ಡಿಜಿಟಲ್ ಕನ್ನಡ ಟೀಮ್:
ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪಟ್ಟಿಯನ್ನೊಮ್ಮೆ ಕಣ್ಣಾಡಿಸಿದರೆ ಅನೇಕ ಯಶೋಗಾಥೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಅಂತಹ ಸಾಧಕರ ಪೈಕಿ ಆಂಧ್ರ ಪ್ರದೇಶದ ಚಿಂತಕಿಂಡಿ ಮಲ್ಲೇಶಂ ಸಹ ಒಬ್ಬರು. ಇವರು ಮಾಡಿರುವ ಸಾಧನೆ ಏನು ಅಂತಾ ನೀವು ಕೇಳಿದ್ರೆ ಅಚ್ಚರಿಯಾಗ್ತಿರಿ. ಕಾರಣ, ಹತ್ತನೇ ತರಗತಿಯನ್ನೂ ಪೂರ್ಣಗೊಳಿಸದ ಮಲ್ಲೇಶಂ, ಯಾರ ಸಹಾಯವೂ ಇಲ್ಲದೆ ರೇಷ್ಮೇ ಸೀರೆಗೆ ತಯಾರಿಗೆ ಬೇಕಾಗುವ ರೇಷ್ಮೇ ನೂಲುಗಳನ್ನು ಮಾಡುವ ಯಂತ್ರವನ್ನು ಕಂಡು ಹಿಡಿದ ಹಠವಾದಿ.
ಮಲ್ಲೇಶಂ ಆಂಧ್ರ ಪ್ರದೇಶದ ಶಾರ್ಜಿಪೇಟೆಯ ಸಣ್ಣ ಹಳ್ಳಿಯ ಸಾಧಾರಣ ನೇಕಾರರ ಕುಟುಂಬದಲ್ಲಿ ಹುಟ್ಟಿದರು ಇವರ ಸಾಧನೆ ಮಾತ್ರ ಅಸಾಧಾರಣ. 10ನೇ ತರಗತಿಯನ್ನು ಅರ್ಧಕ್ಕೆ ನಿಲ್ಲಿಸಿದ ಮಲ್ಲೇಶಂ ತನ್ನ ತಂದೆ ತಾಯಿಗಳ ಜತೆ ಸೀರೆ ನೆಯ್ಯುವ ಕೆಲಸದಲ್ಲೇ ತೊಡಗಿಸಿಕೊಂಡ.
ಒಂದು ಸೀರೆ ತಯಾರಿಸಲು 4-5 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಮಲ್ಲೇಶಂ ಅವರ ತಾಯಿ ಒಂದು ಸೀರೆ ನೆಯ್ಯಲು ಅಗತ್ಯವಿರುವ ನೂಲುಗಳನ್ನು ಸಿದ್ಧಪಡಿಸಿಕೊಳ್ಳು ರೇಷ್ಮೆ ನೂಲನ್ನು 9000 ಬಾರಿ ಒಂದು ಮೀಟರ್ ಅಂತರದಲ್ಲಿರುವ ಕೋಲುಗಳಿಗೆ ಸುತ್ತಿಕೊಳ್ಳಬೇಕಿತ್ತು. ಈ ಕೆಲಸದಿಂದ ಮಲ್ಲೇಶಂ ಅವರ ತಾಯಿಗೆ ಕೈ ಹಾಗೂ ಕೀಲುಗಳ ನೋವು ಕಾಣಿಸಿಕೊಳ್ಳಲಾರಂಭಿಸಿತು. ತಾಯಿ ಈ ರೀತಿಯಾಗಿ ಕಷ್ಟ ಪಡುವುದನ್ನು ಸಹಿಸದ ಮಲ್ಲೇಶಂ ತಲೆಗೆ ಈ ನೂಲು ತಯಾರಿಸುವ ಯಂತ್ರ ಕಂಡುಹಿಡಿಯಬೇಕೆಂಬ ಆಲೋಚನೆ ಹೊಳೆಯಿತು.
ಹೇಳಿ ಕೇಳಿ ಓದಿರುವುದು 9ನೇ ತರಗತಿ. ಯಂತ್ರ ತಯಾರಿಸಲು ಬೇಕಾದ ಮೆಕಾನಿಕಲ್ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನ ಕನಿಷ್ಠ ಜ್ಞಾನವೂ ಇಲ್ಲದ ಇವರಿಗೆ ಈ ನೇಯ್ಯುವ ಯಂತ್ರ ತಯಾರಿಸುವುದು ದೊಡ್ಡ ಸವಾಲಾಗಿತ್ತು. ಈ ಸವಾಲನ್ನು ಸ್ವೀಕರಿಸಿದ ಮಲ್ಲೇಶಂ, ಸೀರೆ ನೆಯ್ಯುವ ಬಗ್ಗೆ ಇದ್ದ ಜ್ಞಾನದಿಂದಲೇ ತಾನು ತಯಾರಿಸಲು ಹೊರಟಿರುವ ಯಂತ್ರ ಹೇಗಿರಬೇಕು ಎಂದು ಯೋಚಿಸುತ್ತಾ ಹೋದರು. ತನಗೆ ಬಂದ ಆಲೋಚನೆಗಳನ್ನು ಪ್ರಯೋಗಿಸುತ್ತಾ ಮರ ಪಟ್ಟಿಗಳ ಮೂಲಕ ಯಂತ್ರಕ್ಕೆ ಒಂದು ರೂಪ ಕೊಡಲು ಮುಂದಾದರು. ಈ ಮರದ ಪಟ್ಟಿಗಳಿಗೆ ಅಗತ್ಯವಿರುವ ಯಂತ್ರದ ಬಿಡಿಭಾಗಗಳನ್ನು ಪಟ್ಟಣದಿಂದ ತಂದು ಜೋಡಿಸಿಕೊಂಡರು. ಯಂತ್ರ ಒಂದು ಹಂತಕ್ಕೆ ಬಂದು ನಿಂತಿತು. ಆನಂತರ ಏನು ಮಾಡಬೇಕೆಂಬುದು ಅವರಿಗೆ ತೋಚಲಿಲ್ಲ.

ಮತ್ತೊಂದೆಡೆ ತಾವು ದುಡಿಯುತ್ತಿದ್ದ ಹಣವನ್ನೆಲ್ಲಾ ತನ್ನ ಯಂತ್ರದ ಪ್ರಯೋಗಕ್ಕೆ ಸುರಿಯುತ್ತಿದ್ದ. ಆದರೆ ಈ ಪ್ರಯೋಗಕ್ಕೆ ದುಡಿದ ಹಣ ವ್ಯಯಿಸುತ್ತಿದ್ದನ್ನು ಅವರ ಕುಟುಂಬದವರೇ ಒಪ್ಪುತ್ತಿರಲಿಲ್ಲ. ತನ್ನ ಕನಸಿನ ಯಂತ್ರವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವುದು ಹೇಗೆ ಎಂಬ ಗೊಂದಲದಲ್ಲಿರುವಾಗಲೇ ಅವರು ಹೈದರಾಬಾದಿಗೆ ಹೋಗಿ ನೆಲೆಸಿದರು. ಅಲ್ಲಿ ಬೇರೆ ಬೇರೆ ಯಂತ್ರಗಳು ಕೆಲಸ ಮಾಡುವ ಮಾದರಿಯನ್ನು ಕಂಡು ತಮ್ಮ ಯಂತ್ರದಲ್ಲೂ ಅಗತ್ಯ ಮಾರ್ಪಾಟು ಮಾಡಿದರು.
ಆದರೆ ಆ ಯಂತ್ರದಲ್ಲಿ ರೇಷ್ಮೇ ನೂಲುಗಳು ಸರಿಯಾಗಿ ಸಾಗುವಂತೆ ಮಾಡುವುದು ಹೇಗೆ ಎಂಬುದು ಅವರಿಗೆ ದೊಡ್ಡ ಸವಾಲಾಯಿತು.
1999ರ ವೇಳೆಗೆ ಬಾಲನಗರ್ ಪ್ರದೇಶದಲ್ಲಿ ಯಂತ್ರದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಮಲ್ಲೇಶಂ, ಆ ಅಂಗಡಿಯಲ್ಲಿ ಒಂದು ಯಂತ್ರ ಕಾರ್ಯನಿರ್ವಹಿಸುತ್ತಿದ್ದದನ್ನು ನೋಡಿ ಆಶ್ಚರ್ಯಗೊಂಡರು. ಕಾರಣ ತಮ್ಮ ಕನಸಿನ ಯಂತ್ರವೂ ಇದೇ ರೀತಿ ಕೆಲಸ ಮಾಡಬೇಕೆಂಬ ಅರಿವು ಅವರಿಗಾಗಿತ್ತು. ತಮ್ಮ ಯಂತ್ರದ ಕಾರ್ಯಕ್ಕೂ ಆ ಯಂತ್ರದ ಕಾರ್ಯಕ್ಕೂ ಸಾಮ್ಯತೆ ಕಂಡುಕೊಂಡರು.
ಅದಾಗಲೇ ಸಾಕಷ್ಟು ಪ್ರಯೋಗಗಳನ್ನು ಬೇಸತ್ತಿದ್ದ ಮಲ್ಲೇಶಂ ಹೊಸ ಯಂತ್ರವನ್ನು ನೋಡಿದ ನಂತರ ತನ್ನ ಯಂತ್ರದಲ್ಲಿ ನೂಲು ಸಾಗಲು ಒಂದು ಹೊಸ ಉಪಾಯ ಮಾಡಿ ಹೆಚ್ಚುವರಿ ಬಿಡಿಭಾಗಗಳನ್ನು ಅಳವಡಿಸಿದರು. ಆ ಮೂಲಕ ಆವರ ಕನಸಿನ ಯಂತ್ರ ಕೊನೆಗೂ ಸಿದ್ಧವಾಯಿತು. ಜತೆಗೆ ನಿರೀಕ್ಷೆಯಂತೆ ಕಾರ್ಯಾರಂಭವನ್ನು ಮಾಡಿತು.
ತಕ್ಷಣವೇ ಈ ಯಂತ್ರವನ್ನು ತಮ್ಮ ಮನೆಗೆ ತೆಗೆದುಕೊಂಡು ಹೋದ ಮಲ್ಲೇಶಂ ಒಂದು ಸೀರೆ ನೆಯ್ಯಲು ಮುಂದಾದರು. 4-5 ತಾಸುಗಳಲ್ಲಿ ನೇಯ್ಯುತ್ತಿದ್ದ ಸೀರೆಯನ್ನು ಆ ಯಂತ್ರ ಒಂದೂವರೆ ತಾಸಿನಲ್ಲಿ ಪೂರ್ಣಗೊಳಿಸಿತ್ತು. ಜತೆಗೆ ಕೈನಲ್ಲಿ ನೆಯ್ಯಲಾಗ ಸೀರೆಗಿಂತ ಉತ್ತಮ ಗುಣಮಟ್ಟ ಬಂದಿದ್ದನ್ನು ಕಂಡ ಮಲ್ಲೇಶಂ ಸಂತಸಕ್ಕೆ ಪಾರವೇ ಇರಲಿಲ್ಲ. ಒಂದು ವರ್ಷದ ವೇಳೆಗೆ ಮರದಿದ್ದ ಮಾಡಿದ್ದ ಯಂತ್ರದ ಫ್ರೇಮ್ ಹಾಗೂ ಇತರೆ ಭಾಗಗಳನ್ನು ಕಬ್ಬಿಣಕ್ಕೆ ಬದಲಿಸಿ ಯಂತ್ರಕ್ಕೆ ಮತ್ತಷ್ಟು ಬಲ ನೀಡಿದರು.
ಈ ಯಂತ್ರದಿಂದ ದಿನಕ್ಕೆ 2 ಸೀರೆ ನೆಯ್ಯುತ್ತಿದ್ದ ಅವರ ಕುಟುಂಬ ನಂತರ 6 ಸೀರೆಗಳನ್ನು ನೆಯ್ಯುತ್ತಾ ಆರ್ಥಿಕವಾಗಿ ಪ್ರಗತಿ ಕಂಡಿತು. ಈವರೆಗೂ ಮಲ್ಲೇಶಂ ಅವರು ಇಂತಹುದೇ 500 ಕ್ಕೂ ಹೆಚ್ಚು ಯಂತ್ರಗಳನ್ನು ತಯಾರಿಸಿ ಇತರೆ ನೇಕಾರರಿಗೆ ಮಾರಾಟ ಮಾಡಿದ್ದಾರೆ.
ಯಾವುದೇ ವಿದ್ಯೆ ಇಲ್ಲದಿದ್ದರೂ ತಮ್ಮ ಅಧ್ಯಯನ, ಪರಿಶ್ರಮ, ಸಂಶೋಧನೆ, ಪ್ರಯೋಗಗಳ ಮೂಲಕವೇ ಯಂತ್ರವನ್ನು ಕಂಡು ಹಿಡಿದ ಸಾಧನೆ ನಿಜಕ್ಕೂ ಎಲ್ಲರೂ ಹೆಮ್ಮೆ ಪಡುವಂತಹುದ್ದು. ಇಂತಹ ಸ್ಥಳೀಯ ಪ್ರತಿಭೆಗಳಿಗೆ ಈಗ ಪದ್ಮ ಶ್ರೀ ಪ್ರಶಸ್ತಿ ಸಿಕ್ಕಿರುವುದು ಮತ್ತಷ್ಟು ಸಂತೋಷ ತಂದಿದೆ.