಧ್ಯಮಗಳಲ್ಲಿ ಮೂಡುತ್ತಿವೆ. ಕಂಬಳದ ಪರವಾಗಿ ಸಿನಿಮಾ ನಟರು, ಕನ್ನಡಪರ ಹೋರಾಟಗಾರರು ಹಾಗೂ ಇತರೆ ಖ್ಯಾತನಾಮರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

Leave a Reply