ಮೋದಿ- ಟ್ರಂಪ್ ಮಾತುಕತೆಯಲ್ಲಿ ಭಯೋತ್ಪಾದನೆ ನಿಗ್ರಹವೇ ಮುಖ್ಯ ವಿಷಯ

ಡಿಜಿಟಲ್ ಕನ್ನಡ ಟೀಮ್:

ಉಭಯ ದೇಶಗಳ ಸ್ನೇಹ ವೃದ್ಧಿ, ಭಯೋತ್ಪಾದನೆ ವಿರುದ್ಧದ ಜಂಟಿ ಹೋರಾಟ… ಇವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದೂರವಾಣಿ ಮಾತುಕತೆಯ ಪ್ರಮುಖಾಂಶಗಳು.

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಗದ್ದುಗೆ ಏರಿದ ನಂತರ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ಇಬ್ಬರು ನಾಯಕರ ಮಾತುಕತೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ನಿರೀಕ್ಷೆಯಂತೆ ಉಭಯ ನಾಯಕರು ಭವಿಷ್ಯದಲ್ಲಿ ಎರಡೂ ದೇಶಗಳು ಉತ್ತಮ ಸ್ನೇಹ ಸಂಬಂಧ ಬೆಳೆಸಿಕೊಳ್ಳುವ ಭರವಸೆ ಕೊಟ್ಟಿದ್ದಾರೆ.

ಭಾರತದೊಂದಿಗಿನ ಸಂಬಂಧವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ, ಭವಿಷ್ಯದಲ್ಲಿ ಜಾಗತಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಭಾರತವು ಅಮೆರಿಕದ ಜತೆ ಕೈಜೋಡಿಸಬೇಕೆಂಬ ಉದ್ದೇಶದೊಂದಿಗೆ ಟ್ರಂಪ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಡೊನಾಲ್ಡ್ ಟ್ರಂಪ್ ದೂರವಾಣಿ ಮೂಲಕ ಮಾತುಕತೆ ನಡೆಸಿದ ಐದನೇ ರಾಷ್ಟ್ರ ನಾಯಕ ಮೋದಿ ಅವರಾಗಿದ್ದಾರೆ.

ದೂರವಾಣಿಯಲ್ಲಿ ಮಾತುಕತೆ ನಂತರ ಟ್ವೀಟ್ ಮೂಲಕ ಮಾಹಿತಿ ನೀಡಿರುವ ನರೇಂದ್ರ ಮೋದಿ, ‘ಮುಂದಿನ ದಿನಗಳಲ್ಲಿ ನಾನು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಭಯ ದೇಶಗಳ ಸ್ನೇಹ ಹಾಗೂ ಒಪ್ಪಂದಗಳನ್ನು ವೃದ್ಧಿಗೊಳಿಸುವತ್ತ ಕೆಲಸ ಮಾಡುತ್ತೇವೆ. ಅಲ್ಲದೆ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನವನ್ನು ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

ಇತ್ತ ಈ ನಾಯಕರ ಮಾತುಕತೆ ನಂತರ ಶ್ವೇತಭವನವೂ ಹೇಳಿಕೆಯನ್ನು ನೀಡಿದ್ದು, ‘ಭಾರತವು ಅಮೆರಿಕದ ಅತ್ಯುತ್ತಮ ಸ್ನೇಹಿತ ರಾಷ್ಟ್ರ. ಭಾರತದ ಪ್ರಧಾನಿಗೆ ಭೇಟಿ ನೀಡಲು ಆಹ್ವಾನವನ್ನು ಕೊಡುವುದರ ಜತೆಗೆ ಆರ್ಥಿಕತೆ, ರಕ್ಷಣೆ, ಭಯೋತ್ಪಾದನೆ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಅದರಲ್ಲೂ ಭಯೋತ್ಪಾದನೆಯನ್ನು ಹತ್ತಿಕ್ಕುವ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಉಭಯ ನಾಯಕರು ನಿರ್ಧರಿಸಿದ್ದಾರೆ’ ಎಂದು ಹೇಳಲಾಗಿದೆ.

ಚುನಾವಣೆಗೂ ಮುನ್ನ ಸಾಕಷ್ಟು ಬಾರಿ ಭಾರತದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದ ಟ್ರಂಪ್, ಭಾರತವು ಅಮೆರಿಕದ ‘ಉತ್ತಮ ಸ್ನೇಹಿತ’, ಪ್ರಧಾನಿ ನರೇಂದ್ರ ಮೋದಿ ‘ಅತ್ಯುತ್ತಮ ವ್ಯಕ್ತಿ’ ಹಾಗೂ ‘ನಾನು ಹಿಂದೂ ಧರ್ಮದ ಅಭಿಮಾನಿ’ ಎಂದೆಲ್ಲಾ ಹೇಳಿಕೆ ಕೊಟ್ಟಿದ್ದರು. ಈಗ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರವೂ ಟ್ರಂಪ್ ಭಾರತದ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳು ಸ್ನೇಹದ ಹಸ್ತ ಚಾಚಿರುವುದು ಸಕಾರಾತ್ಮಕ ಬೆಳವಣಿಗೆಯಾಗಿರುವುದಂತೂ ಸ್ಪಷ್ಟ.

Leave a Reply