ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕೊನೆ ಗಳಿಗೆಯ ಅಯೋಜನೆಯ ಒತ್ತಡವೇ ನಿಜವಾದ ಸಮಸ್ಯೆ

author-ssreedhra-murthyಹತ್ತು ವರ್ಷಗಳ: ಕೆಳಗೆ ಅಂದರೆ 2006ರ ಡಿಸಂಬರ್ 22ರಿಂದ 28ರವರೆಗೆ ಮೊದಲನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆದಾಗ ಸುಚಿತ್ರ ಫಿಲಂ ಸೊಸೈಟಿ  ಮಾತ್ರವೇ ಅದರ ಪ್ರಧಾನ ಹೊಣೆಯನ್ನು ಹೊತ್ತುಕೊಂಡಿತ್ತು. ಆಗ ನರಹರಿರಾವ್, ವಿ.ಎನ್.ಸುಬ್ಬರಾವ್, ಗಿರೀಶ್ ಕಾಸರವಳ್ಳಿ, ವಿದ್ಯಾಶಂಕರ್ , ಡಾ.ವಿಜಯಾ ಅವರಂತಹ ಆಸಕ್ತರು ಬೆಂಗಳೂರಿಗೂ ಜಾಗತಿಕ ಚಿತ್ರಗಳು ಬರಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಇದನ್ನು ರೂಪಿಸಿದ್ದರು. 2011ರ  ನಂತರ ಕರ್ನಾಟಕ ಚಲನಚಿತ್ರ ಅಕಾಡಮಿ ಚಿತ್ರೋತ್ಸವವನ್ನು ನಿರ್ವಹಿಸಲು ಆರಂಭಿಸಿತು. ಗೋವಾದಲ್ಲಿ ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವ  ನವಂಬರ್‍ನಲ್ಲಿ ಮುಗಿದ ನಂತರ ಮುಂಬೈ ಮತ್ತು ಚೆನ್ನೈನಲ್ಲಿ ಉತ್ಸವಗಳು ನಡೆಯುತ್ತವೆ. ಅದರ ನಡುವೆ ಡಿಸಂಬರ್ ಕೊನೆ ವಾರದಲ್ಲಿ ಬೆಂಗಳೂರು ಚಿತ್ರೋತ್ಸವ ನಡೆಯುತ್ತಿತ್ತು. ಇದಕ್ಕೆ ‘ಫೆಸ್ಟಿವಲ್ ವಿಂಡೋ’ಎಂದು ಹೆಸರು. ಆದರೆ ಸರ್ಕಾರದ ನಿರ್ವಹಣೆಗೆ ಇದು ಬಂದ ನಂತರ ಕೊನೆ ಗಳಿಗೆಯವರೆಗೂ ಒಪ್ಪಿಗೆಗೆ  ಒದ್ದಾಡಿ ಅಯೋಜನೆಯ ದಿನಾಂಕ ಮುಂದೆ ಹೋಗುತ್ತಿದೆ. ಈ ವರ್ಷವಂತೂ ಫೆಬ್ರವರಿ ಮೊದಲ ವಾರಕ್ಕೆ ಇದು ಬಂದು ನಿಂತಿದೆ. ಜಾಗತಿಕ ಲೆಕ್ಕಾಚಾರದಲ್ಲಿಯೇ ಒಂದು ಚಿತ್ರೋತ್ಸವ ರೂಪುಗೊಳ್ಳಲು ಕನಿಷ್ಠ ಆರು ತಿಂಗಳು ಬೇಕು, ಆದರೆ ಇಲ್ಲಿ ಎರಡೂ ತಿಂಗಳುಗಳು ಕೂಡ ಸರಿಯಾಗಿ ದೊರಕದೆ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್ ಅವರ ಜಾಗತಿಕ ಸಂಪರ್ಕದ ನೆಲೆಯ ಮೇಲೇಯೇ ಉತ್ಸವ ನಡೆಯ ಬೇಕಾದ ಅನಿವಾರ್ಯತೆ ಇದೆ. ಗ್ಲೋಬಲ್ ಕ್ಯಾಲೆಂಡರ್ ದೃಷ್ಟಿಯಿಂದ ಕೂಡ ಇಂತಹ ಅಸ್ಪಷ್ಟತೆ ಇದ್ದರೆ ಮಹತ್ವದ ಚಿತ್ರಗಳು ದೊರಕದೆ ಹೋಗುತ್ತವೆ.

ಈ ವರ್ಷದ 9ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಫೆಬ್ರವರಿ 2ರಿಂದ 9ರವರೆಗೆ ನಡೆಯಲಿದೆ.  18 ವಿಭಾಗಗಳಲ್ಲಿ 55 ದೇಶಗಳ ದಾಖಲೆ ಸಂಖ್ಯೆಯ 240 ಚಿತ್ರಗಳು ಉತ್ಸವದಲ್ಲಿ ಪ್ರದರ್ಶಿತವಾಗಲಿವೆ. ಲಕ್ಸಂಬರ್ಗ, ವಿಯಟ್ನಾಂ, ಈಜಿಪ್ಟ್ ದೇಶದ ಚಿತ್ರಗಳು ದೇಶದ ಅಧ್ಯಯನ  ಎನ್ನುವ ಶೀರ್ಷಿಕೆಯಲ್ಲಿ ವಿಶೇಷವಾಗಿ ಪ್ರದರ್ಶಿತವಾಗಲಿವೆ. ಘಾನಾ, ಅಲ್ಜೇರಿಯಾದಂತಹ ಚಿಕ್ಕ ದೇಶದ ಚಿತ್ರಗಳೂ ಕೂಡ ಈ ವರ್ಷ ಬೆಂಗಳೂರಿಗೆ ಬರಲಿವೆ. ಕನ್ನಡದಲ್ಲಿ ಹಾಸ್ಯಚಿತ್ರಗಳ ಸಾಲೇ ಇತ್ತೀಚೆಗೆ ಹೆಚ್ಚಾಗಿದ್ದರೂ ಅದರಲ್ಲಿ ದ್ವಂದ್ವಾರ್ಥ ಮತ್ತು ವಿಕೃತಿಗಳೇ ಹೆಚ್ಚು ನಿಜವಾದ ಕ್ಲಾಸಿಕ್ ಹಾಸ್ಯಚಿತ್ರಗಳು ಹೇಗಿರುತ್ತವೆ ಎಂಬುದರ ಮೇಲೆ ಬೆಳಕು ಚೆಲ್ಲಲು ಫ್ರೆಂಚ್ ಕ್ಲಾಸಿಕ್ ಹಾಸ್ಯಚಿತ್ರಗಳ ಸರಣಿ ಉತ್ಸವದಲ್ಲಿ ಪ್ರದರ್ಶಿತವಾಗಲಿದೆ.

ಒಂಬತ್ತನೇ ಚಿತ್ರೋತ್ಸವದ ಬಹಳ ಮುಖ್ಯವಾದ ಸಂಗತಿ ಎಂದರೆ ‘ವುಮನ್ ಪವರ್’ಎಂಬ ಶೀರ್ಷಿಕೆಯಲ್ಲಿ 22 ಮಹತ್ವದ ಮಹಿಳಾ ನಿರ್ದೇಶಕಿಯರ ಚಿತ್ರಗಳು ಪ್ರದರ್ಶಿತವಾಗಲಿದೆ. ಅದರಲ್ಲಿ ಕನ್ನಡದ ಅನನ್ಯ ಕಾಸರವಳ್ಳಿ ಮತ್ತು ಸುಮನಾ ಕಿತ್ತೂರು ಅವರ ಚಿತ್ರಗಳೂ ಕೂಡ ಸೇರಿಕೊಂಡಿವೆ. ಒಂದು ಕಡೆ ಮಹಿಳೆಯರು ಎಲ್ಲಾ ರಂಗದಲ್ಲಿಯೂ ತಮ್ಮ ಛಾಪನ್ನು ಮೂಡಿಸುತ್ತಿದ್ದರೆ ಇನ್ನೊಂದು ಕಡೆ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಈ ಪ್ರದರ್ಶನಕ್ಕೆ ಮಹತ್ವವಿದೆ. ಈ ಕುರಿತು ವಿಚಾರ ಸಂಕಿರಣ ಕೂಡ ಉತ್ಸವದಲ್ಲಿ ಅಯೋಜನೆಗೊಂಡಿದೆ. ಅಳಿವಿನ ಅಂಚಿನಲ್ಲಿರುವ ಉಪಭಾಷೆಗಳಲ್ಲಿ ಕೂಡ ಚಿತ್ರಗಳು ನಿರ್ಮಾಣವಾಗುತ್ತಿರುವುದು ಜಾಗತಿಕವಾಗಿ ಮಹತ್ವವನ್ನು ಪಡೆದ ವಿದ್ಯಮಾನ. ಇಂತಹ ಚಿತ್ರಗಳು ಆ ಭಾಷೆಗಳ ಉಳಿವಿಗೆ ನೆರವಾಗುವುದಲ್ಲದೆ ಅಲ್ಲಿನ ಸಂಸ್ಕೃತಿಯನ್ನೂ ಉಳಿಸುತ್ತವೆ. ಚಿತ್ರೋತ್ಸವದಲ್ಲಿ ಇಂತಹ ಭಾಷೆಯ ಚಿತ್ರಗಳದ್ದೇ ವಿಶೇಷ ಪ್ರದರ್ಶನವಿದ್ದು ತುಳು, ಕೊಡವ, ಬಂಜಾರ, ಖಾಸಿ, ಚೆಕ್ಮಾ, ವಾಂಚು, ಸಿಕ್ಕಿಂ ಭಾಷೆಯ ಚಿತ್ರಗಳು ಇಲ್ಲಿ ಪ್ರದರ್ಶಿತವಾಗಲಿವೆ. ಕನ್ನಡ ಚಿತ್ರಪರಂಪರೆಗೂ ಈ ವರ್ಷ ವಿಶೇಷ ಮನ್ನಣೆ ದೊರೆತಿದೆ. ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಬಿ.ಎಸ್.ರಂಗಾ, ಜಿ.ವಿ.ಅಯ್ಯರ್, ಕೆಂಪರಾಜ ಅರಸ್ ಮತ್ತು ಎಂ.ಕೆ.ಇಂದಿರಾ ಅವರ ಶತಮಾನದ ನಮನದ ಹೆಸರಿನಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕನ್ನಡ ಚಿತ್ರರಂಗದ ಆರಂಭಿಕ ದಿನಗಳಲ್ಲೇ ನಿರ್ಮಾಣದಲ್ಲಿಯೂ ತೊಡಗಿ ಉತ್ತಮ ನಟಿ ಎನ್ನಿಸಿಕೊಂಡು ನಾಯಕಿಯಾಗಿಯೇ ಚಿತ್ರರಂಗಕ್ಕೆ ವಿದಾಯ ಹೇಳಿದ್ದ ಹರಿಣಿಯವರ ಚಿತ್ರಗಳ ಸಿಂಹಾವಲೋಕನ ನಡೆಯಲಿದ್ದು ಅವರ ಅಭಿನಯದ ಐದು ಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಸಿಂಹಾವಲೋಕನದ ಗೌರವ ಜೋಲ್ತನ್ ಫಬ್ರಿ(ಹಂಗೇರಿ) ಬುದ್ದದೇವ್ ಭಟ್ಟಾಚಾರ್ಯ(ಬಂಗಾಳಿ-ಭಾರತ) ಅವರಿಗೂ ಸಲ್ಲಲಿದೆ. ಅಗಲಿದ ಗಣ್ಯರಿಗೆ ಶ್ರದ್ದಾಂಜಲಿ ರೂಪದಲ್ಲಿಯೂ ಚಿತ್ರಗಳು ಪ್ರದರ್ಶಿತವಾಗಲಿದ್ದು ಆ ಪಟ್ಟಿ ಬಹಳ ದೊಡ್ಡದಾಗಿದೆ ಜೆ.ಜಯಲಲಿತಾ, ಡಾ.ಎಂ.ಬಾಲಮುರಳಿಕೃಷ್ಣ, ಡಾ.ಅಶೋಕ್ ಪೈ, ಶ್ರೀಹರಿ ಖೋಡೆ, ಓಂಪುರಿ,  ಆಂದ್ರೆ ವಾದ್ಜೆ(ಪೋಲೆಂಡ್), ಅಬ್ಬಾಸ್ ಕಿರೇಸ್ವಾಮಿ(ಇರಾನ್) ಪೌಲ್‍ ಕಾಕ್ಸ್‍(ಆಸ್ತ್ರೇಲಿಯಾ) ಜಾಕಸ್ ಲಾವಿಟಿ, ಕೌಲ್ ಕಾಟಾಕ್ರಾ(ಫ್ರಾನ್ಸ್‍)  ಇವರೆಲ್ಲರಿಗೂ ಉತ್ಸವದಲ್ಲಿ ಶ್ರದ್ದಾಂಜಲಿ ಸಲ್ಲಲಿದೆ.

ಈ ವರ್ಷ ಬಾಕ್ಸ್ ಆಫೀಸಿನಲ್ಲಿ ಗೆದ್ದ  ಚಿತ್ರಗಳಿಗೇ ಎಂದು ಪ್ರತ್ಯೇಕ ವಿಭಾಗವಿದೆ.  ಕೋಟಿಗೊಬ್ಬ, ಜಗ್ಗುದಾದ, ದೊಡ್ಮನೆ ಹುಡುಗ, ಶಿವಲಿಂಗದಂತಹ ಚಿತ್ರಗಳು ಅಲ್ಲಿ ಪ್ರದರ್ಶಿತವಾಗುತ್ತವೆ. ಇದು ಚಿತ್ರೋತ್ಸವದ ಉದ್ದೇಶಕ್ಕೇ ವಿರುದ್ಧ ಎನ್ನಿಸಬಲ್ಲ ಬೆಳವಣಿಗೆ. ಉತ್ಸವದ ಉದ್ದೇಶ ಅಧ್ಯಯನಶೀಲತೆ ಮತ್ತು ಜಾಗತಿಕ ಬೆಳವಣಿಗೆಗಳನ್ನು ಗಮನಿಸಲು ಸೂಕ್ತವೇದಿಕೆಯನ್ನು ಒದಗಿಸುವುದು. ಜಗತ್ತಿನ ಎಲ್ಲೆಡೆ ಚಿತ್ರೋತ್ಸವಗಳು ನಗರಗಳ ಹೆಸರಿನ ಮೂಲಕವೇ ಗುರುತಿಸಲ್ಪಡುತ್ತವೆ. ಆದರೆ ಕಳೆದ ವರ್ಷದಿಂದ ಬೆಂಗಳೂರು ಮತ್ತು ಮೈಸೂರು ಎರಡು ಕಡೆ ಉತ್ಸವ ನಡೆಯುವ ಪರಿಪಾಟ ಆರಂಭಿಸಲಾಗಿದೆ. ಮೈಸೂರಿಗೇ ಬೇಕಾದರೆ  ಪ್ರತ್ಯೇಕ ಚಿತ್ರೋತ್ಸವ ನಡೆಯಲಿ ಇರುವ ಉತ್ಸವವನ್ನು ಒಡೆಯುವುದು ಸರಿಯಲ್ಲ. ಇದರಿಂದ  ಜಾಗತಿಕ ಮನ್ನಣೆಗೆ ತೊಡಕಾಗುವುದ ಜೊತೆಗೆ ಸಂಘಟನಾತ್ಮಕವಾಗಿ ಕೂಡ ಸಮಸ್ಯೆಗಳಾಗಲಿವೆ.

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯವರು ಚಿತ್ರರಂಗದತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಚಿತ್ರೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸುವದರಿಂದ ಹೊಸ ಪೀಳಿಗೆಯ ನಿರ್ದೇಶಕರಿಗೆ ಉತ್ತಮ ಅನುಭವ ದೊರಕಿ ಕನ್ನಡ ಚಿತ್ರರಂಗದಲ್ಲಿಯೂ ಗಮನ ಸೆಳೆಯುವ ಚಿತ್ರಗಳು ಬರುತ್ತಿವೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಚಿತ್ರೋತ್ಸವವನ್ನು ಅಧ್ಯಯನಶೀಲತೆಗೆ ಸೂಕ್ತವೇದಿಕೆಯಾಗಿಸುವ ಅಗತ್ಯವಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳನ್ನು ನಡೆಸಲೆಂದೇ ಚಲನಚಿತ್ರ ಅಕಾಡಮಿಯಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸಿ ಅದನ್ನು ಇಡೀ ವರ್ಷ ಕ್ರಿಯಾಶೀಲವಾಗಿರಿಸುವುದರ ಜೊತೆಗೆ ಅಧ್ಯಯನಶೀಲತೆಗೂ ಯೋಜನೆಗಳನ್ನು ರೂಪಿಸಬೇಕು.

Leave a Reply