ನಮ್ಮ ಸಮಾಜಕ್ಕೆ ಬೇಕಿರೋದು ನ್ಯಾಯದ ಪರ ಕಾನೂನೇ ಹೊರತು ಮಹಿಳಾ ಪರ ಕಾನೂನಲ್ಲ…

author-geetha‘ಮೊನ್ನೆ ನ್ಯಾಷನಲ್ ಗರ್ಲ್ ಚೈಲ್ಡ್ ಡೇ ಅಂತೆ…’

‘ಅದೇನು ಸ್ಪೆಷಲ್ಲು? ನ್ಯಾಷನಲ್ ಬಾಯ್ ಚೈಲ್ಡ್ ಡೇ ಅಂತ ಬೇರೆ ಇರುತ್ತಾ?’

‘ಗರ್ಲ್ಸ್ ಸ್ಪೆಷಲ್ ಅಲ್ಲವೇ? ಜೊತೆಗೆ ಅವರಿಗೆ ಸಪೋರ್ಟ್ ಬೇಕು…’

‘ಸಮಾನತೆ ಬೇಕು ಅಂತೀರಿ… ಅದಕ್ಕೆ ಹೋರಾಟ ಅಂತೀರಿ… ಮಕ್ಕಳ ಲೆವೆಲ್ಲಿನಲ್ಲಿ ಭೇದ ಮಾಡ್ತೀರಲ್ರೀ? ತಪ್ಪಲ್ಲವೇ? ಗಂಡು ಮಕ್ಕಳು, ಹೆಣ್ಣು ಮಕ್ಕಳು ಇಬ್ಬರೂ ಒಂದೇ ಎಂಬ ಭಾವ ಮೂಡಿಸಲು ಪ್ರಯತ್ನ ಪಡಬೇಕಲ್ಲವೇ?’

‘ಭೇದ ಹೇಗೆ ಮಾಡ್ತಾರೆ ಅಂತ ನಿಮಗೆ ಗೊತ್ತಿಲ್ಲ. ಗಂಡು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಹೆಣ್ಣು ಮಕ್ಕಳನ್ನು ಮನೆಯ ಕೆಲಸಕ್ಕೆ ಹಾಕಿಕೊಳ್ಳುತ್ತಾರೆ…’

‘ಶಾಲೆಗೆ ಹೋಗದೆ ಹೊಲಗಳಲ್ಲಿ, ಗ್ಯಾರೇಜಿನಲ್ಲಿ ಕೆಲಸ ಮಾಡುವ ಹುಡುಗರನ್ನು ಕಂಡಿಲ್ಲವೇ ನೀವು?’

‘ಹಾಗಲ್ಲ…’

‘ಯಾರದೋ ಮನೆಯಲ್ಲಿ ಜೀತಕ್ಕೆ ಗಂಡು ಮಕ್ಕಳನ್ನು ಕಳುಹಿಸುತ್ತಾರೆ… ರಸ್ತೆ ಬದಿಯ ಡಾಬಾ, ಹೊಟೆಲ್ಲುಗಳಲ್ಲಿ ತಟ್ಟೆ, ಬಟ್ಟಲು ತೊಳೆಯುತ್ತಿರುವ ಗಂಡುಮಕ್ಕಳನ್ನು ನೀವು ನೋಡಿಲ್ಲವೇ?’

‘ಅದು ಬಿಡಿ… ಚಿಕ್ಕಪುಟ್ಟ ಹೆಣ್ಣು ಮಕ್ಕಳಿಗೆ ಆಟವಾಡಿಕೊಂಡು ಇರಬೇಕಾದ ವಯಸ್ಸಿನಲ್ಲಿ ಮದುವೆ ಮಾಡಿ ಬಿಡುತ್ತಾರೆ…’

‘ಆ ಚಿಕ್ಕಪುಟ್ಟ ಹೆಣ್ಣು ಮಕ್ಕಳನ್ನು ಮದುವೆಯಾಗುವ ಚಿಕ್ಕಪುಟ್ಟ ಗಂಡು ಮಕ್ಕಳೇ… ಹುಡುಗಿಗೆ ಒಂಬತ್ತು ವರ್ಷವಾಗಿದ್ದರೆ… ಹುಡುಗನಿಗೆ ಹದಿಮೂರೋ, ಹದಿನೈದೋ ವರ್ಷವಾಗಿರುತ್ತದೆ. ನಾನು ಹೇಳುವುದು ಕೇಳಿ… ಮಕ್ಕಳಲ್ಲಿ ಭೇದ ಮಾಡಬೇಡಿ… ಸಮಾನತೆ ಅಂದರೆ…’

‘ಬಿಡಿ… ಫೆಮಿನಿಸಂ, ಸ್ತ್ರೀ ಪರ ಹೋರಾಟ ನಿಮಗೆ ಅರ್ಥವಾಗುವುದಿಲ್ಲ… ನೀವೆಲ್ಲಾ ಗಂಡಸರ ಪರ…’

ರೇಗಿ ಹೊರಟು ಹೋದರು…

ಅವರಿಗೆ ಹೇಳಲೇಬೇಕಾದ ಮಾತುಗಳು ನನ್ನಲ್ಲೇ ಉಳಿದವು.

ಸ್ತ್ರೀ ಪರ ಅಂದರೆ ಪುರುಷ ವಿರೋಧಿ ಆಗಬೇಕಿಲ್ಲ. ಸಮಾನತೆ ಸಾಧಿಸಬೇಕೆಂದರೆ ನಾವು ಮುಂದೆ ಬರಬೇಕೇ ಹೊರತು, ಮುಂದೆ ಇರುವವರನ್ನು ಹಿಂದೆ ನೂಕುವುದು ಸಾಧನೆಯಲ್ಲ…

ಪುರುಷರು ಮಹಿಳೆಯರನ್ನು ಶೋಷಿಸಿದ್ದಾರೆ, ಹಾಗಾಗಿ ಈಗ ಮಹಿಳೆಯರು (ಸಮಾನತೆಯನ್ನು ಸಾಧಿಸುರುವವರು) ಪುರುಷರನ್ನು ಶೋಷಿಸಿದರೆ ತಪ್ಪೇನು ಇಲ್ಲ… ಶತಶತಮಾನಗಳು, ಧರ್ಮದ ಹೆಸರಿನಲ್ಲಿ, ಲಿಂಗ ತಾರತಮ್ಯ ಮಾಡಿದ್ದಾರೆ. ಹೆಣ್ಣಿಗೆ ವಿದ್ಯೆಯ ಹಕ್ಕು, ಅದರಿಂದ ಬರುವ ಉದ್ಯೋಗದ ಅವಕಾಶ… ಅದರಿಂದ ಉಂಟಾಗುವ ಆರ್ಥಿಕ ಸ್ವಾತಂತ್ರ್ಯ… ಅದರ ನೇರ ಫಲವಾದ ಮಾನಸಿಕ ಸ್ಥೈರ್ಯ… ಎಲ್ಲವನ್ನು ಅವಳಿಂದ ಕಸಿದುಕೊಂಡಿದ್ದಾರೆ. ಹೋರಾಡಿ ಅದನ್ನು ಪಡೆಯುತ್ತಿರುವ ಹೆಣ್ಣಿನ ಬಗ್ಗೆ ಸಹಾನುಭೂತಿಯಿದೆ… ಹೆಮ್ಮೆಯಿದೆ. ಆದರೆ ಅದು ಅಹಂ ಭಾವಕ್ಕೆ ಎಡೆ ಮಾಡಿಕೊಟ್ಟು… ಪುರುಷರನ್ನು ಶೋಷಿಸುವ ಅಸ್ತ್ರವಾದರೆ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಾರ್ಗ ಹಿಡಿದರೆ ವಿರೋಧಿಸಲೇಬೇಕಾಗುತ್ತದೆ. ಅವರು ಶೋಷಿಸಿದಾಗ… ಸುಮ್ಮನಿದ್ದಿರಿ… ಈಗ ಸ್ತ್ರೀ ಪರ ಕಾನೂನು, ವಾತಾವರಣ ಬಳಸಿಕೊಂಡು ನಾವು ಶೋಷಿಸುತ್ತೇವೆ ಎಂದರೆ ತಪ್ಪಾಗುತ್ತದೆ. ಅದು ಮತ್ತೊಂದು ಹೋರಾಟಕ್ಕೆ ನಾಂದಿ ಹಾಡಿದಂತೆ. ಬರೀ ಹೋರಾಟವೇ ಬದುಕು ಆಗುತ್ತದೆ.

ಮಹಿಳಾ ಪೊಲೀಸರು, ಮಹಿಳಾ ನ್ಯಾಯಾಧೀಶರು, ಮಹಿಳಾ ಪರ ಕಾನೂನು, ಮಹಿಳಾ ಇಲಾಖೆ, ಮಹಿಳೆಯ ಪರ ಇರುತ್ತಾರೆ ಎಂದರೆ ನ್ಯಾಯದ ಪರ ಯಾರು ಇರುತ್ತಾರೆ? ಮಹಿಳೆಯರು ನ್ಯಾಯವಾಗಿಯೇ ಇರುತ್ತಾರೆ ಎಂಬ ನಂಬಿಕೆ ಹುಟ್ಟಿರುವುದು ಹೇಗೆ?

ಯಾವುದೇ ವಿಷಯಕ್ಕೆ ಜಗಳವಾದರೂ ಗಂಡಸಿನ ಮೇಲೆ ಅತ್ಯಾಚಾರದ, ಅಸಭ್ಯ ನಡತೆಯ ಕೇಸುಗಳನ್ನು ಜಡಿದ ಉದಾಹರಣೆಗಳು ಹಲವಿವೆ.

ಮೊಬೈಲ್ ರಿಪೇರಿಗೆ ಎರಡೂವರೆ ಸಾವಿರ ತೆಗೆದುಕೊಂಡು ರಿಪೇರಿ ಮಾಡಲಾಗದೆ ಮೊಬೈಲ್ ಹಿಂತಿರುಗಿಸಿದ, ಒಬ್ಬರ ಮೇಲೆ ಮೊಲೆಸ್ಟೇಷನ್ ಕೇಸು ದಾಖಲಿಸಿದ ಉದಾಹರಣೆ ಮೊನ್ನೆಯಷ್ಟೇ ಓದಿದ್ದು. ದುಡ್ಡು ಹಿಂತಿರುಗಿಸದಿದ್ದರೆ ಕೇಸು ಹಾಕುತ್ತೇನೆ ಎಂದು ಹೆದರಿಸಿದ್ದ ಮೆಸೇಜ್ ಗಳನ್ನು ಅವನು ಅಳಿಸದೆ ಉಳಿಸಿಕೊಂಡಿದ್ದರಿಂದ ಕಾನೂನಿನ ಬಾಹುಗಳಿಂದ ಬಚಾವಾದ. ಅವಳಿಗೆ ಒಂದು ವಾರ್ನಿಂಗ್ ಕೊಟ್ಟು ಬಿಟ್ಟು ಕಳಿಸಿದರಂತೆ ಪೊಲೀಸರು… (ಶಿಕ್ಷೆ ಇಲ್ಲ!)

ಭಾವ ಮತ್ತು ನಾದಿನಿ ಸೇರಿಕೊಂಡು ಮೊಲೆಸ್ಟೇಷನ್ ಆಯಿತು ಎಂಬ ಸುಳ್ಳು ಕೇಸು ಸೃಷ್ಟಿಸಿ ಪೊಲೀಸರನ್ನೇ ತಬ್ಬಿಬ್ಬು ಮಾಡಿದರೂ ಭಾವನಿಗೆ ಮಾತ್ರ ಶಿಕ್ಷೆ… ಆ ನಾದಿನಿ… She was mislead ಅಷ್ಟೇ ಯಾಕೆ ಅವಳಿಗೆ ಬುದ್ಧಿ ಇಲ್ಲವೇ? Led or misled.. ಎರಡೂ ಬೇರೆ.

ಪಬ್ ಒಂದಕ್ಕೆ ರಾತ್ರಿ ಒಂಬತ್ತುವರೆಗೆ ಒಂಟಿಯಾಗಿ ಹೋಗಿ ಹನ್ನೊಂದುವರೆಯವರೆಗೆ ಅಪರಿಚಿತರೊಂದಿಗೆ ಕುಡಿದು ಅವರ ವಾಹನದಲ್ಲಿಯೇ ಮನೆಗೆ ಬಂದು ಮಲಗಿದವಳು… ಮಾರನೇ ದಿನ ಬೆಳಗ್ಗೆ ಮೈ ಕೈಗಳ ಮೇಲೆ ಗುರುತುಗಳಾಗಿವೆ… ಆ ಅಪರಿಚಿತರು ತನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿರಬಹುದು ಎಂದು ದೂರು ಕೊಟ್ಟು ಅವರನ್ನು ಜೈಲಿಗೆ ಕಳುಹಿಸಿದ್ದು ನನಗೆ ಅರ್ಥವೇ ಆಗಲಿಲ್ಲ. ಕುಡಿದ ಮತ್ತಿನಲ್ಲಿ ಅವಳು ಒಪ್ಪಿಗೆ ಸೂಚಿಸಿರಬಹುದು… ಕುಡಿದ ಮತ್ತಿನಲ್ಲಿ ಅವರುಗಳೂ ಎಲ್ಲೆ ಮೀರಿರಬಹುದು… ಇಬ್ಬರೂ ತಪ್ಪಿರಬಹುದಾದ ವಿಷಯದಲ್ಲಿ ಕಾನೂನು ಒಬ್ಬರ ಪರ ನಿಲ್ಲುವುದು ಎಷ್ಟರ ಮಟ್ಟಿಗೆ ನ್ಯಾಯ? I am not being judgemental.

ಪ್ರೀತಿಸಿ, ಓಡಾಡಿ, ಒಡನಾಡಿ, ಮುಂದೆ ಮದುವೆಯಾಗುವ ಭರವಸೆಯೊಂದಿಗೆ (ಭರವಸೆ ಇಬ್ಬರೂ ಒಬ್ಬರಿಗೊಬ್ಬರು ಕೊಟ್ಟಿರುತ್ತಾರೆ… ಗಂಡಸು ಭರವಸೆ ಕೊಡುತ್ತಾನೆ.. ಹೆಣ್ಣು ಒಪ್ಪುತ್ತಾಳೆ, ನಂಬುತ್ತಾಳೆ. ಅಂದರೆ ಅಲ್ಲಿ ಸಮಾನತೆ ಎಲ್ಲಿದೆ?) ಒಂದಾಗುತ್ತಾರೆ ಕೂಡ. Mutual consetನಿಂದ ಒಂದಾಗಿದ್ದು, ಮದುವೆಯಾಗದಿದ್ದರೆ ರೇಪ್ ಹೇಗೆ ಆಗುತ್ತದೆ? ರೇಪ್ ಆಯಿತೆಂದು ಹೆಣ್ಣಿ ಕೇಸು ಜಡಿದರೆ ಅದರಲ್ಲಿ ನ್ಯಾಯವೆಲ್ಲಿದೆ? ‘cheating with false promise’ ಆಗಬಹುದೇನೋ… ಆದರೂ ಗಂಡು promise ಮಾಡುತ್ತಾನೆ… ಹೆಣ್ಣು ಒಪ್ಪುತ್ತಾಳೆ ಎನ್ನುವುದು ನನಗೆ ಹೆಣ್ಣು ನಾಲ್ಕು ಮೆಟ್ಟಿಲು ಕೆಳಗಿದ್ದಾಳೆ ಎಂಬ ಭಾವವನ್ನೇ ಕೊಡುತ್ತದೆ.

ಇನ್ನು ಡೌರಿ ಹ್ಯಾರಾಸ್ ಮೆಂಟ್ ಕೇಸುಗಳಿಗಂತೂ ಲೆಕ್ಕವೇ ಇಲ್ಲ. False ಕೇಸುಗಳ ಭರದಲ್ಲಿ ಸತ್ಯವಾಗಿ ಹ್ಯಾರಾಸ್ ಮೆಂಟ್ ಅನುಭವಿಸುತ್ತಿರುವ ಹೆಣ್ಣುಗಳ ಪಾಡು ದೇವರಿಗೆ ಪ್ರೀತಿ.

ಗಂಡ ಬೇರೆ ಮನೆ ಮಾಡಲು ಒಪ್ಪಲಿಲ್ಲವೇ? ಅತ್ತೆ ಕಸ ಗುಡಿಸಲು ಹೇಳಿದಳೇ? ತನಗೆ ಬೇಕಾದಷ್ಟು ಪಾಕೆಟ್ ಮನಿ ಕೊಡಲಿಲ್ಲವೇ? ರಜ ಬಂದಾಗ UK ಟ್ರಿಪ್ ಗೆ ಕರೆದುಕೊಂಡು ಹೋಗಲಿಲ್ಲವೇ? ಅಥವಾ ಇವನನ್ನು ಬಿಟ್ಟು ಬೇರೆಯವನನ್ನು ಕಟ್ಟಿಕೊಳ್ಳಬೇಕೇ? ಸರಿ, dowry harassment, abuse ಎಂದೆಲ್ಲಾ ಹೇಳಿ ಕೇಸು ಹಾಕುತ್ತೇನೆ ಎಂದು ಹೆದರಿಸಿದರೆ ಸಾಕು ದಾರಿಗೆ ಬರುತ್ತಾನೆ ಗಂಡ… ಬರದಿದ್ದರೆ ಕೇಸು ಹಾಕಿ ಬಿಡುವುದು… ಸ್ಟೇಷನ್ನು, ಕೋರ್ಟು ಎಂದೆಲ್ಲಾ ಅಲೆದಾಡಿ ಮೆತ್ತಗಾಗಿ ದಾರಿಗೆ ಬರುತ್ತಾರೆ. ಬೇರೆ ಮನೆ ಮಾಡಬೇಕು. ಅವಳಿಗೆ provide ಮಾಡಬೇಕು ಎಂದೆಲ್ಲಾ ಕೋರ್ಟು ಆದೇಶಿಸುತ್ತದೆ. ಮಾಡುತ್ತಿದ್ದ ಉದ್ಯೋಗ ಬಿಟ್ಟು ಗಂಡನಿಂದ ಮೆಂಟೇನೆನ್ಸ್ ಗೆ ಬೇಡಿಕೆ ಇಡುವ ಹೆಣ್ಣು ಮಕ್ಕಳೂ ಇದ್ದಾರೆ. Provide ಮಾಡಬೇಕು, ಮೇಂಟೇನ್ ಮಾಡಬೇಕು ಎಂದಾಕ್ಷಣ ಪುರುಷನ, ಗಂಡನ supremacy ಒಪ್ಪಿಕೊಂಡಂತೆ ಆಯಿತಲ್ಲವೇ?

ಚಿಕ್ಕಮಕ್ಕಳಿದ್ದರಂತೂ ಪ್ರೈಮರಿ ಗಾರ್ಡಿಯನ್ ಆದ ತಾಯಿ, ಮಕ್ಕಳನ್ನು ನೋಡಲು ಮಾತನಾಡಲು ತಂದೆಗೆ ಅವಕಾಶ ಕೊಡದೆ, ಅನುವು ಮಾಡಿ ಕೊಡದೆ ಮಕ್ಕಳಿಗೆ, ತಂದೆಗೆ ಕೊನೆಗೆ ತನಗೂ ಅನ್ಯಾಯ ಮಾಡಿಕೊಳ್ಳುತ್ತಾಳೆ. ಸಂಸಾರ ಎನ್ನುವ ಸಮಾಜದ ಮೂಲ ಅಡಿಪಾಯ ಅಲ್ಲಾಡುತ್ತಿದೆ.

ಶೋಷಣೆಗೆ ಒಳಗಾಗುವುದು ತಪ್ಪು. ಶೋಷಿಸುವುದು ಘೋರ ತಪ್ಪು. ಕಾನೂನಿನ ದುರ್ಬಳಕೆ ಅತಿ ಘೋರ ತಪ್ಪು.

ಮಹಿಳಾ ಪರ ಕಾನೂನು ಬೇಕಿಲ್ಲ.. ನ್ಯಾಯದ ಪರ ಕಾನೂನು ಇರಲಿ… ಸಮಾನತೆ, ತೆಗೆದುಕೊಳ್ಳುವ ಅಥವಾ ಕೊಡುವ ಪ್ರಕ್ರಿಯೆಯಲ್ಲಿ ಬರುವುದಿಲ್ಲ. ಗಂಡು ಮಕ್ಕಳನ್ನು ಹಾಗೂ ಹೆಣ್ಣು ಮಕ್ಕಳನ್ನು ‘ಮಕ್ಕಳು’ ಎಂದು ನೋಡುವ, ಬೆಳೆಸುವ ಕ್ರಿಯೆಯಲ್ಲಿ ಬರುತ್ತದೆ. ಅದಕ್ಕೆ ಅದೇ ಸಮಾಜದ ಮೂಲ ಬುನಾದಿಯಾದ ಸಂಸಾರ ಬಲವಾಗಿರಬೇಕು. ಅದಕ್ಕಾಗಿ ಗಂಡು, ಹೆಣ್ಣು ಒಂದಾಗಿರಬೇಕು.

Leave a Reply