ಐಟಿ ದಾಳಿಯಿಂದ ಕಾಂಗ್ರೆಸ್ ನಲ್ಲಿ ಹೆಚ್ಚಿದ ತಳಮಳ, ಬ್ರಿಗೆಡ್ ಕಚ್ಚಾಟ: ಬಿಜೆಪಿಯಲ್ಲಿ ತಾರಕಕ್ಕೇರಿದ ಬಿಕ್ಕಟ್ಟು- ಶುಕ್ರವಾರ ಸಭೆ ಕರೆದ ಹೈಕಮಾಂಡ್, ಯಾರಿಗೆ ಪದ್ಮ ಭೂಷಣ/ ಪದ್ಮ ವಿಭೂಷಣ ಗೌರವ?

ರಾಜ್ಯದ ಕರಾವಳಿ ಭಾಗದ ಕ್ರೀಡೆಯಾಗಿರುವ ಕಂಬಳಕ್ಕೆ ಬೆಂಬಲ ಸೂಚಿಸಿ ಹಾಗೂ ಕ್ರೀಡೆಯನ್ನು ಮತ್ತೆ  ಜಾರಿಗೆ ತರಬೇಕೆಂದು ಒತ್ತಾಯಿಸಿ ಬುಧವಾರ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಎನ್ಎಸ್ ಯುಐ ಸಂಘಟನೆ ವಿದ್ಯಾರ್ಥಿಗಳು ಎಮ್ಮೆಗಳ ಜತೆ ಪ್ರತಿಭಟನೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್:

ಐಟಿ ದಾಳಿಯಿಂದ ಕಾಂಗ್ರೆಸ್ ಸಂಕಷ್ಟ

ಕಳೆದ ವಾರ ಕಾಂಗ್ರೆಸ್ ನಾಯಕರಾದ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ನಂತರ ಕಾಂಗ್ರೆಸ್ ಪಾಳಯದಲ್ಲಿ ಹಲ ಬಗೆಯ ಕಂಪನಗಳು ದಾಖಲಾಗಿವೆ.

‘ತೆರಿಗೆ ಇಲಾಖೆ ದಾಳಿಗೆ ತಮ್ಮ ಪಕ್ಷದವರೇ ಕಾರಣ. ಮುಖ್ಯಮಂತ್ರಿಗಳು ಬಯಸಿದರೆ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧ’ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದು, ತಮ್ಮ ಪಕ್ಷದವರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ದಾಳಿ ವೇಳೆ ಸಿಕ್ಕ ಬೇನಾಮಿ ಆಸ್ತಿ ವಿಷಯದಲ್ಲಿ ತೆರಿಗೆ ಇಲಾಖೆ ತಪ್ಪು ಮಾಹಿತಿ ನೀಡಿದೆ. ಆ ಆಸ್ತಿಯಲ್ಲಿ ಬಹುತೇಕ ಪಾಲು ನನಗೆ ಸೇರಿದ್ದಲ್ಲ. ಆಸ್ತಿ ಪ್ರಮಾಣದಲ್ಲಿ ತಾಂತ್ರಿಕ ದೋಷಗಳು ಎದುರಾಗಿದ್ದು, ಅದು ಕಪ್ಪು ಹಣವಲ್ಲ’ ಎಂಬ ಸ್ಪಷ್ಟನೆ ನೀಡಿದ್ದಾರೆ.

ಇನ್ನು ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯನ್ನು ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡು ಸರ್ಕಾರದ ವಿರುದ್ಧದ ದಾಳಿಗೆ ಮುಂದಾಗಿವೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ರಮೇಶ್ ಜಾರಕಿಹೊಳಿ ಅವರ ರಾಜಿನಾಮೆಗೆ ಆಗ್ರಹಿಸಿದ್ದು, ‘ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅಕ್ರಮ ಸಂಪತ್ತು ಹೊಂದಿರುವುದು ಬಯಲಾಗಿದೆ. ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡುವಾಗ ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಹೇಳಿದ್ದರು. ಆಗ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರು ಮನಬಂದಂತೆ ಟೀಕಿಸಿದ್ದರು. ಆದರೆ ಸತ್ಯ ಏನೆಂಬುದು ಈಗ ಬಯಲಾಗಿದೆ’ ಎಂದು ಕಿಡಿಕಾರಿದರು.

ಇನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಹ ಸಚಿವರೊಬ್ಬರನ್ನು ಗುರಿಯಾಗಿಸಿಕೊಂಡು, ಪರೋಕ್ಷ ದಾಳಿ ಮಾಡಿದ್ದಾರೆ. ‘ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಯಲ್ಲಿ ಸಿಕ್ಕಿರುವ ಅಕ್ರಮ ಆಸ್ತಿ ಯಾರದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆದರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಸ್ತಿ ಹಿಂದಿರುವವರು ಯಾರು ಎಂಬುದು ಬಯಲಿಗೆ ಬರಲಿದೆ. ಈ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ರಾಜಕೀಯ ಬಣ್ಣ ಬಳಿಯುವುದು ಬೇಡ. ಇನ್ನು ಜೆಡಿಎಸ್ ಜತೆ ಕಾಂಗ್ರೆಸ್ ಪಕ್ಷವನ್ನು ಹೋಲಿಕೆ ಮಾಡಬೇಡಿ. ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಪಕ್ಷವೊಂದರ ಬಳಿ ಸೀಟು ಹಂಚಿಕೆಗೆ ಕಾಲು ಹಿಡಿದ ಪಕ್ಷ ಕಾಂಗ್ರೆಸ್’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

ಬಿಜೆಪಿಯಲ್ಲಿ ತಾರಕ್ಕೇರಿದ ಸಂಘರ್ಷ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿನ ಸಂಘರ್ಷ ತಾರಕಕ್ಕೇರಿದೆ. ಗುರುವಾರ ಕೂಡಲಸಂಗಮದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಸಮಾವೇಶ ನಡೆಯಲಿದ್ದು, ಇದರ ಬೆನ್ನಲ್ಲೇ ಯಡಿಯೂರಪ್ಪನವರ ಬಣ ಈಶ್ವರಪ್ಪನವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಹಿ ಸಂಗ್ರಹಕ್ಕೆ ಮುಂದಾಗಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ಬ್ರಿಗೆಡ್ ಸಮಾವೇಶ ಆರಂಭವಾಗಲಿದ್ದು, ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಇತ್ತ ಪಕ್ಷದಲ್ಲಿನ ತಿಕ್ಕಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಶುಕ್ರವಾರ ರಾತ್ರಿ ರಾಜ್ಯ ಬಿಜೆಪಿ ಮುಖಂಡರ ಸಭೆ ಕರೆದಿದೆ. ನವದೆಹಲಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮನೆಯಲ್ಲಿ ಈ ಸಭೆ ನಡೆಯಲಿದ್ದು, ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಜತೆಗೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಅನಂತ್ ಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಸೇರಿದಂತೆ ಇತರೆ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಈಶ್ವರಪ್ಪ ಹಾಗೂ ಯಡಿಯೂರಪ್ಪನವರ ನಡುವೆ ರಾಜಿಗೆ ಪ್ರಯತ್ನಿಸಲಾಗುವುದು. ಒಂದು ವೇಳೆ ರಾಜಿಯಾಗದಿದ್ದರೆ ಈಶ್ವರಪ್ಪನವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.

ಯಾರ್ಯಾರಿಗೆ ಪದ್ಮ ಭೂಷಣ ಮತ್ತು ವಿಭೂಷಣ ಪ್ರಶಸ್ತಿ

ಪದ್ಮ ಭೂಷಣ ಪ್ರಶಸ್ತಿ ಪಟ್ಟಿ-  ಕೆ.ಜೆ ಜೇಸುದಾಸ್ (ಕಲೆ- ಸಂಗೀತ), ಸದ್ಗುರು ಜಗ್ಗಿ ವಾಸುದೇವ್ (ಆಧ್ಯಾತ್ಮ), ಶರದ್ ಪವಾರ್ (ಸಾರ್ವಜನಿಕ ಸೇವೆ), ಮುರಳಿ ಮನೋಹರ್ ಜೋಷಿ (ಸಾರ್ವಜನಿಕ ಸೇವೆ), ಪ್ರೊ. ಉಡುಪಿ ರಾಮಚಂದ್ರ ರಾವ್ (ವಿಜ್ಞಾನ ಮತ್ತು ಎಂಜಿನಿಯರಿಂಗ್), ಸುಂದರ್ ಲಾಲ್ ಪತ್ವಾ (ಸಾರ್ವಜನಿಕ ಸೇವೆ), ಪಿ.ಎ ಸಾಂಗ್ಮಾ (ಸಾರ್ವಜನಿಕ ಸೇವೆ)

ಪದ್ಮ ವಿಭೂಷಣ ಪ್ರಶಸ್ತಿ ಪಟ್ಟಿ- ವಿಶ್ವ ಮೋಹನ್ ಭಟ್ (ಕಲೆ- ಸಂಗೀತ), ದೇವಿ ಪ್ರಸಾದ್ ದ್ವಿವೇದಿ (ಸಾಹಿತ್ಯ ಮತ್ತು ಶಿಕ್ಷಣ), ತೆಹೆಂಟೊನ್ ಉದ್ವಾಡಿಯಾ (ಔಷಧ), ರತ್ನ ಸುಂದರ್ ಮಹರಾಜ್ (ಆಧ್ಯಾತ್ಮ), ಸ್ವಾಮಿ ನಿರಂಜನ ನಂದ ಸರಸ್ವತಿ (ಯೋಗ), ಎಚ್.ಆರ್.ಎಚ್. ಪ್ರಿನ್ಸೆಸ್ ಮಹಾ ಚಕ್ರಿ ಸಿರಿಂಧೋರ್ನ್ (ಸಾಹಿತ್ಯ ಮತ್ತು ಶಿಕ್ಷಣ), ಚೋ.ರಾಮಸ್ವಾಮಿ (ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ (ಮರಣೋತ್ತರ))

ಕನ್ನಡದವರಿಗೆ ಸಿಕ್ಕ ಗೌರವ: ಪದ್ಮಶ್ರೀ ಪ್ರಶಸ್ತಿ- ಪ್ರೊ. ಜಿ. ವೆಂಕಟಸುಬ್ಬಯ್ಯ (ಸಾಹಿತ್ಯ), ವಿಕಾಸ್ ಗೌಡ (ಕ್ರೀಡೆ), ಶೇಖರ್ ಗೌಡ (ಕ್ರೀಡೆ), ಗಿರೀಶ್ ಭಾರದ್ವಾಜ್ (ಸಮಾಜ ಸೇವೆ), ಸುಕ್ರಿ ಬೊಮ್ಮೇಗೌಡ (ಕಲೆ), ಭಾರತಿ ವಿಷ್ಣುವರ್ದನ್ (ಸಿನೆಮಾ). ಪದ್ಮ ಭೂಷಣ ಪ್ರಶಸ್ತಿ-  ಪ್ರೊ. ಉಡುಪಿ ರಾಮಚಂದ್ರ ರಾವ್ (ವಿಜ್ಞಾನ ಮತ್ತು ಎಂಜಿನಿಯರಿಂಗ್).

ಉಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ರಾಜ್ಯದ ಬರ ಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರು ಪೂರೈಕೆ, ಗೋ ಶಾಲೆ ಸೇರಿದಂತೆ ಇತರೆ ತುರ್ತು ಕಾಮಗಾರಿಗಳಿಗೆ ರಾಜ್ಯ ಸರ್ಕಾರ ₹41.70 ಕೋಟಿ ಹಣ ಬಿಡುಗಡೆ ಮಾಡಿದೆ. ಬರ ಪೀಡಿತ 139 ತಾಲೂಕುಗಳಲ್ಲಿ ತುರ್ತು ಕಾಮಗಾರಿಗಾಗಿ ಜಿಲ್ಲಾಧಿಕಾರಿಗಳ ಖಾತೆಗೆ ₹30 ಲಕ್ಷ ವರ್ಗಾವಣೆ ಮಾಡಲಾಗಿದೆ.
  • ಮಾಜಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಅವರನ್ನು ದೆಹಲಿಯಲ್ಲಿ ಕರ್ನಾಟಕ ರಾಜ್ಯದ ಹೆಚ್ಚುವರಿ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ. ಬುಧವಾರ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಆದೇಶ ಹೊರಡಿಸಿದ್ದು, ವಿಧಾನಸಭೆ ಹಿರಿಯ ಸದಸ್ಯ ಹಾಗೂ ದೆಹಲಿ ಪ್ರತಿನಿಧಿಯಾಗಿರುವ ಅಪ್ಪಾಜಿನಾಡಗೌಡ ಅವರ ಜತೆ ಕೆಲಸ ಮಾಡಲಿದ್ದಾರೆ.
  • ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಮಪಾತ ಹೆಚ್ಚಾಗಿರುವ ಪರಿಣಾಮ ಓರ್ವ ಸೇನಾಧಿಕಾರಿ ಹಾಗೂ ಐವರು ನಾಗರೀಕರು ಮೃತಪಟ್ಟಿದ್ದಾರೆ. ಬುಧವಾರ ಮಧ್ಯಹ್ನ ಸೇನಾ ಕ್ಯಂಪ್ ಮೇಲೆ ಹಿಮಗಡ್ಡೆಗಳು ಕುಸಿದ ಪರಿಣಾಮ ಸೇನಾಧಿಕಾರಿ ಮೃತಪಟ್ಟಿದ್ದಾರೆ. ಇನ್ನು ಗುರೇಜ್ ಸೆಕ್ಟರ್ ನಲ್ಲೂ ಹಿಮಗಡ್ಡೆ ಮನೆಯ ಮೇಲೆ ಕುಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಹಿಮಪರ್ವತಗಳ ತಳ ಪ್ರದೇಶದಲ್ಲಿರುವ 80ಕ್ಕೂ ಹೆಚ್ಚು ಹಳ್ಳಿಗಳ ಜನರನ್ನು ಸ್ಥಳಾಂತರಿಸಲಾಗಿದೆ.
  • ಅಮೆರಿಕದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ನಂತರ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಉಭಯ ನಾಯಕರ ನಡುವಿನ ಪ್ರಮುಖ ಚರ್ಚೆಯ ಬಗೆಗಿನ ಸಂಪೂರ್ಣ ವಿವರ ಇಲ್ಲಿ ಓದಿ.

Leave a Reply