ಕಾಂಗ್ರೆಸ್ ನಾಯಕರ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕ ‘ಲಕ್ಷ್ಮೀ’ ಎಷ್ಟು?, ತೆರಿಗೆ ಇಲಾಖೆ ದಾಳಿ ಹಿಂದೆ ಇತ್ತ ಬಿಜೆಪಿ ನಾಯಕರ ಕೈವಾಡ?

ಡಿಜಿಟಲ್ ಕನ್ನಡ ಟೀಮ್:

ಕಳೆದ ವಾರ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ದಾಳಿ ವೇಳೆ ತೆರಿಗೆ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಎಂಬ ಪ್ರಶ್ನೆ ಇತ್ತು. ಅದಕ್ಕೆ ಉತ್ತರ ಈಗ ಸಿಕ್ಕಿದೆ. ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೋಳಿ ಹಾಗೂ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆ ನಡೆದ ದಾಳಿ ವೇಳೆ ತೆರಿಗೆ ಅಧಿಕಾರಿಗಳು ದಾಖಲೆ ಇಲ್ಲದ ₹ 162 ಕೋಟಿ ಮೌಲ್ಯದ ಆಸ್ತಿ, 12 ಕೆ.ಜಿಗೂ ಹೆಚ್ಚು ಚಿನ್ನಾಭರಣ ಮತ್ತು ₹ 41 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆ ಮೇಲೆ ತೆರಿಗೆ ಅಧಿಕಾರಿಗಳ ದಾಳಿ ರಾಜಕೀಯ ಕಿತ್ತಾಟಕ್ಕೂ ದಾರಿ ಮಾಡಿಕೊಟ್ಟಿದ್ದು, ಈ ದಾಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದ ಸಂಜಯ್ ಪಾಟೀಲ್ ಅವರೇ ಕಾರಣ ಎಂದು ಆರೋಪಿಸಲಾಗುತ್ತಿದೆ.

ಕಳೆದ ಶುಕ್ರವಾರ ನಡೆದ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಸನತ್ ಕುಮಾರ್ ಎಂಬುವವರು ಕಾರಣ ಎಂದು ಆರೋಪಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚೆನ್ನರಾಜ್ ಹಟ್ಟಿಹೊಳಿ ಸೇರಿದಂತೆ 25 ಬೆಂಬಲಿಗರ ಗುಂಪು ಸನತ್ ಕುಮಾರ್ ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಸನತ್ ಕುಮಾರ್ ಅವರು ಸಂಜಯ್ ಪಾಟೀಲ್ ಒಡೆತನದ ಗೊಮಟೇಶ್ ವಿದ್ಯಾಪೀಠ ಸಂಸ್ಥೆಯ ನಿರ್ದೇಶಕರಾಗಿದ್ದು, 2013ರ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಂಜಯ್ ಪಾಟೀಲ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಉದ್ದೇಶಪೂರ್ವಕವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗುರಿಯಾಗಿಸಲು ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸನತ್ ಕುಮಾರ್ ಮಾಹಿತಿ ನೀಡಿ ದಾಳಿಗೆ ಕಾರಣವಾಗಿದ್ದಾರೆ ಎಂದು ಇವರ ಮನೆ ಮೇಲೆ ಬೆಂಬಲಿಗರು ದಾಳಿ ಮಾಡಿದ್ದಾರೆ. ಈ ಬಗ್ಗೆ ಸನತ್ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಮಗೂ ತೆರಿಗೆ ಇಲಾಖೆ ದಾಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಇತ್ತ ತೆರಿಗೆ ಇಲಾಖೆ ಈ ದಾಳಿಯ ಬಗ್ಗೆ ಮಾಹಿತಿ ನೀಡುತ್ತಾ, ಈ ಇಬ್ಬರು ಕಾಂಗ್ರೆಸ್ ನಾಯಕರು ಒಂದೇ ರೀತಿಯಲ್ಲಿ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದೆ.

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೆಸರಿನಲ್ಲಿ ಕೆಲವು ಸಚಿವರು ಮತ್ತು ಪ್ರಭಾವಿ ರಾಜಕಾರಣಿಗಳು ಉದ್ದಿಮೆ ಸ್ಥಾಪಿಸಲು ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಲ್ಲದೆ ಹೆಬ್ಬಾಳ್ಕರ್ ಬೆಳಗಾವಿಯ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುತ್ತಿದ್ದಾರೆ. ಜತೆಗೆ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಯಲ್ಲೂ ದೊಡ್ಡ ಪ್ರಮಾಣದ ಬಂಡವಾಳ ಹೂಡಿದ್ದಾರೆ ಎಂಬ ಮಾಹಿತಿಗಳು ಹರಿದಾಡಿದ್ದವು. ಈ ಎಲ್ಲ ಅಂಶಗಳ ಆಧಾರದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.

Leave a Reply