ಅಂಕೋಲದ ಸುಕ್ರಜ್ಜಿ ಸೇರಿದಂತೆ ನಿಜ ಹೀರೋಗಳೇ ಮಿನುಗಿರುವ ಪದ್ಮ ಪುರಸ್ಕಾರ, ಆಯ್ಕೆ ಸಮಿತಿಗೊಂದು ಆಪ್ತ ನಮಸ್ಕಾರ!

ಸುಕ್ರಿ ಬೊಮ್ಮಗೌಡ (ಚಿತ್ರಕೃಪೆ- untold.in)

ಡಿಜಿಟಲ್ ಕನ್ನಡ ವಿಶೇಷ:

ಪ್ರತಿ ಬಾರಿ ಜನವರಿ 26ರಂದು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಹೀಗೆ ಹಲವು ಶ್ರೇಣಿಗಳನ್ನೊಳಗೊಂಡ ಪದ್ಮ ಪ್ರಶಸ್ತಿಗಳು ಸಮಾಜದ ನಾನಾ ವಲಯಗಳಲ್ಲಿ ತೊಡಗಿಸಿಕೊಂಡ ಗಣ್ಯರಿಗೆ ನೀಡಲಾಗುತ್ತದೆ. ಜನವರಿ 26ಕ್ಕೆ ದಿನ ಅಥವಾ ಕೆಲವು ತಾಸುಗಳ ಮುಂಚೆ ಪ್ರಶಸ್ತಿ ಪಟ್ಟಿ ಘೋಷಿಸಲಾಗುತ್ತದೆ. ಈ ಬಾರಿ ಪಟ್ಟಿಯಲ್ಲಿರುವ ಹಲವು ಗಣ್ಯರ ಹೆಸರುಗಳು ಘೋಷಣೆಯಾಗಿವೆ.

ಈ ಬಾರಿಯ ಪದ್ಮ ಪ್ರಶಸ್ತಿಗಳಿಗಾಗಿ ಸರ್ಕಾರಕ್ಕೆ, ಆಯ್ಕೆ ಸಮಿತಿಗೆ ಒಂದು ಭೇಷ್ ಹೇಳಲೇಬೇಕು. ಯಾಕೆ ಗೊತ್ತಾ? ಸರ್ಕಾರಕ್ಕೆ ಹತ್ತಿರವಿರುವ ಲಾಬಿಕೋರ ಪತ್ರಕರ್ತರು, ಪಂಚತಾರಾ ಶ್ರೇಣಿಯ ಹೋರಾಟಗಾರರು ಹಾಗೂ ಬಾಲಿವುಡ್ ಮಿಂಚುಗಳೇ ಲಾಗಾಯ್ತಿನಿಂದ ಪದ್ಮ ಪುರಸ್ಕಾರದಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಈ ಬಾರಿ ಮಾತ್ರ ಅರ್ಹರಾಗಿರುವ ಪ್ರಸಿದ್ಧರ ಜತೆಯಲ್ಲೇ ದಿನನಿತ್ಯದ ಸುದ್ದಿಸ್ಫೋಟಗಳಲ್ಲಿ ಅಷ್ಟಾಗಿ ಹೆಸರು ಅನುರಣಿಸದ ಸಾಮಾಜಿಕ ಕಾರ್ಯಕರ್ತರನ್ನು ಗುರುತಿಸುವ ಅನನ್ಯ ಕೆಲಸ ಮಾಡಲಾಗಿದೆ.

ಇದಕ್ಕೊಂದು ಉತ್ತಮ ಉದಾಹರಣೆ, ನಮ್ಮದೇ ರಾಜ್ಯದ ಉತ್ತರ ಕನ್ನಡ ಜಿಲ್ಲೆ ಅಂಕೋಲದ ಸುಕ್ರಜ್ಜಿ ಅರ್ಥಾತ್ ಸುಖ್ರಿ ಬೊಮ್ಮಗೌಡ ಎಂಬ ಜನಪದ ಹಾಡುಗಾರ್ತಿಗೆ ಪದ್ಮ ಒಲಿದಿದೆ. ಹಾಲಕ್ಕಿ ಒಕ್ಕಲಿಗ ಸಮುದಾಯವೆಂಬ ಬುಡಕಟ್ಟು ವರ್ಗದಲ್ಲಿ ಹುಟ್ಟಿದ ಸುಖ್ರಿ ಬೊಮ್ಮಗೌಡ ಜಾನಪದ ಹಾಡು ಮತ್ತು ಜೀವನಸಾರಗಳ ಗಣಿ. ಮಕ್ಕಳು ಹುಟ್ಟಿದ್ದು, ಮದುವೆಯಾಗಿದ್ದು, ಅತ್ತೆಮನೆಗೆ ಹೋಗಿದ್ದು… ಹೀಗೆ ಜನಜೀವನದ ಎಲ್ಲ ಪ್ರಸಂಗಗಳಿಗೆ ಹೊಂದುವ ಸಾವಿರಾರು ಹಾಡುಗಳು ಅವರಲ್ಲಿ ನಲಿದಾಡಿಕೊಂಡು ಬಂದಿವೆ. ಹೀಗೆ ಜಾನಪದ ಹಾಡುಗಾರಿಕೆ ಮೂಲಕ ಪ್ರಸಿದ್ಧಿಗೆ ಬಂದ ಸುಕ್ರಜ್ಜಿ ನಂತರ ತಮ್ಮ ಆ ಜನಪ್ರಿಯತೆಯನ್ನು ಮದ್ಯಪಾನ ಪಿಡುಗಿನ ನಿವಾರಣೆಗೆ ಹಾಗೂ ಹಾಲಕ್ಕಿ ಒಕ್ಕಲಿಗ ಸಮುದಾಯಕ್ಕೆ ಸ್ಥಾನಮಾನ ದೊರಕಿಸಿಕೊಡುವುದಕ್ಕೆ ಚಳವಳಿಯ ರೀತಿಯಲ್ಲಿ ಬಳಸಿಕೊಂಡರು. ತಮ್ಮ ಸಮುದಾಯದ ಮಹಿಳೆಯರಿಗೂ ಹಾಡು ಕಲಿಸಿ ಅವರನ್ನೂ ಜನಜಾಗೃತಿಯಲ್ಲಿ ತೊಡಗಿಸಿದರು. ಹದಿನಾರರ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡರೂ ಧೃತಿಗೆಡದೇ ಹಾಡಿನ ಹಾದಿ, ಆ ಮೂಲಕ ಚಳವಳಿಯ ಮಾರ್ಗ ತುಳಿದ ಸುಕ್ರಜ್ಜಿ ಒಂದು ಉನ್ನತ ಮಾದರಿ. ರಾಜ್ಯಮಟ್ಟದಲ್ಲಿ ಹಲವು ಗೌರವಗಳು ಅವರಿಗೆ ಸಂದಿದ್ದರೂ ಇದೀಗ ಪದ್ಮ ಪುರಸ್ಕಾರ ಸಲ್ಲುತ್ತಿರುವುದು ತುಂಬ ಹೆಮ್ಮೆಯ ಕ್ಷಣ.

ಜನಪ್ರಿಯರ ಹೆಸರುಗಳನ್ನು ಗಮನಿಸುವುದಾದರೆ ಕ್ರಿಕೆಟಿಗ ವಿರಾಟ್ ಕೊಹ್ಲಿ, ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಕಾರ್, ಕುಸ್ತಿಪಟು ಸಾಕ್ಷಿ ಮಲಿಕ್ ಇವರಿಗೆಲ್ಲ ಅರ್ಹವಾಗಿಯೇ ಸಂದಿದೆ ಪದ್ಮ. ವಿಶ್ವವಿಖ್ಯಾತ ಬಾಣಸಿಗ ಸಂಜೀವ್ ಕಪೂರ್, ಗಾಯಕರಾದ ಖೈಲಾಸ್ ಖೇರ್ ಹಾಗೂ ಅನುರಾಧಾ ಪಡುವಾಲ್ ಇವರೂ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಉಳಿದಂತೆ ಪುರಸ್ಕಾರ ಪಟ್ಟಿಯಲ್ಲಿರುವವರೆಲ್ಲ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು, ದೇಶದ ಬೇರೆ ಬೇರೆ ಮೂಲೆಗಳಲ್ಲಿ ಇರುವವರು ಹಾಗೂ ತಳ ಸಮುದಾಯಗಳ ಧ್ವನಿ ಆಗಿರುವುದು ಗಮನಾರ್ಹ ಸಂಗತಿ. 120 ಶ್ರೇಷ್ಠ ವ್ಯಕ್ತಿಗಳಿಗೆ ಈ ಬಾರಿಯ ಪದ್ಮ ಪ್ರಶಸ್ತಿ ಒಲಿಯುತ್ತಿದೆ.

ಕಿಡ್ನಿ ಕಸಿ ಚಿಕಿತ್ಸೆಯಲ್ಲಿ ಅಪೂರ್ವ ಯೋಗದಾನ ನೀಡಿರುವ ಜಾರ್ಖಂಡಿನ ಡಾ. ಮಕುತ್ ಮಿಂಜ್, ಒರಿಯಾದ ಹಿರಿಯ ನಟ ಸಾಧು ಮಹೆರ್, ಬಿಹಾರ ಮಧುಬನಿಯ ಚಿತ್ರಕಲಾವಿದೆ ಬವಾ ದೇವಿ ಹೀಗೆ ಹಲವರನ್ನು ಹುಡುಕಿ ಪುರಸ್ಕರಿಸಲಾಗುತ್ತಿದೆ.

ಈವರೆಗೆ ಹತ್ತುಲಕ್ಷ ಸಸಿ ನೆಟ್ಟು ಬೆಳೆಸಿರುವ ದಾರಿಪಲ್ಲಿ ರಾಮಯ್ಯ, ರೇಷ್ಮೆ ಸೀರೆ ತಯಾರಿಸುವಾಗಿನ ಕ್ಲಿಷ್ಟ ನೇಯ್ಗೆ ಪ್ರಕ್ರಿಯೆಯಿಂದ ತನ್ನಮ್ಮ ಕೈನೋವು ಅನುಭವಿಸಿದ್ದಕ್ಕೆ ಉತ್ತರವಾಗಿ, ಮೆಕಾನಿಕಲ್ ಎಂಜಿನಿಯರಿಂಗಿನ ಯಾವ ಶಿಕ್ಷಣವಿಲ್ಲದೆಯೂ ಹೊಸ ಯಂತ್ರವೊಂದನ್ನು ಆವಿಷ್ಕರಿಸಿದ ಚಿಂತಾಕಿಂದಿ ಮಲ್ಲೇಶಂ, ಪಂಜಾಬಿನಲ್ಲಿ ನದಿ ಶುದ್ಧೀಕರಣಕ್ಕೆ ಸೇವೆ ಸಲ್ಲಿಸಿರುವ ಬಲ್ಬೀರ್ ಸಿಂಗ್ ಸೀಚೆವಾಲ್, ತಮ್ಮ ನಾಲ್ಕು ದಶಕಗಳ ಅಗ್ನಿಶಾಮಕ ವೃತ್ತಿಜೀವನದಲ್ಲಿ ಸುಮಾರು 100ಕ್ಕೂ ಹೆಚ್ಚು ಅಗ್ನಿ ಅನಾಹುತಗಳನ್ನು ಶಮನಗೊಳಿಸುವಲ್ಲಿ ಧೀರ ಸೇವೆ ಇತ್ತಿರುವ ಕೋಲ್ಕತ್ತದ ಬಿಪಿನ್ ಗನಾತ್ರ, 68 ವರ್ಷಗಳಿಂದ ಕಳರಿಪಯಟ್ಟು ಎಂಬ ಕ್ಷಾತ್ರಕಲೆಯನ್ನು ಅಭ್ಯಸಿಸುತ್ತ ಮುಂದಿನ ಪೀಳಿಗೆಯನ್ನು ತರಬೇತುಗೊಳಿಸುತ್ತಿರುವ 74ರ ಹರೆಯದ ಮೀನಾಕ್ಷಿ ಅಮ್ಮ, ಚಹಾ ತೋಟದಲ್ಲಿ ಕೆಲಸ ಮಾಡಿಕೊಂಡು ಹತ್ತಿರದ ಸುಮಾರು 20 ಹಳ್ಳಿಗಳಲ್ಲಿ ಯಾರೇ ಅಸ್ವಸ್ಥರಾದರೂ ಬೈಕ್ ಆಂಬುಲೆನ್ಸ್ ಸೇವೆ ನೀಡುತ್ತಿರುವ ಕರೀಮುಲ್ ಹಕ್, ಉತ್ತರ ಗುಜರಾತಿನ ಸರ್ಕಾರಿ ಗೋಲಿಯಾ ಎಂಬ ಬರಪೀಡಿತ ಹಳ್ಳಿಯಲ್ಲಿ ಕೃಷಿ ಮಾಡಿ ದೇಶದಲ್ಲೇ ಅತಿಹೆಚ್ಚು ಪ್ರಮಾಣದ ದಾಳಿಂಬೆ ಬೆಳೆದು ತೋರಿಸಿದ ರೈತ ಗಣೇಬಾಯ್ ದರ್ಗಾಭಾಯ್ ಪಟೇಲ್, ಮೈತಿ ನೇಪಾಳ (ತಾಯಿ ನೇಪಾಳ) ಎಂಬ ಸಂಘಟನೆ ಮೂಲಕ ವಿಶೇಷವಾಗಿ ಭಾರತದ ವೇಶ್ಯಾಕೂಪದಲ್ಲಿ ಸಿಲುಕಿರುವ ಹೆಣ್ಣುಮಕ್ಕಳ ರಕ್ಷಣೆ ಮತ್ತು ಆಶ್ರಯಕ್ಕಾಗಿ ಶ್ರಮಿಸುತ್ತಿರುವ ನೇಪಾಳ ಮೂಲದ ಅನುರಾಧಾ ಕೋಯಿರಾಲಾ….

ಹೀಗೆ ನೀವು ಈ ಬಾರಿಯ ಪದ್ಮ ಪುರಸ್ಕಾರದ ಪಟ್ಟಿ ಇಟ್ಟುಕೊಂಡು ಯಾವ ಹೆಸರನ್ನು ಪರಿಶೀಲಿಸಿದರೂ ಅಲ್ಲೊಂದು ಸಾಧನಾಗಾಥೆ ಇದೆ. ಬೇರುಮಟ್ಟದಲ್ಲಿ ಕೆಲಸ ಮಾಡುತ್ತಿರುವವರ ಸಾರ್ಥಕ ಬಿಂಬಗಳಿವೆ. ನಿಜಕ್ಕೂ ಭಾರತೀಯರ ಕಣ್ಣುಗಳಲ್ಲಿ ಹೀರೋಗಳಾಗಬೇಕಾದವರು ಇವರಲ್ಲದೇ ಇನ್ಯಾರು?

ಹೀಗಾಗಿ ಈ ಬಾರಿಯ ಪದ್ಮ ಆಯ್ಕೆ ಸಮಿತಿ ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ ಎಂಬುದು ನಿಸ್ಸಂಶಯ.

ಈ ಬಾರಿ ತೆರೆಮರೆಯ ಹೀರೋಗಳನ್ನೇ ಹೆಚ್ಚಾಗಿ ಆರಿಸೋಣ ಎಂದು ಪ್ರಶಸ್ತಿ ಸಮಿತಿ ಮೊದಲೇ ನಿರ್ಧರಿಸಿತ್ತು. ಮೊದಲ ಬಾರಿಗೆ ಆನ್ಲೈನ್ ಮುಖಾಂತರ ಜನರೇ ಅರ್ಹ ವ್ಯಕ್ತಿಗಳನ್ನು ಸೂಚಿಸುವ, ಸಾಮಾಜಿಕ ವಲಯಗಳಲ್ಲಿ ಕೆಲಸ ಮಾಡುತ್ತಿರುವವರ ಹೆಸರನ್ನು ಶಿಫಾರಸು ಮಾಡುವ ಅವಕಾಶವನ್ನು ಮೇ ವೇಳೆಗಾಗಲೇ ಮಾಡಿಕೊಡಲಾಗಿತ್ತು. 19 ಸದಸ್ಯರ ಆಯ್ಕೆ ಸಮಿತಿಯಲ್ಲಿ ಸ್ವದೇಶಿ ಜಾಗರಣ ಮಂಚ್ ಮುಖ್ಯಸ್ಥ ಎಸ್. ಗುರುಮೂರ್ತಿ, ಪ್ರಸಾರ ಭಾರತಿ ಅಧ್ಯಕ್ಷ ಅರಕಲಗೂಡು ಸೂರ್ಯಪ್ರಕಾಶ್ ಹೀಗೆ ಹಲವು ಪ್ರಾಮಾಣಿಕರು ಮತ್ತು ಸಮರ್ಥರು ಕೆಲಸ ಮಾಡಿದ್ದಾರೆ. ಪರಿಣಾಮ ಒಂದೊಳ್ಳೆಯ ಪುರಸ್ಕಾರ ಪಟ್ಟಿ ದೇಶದ ಮುಂದಿದೆ.

ಇಂಥ ಒಳ್ಳೆ ಕೆಲಸಗಳಿಗಿರಲಿ ನಮ್ಮ ಮೆಚ್ಚುಗೆ!

Leave a Reply