ಕಾರು ಇಷ್ಟವಾಗಿದ್ದಕ್ಕೆ ಕಂಪನಿಯನ್ನೇ ಕೊಂಡೆ- ಆನಂದ್ ಮಹೀಂದ್ರಾ ಟ್ವಿಟ್ಟರ್ ಹೀರೋಗಿರಿ!

ಡಿಜಿಟಲ್ ಕನ್ನಡ ಟೀಮ್:

ನಮಗೆ ಯಾವುದೇ ವಸ್ತು ಇಷ್ಟವಾದರೆ ಏನು ಮಾಡ್ತಿವಿ? ಅದನ್ನು ಕೊಳ್ಳಲು ಶಕ್ತಿ ಇದ್ದರೆ ಹೋಗಿ ಖರೀದಿಸುತ್ತೀವೆ. ಆದರೆ ಮಹೀಂದ್ರಾ ಗ್ರೂಪ್ ನ ಮುಖ್ಯಸ್ಥ ಆನಂದ್ ಮಹೀಂದ್ರಾ ಈ ವಿಷಯದಲ್ಲಿ ಎಲ್ಲರಿಗೂ ಭಿನ್ನ. ಕಾರಣ, ಅವರು ಇಷ್ಟಪಟ್ಟ ಕಾರನ್ನು ಕೊಳ್ಳುವ ಬದಲು ಆ ಕಾರು ತಯಾರಿಸುವ ಕಂಪನಿಯನ್ನೇ ಖರೀದಿಸಿದ ಪ್ರಸಂಗ ಹಂಚಿಕೊಂಡಿದ್ದಾರೆ ಟ್ವಿಟ್ಟರಿನಲ್ಲಿ.

ಆಶ್ಚರ್ಯವಾಗ್ತಿದ್ಯಾ? ಒಂದು ನಿಮಿಷ ಈ ಕಥೆಯನ್ನು ಸಂಪೂರ್ಣವಾಗಿ ಓದಿ ನಿಮಗೇ ಅರ್ಥವಾಗುತ್ತೆ.

ಇಟಲಿಯ ಪಿನಿನ್ಫಾರಿನಾ ಕಂಪನಿಯ ‘ಮಸೆರಾತಿ ಬರ್ಡ್ ಕೇಜ್’ ಎಂಬ ಕಾರಿನ ವಿನ್ಯಾಸ ಇಷ್ಟಪಟ್ಟಿದ್ದ ಆನಂದ್ ಮಹೀಂದ್ರಾ, ‘ನಾನು ಈ ಕೇಜ್ (ಪಂಜರ) ಒಳಗೆ ಬಂಧಿಯಾಗಲು ಹಿಂಜರಿಯುವುದಿಲ್ಲ’ ಎಂದು ಟ್ವೀಟ್ ಮಾಡಿದ್ದರು.

ಟ್ವಿಟರ್ ನಲ್ಲಿ ಖ್ಯಾತನಾಮರನ್ನು ಅಣಕಿಸಲೆಂದೇ ಬಹಳಷ್ಟು ಮಂದಿ ಕಾಯುತ್ತಿರುತ್ತಾರೆ. ಆನಂದ್ ಮಹೀಂದ್ರಾ ಅವರ ಟ್ವೀಟಿಗೆ ಇಂತಹುದೇ ಅಣಕಿಸುವ ಟ್ವೀಟ್ ಗಳು ಬಂದವು. ಸಿದ್ದಕಾಂತ್ ಖನ್ನಾ ಎಂಬ ಹೆಸರಿನಿಂದ ಬಂದ ಟ್ವೀಟ್ ಹೀಗಿತ್ತು… ‘ಆ ಕಾರು ಇಷ್ಟವಾಗಿದ್ದರೆ, ಹೋಗಿ ಖರೀದಿಸಿ. ನಿಮ್ಮನ್ನು ತಡೆದಿರುವವರು ಯಾರು?’ ಎಂದು ಲೇವಡಿ ಮಾಡಲಾಗಿತ್ತು.

ಈ ಲೇವಡಿಯ ಟ್ವೀಟ್ ಗೆ ಆನಂದ್ ಮಹೀಂದ್ರಾ ಅವರು ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯೆ ಕೊಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಈ ಟ್ವೀಟ್ ಗೆ ಆನಂದ್ ಮಹೀಂದ್ರಾ ಅವರ ಉತ್ತರ ಹೀಗಿತ್ತು… ‘ಆ ಕಾರನ್ನು ಕೊಳ್ಳುವ ಬದಲು, ಆ ಕಾರಿನ ಕಂಪನಿಯನ್ನೇ ಖರೀದಿಸಿದೆ… (ಪಿನಿನ್ಫಾರಿನಾ)’

ಆನಂದ್ ಮಹೀಂದ್ರಾ ಅವರ ಈ ಟ್ವೀಟ್ ನ ಹಿಂದಿನ ಅರ್ಥ, ಈ ಕಾರನ್ನು ಕೊಳ್ಳುವ ಬದಲಾಗಿ ಕಾರು ತಯಾರಿಸುವ ಕಂಪನಿಯನ್ನೇ ಖರೀಸಿದ್ದಾರೆ ಎಂದು ಹೇಳುತ್ತದೆಯಾದರೂ, ಆನಂದ್ ಮಹೀಂದ್ರಾ ಅವರು 2015ರಲ್ಲೇ ಪಿನಿನ್ಫಾರಿನಾ ಕಂಪನಿಯನ್ನು ಖರೀದಿಸಿದ್ದರು. ಈ ಬಗ್ಗೆ ಮಾಹಿತಿ ಇಲ್ಲದೆ ಲೇವಡಿ ಮಾಡಿದ್ದವನಿಗೆ ಆನಂದ್ ಮಹೀಂದ್ರಾ ತಮ್ಮ ಟ್ವೀಟ್ ಮೂಲಕವೇ ಚಾಟಿ ಬೀಸಿದ್ದಾರೆ.

ಆನಂದ್ ಅವರ ಈ ಟ್ವೀಟ್ ಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗಿವೆ.

Leave a Reply