ಶಾರುಖ್ ಪ್ರಚಾರದಲ್ಲಿ ಕಾಲ್ತುಳಿತಕ್ಕೆ ಅಭಿಮಾನಿ ಸಾವು, ಜಲ್ಲಿಕಟ್ಟು ಪರ ಕಮಲಹಾಸನ್ ಮತ್ತೊಮ್ಮೆ ಕೂಗು: ಇಲ್ಲಿ ಎದ್ದಿರುವ ಪ್ರಶ್ನೆ ಏನಂದ್ರೆ…

(ಪ್ರಾತಿನಿಧಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಇಂದು ಭಾರತೀಯ ಚಲನಚಿತ್ರದ ಇಬ್ಬರು ಸೂಪರ್ ಸ್ಟಾರ್ ಗಳನ್ನ ಕೇಂದ್ರವಾಗಿಟ್ಟುಕೊಂಡು ಎರಡು ಪ್ರಮುಖ ವಿದ್ಯಮಾನಗಳು ನಡೆದಿವೆ. ಅವುಗಳೆಂದರೆ ಶಾರುಖ್ ಖಾನ್ ಅವರ ರಾಯೀಸ್ ಚಿತ್ರ ಪ್ರಚಾರದ ವೇಳೆ ರೈಲ್ವೇ ನಿಲ್ದಾಣದಲ್ಲಿ ಓರ್ವ ಅಭಿಮಾನಿ ಮೃತಪಟ್ಟಿರುವುದು. ಇನ್ನೊಂದು ಜಲ್ಲಿಕಟ್ಟು ವಿಷಯವಾಗಿ ಕಮಲ್ ಹಾಸನ್ ತಮ್ಮ ಸಮರ್ಥನೆ ಮುಂದುವರಿಸಿ, ‘ಜಲ್ಲಿಕಟ್ಟುವಿನಲ್ಲಿ ಲೋಪವಿದ್ದರೆ ನಿಯಮಗಳ ಮೂಲಕ ಸರಿಪಡಿಸಿ, ಆದರೆ ಆಚರಣೆಯನ್ನು ನಿಷೇಧಿಸಬೇಡಿ’ ಎಂದು ಹೇಳಿರುವುದು.

ನಾಳೆ ದೇಶದಾದ್ಯಂತ ತೆರೆ ಕಾಣಲಿರುವ ರಾಯೀಸ್ ಚಿತ್ರವನ್ನು ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಶಾರುಖ್ ಖಾನ್, ಮುಂಬೈನಿಂದ ದೆಹಲಿಗೆ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ತೆರಳಿ ಆ ಮೂಲಕ ಮಾರ್ಗದಲ್ಲಿ ಸಿನಿಮಾ ಪ್ರಚಾರ ಮಾಡಲು ನಿರ್ಧರಿಸಿದ್ದರು. ಈ ಪ್ರಚಾರದ ಭಾಗವಾಗಿ ಶಾರುಖ್ ಖಾನ್ ವಡೋದರ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳ ದಂಡು ನೆರೆದಿತ್ತು. ಈ ವೇಳೆ ನೂಕು ನುಗ್ಗಲು ಸಂಭವಿಸಿದ ಪರಿಣಾಮ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು. ಈ ವೇಳೆ ಕಾಲ್ತುಳಿತಕ್ಕೆ ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ ಎಂದು ವರದಿಗಳು ಬಂದಿವೆ. ಆದರೆ ರೈಲ್ವೆ ನಿಲ್ದಾಣ ಅಧಿಕಾರಿಗಳು ಈತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ಶಾರುಖ್ ಖಾನ್ ಸಹ ಬೇಸರ ವ್ಯಕ್ತಪಡಿಸಿದ್ದು, ‘ಸಿನಿಮಾ ಪ್ರಚಾರದ ವೇಳೆ ಅಭಿಮಾನಿಗಳಿಂದ ಇಂತಹ ಪ್ರತಿಕ್ರಿಯೆ ಸಿಕ್ಕಿರುವುದು ಸಂತೋಷವಾಗುವ ಸಂದರ್ಭದಲ್ಲೇ, ನಮ್ಮವರು ಸಾವನ್ನಪ್ಪಿರುವುದು ಬೇಸರ ಮೂಡಿಸಿದೆ’ ಎಂದಿದ್ದಾರೆ.

ಇನ್ನು ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಹಿಂಸಾತ್ಮಕ ಘಟನೆಗೆ ಸಂಬಂಧಿಸಿದಂತೆ ಇಂಡಿಯಾ ಟುಡೆ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಮಲ್ ಹಾಸನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿರುವ ವಿಡಿಯೋಗಳಲ್ಲಿ ಪೊಲೀಸರು ಕೆಲವೆಡೆಗಳಲ್ಲಿ ಜಕಂ ಮಾಡಿದ್ದು, ಮತ್ತೆ ಕೆಲವೆಡೆಗಳಲ್ಲಿ ಪೊಲೀಸರೆ ವಾಹನಗಳಿಗೆ ಬೆಂಕಿ ಹಚ್ಚಿರುವುದು ಸೆರೆಯಾಗಿವೆ.

‘ಜಲ್ಲಿಕಟ್ಟು ಆಚರಣೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸಿ. ಅದರ ಬದಲಾಗಿ ಆಚರಣೆಯನ್ನು ನಿಷೇಧ ಮಾಡುವುದು ಸರಿಯಲ್ಲ’ ಎಂದು ವಾದಿಸಿರುವ ಕಮಲ್. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿರುವ ವಿಡಿಯೋ ಕುರಿತು ಆಘಾತ ವ್ಯಕ್ತಪಡಿಸಿದ್ದು ಹೀಗೆ…

‘ಯಾವುದನ್ನು ನಿಷೇಧಿಸಬೇಡಿ. ಅದರ ಬದಲಾಗಿ ಅದರಲ್ಲಿನ ಲೋಪಗಳನ್ನು ಸರಿಪಡಿಸಿ. ಕಳೆದ 20 ವರ್ಷಗಳಿಂದಲೂ ನಾನು ಇದನ್ನೇ ಹೇಳುತ್ತಾ ಬಂದಿದ್ದೇನೆ. ಸೋಮವಾರ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದಾಳಿ ಖಂಡನೀಯ. ಈ ಬಗ್ಗೆ ಸೂಕ್ತ ವಿವರಣೆ ನೀಡಬೇಕು. ನಿಮ್ಮ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ತಮಿಳುನಾಡಿನ ಜನತೆ ಶಾಂತರಾಗಿ ವರ್ತಿಸಬೇಕು. ದೇಶದ ಉನ್ನತ ಸಂಸ್ಥೆಗಳು ಎಲ್ಲವನ್ನು ನೋಡುತ್ತಿದ್ದು, ನಿಮ್ಮ ಪರವಾಗಿ ನಿಲ್ಲಲಿವೆ.’

ಜಲ್ಲಿಕಟ್ಟು ವಿಷಯ ಕುರಿತಂತೆ ನಡೆಯುತ್ತಿರುವ ಒಟ್ಟಾರೆ ಚರ್ಚೆಯಲ್ಲಿ ಪ್ರಮುಖವಾಗಿ ಕಂಡು ಬರುತ್ತಿರುವ ಅಂಶವೆಂದರೆ, ಹಿಂಸೆ ಹಾಗೂ ಕಾನೂನುಬಾಹಿರವಾಗುತ್ತಿರುವ ಅಂಶಗಳನ್ನು ನಿಗ್ರಹ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶಾರುಖ್ ಖಾನ್ ಅವರ ಚಲನಚಿತ್ರದ ಪ್ರಚಾರದ ವೇಳೆ ಓರ್ವ ಅಭಿಮಾನಿ ಮೃತಪಟ್ಟ ಕಾರಣವನ್ನಿಟ್ಟುಕೊಂಡು ಇನ್ನು ಮುಂದೆ ಚಿತ್ರದ ಪ್ರಚಾರವನ್ನು ಮಾಡಲೇಬಾರದು ಎಂದು ಹೇಳುವುದು ಎಷ್ಟು ಬಾಲಿಶವೋ ಅದೇ ರೀತಿ ಜಲ್ಲಿಕಟ್ಟುವಿನಲ್ಲಿ ಕೆಲವು ಅಂಶಗಳನ್ನು ಮುಂದಿಟ್ಟುಕೊಂಡು ಇಡೀ ಆಚರಣೆಯನ್ನೇ ನಿಷೇಧಿಸುವುದು ಅಷ್ಟೇ ನಿರಾಧಾರ.

Leave a Reply