ಹೋಲಿಕೆ ಇರುವುದು ಮೋದಿ-ಟ್ರಂಪ್ ನಡುವೆ ಅಲ್ಲ, ವಿವೇಕರಹಿತ ವಿರೋಧವನ್ನೇ ಜಾಯಮಾನವಾಗಿಸಿಕೊಂಡಿರುವ ಉದಾರವಾದಿಗಳಲ್ಲಿ…

author-chaitanyaಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಲಿದ್ದಾರೆ. ಅತ್ತ ಅಮೆರಿಕದಲ್ಲಿ ಉದಾರವಾದಿಗಳೆನಿಸಿಕೊಳ್ಳುತ್ತಿರುವವರಲ್ಲಿ ‘ಅಸಹಿಷ್ಣುತಾ ಜ್ವರ’ ಜೋರಾಗಿದೆ. ಅದು ಇಲ್ಲಿನ ಲಿಬರಲ್, ಸೆಕ್ಯುಲರ್ವಾದಿಗಳಿಗೂ ಹರಡೀತು…

ನಿಜ. ಡೊನಾಲ್ಡ್ ಟ್ರಂಪ್ ಅತಿರೇಕಿ ಎನ್ನುವುದನ್ನು ಯಾರಾದರೂ ಒಪ್ಪಿಕೊಳ್ಳುವಂಥದ್ದೇ. ಖಾಸಗಿ ಮಾತುಕತೆಯಲ್ಲಿ ಆತ ಹೇಳಿದ್ದೆನ್ನಲಾದ ಮಾತುಗಳನ್ನು ಯಾರೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಹಾಗಂತ…

ಡೊನಾಲ್ಡ್ ಟ್ರಂಪ್ ವಿರೋಧಿಸುವಲ್ಲಿ ಅಮೆರಿಕದ ಉದಾರವಾದಿಗಳೆಂದು ಕರೆದುಕೊಳ್ಳುತ್ತಿರುವವರ ಅತಿರೇಕಗಳು ಮಾತ್ರ ಅವರ ಬೂಟಾಟಿಕೆಗಳನ್ನು ಬೆತ್ತಲು ಮಾಡುತ್ತಿವೆ. ನಮ್ಮಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರವೇ ಅನಿಷ್ಟಗಳೆಲ್ಲ ಶುರುವಾದವು ಎಂಬಂತೆ ವರ್ತಿಸಿದ ಪ್ರಶಸ್ತಿ ವಾಪಸಿ ಬಳಗದವರಂತೆಯೇ ಅಲ್ಲಿನ ಜನಪ್ರಿಯ ಮುಖಗಳೂ ವರ್ತಿಸುತ್ತಿವೆ.

ಹಾಗೆ ನೋಡಿದರೆ, ಉಳಿದೆಲ್ಲ ಉತ್ಪ್ರೇಕ್ಷೆಗಳ ಹೊರತಾಗಿ ಡೊನಾಲ್ಡ್ ಟ್ರಂಪ್ ಗೂ, ನರೇಂದ್ರ ಮೋದಿಗೂ ಯಾವುದೇ ಹೋಲಿಕೆಗಳಿಲ್ಲ. ಮಾಧ್ಯಮ ಇಬ್ಬರನ್ನೂ ಅತೀವವಾಗಿ ದ್ವೇಷಿಸಿ ತನ್ನ ಪೂರ್ವಗ್ರಹಗಳನ್ನು ಬಹಿರಂಗಗೊಳಿಸಿಕೊಂಡಿತು ಎಂಬುದನ್ನು ಬಿಟ್ಟರೆ ಉಳಿದಂತೆ ಇಬ್ಬರ ಹಾದಿಯೂ ಬೇರೆ. ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದವರು ಎಂಬ ವರ್ಗೀಕರಣವೊಂದಿದೆಯಲ್ಲ, ಅದಕ್ಕೆ ತಕ್ಕನಾದವರು ಡೊನಾಲ್ಡ್ ಟ್ರಂಪ್. ಇತ್ತ ನರೇಂದ್ರ ಮೋದಿ ಬಡತನವನ್ನೇ ಹೊದ್ದು ಸಾಮಾನ್ಯ ಕಾರ್ಯಕರ್ತನ ಮಟ್ಟದಿಂದ ಮೇಲೇರಿ ಬಂದು ಸ್ಟಾರ್ ಆದವರು. ಡೊನಾಲ್ಡ್ ಟ್ರಂಪ್ ಏಕಾಏಕಿ ಅಧಿಕಾರ ಕೇಂದ್ರವನ್ನು ಆವರಿಸಿಕೊಂಡರೆ, ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿ 12 ವರ್ಷಗಳ ಅನುಭವ ಹೊಂದಿರುವವರು. ಹೀಗೆ ಅನೇಕ ವ್ಯತ್ಯಾಸಗಳನ್ನು ಪಟ್ಟಿ ಮಾಡಬಹುದು.

ಆದರೆ ಟ್ರಂಪ್ ಅವರನ್ನು ವಿರೋಧಿಸುತ್ತಿರುವ ಉದಾರವಾದಿಗಳಲ್ಲಿ ಹಾಗೂ ಭಾರತದಲ್ಲಿ ಮೋದಿ ದ್ವೇಷಕ್ಕೆ ಅಂಟಿಕೊಂಡಿರುವ ಉದಾರವಾದಿಗಳಲ್ಲಿ ಬಹಳ ಸ್ವಾಮ್ಯಗಳಿವೆ. ಉದಾರವಾದಿ ಎನ್ನಿಸಿಕೊಂಡವ ಆತ ಪಾಶ್ಚಿಮಾತ್ಯನಿರಬಹುದು, ಇಲ್ಲಿಯವನಿರಬಹುದು ಆತನ ಮಾತು ಶುರುವಾಗುವುದೇ ಪ್ರಜಾಪ್ರಭುತ್ವ, ಸಂವಿಧಾನ, ಕಾನೂನಿನ ಚೌಕಟ್ಟು ಇತ್ಯಾದಿ ಪದಗುಚ್ಛಗಳಲ್ಲಿ. ಆದರೆ ಈ ಉದಾರವಾದಿಗಳು ಅದೇ ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ತಮ್ಮ ನಿಲುವಿಗೆ ವಿರುದ್ಧವಾದವ ಜನರಿಂದ ಆಯ್ಕೆಯಾಗುವುದನ್ನು ಒಪ್ಪಿಕೊಳ್ಳರು! ಹಿಟ್ಲರನಿಗೂ ಜನಬೆಂಬಲವಿತ್ತು, ಕಡೆಗೇನಾಯಿತು ಅಂತ ಹೊಸ ವರಾತ ತೆಗೆಯುತ್ತಾರೆ. ಹಾಗಾದರೆ ಈ ವ್ಯವಸ್ಥೆಗೆ ಪರ್ಯಾಯವೇನೆಂದರೆ ಅವರಿಗೂ ಗೊತ್ತಿಲ್ಲ. ತಮಗೆ ಸರಿ ಅನಿಸಿದವರು ಗದ್ದುಗೆಯಲ್ಲಿದ್ದರೆ ಮಾತ್ರ ಸಂವಿಧಾನ ಸರಿ ಇದೆ ಎಂಬ ವಿಕೃತ ಧೋರಣೆ ಉದಾರವಾದಿಗಳದ್ದು.

ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಅಮೆರಿಕನ್ನರು ಬಹುಮತದಲ್ಲಿ ಟ್ರಂಪ್ ಅವರನ್ನು ಚುನಾಯಿಸಿದ್ದಾರೆ. ಟ್ರಂಪ್ ಮಹಿಳೆಯರಿಗೆ ಗೌರವ ಕೊಟ್ಟಿರದ ಮಾತುಗಳನ್ನಾಡಿದ್ದಾರೆಂಬುದು ಚುನಾವಣೆಯಲ್ಲೂ ಪ್ರಸ್ತಾಪವಾಗಿತ್ತು ಹಾಗೂ ವ್ಯಾಪಕ ಚರ್ಚೆಯಾಗಿತ್ತು. ಅಷ್ಟಾಗಿಯೂ ಟ್ರಂಪ್ ಅವರಿಗೆ ಮತಗಳು ಬಂದಿವೆ ಎಂದರೆ ಬಹುಶಃ ಇವರಿಗಿಂತ ನಾಜೂಕು ಮಾತನಾಡುವ ಕ್ಲಿಂಟನ್ ದಂಪತಿಯ ಬೂಟಾಟಿಕೆ ಸಹಿಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಅಲ್ಲಿನ ಜನ ಬಂದಿರಬೇಕು. ತಾನು ಅನುಮತಿ ಇಲ್ಲದೆಯೂ ಮಹಿಳೆಯ ಲೈಂಗಿಕಾಂಗವನ್ನು ಮುಟ್ಟಬಲ್ಲೆ ಎಂಬುದು ಯಾವಾಗಲೋ ಟ್ರಂಪ್ ಹೇಳಿದ್ದಾರೆನ್ನಲಾದ ವಿವಾದಾತ್ಮಕ ಹೇಳಿಕೆ. ಈ ಹೇಳಿಕೆ ಖಂಡನೀಯವೇ. ಆದರೆ ಮೊನಿಕಾ ಲೆವೆನಸ್ಕಿ ಎಂಬಾಕೆಯ ಮಾತುಗಳನ್ನು ನಂಬುವುದಾದರೆ, ಹಿಲರಿಯ ಪತಿ ಮಹಾಶಯ ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ ಬರೀ ಮಾತಲ್ಲಲ್ಲದೇ ಕೃತಿಯಲ್ಲಿ ಮಾಡಿದ್ದು ಇದನ್ನೇ ಅಲ್ಲವೇ? ಟ್ರಂಪ್ ಸುಭಗ ಅಂತಲ್ಲ. ಆದರೆ ಸುಭಗತನದ ಮಾತಾಡುವ ಎದುರಾಳಿಗಳ ಎದೆಯಲ್ಲಿದ್ದದ್ದೂ ವಿಕೃತಿಯೇ ಅಂತ ಬಹುಶಃ ಅಮೆರಿಕನ್ನರು ಅರ್ಥ ಮಾಡಿಕೊಂಡರೆನಿಸುತ್ತದೆ. ಪ್ರಸ್ತುತ ತೀವ್ರವಾದ, ಆರ್ಥಿಕತೆ, ರಕ್ಷಣೆ ಇಂಥ ವಿಷಯಗಳಲ್ಲಿ ಬಿಗಿ ನಿಲುವಿಗೆ ಟ್ರಂಪ್ ಸರಿಯಾದ ಆಯ್ಕೆ ಎಂಬ ಕಾರಣಕ್ಕೆ ಫಲಿತಾಂಶ ಹೀಗೆ ಬಂದು ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಿದ್ದಾರೆ.

ಟ್ರಂಪ್ ತನ್ನ ನೀತಿ ನಿರೂಪಣೆಯಲ್ಲಿ ಮಹಿಳಾ ವಿರೋಧಿ ಹಾಗೂ ಇನ್ಯಾವುದೇ ಅತಿರೇಕತನವನ್ನು ಪ್ರದರ್ಶಿಸಿದರೂ ಅದನ್ನು ವಿರೋಧಿಸುವುದು ಹಾಗೂ ಬೀದಿಗಿಳಿಯುವುದು ಯೋಗ್ಯವಾದದ್ದೇ. ಆದರೆ ಅಮೆರಿಕದಲ್ಲಿ ಉದಾರವಾದಿಗಳೆನಿಸಿಕೊಂಡವರು ಮಾಡುತ್ತಿರುವುದೇನು? ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಆಯ್ಕೆಯಾದ ನಾಯಕನಿಗೆ ಅವಕಾಶ ನೀಡುವುದಕ್ಕೇ ಅವರು ಸಿದ್ಧರಿಲ್ಲ. ವಾಷಿಂಗ್ಟನ್ ಡಿಸಿಯಲ್ಲಿ ಮಹಿಳಾಪರ ಹಾಗೂ ಟ್ರಂಪ್ ವಿರೋಧಿ ಮೆರವಣಿಗೆ ನಡೆಸಿ ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಕಾಯ್ದೆ ವಿರೋಧವಾಗಿಯಾದರೂ ಸರಿ ಡೊನಾಲ್ಡ್ ಟ್ರಂಪ್ ರನ್ನು ಕೆಳಗಿಳಿಸಬೇಕು ಎಂಬಂಥ ಹತಾಶ ಅಭಿಪ್ರಾಯಗಳು ಅವರಿಂದ ಹರಿದುಬರುತ್ತಿವೆ.

ಮಹಿಳೆಯರ ಮೆರವಣಿಗೆಯಲ್ಲಿ ತನ್ನ ಸ್ಟಾರ್ಡಂ ಪ್ರದರ್ಶನಕ್ಕೆ ಹೋದ ಮಡೋನಾ ಎಂಬ ಪಾಪ್ ತಾರೆ, ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಕ್ಕೆ ತನಗೆಷ್ಟು ಸಿಟ್ಟು ಬಂದಿದೆ ಎಂದರೆ ಶ್ವೇತಭವನವನ್ನೇ ಬಾಂಬಿಟ್ಟು ಉಡಾಯಿಸುವಷ್ಟು ಎಂಬ ಬಾಲಿಶ ಹೇಳಿಕೆ ಕೊಡುತ್ತಾಳೆ. ಅದನ್ನು ಫೆಮಿನಿಸಂ ಎಂದುಕೊಂಡು ಬಂದಿರುವ ಮಂದಿ ಚಪ್ಪಾಳೆ ತಟ್ಟುತ್ತಾರೆ! ಇದು ಪ್ರಚೋದನಾತ್ಮಕ ಹೇಳಿಕೆ ಎಂದೆಲ್ಲ ಕಾನೂನು ತೊಡಕು ಶುರುವಾಗುವ ವಾಸನೆ ಬೀಳುತ್ತಲೇ, ತನ್ನ ಮಾತನ್ನು ರೂಪಕವಾಗಿ ಅರ್ಥ ಮಾಡಿಕೊಳ್ಳಬೇಕು ಅಂತ ವರಾತ ತೆಗೆದಿದ್ದಾಳೆ.

ಅಮೆರಿಕದ ಉದಾರವಾದಿಗಳ ಟ್ರಂಪ್ ವಿರೋಧಿ ಸ್ತ್ರೀವಾದ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಟ್ರಂಪ್ ವಿರೋಧಿಸುವ ನೆಪದಲ್ಲಿ ಕುಟುಂಬದ ಮಹಿಳಾ ಸದಸ್ಯರು ಮತ್ತು ಮಕ್ಕಳನ್ನು ಸಹ ಅವಹೇಳನಕ್ಕೆ ಒಳಪಡಿಸುವಷ್ಟರಮಟ್ಟಿಗೆ. ಟ್ರಂಪ್ ಹೇಳಿಕೆಗಳಷ್ಟೇ ಹಿಲರಿಯ ನಾಜೂಕು ಮಾತುಗಳೂ ಸ್ತ್ರೀ ವಿರೋಧಿಯಲ್ಲವೇ ಎಂಬುದನ್ನು ಗಮನಿಸಬೇಕು. ‘ಮಹಿಳೆಗೆ ಸಹಾಯಕ್ಕೆ ಬರದ ಮಹಿಳೆಗೆ ನರಕದಲ್ಲಿ ವಿಶೇಷ ಸ್ಥಳವೊಂದು ಕಾದಿದೆ. ಹಾಗಾಗಿ ಮಹಿಳೆಯರು ತನ್ನ ಬೆಂಬಲಕ್ಕೆ ನಿಲ್ಲಲೇಬೇಕು’ ಅಂತ ಅತಿರೇಕದ ಬ್ಲಾಕ್ ಮೇಲ್ ಸ್ತ್ರೀವಾದ ಮಾಡಿದ್ದು ಇದೇ ಹಿಲರಿ.

ಇಷ್ಟಕ್ಕೂ ಯಾವುದೇ ಸಿದ್ಧಾಂತ ಚರ್ಚೆಯಾಗಬೇಕಿರುವುದು ವಿಷಯಾಧಾರಿತವಾಗಿಯೋ ಅಥವಾ ಪುಡಿ ಹೇಳಿಕೆಗಳ ಆವರಣದಲ್ಲೋ? ಈ ವಿಷಯದಲ್ಲೂ ಭಾರತದ ಉದಾರವಾದಿಗಳ ಮೇಲ್ಮೇಲಿನ ಧಾವಂತವೇ ಅಮೆರಿಕದ ಉದಾರವಾದಿಗಳಲ್ಲೂ ನಿಚ್ಚಳವಾಗಿದೆ.

ಕೂಲ್ ಪ್ರಸಿಡೆಂಟ್ ಅಂತ ಬರಾಕ್ ಒಬಾಮಾ ಹೆಸರು ಮಾಡಿದ್ದಿರಬಹುದು. ಆದರೆ ಅವರ ನೀತಿಗಳು ಪರೋಕ್ಷವಾಗಿ ಸ್ತ್ರೀ ಸಮುದಾಯಕ್ಕೆ ಪ್ರಹಾರ ಮಾಡಿದಂತೆ ಇನ್ಯಾರದ್ದು ಮಾಡಿವೆ? ಸಿರಿಯಾದಲ್ಲಿ ನಿಸ್ಸಂಶಯವಾಗಿ ಐಎಸ್ಐಎಸ್ ಉಗ್ರವಾದಿಗಳನ್ನು ಬೆನ್ನು ಹತ್ತುವುದನ್ನು ಬಿಟ್ಟು, ಅಲ್ಲಿ ಅಸಾದ್ ನನ್ನು ಇಳಿಸಬೇಕೆಂದು ಆತನ ವಿರೋಧಿಗಳಿಗೆ ಸಹಾಯ ಮಾಡಿದ್ದು ಇದೇ ಒಬಾಮಾಡಳಿತ. ಇವತ್ತು ಐಎಸ್ಐಎಸ್ ಅಟ್ಟಹಾಸದಲ್ಲಿ ಸಾವಿರಾರು ಯಾಜಿದಿ ಮಹಿಳೆಯರು ಲೈಂಗಿಕ ಗುಲಾಮರಾಗಿದ್ದರೆ ಆ ಪಾಪದ ಬಿಸಿಯುಸಿರು ಅಮೆರಿಕಕ್ಕೂ ತಾಗುವುದಿಲ್ಲವೇ? ಈ ಬಗ್ಗೆ ಅಮೆರಿಕದ ಉದಾರವಾದಿಗಳೇಕೆ ನಿದ್ದೆ ಮಾಡಿದರು? ಅದೇಕೆ ವಾಷಿಂಗ್ಟನ್ ಡಿಸಿ, ನ್ಯೂಯಾರ್ಕಿನ ಬೀದಿಗಳಲ್ಲಿ ಯಾಜಿದಿ ಮಹಿಳೆಯರ ಪರ ಮೆರವಣಿಗೆ ಹೊರಡಲಿಲ್ಲ? ನಮ್ಮವರಿಗೆ ಅಸಹಿಷ್ಣುತೆ ಅರಿವಿಗೆ ಬಂದಿದ್ದು ಮೋದಿ ಸರ್ಕಾರ ಬಂದ ನಂತರವೇ ಎಂಬಂತೆ ಅಲ್ಲಿನ ಉದಾರವಾದಿಗಳಿಗೆ ತಿಕ್ಕಲು ಹತ್ತಿಕೊಂಡಿದ್ದು ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರವೇ. ಅಲ್ಲಿವರೆಗೆ ಅಮೆರಿಕ ದಿ ಗ್ರೇಟ್ ಆಗಿತ್ತು!

ನೊಬೆಲ್ ಶಾಂತಿ ಪ್ರಶಸ್ತಿ ಗಿಟ್ಟಿಸಿಕೊಂಡ ಒಬಾಮಾ ಯುದ್ಧದಿಂದ ದೂರಾದರೇ? ಅದೇಕೆ ನ್ಯಾಟೊ ಪಡೆಗಳನ್ನು ರಷ್ಯಾ ಸುತ್ತುವರಿಯುವುದಕ್ಕೆ ನಿರ್ದೇಶಿಸಿದರು? ಈಗ ಆ ಪರಿಸ್ಥಿತಿಯನ್ನು ಸಡಿಲಗೊಳಿಸಲು ಹೊರಟಿರುವ ಟ್ರಂಪ್ ದ್ವೇಷದ ವ್ಯಕ್ತಿ ಆಗುವುದಾದರೆ, ಯುದ್ಧ ಸದೃಶ ಒತ್ತಡ ಸೃಷ್ಟಿಸಿದ ಒಬಾಮಾ ಏನು ಪ್ರೀತಿಯ ಪಿತಾಮಹರಾಗುತ್ತಾರೆಯೇ? ಅಮೆರಿಕನ್ ಕಾಂಗ್ರೆಸ್ಸಿನ ಅಭಿಪ್ರಾಯಕ್ಕೆ ವಿರುದ್ಧವಾಗಿ ಇಸ್ರೇಲಿನ ವಿರುದ್ಧ ಎತ್ತಿಕಟ್ಟುವುದಕ್ಕಾಗಿ ಪ್ಯಾಲಸ್ತೀನಿಗೆ 221 ಮಿಲಿಯನ್ ಡಾಲರುಗಳ ಧನಸಹಾಯವನ್ನು ಖುರ್ಚಿಯಿಂದ ಕೆಳಗಿಳಿಯುವ ಕೊನೆಕ್ಷಣದಲ್ಲಿ ಕೊಟ್ಟುಹೋದ ಒಬಾಮಾ ಅದು ಯಾವ ಆ್ಯಂಗಲ್ಲಿನಲ್ಲಿ ನೇರವಂತಿಕೆಯ ಮನುಷ್ಯನಂತೆ ಕಾಣುತ್ತಾರೆ?

ಮಾಧ್ಯಮ ಹಾಗೂ ಟೀಕಾಕಾರರಿಗೆ ಉತ್ತರ ಕೊಡುವುದನ್ನೇ ನಿಲ್ಲಿಸಿ ತಾನೇ ಮಾಧ್ಯಮವಾಗಿ ಬೆಳೆದ ನರೇಂದ್ರ ಮೋದಿ ಜಾಡು ಟ್ರಂಪ್ ದಲ್ಲ. ಮಾಧ್ಯಮವನ್ನು ಸಿಕ್ಕಲೆಲ್ಲ ಬಯ್ಯುತ್ತಿದ್ದಾರೆ, ಮಾಧ್ಯಮವೂ ತನ್ನ ದ್ವೇಷವನ್ನು ಮುಂದುವರಿಸಿದೆ. ಹೀಗಾಗಿ ಇಲ್ಲೂ ಮೋದಿ ಮತ್ತು ಟ್ರಂಪ್ ಮಾರ್ಗಗಳಲ್ಲಿ ಸಾಮ್ಯಗಳಿಲ್ಲ. ಎಚ್ಚರಿಕೆಯಿಂದ ಗಮನಿಸಬೇಕಾದ, ಅತಿರೇಕಕ್ಕೆ ಮುಂದಾದಾಗ ವಿರೋಧಕ್ಕೆ ಒಳಗಾಗಬೇಕಾದ ವ್ಯಕ್ತಿ ಈ ಡೊನಾಲ್ಡ್ ಟ್ರಂಪ್. ಆದರೆ ಅಮೆರಿಕ ಉದಾರವಾದಿಗಳಿಗೆ ಮಾತ್ರ ಸರಿ-ತಪ್ಪು ತಕ್ಕಡಿಯಲ್ಲಿ ತೂಗುವ ವಿವೇಕ- ವಿವೇಚನೆಗಳೇನೂ ಇಲ್ಲ. ತಮಗಾಗದವರನ್ನು ಏನಕೇನ ಹೀಗಳೆಯುವ, ನಿಂದನೆಯಲ್ಲೇ ದಿನಗಳೆಯುವ, ಬೊಬ್ಬೆಯ ವಿಕೃತಿಯನ್ನೇ ಅಡಿಗಡಿಗೂ ಪ್ರದರ್ಶಿಸುವ ವಿಷಯದಲ್ಲಿ ಭಾರತದ ಉದಾರವಾದಿಗಳಿಗೆ ಉತ್ತಮ ಪೈಪೋಟಿಯನ್ನೇ ಕೊಡುತ್ತಿದ್ದಾರೆ ಅಮೆರಿಕನ್ ಉದಾರವಾದಿಗಳು.

Leave a Reply