ಸ್ತ್ರೀ ಗೌರವಕ್ಕೆ ಕುಂದುಂಟುಮಾಡುವ ಹೇಳಿಕೆ: ಜೆಡಿಯು ಶರದ್ ಯಾದವ್- ಬಿಜೆಪಿಯ ವಿನಯ್ ಕತಿಯಾರ್ ಪೈಪೋಟಿ

ಡಿಜಿಟಲ್ ಕನ್ನಡ ಟೀಮ್:

ಸಾರ್ವಜನಿಕ ವೇದಿಕೆಗಳು ಹಾಗೂ ಮಾಧ್ಯಮಗಳ ಮುಂದೆ ನಮ್ಮ ರಾಜಕಾರಣಿಗಳು ನಾಲಿಗೆಯನ್ನು ಹೆಚ್ಚಾಗಿ ಹರಿದು ಬಿಟ್ಟು ವಿವಾದ ಸೃಷ್ಟಿಸುವುದು ಹೊಸ ಸಂಗತಿಯೇನಲ್ಲ. ಈಗ ಅಂತಹುದೇ ಎರಡು ಘಟನೆಗಳು ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಆ ಪೈಕಿ ಮೊದಲನೆಯದು ಜೆಡಿಯು ನಾಯಕ ಶರದ್ ಯಾದವ್ ಅವರ ‘ಹೆಣ್ಣು ಮಗಳ ಮರ್ಯಾದೆಗಿಂತ ಚುನಾವಣೆಯಲ್ಲಿ ಹಾಕುವ ಮತಕ್ಕೆ ಮರ್ಯಾದೆ ಹೆಚ್ಚು…’ ಎಂಬ ಬೇಜವಾಬ್ದಾರಿ ಹೇಳಿಕೆ. ಮತ್ತೊಂದು, ಬಿಜೆಪಿ ರಾಜ್ಯಸಭಾ ಸದಸ್ಯ ವಿನಯ್ ಕತಿಯಾರ್, ‘ಪ್ರಿಯಾಂಕ ಗಾಂಧಿ ಸುಂದರಿಯಲ್ಲ, ನಮ್ಮ ಪಕ್ಷದಲ್ಲಿ ಅವರಿಗಿಂತಲೂ ಸುಂದರವಾದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ’ ಎಂಬ ಹೇಳಿಕೆ.

ಸಂಸತ್ತಿನಲ್ಲಿ ಮಾತನಾಡುವಾಗ ಹಿರಿ ಮನುಷ್ಯನ ನೈತಿಕ ಮೇಲ್ಮಟ್ಟದ ಸ್ಥಾನದಲ್ಲಿ ನಿಂತು ಭಾರಿ ಭಾಷಣ ಬಿಗಿಯುವ ಶರದ್ ಯಾದವ್ ತನ್ನ ಮನಸ್ಸಿನೊಳಗಿನ ವಿಕೃತಿ ಎಂಥಾದ್ದು ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಶರದ್ ಯಾದವ್  ಹೋಲಿಕೆ ಪ್ರಕಾರ ‘ಹೆಣ್ಣುಮಕ್ಕಳ ಗೌರವ’ ಚೌಕಾಶಿಯ ಸಂಗತಿ. ಶರದ್ ಯಾದವ್ ಈ ಹೊಲಸು ಹೇಳಿಕೆಯನ್ನು ಖಂಡಿಸುವುದಕ್ಕೆ ಹೋದ ಬಿಜೆಪಿಯ ವಿನಯ್ ಕಟಿಯಾರ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಖಂಡನಾ ಹೇಳಿಕೆ ನಂತರ ಪತ್ರಕರ್ತರು ಇವರ ಬಳಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಪ್ರಚಾರಾಂದೋಲನ ನೇತೃತ್ವ ವಹಿಸಿರುವ ಬಗ್ಗೆ ಕೇಳಿದರು. ‘ಅದರಿಂದೇನು ವ್ಯತ್ಯಾಸವಾಗುತ್ತದೆ? ಪ್ರಿಯಾಂಕಾಗಿಂತ ಸುಂದರಿಯರು, ಕಲಾಕಾರರು ಬಿಜೆಪಿಯಲ್ಲೂ ಇದ್ದಾರೆ.’

ವಿನಯ್ ಕಟಿಯಾರ್ ಹೇಳಿಕೆಯಲ್ಲಿ ಸೌಂದರ್ಯ ಶ್ಲಾಘನೆ ಏಕೆ ಆಕ್ಷೇಪಾರ್ಹ ಎಂಬ ಪ್ರಶ್ನೆ ಹಲವರದ್ದು. ಕಟಿಯಾರ್ ಸಹ ಸಮರ್ಥನೆಗೆ ಇದೇ ಮಾತು ಹೇಳುತ್ತಿದ್ದಾರೆ. ಆದರೆ ಕಟಿಯಾರ್ ಮಾತನ್ನು ಅರ್ಥೈಸುವುದಕ್ಕೆ ಹೋದರೆ, ಬಿಜೆಪಿಯಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಸ್ಮೃತಿ ಇರಾನಿ ಮೊದಲಾದವರು ತಮ್ಮ ರಾಜಕೀಯ ಪರಿಣತಿಯಲ್ಲದೇ ಸೌಂದರ್ಯದ ಕಾರಣಕ್ಕಾಗಿ ಆ ಸ್ಥಾನಕ್ಕೆ ಬಂದರು ಎಂದಾಗುತ್ತದೆ. ಇದು ಅವಮಾನಕಾರಿ ಹೇಳಿಕೆಯಲ್ಲದೇ ಇನ್ನೇನು?

ಹೀಗೆ ಇಬ್ಬರು ನಾಯಕರ ಲಘುವಾದ ಮಾತುಗಳು ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮಂಗಳವಾರ ಪಾಟ್ನಾದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಶರದ್ ಯಾದವ್ ಕ್ಷುಲ್ಲಕ ಹೇಳಿಕೆ ಹೀಗಿದೆ.

‘ಚುನಾವಣೆ ವೇಳೆ ಬಳಸಲಾಗುವ ಬ್ಯಾಲೆಟ್ ಪೇಪರ್ ನ ಮಹತ್ವದ ಬಗ್ಗೆ ಅರಿಯಬೇಕಿದೆ. ಹೆಣ್ಣು ಮಕ್ಕಳ ಮರ್ಯಾದೆಗಿಂತ ಚುನಾವಣೆಯಲ್ಲಿ ಹಾಕುವ ಮತದ ಮರ್ಯಾದೆ ಹೆಚ್ಚು. ಒಂದು ವೇಳೆ ಹೆಣ್ಣು ಮಗಳ ಮರ್ಯಾದೆ ಹಾಳಾದರೆ ಅದು ಒಂದು ಹಳ್ಳಿ ಅಥವಾ ಒಂದು ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮತದಾನದ ಮರ್ಯಾದೆ ಹಾಳಾದರೆ ಇಡೀ ದೇಶವೇ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.’

ಹೀಗೆ ಶರದ್ ಯಾದವ್ ಅವರ ಬೇಜವಾಬ್ದಾರಿ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ನಾಯಕ ಪ್ರಿಯಾಂಕ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಗೆ ಹೆಚ್ಚು ಸುದ್ದಿಯಾಗುವ ವಿನಯ್ ಕತಿಯಾರ್, ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕ ಗಾಂಧಿ ಕುರಿತಂತೆ ಹೇಳಿರುವ ಮಾತುಗಳು ಹೀಗಿವೆ…

‘ಪ್ರಿಯಾಂಕ ಗಾಂಧಿ ಬಹಳ ಸುಂದರಿಯಲ್ಲ. ನಮ್ಮ ಪಕ್ಷದಲ್ಲಿ ಆಕೆಗಿಂತ ಸುಂದರವಾಗಿರುವ ಮಹಿಳೆಯರಿದ್ದಾರೆ. ನಮ್ಮ ಪಕ್ಷದಲ್ಲಿರುವ ಸ್ಮೃತಿ ಇರಾನಿ ಅವರು ಪ್ರಿಯಾಂಕ ಗಾಂಧಿ ಅವರಿಗಿಂತಲೂ ಸುಂದರವಾಗಿದ್ದಾರೆ. ಆಕೆ ಹೋದಲ್ಲೆಲ್ಲಾ ಜನರು ಸೇರುತ್ತಾರೆ.’

Leave a Reply