ಜಲ್ಲಿಕಟ್ಟು ಚರ್ಚೆಯಲ್ಲಿ ಬಿಜೆಪಿಯ ಮಹತ್ತರ ಸಾಧನೆ, ಪ್ರಾಣಿಪ್ರಿಯೆ ಮೇನಕಾ ಗಾಂಧಿ ಬಾಯಿಗೆ ಬೀಗ!

ಡಿಜಿಟಲ್ ಕನ್ನಡ ಟೀಮ್:

ಜಲ್ಲಿಕಟ್ಟು ಆಚರಣೆ ಪರವಾಗಿ ಬಿಜೆಪಿ ಬ್ಯಾಟಿಂಗ್ ಮಾಡುತ್ತಿರುವ ಸಂದರ್ಭದಲ್ಲೇ ಒಂದು ಅಂಶ ಮಾತ್ರ ನಮ್ಮ ಗಮನ ಸೆಳೆಯುತ್ತಿದೆ. ಅದೇನೆಂದರೆ, ಬಿಜೆಪಿ ಈ ವಿಚಾರದಲ್ಲಿ ತಮ್ಮ ಪಕ್ಷದ ನಾಯಕಿ ಹಾಗೂ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರಿಗೆ ಮೂಗುದಾರ ಹಾಕಿರುವುದು.

ಸುಮಾರು ದಿನಗಳ ಹೋರಾಟದ ನಂತರ ಜಲ್ಲಿಕಟ್ಟು ಆಚರಣೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ತಮಿಳುನಾಡು ಈಗ ಪ್ರತಿಭಟನೆಯ ವಾತಾವರಣದಿಂದ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಹಂತದಲ್ಲಿ ಪ್ರಾಣಿ ಹಿಂಸೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿರುವ ಮೇನಕಾ ಗಾಂಧಿ ಈ ಬಾರಿಯ ಜಲ್ಲಿಕಟ್ಟು ವಿಚಾರದಲ್ಲಿ ದಿವ್ಯ ಮೌನಕ್ಕೆ ಶರಣಾಗಿದ್ದು ಸಹಜವಾಗಿಯೇ ಕೌತುಕಕ್ಕೆ ಕಾರಣವಾಗಿದೆ.

2015ರಲ್ಲಿ ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಆಚರಣೆಯನ್ನು ನಿಷೇಧಿಸಿದಾಗ, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದ ಮೇನಕಾ ಗಾಂಧಿ, ‘ಜಲ್ಲಿಕಟ್ಟು ಆಚರಣೆಯು ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿ. ಈ ಕ್ರೀಡೆಯಲ್ಲಿ ಪ್ರಾಣಿಗಳು ಹಾಗೂ ಮನುಷ್ಯರ ಪ್ರಾಣ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ವಿಷಯದಲ್ಲಿ ಬಿಜೆಪಿ ಇದರ ವಿರುದ್ಧವಾಗಿದ್ದು, ಕೋರ್ಟ್ ನೀಡಿರುವ ತೀರ್ಪು ಸ್ವಾಗರ್ತಾಹ’ ಎಂದು ಪ್ರತಿಕ್ರಿಯೆ ನೀಡಿದ್ದರು.

ಆದರೆ ಈ ಬಾರಿ ಜಲ್ಲಿಕಟ್ಟು ಆಚರಣೆ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದರೂ ಮೇನಕಾ ಗಾಂಧಿ ಅವರು ಈ ಬಗ್ಗೆ ತುಟಿ ಬಿಚ್ಚಿಲ್ಲ. ಇದೇ ವೇಳೆ ತಮಿಳುನಾಡಿನ ಈ ಸಾಂಪ್ರದಾಯಿಕ ಆಚರಣೆ ವಿರುದ್ಧ ಮೇನಕಾ ಗಾಂಧಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ವರದಿಗಳು ತಮಿಳುನಾಡು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಬಿಜೆಪಿ ನಾಯಕರು ಈ ಬಗ್ಗೆ ಸ್ಪಷ್ಟನೆಗೆ ಮುಂದಾಗಿದ್ದಾರೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಟ್ವೀಟ್ ಮೂಲಕ, ‘ಮೇನಕಾ ಗಾಂಧಿ ಅವರಾಗಲಿ ಅಥವಾ ಅವರ ಸಂಸ್ಥೆಯಾಗಲಿ ಎಂದಿಗೂ ಜಲ್ಲಿಕಟ್ಟು ವಿರುದ್ಧ ನಿಂತಿಲ್ಲ. ಈ ಆಚರಣೆಯನ್ನು ನಿಲ್ಲಿಸಬೇಕು ಎಂದು ಪ್ರತಿಪಾದನೆ ಮಾಡಿಲ್ಲ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ) ಎಂಬ ಸಂಘಟನೆಯನ್ನು ಸ್ಥಾಪಿಸಿರುವ ಮೇನಕಾ ಗಾಂಧಿ, ಈ ಹಿಂದೆ ಪ್ರಾಣಿ ಪರವಾದ ಅನೇಕ ಹೋರಾಟ ಹಾಗೂ ಕಾರ್ಯಗಳನ್ನು ಕೈಗೊಂಡಿತ್ತು. ಪ್ರಾಣಿಗಳ ರಕ್ಷಣೆ ವಿಚಾರವಾಗಿ ಮೇನಕಾ ಗಾಂಧಿ ಅನೇಕ ಬಾರಿ ಸರ್ಕಾರ ಹಾಗೂ ತಮ್ಮ ಸಂಪುಟದ ಸಚಿವರ ಕಾರ್ಯವನ್ನೇ ಪ್ರಶ್ನಿಸಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

ಆದರೆ ಈ ಬಾರಿ ಜಲ್ಲಿಕಟ್ಟು ಕುರಿತ ಚರ್ಚೆ ತೀವ್ರತೆ ಪಡೆದರೂ ಮೇನಕಾ ಗಾಂಧಿ ಅವರಾಗಲಿ ಅಥವಾ ಅವರ ಸಂಸ್ಥೆಯಾಗಲಿ ಯಾವುದೇ ರೀತಿಯ ಪರ ಅಥವಾ ವಿರೋಧದ ಪ್ರತಿಕ್ರಿಯೆ ನೀಡಿಲ್ಲ. ಇದರೊಂದಿಗೆ ಬಿಜೆಪಿ ಪಕ್ಷ ಈ ವಿಚಾರದಲ್ಲಿ ಮೇನಕಾ ಅವರ ಬಾಯಿಗೆ ಬೀಗ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಇನ್ನು ಜಲ್ಲಿಕಟ್ಟು ಕುರಿತಂತೆ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ, ವಿಶೇಷ ಅಧಿವೇಶನದಲ್ಲಿ ಶಾಸನಬದ್ಧಗೊಳಿಸಿದೆ. ಆ ಮೂಲಕ ಈ ಸಾಂಪ್ರದಾಯಿಕ ಆಚರಣೆಯನ್ನು ಉಳಿಸಿಕೊಂಡ ಕೀರ್ತಿಯನ್ನು ರಾಜ್ಯದಲ್ಲಿ ಅಧಿಕಾರ ಹೊಂದಿರುವ ಎಐಡಿಎಂಕೆ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ಹಂಚಿಕೊಳ್ಳುತ್ತಿವೆ.

ಉತ್ತರ ಪ್ರದೇಶದಲ್ಲಿ ಮೇನಕಾ ಪುತ್ರ ವರುಣ್ ಗಾಂಧಿ, ಇದೀಗ ಮೇನಕಾ ಇಬ್ಬರನ್ನೂ ನಿಯಂತ್ರಿಸಲು ಬಿಜೆಪಿ ಸಫಲವಾಗಿರುವುದು ಈ ಪಕ್ಷದ ಬೆಂಬಲಿಗರ ಪಾಲಿಗಂತೂ ಸಮಾಧಾನದ ಸಂಗತಿಯಾಗಿರಲಿಕ್ಕೆ ಸಾಕು.

Leave a Reply