ಬಾಕ್ಸ್ ಆಫೀಸ್ ನಲ್ಲಿ ಸ್ಪರ್ಧೆಯಿದ್ದರೂ ಶಾರುಖ್ ಗೆ ಶುಭ ಕೋರಿ ಮನ ಗೆದ್ದ ಹೃತಿಕ್

ಡಿಜಿಟಲ್ ಕನ್ನಡ ಟೀಮ್:

ಮತ್ತೊಮ್ಮೆ ಬಾಲಿವುಡ್ ಖ್ಯಾತ ಸ್ಟಾರ್ ಗಳಾದ ಶಾರುಖ್ ಖಾನ್ ಹಾಗೂ ಹೃತಿಕ್ ರೋಷನ್ ಸಿನಿಮಾಗಳು ಬಾಕ್ಸ್ ಆಫಿಸ್ ಕಾದಾಟದಲ್ಲಿ ಮುಖಾಮುಖಿಯಾಗಿವೆ. ಈ ಪೈಪೋಟಿಯ ಹೊತ್ತಿನಲ್ಲೇ ಹೃತಿಕ್ ರೋಷನ್ ಅವರು ಟ್ವೀಟರ್ ಮೂಲಕ ಶಾರುಖ್ ಅವರ ಚಿತ್ರಕ್ಕೆ ಶುಭಕಾಮನೆ ಕೋರುತ್ತಾ ಎಲ್ಲರ ಮನ ಗೆದ್ದಿದ್ದಾರೆ.

ಈ ಎರಡು ಸಿನಿಮಾಗಳು ಬಿಡುಗಡೆಗೆ ವೇಳಾಪಟ್ಟಿಯನ್ನು ಪದೇ ಪದೇ ಬದಲಾಯಿಸಿದ ನಂತರ ಇಂದು ಒಟ್ಟಿಗೆ ಪ್ರೇಕ್ಷಕರ ಮುಂದೆ ಬಂದು ನಿಂತಿವೆ. ಈ ಹಂತದಲ್ಲಿ ಹೃತಿಕ್ ರೋಷನ್ ಟ್ವೀಟ್ ಮಾಡಿರುವುದು ಹೀಗೆ… ‘ಪ್ರೀತಿಯ ಶಾರುಖ್ ಖಾನ್, ನೀವು ಮಾರ್ಗದರ್ಶಕ ಸ್ಥಾನದಲ್ಲಿ ನಿಂತು ನಿಮ್ಮ ರಾಯೀಸ್ ಚಿತ್ರದ ಮೂಲಕ ಮತ್ತೊಮ್ಮೆ ನನಗೆ ಸ್ಫೂರ್ತಿಯಾಗುವ ವಿಶ್ವಾಸವಿದೆ. ಅದೇ ರೀತಿ ನಿಮ್ಮ ವಿದ್ಯಾರ್ಥಿಯಾಗಿ ನನ್ನ ಕಾಬಿಲ್ ಚಿತ್ರದ ಬಗ್ಗೆ ನೀವು ಹೆಮ್ಮೆಪಡುವಿರೆಂಬ ವಿಶ್ವಾಸವಿದೆ. ..’

ಇದಕ್ಕೆ ಉತ್ತಮ ರೀತಿಯಲ್ಲೇ ಸ್ಪದಿಸಿರುವ ಶಾರುಖ್, ‘ಎರಡು ಚಿತ್ರಗಳು ಒಟ್ಟಿಗೆ ತೆರೆ ಕಾಣುವುದನ್ನು ತಡೆಯಲು ಪ್ರಯತ್ನಿಸಿದ್ದೆ. ನನ್ನ ಪ್ರೀತಿ ಸದಾ ನಿನ್ನೊಂದಿಗೆ ಇರುತ್ತದೆ. ಯಾಮಿ ಗುಪ್ತಾ ಹಾಗೂ ಸಂಜಯ್ ಗುಪ್ತಾ ಅವರೊಂದಿಗೆ ಮಾಡಿರುವ ಕಾಬಿಲ್ ಚಿತ್ರ ಸಹ ಉತ್ತಮವಾಗಿ ಮೂಡಿ ಬಂದಿರುವ ವಿಶ್ವಾಸವಿದೆ.’

ಚಿತ್ರ ಬಿಡುಗಡೆಯನ್ನು ತಾರೆಯರ ನಡುವಣ ಯುದ್ಧ ಎಂದೇ ಪರಿಗಣಿಸುವ ಹೊತ್ತಿನಲ್ಲಿ ಈ ಇಬ್ಬರು ಸ್ಟಾರ್ ನಟರು ಪರಸ್ಪರ ಸಂದೇಶ ರವಾನಿಸಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

ಇನ್ನು ಈ ಎರಡೂ ಚಿತ್ರಕ್ಕೆ ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಸಹ ಶುಭ ಕೋರಿದ್ದರು. ಆಗ ಸಲ್ಮಾನ್ ಖಾನ್ ತಮ್ಮ ಹಾಗೂ ಶಾರುಖ್ ಖಾನ್ ಅಭಿನಯದ ಕರಣ್ ಅರ್ಜುನ್ ಸಿನಿಮಾದ ವೇಳೆ ಹೃತಿಕ್ ರೋಷನ್ ಜತೆಗಿದ್ದ ಫೋಟೊ ಅನ್ನು ಹಾಕಿದ್ದರು. 1995ರಲ್ಲಿ ತೆರೆ ಕಂಡ ಈ ಕರಣ್ ಅರ್ಜುನ್ ಸಿನಿಮಾಕ್ಕೆ ರಾಕೇಶ್ ರೋಷನ್ ನಿರ್ದೇಶಕರಾಗಿದ್ದು, ಅವರ ಮಗ ಹೃತಿಕ್ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದನ್ನು ಸ್ಮರಿಸಿದ್ದರು.

ಈ ಹಿಂದೆ ಅಕ್ಷಯ್ ಕುಮಾರ್ ಅಭಿನಯದ ರುಸ್ತುಂ ಮತ್ತು ಹೃತಿಕ್ ಅಭಿನಯದ ಮೊಹೆಂಜೊದಾರೊ ಒಟ್ಟಿಗೇ ತೆರೆ ಕಂಡು ಹೃತಿಕ್ ಚಿತ್ರ ಮುಗ್ಗರಿಸಿತ್ತು. ಆಗಲೂ ರುಸ್ತುಂ ಬಗ್ಗೆ ಒಳ್ಳೆಯ ಮಾತಾಡಿದ್ದರು ಹೃತಿಕ್. ಈ ಬಾರಿ ಕಾಬಿಲ್ ನ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ದಂಪತಿ ಇಬ್ಬರೂ ಟ್ವಿಟ್ಟರಿನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply