ಸರ್ಜಿಕಲ್ ಸ್ಟ್ರೈಕ್ ಯೋಧರಿಗೆ ಸನ್ಮಾನ… ಹಂಗ್ಪನ್ ದಾದಾಗೆ ಅಶೋಕ ಚಕ್ರ… ಈ ಬಾರಿ ಗಣರಾಜ್ಯೋತ್ಸವದ ಪ್ರಮುಖ ಹೈಲೈಟ್ಸ್

ಹವಾಲ್ದಾರ್ ಹಂಗ್ಪನ್ ದಾದಾ ಅವರಿಗೆ ಮರಣೋತ್ತರವಾಗಿ ಲಭಿಸಿರುವ ಅಶೋಕ ಚಕ್ರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದಾದಾ ಅವರ ಪತ್ನಿ ಚಾಸೆನ್ ಲವಾಂಗ್ ದಾದಾ ಅವರಿಗೆ ನೀಡುತ್ತಿರುವುದು.

ಡಿಜಿಟಲ್ ಕನ್ನಡ ಟೀಮ್:
ಗುರಿ ನಿರ್ದಿಷ್ಟ ದಾಳಿ ನಡೆಸಿದ ಭಾರತೀಯ ಯೋಧರಿಗೆ ಸನ್ಮಾನ, ಹವಾಲ್ದಾರ್ ಹಂಗ್ಪನ್ ದಾದಾ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ಪ್ರದಾನ, ಮೊದಲ ಬಾರಿಗೆ ಎನ್ಎಸ್ ಜಿ ಕಮಾಂಡೋಗಳ ಪಥ ಸಂಚಲನ, ಭಾರತೀಯ ಸೇನೆಯ ಶಕ್ತಿ ಪ್ರದರ್ಶನಗಳು… ನವದೆಹಲಿಯ ರಾಜಪಥ್ ನಲ್ಲಿ ನಡೆದ 68ನೇ ಗಣರಾಜ್ಯೋತ್ಸವ ಆಚರಣೆಯ ಮೆರುಗು ಹೆಚ್ಚಿಸಿದ ಪ್ರಮುಖ ಅಂಶಗಳು.

ಮೋಡ ಮುಸುಕಿದ ವಾತಾವರಣದಲ್ಲೇ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಮಂತ್ರಿ ಮನೋಹರ್ ಪರಿಕರ್ ಇಂಡಿಯಾ ಗೇಟ್ ಬಳಿ ಇರುವ ಅಮರ ಜವಾನ್ ಜ್ಯೋತಿ ಬಳಿ ದೇಶಕ್ಕಾಗಿ ಮೃತಪಟ್ಟ ವೀರ ಯೋಧರಿಗೆ ನಮನ ಸಲ್ಲಿಸಿದರು. ನಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಯುಎಇ ಯುವರಾಜ ಮೊಹಮದ್ ಬಿನ್ ಜಯದ್ ನಹ್ಯಾನ್ ರಾಜಪಥ್ ಸಮಾರಂಭದಲ್ಲಿ ಭಾಗವಹಿಸಿದರು. ಜತೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹ ಭಾಗವಹಿಸಿದ್ದರು. ಈ ಬಾರಿಯ ಗಣ ರಾಜ್ಯೋತ್ಸವದ ಪ್ರಮುಖ ಅಂಶಗಳು ಹೀಗಿವೆ…

  • ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಗುರಿ ನಿರ್ದಿಷ್ಟ ದಾಳಿ ನಡೆಸಿದ ವೀರ ಯೋಧರಿಗೂ ಸನ್ಮಾನಿಸಿರುವುದು. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ನೆಲೆಗಳನ್ನು ನಾಶ ಪಡಿಸಿ ಮರಳಿದ್ದ ಭಾರತೀಯ ಸೇನಾ ಪಡೆಯ ಈ ಕಾರ್ಯಾಚರಣೆ ಪ್ರತಿಯೊಬ್ಬ ಭಾರತೀಯನ ಮೈನವಿರೇಳಿಸಿತ್ತು. ಈ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದ ಭಾರತೀಯ ಯೋಧರಿಗೆ ಗಣರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ದಾಳಿಯ ಭಾಗವಾಗಿದ್ದ ಸೇನಾಧಿಕಾರಿ, ‘ಈ ಕಾರ್ಯಾಚರಣೆ ಅಂದುಕೊಂಡಷ್ಟು ಸುಲಭದ್ದಾಗಿರಲಿಲ್ಲ. ಉರಿ ಸೇನಾ ನೆಲೆಯ ಮೇಲೆ ಉಗ್ರರ ದಾಳಿಯ ನಂತರ, ಪಾಕಿಸ್ತಾನದ ಉಪಟಳ ತೀವ್ರವಾಗಿತ್ತು. ಈ ಹಂತದಲ್ಲಿ ಭಾರತ ಕೈ ಕಟ್ಟಿ ಕೂರುವುದಿಲ್ಲ ಎಂಬುದನ್ನು ಪಾಕಿಸ್ತಾನಕ್ಕೆ ಅರಿವು ಮೂಡಿಸಬೇಕಾದ ಅಗತ್ಯವಿತ್ತು. ಹೀಗಾಗಿ ಈ ಕಾರ್ಯಾಚರಣೆ ಮಹತ್ವದ್ದಾಗಿದೆ’ ಎಂದು ವಿವರಿಸಿದರು.
  • 2015ರ ಮೇ 27ರಂದು ಕುಪ್ವಾರದ 13 ಸಾವಿರ ಅಡಿ ಎತ್ತರದ ಹಿಮ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಕ್ರಮವಾಗಿ ಗಡಿಯೊಳಗೆ ನುಸುಳುತ್ತಿದ್ದ ನಾಲ್ವರು ಉಗ್ರರನ್ನು ಹತ್ಯೆ ಮಾಡಿ ತನ್ನ ಪ್ರಾಣವನ್ನು ತ್ಯಜಿಸಿದ ಹವಾಲ್ದಾರ್ ಹಂಗ್ಪನ್ ದಾದಾ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮರಣೋತ್ತರವಾಗಿ ಅಶೋಕ ಚಕ್ರ ನೀಡಿದ್ದು, ಇದನ್ನು ಅವರ ಪತ್ನಿ ಚಾಸೆನ್ ಲವಾಂಗ್ ದಾದಾ ಅವರು ಸ್ವೀಕರಿಸಿದರು. 36 ವರ್ಷದ ದಾದಾ ಅರುಣಾಚಲ ಪ್ರದೇಶದ ಮೂಲದವರಾಗಿದ್ದು, 1997ರಲ್ಲಿ ಅಸ್ಸಾಂ ಸೇನಾ ರೆಜಿಮೆಂಟ್ ನಲ್ಲಿ ಸೇರ್ಪಡೆಗೊಂಡಿದ್ದರು. ನಂತರ ಉತ್ತರ ಕಾಶ್ಮೀರದ ಶಂಸಾಬರಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
  • ಈ ಬಾರಿಯ ಪಥ ಸಂಚಲನದ ವೇಳೆ ಯುಎಇಯ ಸಶಸ್ತ್ರ ಪಡೆಯೂ ಪಥ ಸಂಚಲನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಆ ಮೂಲಕ ಗಣರಾಜ್ಯೋತ್ಸವದಲ್ಲಿ ಎರಡನೇ ಬಾರಿಗೆ ವಿದೇಶದ ಸೇನಾ ಪಡೆ ಪಥಸಂಚಲನದಲ್ಲಿ ಭಾಗವಹಿಸಿದಂತಾಯಿತು.
  • ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ನಿಗ್ರಹದ ಉನ್ನತ ಪಡೆಯಾಗಿರುವ ಎನ್ಎಸ್ಜಿ ಪಡೆಯ 60 ಸೇನಾನಿಗಳು ಪಥ ಸಂಚಲನ ನಡೆಸಿದರು. ಆ ಮೂಲಕ ನವದೆಹಲಿಯ ರಾಜಪಥ್ ನಲ್ಲಿ ನಡೆಯುವ ಪಥಸಂಚಲನದಲ್ಲಿ ಎನ್ಎಸ್ಜಿ ಪಡೆ ಮೊದಲ ಬಾರಿಗೆ ಭಾಗವಹಿಸಿತ್ತು.
  • ಈ ಪಥ ಸಂಚಲನದ ವೇಳೆ ಭಾರತದ ಪ್ರಮುಖ ಶಸ್ತ್ರಾಸ್ತ್ರಗಳು ಭಾಗವಹಿಸಿದ್ದವು. ಕ್ಷಿಪಣಿ ಉಡಾವಣೆಯ ಸಾಮರ್ಥ್ಯದ ಟಿ-90 ‘ಭೀಷ್ಮ’ ಟ್ಯಾಂಕರ್, ಇಂಫ್ಯಾಂಟ್ರಿ ಯುದ್ಧ ವಾಹನ ಬಿಎಂಪಿ 2ಕೆ, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ, ಶಸ್ತ್ರಾಸ್ತ್ರ ಪತ್ತೆ ಹಚ್ಚುವ ಸ್ವಾತಿ, ಆಕಾಶ್, ಧನುಶ್ ನಂತಹ ಶಸ್ತ್ರಾಸ್ತ್ರಗಳು ಆಕರ್ಷಿಸಿದವು. ಇನ್ನು ವಾಯುಪಡೆಯಿಂದಲೂ ಎಲ್ಸಿಎ ತೇಜಸ್ ಯುದ್ಧ ವಿಮಾನ, ಸು-30 ಎಂಕೆಐ, ಮಿರಾಜ್-2000, ಯುಎವಿ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡುವ ಮೂಲಕ ಗೌರವ ಸಲ್ಲಿಸಿದವು.
  • ಪಥ ಸಂಚಲನದಲ್ಲಿ 17 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿ ಸಾಸ್ಕೃತಿಕ ಪ್ರದರ್ಶನ ನೀಡಿದವು. ಕರ್ನಾಟಕದ ತಂಡವು ತಬಲ ಹಾಗೂ ಜಾನಪದ ನೃತ್ಯ ಪ್ರದರ್ಶನ ಮಾಡಿದವು. ಇನ್ನು ಡೇರ್ ಡೇವಿಲ್ಸ್ ತಂಡದಿಂದ ನಡೆದ ಮೋಟಾರ್ ಬೈಕ್ ಸಾಹಸ ಪ್ರದರ್ಶನ ಮೈನವಿರೇಳಿಸಿತ್ತು.
  • ಈ ಬಾರಿ 25 ಮಕ್ಕಳಿಗೆ ಶೌರ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದ್ದು, ಐ ಪೈಕಿ ನಾಲ್ವರು ಮಕ್ಕಳಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ಉಳಿದ 21 ಮಕ್ಕಳು ಖುದ್ದಾಗಿ ಪ್ರಶಸ್ತಿ ಸ್ವೀಕರಿಸಿದರು.

Leave a Reply