ಸರ್ಕಾರ ಕಂಬಳದ ಪರ ಅಂದ್ರು ಸಿದ್ರಾಮಯ್ಯ, ಬಜೆಟ್ಟಿನಲ್ಲಿ ಚುನಾವಣಾ ರಾಜ್ಯಗಳಿಗೆ ಯೋಜನೆ ಘೋಷಿಸುವಂತಿಲ್ಲ, ಕಾಶ್ಮೀರಿ ಪಂಡಿತರಿಗೆ ಭೂಮಿ ನಿಗದಿ…

68ನೇ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಪೂರ್ವಸಿದ್ಧತೆಯಲ್ಲಿ ನಿರತರಾಗಿರುವ ಮಕ್ಕಳು…

ಡಿಜಿಟಲ್ ಕನ್ನಡ ಟೀಮ್:

ಕಂಬಳ ಪರವಾಗಿ ನಿಲ್ಲುತ್ತೇವೆ ಅಂದ್ರು ಸಿದ್ದರಾಯಮಯ್ಯ

ಕಂಬಳ ಕ್ರೀಡೆಗೆ ವಿಧಿಸಲಾಗಿರುವ ನಿಷೇಧವನ್ನು ತೆರವುಗೊಳಿಸಿ ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸಿಕೊಳ್ಳುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕಂಬಳ ಪರ ನಿಲ್ಲಲಿದೆ ಎಂಬ ಭರವಸೆ ಕೊಟ್ಟಿದ್ದಾರೆ. ಮಂಗಳವಾರ ಮೈಸೂರಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ‘ನಾವು ಕಂಬಳ ಕ್ರೀಡೆ ಪರವಾಗಿದ್ದೇವೆ. ಕಂಬಳಕ್ಕೆ ನಮ್ಮ ವಿರೋಧವಿಲ್ಲ. ಅಗತ್ಯ ಬಿದ್ದರೆ ಕಂಬಳ ಕ್ರೀಡೆ ನಡೆಸುವ ಕುರಿತು ಸುಗ್ರೀವಾಜ್ಞೆ ಹೊರಡಿಸಲಾಗುವುದು’ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯದ ಬರ ಪರಿಸ್ಥಿತಿಗೆ ಬಂದಿರುವ ಕೇಂದ್ರದ ಅನುದಾನವನ್ನು ಸರ್ಕಾರ ಸದ್ಬಳಕೆ ಮಾಡಿದೆ. ಅಷ್ಟೇ ಅಲ್ಲದೆ ರಾಜ್ಯಕ್ಕೆ ಹೆಚ್ಚುವರಿ ಅನುದಾನ ನೀಡಬೇಕೆಂಬ ಮನವಿಯನ್ನು ಸಲ್ಲಿಸುವುದರ ಜತೆಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿದ್ದೇವೆ. ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದೇವೆ. ಹೀಗೆ ಎಲ್ಲ ಪ್ರಯತ್ನ ಮಾಡಿದ್ದೇವೆ. ನಾವು ಫಾಲೋಅಪ್ ಮಾಡುತ್ತಿಲ್ಲ ಎಂಬ ಆರೋಪ ಅನಗತ್ಯ. ಇದರಿಂದ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಬರದಿಂದ ರಾಜ್ಯದ ಆಹಾರ ಉತ್ಪಾದನೆ ಕುಸಿತ

ಸತತವಾಗಿ ಬರಗಾಲದಿಂದ ರಾಜ್ಯ ತತ್ತರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಆಹಾರ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡಿದ್ದು, ಆಹಾರದ ಕೊರತೆ ತೀವ್ರವಾಗುವ ಸಾಧ್ಯತೆ ಇದೆ. ಕಳೆದ ಮೂರು ವರ್ಷಗಳಿಂದಲೂ ಬರದ ಪರಿಸ್ಥಿತಿ ಎದುರಾಗಿದೆ. ಈ ವರ್ಷ ರಾಜ್ಯದಲ್ಲಿ 135 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಕೇವಲ 74.39 ಲಕ್ಷ ಟನ್ ಆಹಾರ ಉತ್ಪಾದನೆ ಮಾಡಲಾಗಿದೆ. ಆ ಮೂಲಕ 60.61 ಲಕ್ಷ ಟನ್ ನಷ್ಟ ಆಹಾರ ಉತ್ಪಾದನೆ ಕುಸಿತ ಕಂಡಿದೆ. 40 ವರ್ಷಗಳಲ್ಲಿ ತೀವ್ರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಜೋಳ ಬೆಳೆಯಲ್ಲಿ ಶೇ.63 ರಷ್ಟು, ರಾಗಿ ಬೆಳೆಯಲ್ಲಿ ಶೇ.58 ರಷ್ಟು, ಭತ್ತ ಶೇ.29, ಮೆಕ್ಕೆ ಜೋಳ ಶೇ.34ರಷ್ಟು ಕುಂಠಿತವಾಗಿದೆ.

ಜಾರಕಿಹೊಳಿ, ಹೆಬ್ಬಾಳ್ಕರ್ ವಿರುದ್ಧ ರಮೇಶ್ ಕುಮಾರ್ ಕಿಡಿ

ಆದಾಯಕ್ಕೆ ಮೀರಿದ ಸಂಪತ್ತು ಹೊಂದಿದ ಆರೋಪದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಸಂಪತ್ತು ಕೊಳ್ಳೆ ಹೆಡೆಯುವವರು ಯಾರೇ ಆಗಿರಲಿ, ಅವರನ್ನು ಮುಲಾಜಿಲ್ಲದೆ ಶಿಕ್ಷೆಗೆ ಗುರಿ ಪಡಿಸಿ ಬಲಿ ಹಾಕಬೇಕು. ತೆರಿಗೆ ಅಧಿಕಾರಿಗಳು ಈ ದಾಳಿಯಲ್ಲಿ ಅಕ್ರಮ ಸಂಪತ್ತನ್ನು ವಶಪಡಿಸಿಕೊಂಡಿದೆಯೋ ಅಥವಾ ಇಲ್ಲವೋ ನನಗೆ ತಿಳಿಯದು. ಆದರೆ ಕಳ್ಳ ಒಡವೆ ಇಟ್ಟುಕೊಂಡವರನ್ನು ಶಿಕ್ಷಿಸಬೇಕು. ಇಂತಹವರಿಂದಲೇ ದೇಶ ಸರ್ವನಾಶವಾಗುತ್ತಿದೆ ಎಂದು ರಮೇಶ್ ಕುಮಾರ್ ಗುಡುಗಿದರು. ಇದೇ ವೇಳೆ ಈ ದಾಳಿಯ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಈ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂಬ ವರದಿಗಳು ಬಂದಿವೆ.

ಬಜೆಟ್ ಕುರಿತಂತೆ ಚುನಾವಣಾ ಆಯೋಗ ಎಚ್ಚರಿಕೆ

ಸಾಕಷ್ಟು ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ಚುನಾವಣೆಯ ಮುನ್ನವಾಗಿ ಫೆ.1ರಂದು ಮುಂದಿನ ವರ್ಷದ ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಬಜೆಟ್ ಮಂಡನೆ ಮಾಡುವಾಗ ಚುನಾವಣೆ ನಡೆಯಲಿರುವ ಈ ರಾಜ್ಯಗಳಿಗೆ ವಿಶೇಷ ಯೋಜನೆ ಪ್ರಕಟಿಸುವುದಾಗಲಿ ಅಥವಾ ಈ ರಾಜ್ಯಗಳಲ್ಲಿ ಮಾಡಲಾದ ಕಾರ್ಯಗಳನ್ನು ಪ್ರಕಟಿಸುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚಿಸಿದೆ.

‘ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಈ ರಾಜ್ಯಗಳಿಗೆ ಸೀಮಿತವಾದ ಯಾವುದೇ ಯೋಜನೆಗಳನ್ನು ಸರ್ಕಾರ ಘೋಷಿಸಬಾರದು. ಇದರಿಂದ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿದ್ದು, ಆಡಳಿತ ಪಕ್ಷಕ್ಕೆ ಲಾಭವಾಗುವ ಸಾಧ್ಯತೆಗಳಿವೆ. ಹೀಗಾಗಿ ಈ ರೀತಿಯಾದ ಯಾವುದೇ ಯೋಜನೆ ಪ್ರಕಟಿಸುವಂತಿಲ್ಲ’ ಎಂದು ಆಯೋಗ ತಿಳಿಸಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

  • ಪರಿಷ್ಕೃತ ಪಠ್ಯಕ್ರಮದಲ್ಲಿ ಉದ್ಭವಿಸಿದ್ದ ಗೊಂದಲ ನಿವಾರಣೆಯಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹೊಸ ಪಠ್ಯಕ್ರಮ ಜಾರಿಯಾಗಲಿದೆ. ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಪಠ್ಯ ಪುಸ್ತಕಗಳು ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದ್ದಾರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್.
  • ನೋಟು ಅಮಾನ್ಯದ ನಿರ್ಧಾರದ ನಂತರ ನಗದು ಕೊರತೆ ಎದುರಿಸಿದ್ದ ದೇಶದ ರೈತರಿಗೆ ಸ್ವಲ್ಪ ನೆಮ್ಮದಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ ರೈತರ ಸಾಲದ ಮೇಲಿನ ಎರಡು ತಿಂಗಳ ಬಡ್ಡಿಯನ್ನು ಮನ್ನಾ ಮಾಡಿದೆ. ನಬಾರ್ಡ್ ಮೂಲಕ ₹ 400 ಕೋಟಿ ನೀಡಿರುವ ಸರ್ಕಾರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಸಾಲದ ಬಡ್ಡಿಯನ್ನು ಮನ್ನಾ ಮಾಡಿ ಒಟ್ಟು ₹ 660 ಕೋಟಿಯಷ್ಟು ಮನ್ನಾ ಮಾಡಿದೆ.
  • ಕಣಿವೆ ರಾಜ್ಯದಲ್ಲಿ ಮತ್ತೆ ಕಾಶ್ಮೀರ ಪಂಡಿತರಿಗೆ ನೆಲೆ ದೊರಕಿಸಿಕೊಡುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಿವಿಧ ಪ್ರದೇಶಗಳಲ್ಲಿ 100 ಎಕರೆ ಭೂಮಿಯನ್ನು ನಿಗದಿಪಡಿಸಿದೆ. 1990ರ ದಶಕದಲ್ಲಿ ಅಕ್ರಮವಾಗಿ ತೆರವುಗೊಳಿಸಲಾಗಿದ್ದ ಕಾಶ್ಮೀರಿ ಪಂಡಿತರು ಮತ್ತೆ ತಮ್ಮ ರಾಜ್ಯದಲ್ಲಿ ನೆಲೆಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ವರೆಗೂ 62 ಸಾವಿರ ಕಾಶ್ಮೀರಿ ವಲಸಿಗರು ಸರ್ಕಾರದ ಜತೆ ನೊಂದಣಿ ಮಾಡಿಸಿದ್ದು, ಆ ಪೈಕಿ 40 ಸಾವಿರ ಮಂದಿ ಜಮ್ಮುವಿನಲ್ಲಿ, 20 ಸಾವಿರ ಮಂದಿ ದೆಹಲಿಯಲ್ಲಿ ಹಾಗೂ 2 ಸಾವಿರ ಮಂದಿ ದೇಶದ ಇತರೆ ಪ್ರದೇಶಗಳಲ್ಲಿ ನೊಂದಣಿ ಮಾಡಿಸಿದ್ದಾರೆ.

Leave a Reply