ಗೋಡೆಗಳಿಲ್ಲದ ಜಗತ್ತು ಎಂಥ ಸುಂದರ ಚಿಂತನೆ! ಅಮೆರಿಕ ಅಧ್ಯಕ್ಷನಿಗೆ ಉಪದೇಶಿಸುವ ಮುನ್ನ ಮನೆ ಪಾಗಾರ ಒಡೆದು ಉದ್ಯಾನವ ದನದ ಮೇವಿಗೆ ಬಿಡೋಣವೇ ಒಮ್ಮೆ?

author-chaitanyaಉದಾರವಾದಿಗಳ ಕವಿಹೃದಯದಲ್ಲೀಗ ತೊಟ್ಟುಕ್ಕುತ್ತಿದೆ ಯಾತನೆಯ ನೆತ್ತರು!

ಕಾರಣವಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕ್ಕದ ದೇಶ ಮೆಕ್ಸಿಕೊ ಗಡಿಗುಂಟ ಗೋಡೆ ಕಟ್ಟುವ ಯೋಜನೆಗೆ ಚಾಲನೆ ನೀಡಿದ್ದಾರೆ. ಅವರ ಚುನಾವಣಾ ಭರವಸೆಗಳ ಪೈಕಿ ಒಂದಾಗಿತ್ತಿದು. ಮೆಕ್ಸಿಕೊದ ಅಧ್ಯಕ್ಷ ಇದಕ್ಕೆ ಪ್ರತಿಯಾಗಿ ಕನಲುತ್ತ, ‘ನಮಗೆ ಗೋಡೆಗಳಲ್ಲಿ ನಂಬಿಕೆ ಇಲ್ಲ. ನಾವದಕ್ಕೆ ಹಣವನ್ನೂ ಕೊಡುವುದಿಲ್ಲ’ ಎಂದರು. ಅದಕ್ಕೆ ಟ್ರಂಪ್, ‘ಒಕೆ ಫೈನ್. ಮೆಕ್ಸಿಕೋದಿಂದ ಆಮದಾಗುವ ವಸ್ತುಗಳಿಗೆ ಶೇ. 20ರಷ್ಟು ಸುಂಕ ಹೆಚ್ಚಿಸಿ ವಸೂಲು ಮಾಡಿಕೊಳ್ಳುತ್ತೇವೆ. ಅಂದಹಾಗೆ, ಮೆಕ್ಸಿಕೊ ಅಧ್ಯಕ್ಷರೇ ನಿಮ್ಮ ಅಮೆರಿಕ ಭೇಟಿಯನ್ನು ರದ್ದುಪಡಿಸಿಕೊಳ್ಳಿ’ ಅಂದರು.

ಸರಿ….

ಡೊನಾಲ್ಡ್ ಟ್ರಂಪ್ ನಿಂತಿದ್ದು, ಕುಂತಿದ್ದು ವಿರೋಧಿಸಿಯೇ ಸಿದ್ಧ ಎಂಬ ಉದಾರವಾದಿಗಳು ಹಾಗೂ ಮಾಧ್ಯಮವು ತತ್ವಜ್ಞಾನ ಮತ್ತು ಕವಿತಾ ಜ್ಞಾನವನ್ನು ಪ್ರದರ್ಶಿಸುವುದಕ್ಕೆ ಸಿದ್ಧವಾಗಿಯೇಬಿಟ್ಟಿತು. ‘ನಾವು ಸೇತುವೆಗಳನ್ನು ಕಟ್ಟಬೇಕು ಗೋಡೆಗಳನ್ನಲ್ಲ…’ ವಾವ್… ವಾವ್… ಎಂಥ ಆಕರ್ಷಕ ಸ್ಲೋಗನ್ನು! ಇಂಥ ಅನನ್ಯ ವಿವೇಕದ ಸಾಲುಗಳು ಇನ್ನೆಲ್ಲಾದರೂ ಸಾಧ್ಯವೇ ಸಿಗಲು? ಸೂಕ್ಷ್ಮ ಸಂವೇದನೆಯ ಉದಾರವಾದಿ ಎದೆಗಳಲ್ಲದೇ ಇನ್ನೇನು ಟ್ರಂಪ್ ಮನಸ್ಸಿನಲ್ಲಿ ಈ ಸಾಲುಗಳು ಮೂಡಿಯಾವೇ?

ಖಂಡಿತ ಹೌದು. ತಾತ್ವಿಕವಾಗಿ ಗೋಡೆಗಳು ಒಳ್ಳೆಯದಲ್ಲ, ಗಡಿಗಳು ಬೇಕಿಲ್ಲ, ಎಲ್ಲರೂ ಮಾನವರು- ಸಹಜೀವಿಗಳು ಅವೆಲ್ಲ ಸರಿ. ಆದರೆ ವಾಸ್ತವಿಕತೆ ಇದೆಯಲ್ಲ. ಮೆಕ್ಸಿಕೊದಿಂದ ಅಕ್ರಮ ವಲಸಿಗರು ಅಮೆರಿಕಕ್ಕೆ ನುಸುಳುವುದು ಹಾಗೂ ಅಲ್ಲಿಂದ ಮಾದಕ ವಸ್ತುಗಳು ಗಡಿ ದಾಟುವುದು ಅಮೆರಿಕ ಲಾಗಾಯ್ತಿನಿಂದ ಎದುರಿಸಿಕೊಂಡುಬಂದಿರುವ ಸಮಸ್ಯೆ. ಇದನ್ನು ತಡೆಯುವುದಕ್ಕೆ ಉಪಕ್ರಮಗಳು ಬೇಕಲ್ಲ. ಹಾಗೆಂದೇ ಡೊನಾಲ್ಡ್ ಟ್ರಂಪ್ ತಾನು ಅಭ್ಯರ್ಥಿಯಾದಾಗಲೇ ಮೆಕ್ಸಿಕೋ ಅಕ್ರಮ ವಲಸೆ ಮತ್ತು ಮಾದಕ ಜಾಲವನ್ನು ತಡೆಯುವುದಾಗಿ ಭರವಸೆ ಇತ್ತರು. ಇದಕ್ಕೆ ಕಾನೂನಿನ ಕ್ರಮಗಳನ್ನು ತೆಗೆದುಕೊಳ್ಳಬಹುದಿತ್ತಾ ಎಂಬುದು ಮಾಡಬಹುದಾದ ಚರ್ಚೆ. ಆದರೆ ಜಗತ್ತಿನ ಯಾವುದೇ ಸಂವಹನಕಾರ, ಜನರಿಗೆ ಯಶಸ್ವಿಯಾಗಿ ತನ್ನ ಆಲೋಚನೆಗಳನ್ನು ಮುಟ್ಟಿಸುವುದಕ್ಕೆ ಒಂದು ಗಟ್ಟಿ ಪದಕ್ಕೆ, ಕಲ್ಪನೆಯನ್ನು ಸರಳವಾಗಿ ಅರಳಿಸುವ ಶಬ್ದಕ್ಕೆ ಮೊರೆ ಹೋಗುತ್ತಾನೆ. ರಾಹುಲ್ ದ್ರಾವಿಡ್ ಅತ್ಯಂತ ಸ್ಥಿರತೆಯಿಂದ ಆಡುತ್ತಾರೆ, ವಿಕೆಟ್ಟುಗಳೆಲ್ಲ ಉರುಳುತ್ತಿರುವ ಆತಂಕದ ಗಳಿಗೆಯಲ್ಲೂ ಅವರದ್ದು ಸಂಯಮದ ಆಟವಾಗಿತ್ತು… ಅಂತೆಲ್ಲ ಪುಟಗಟ್ಟಲೇ ವಿವರಿಸಬಹುದು. ಆದರೆ ಅವೆಲ್ಲವನ್ನೂ ‘ವಾಲ್’ ಎಂಬ ಒಂದು ಶಬ್ದ ಹಿಡಿದಿಡುತ್ತದೆ. ಇದೇ ಗೋಡೆ ಎಂಬ ಪರಿಕಲ್ಪನೆಯನ್ನು ಟ್ರಂಪ್ ಇನ್ನೊಂದು ಆಯಾಮದಲ್ಲಿ ಯಶಸ್ವಿಯಾಗಿ ಉಪಯೋಗಿಸಿಕೊಂಡರು. ಜನರಿಂದ ಮತಗಳನ್ನೂ ಪಡೆದರು.

ಗೊತ್ತಿರಲಿ. ರಾಷ್ಟ್ರೀಯ ಭದ್ರತೆ ಎಂಬುದು ಎಲ್ಲ ದೇಶಗಳನ್ನು ಪ್ರಸ್ತುತದಲ್ಲಿ ಕಾಡುತ್ತಿರುವ ವಿಷಯ. ಪಾಕಿಸ್ತಾನಕ್ಕೆ ಹೋಲಿಸಿದರೆ ಅಷ್ಟೇನೂ ವೈರಿ ರಾಷ್ಟ್ರ ಎನಿಸದ ಬಾಂಗ್ಲಾದೇಶದ ಗಡಿಗುಂಟವೂ ಎತ್ತರದ ಬೇಲಿ ಕಟ್ಟುವ ಕಾರ್ಯ ಭಾರತದ ಕಡೆಯಿಂದ ಪ್ರಗತಿಯಲ್ಲಿದೆ. ಅತ್ತ ಪಾಕಿಸ್ತಾನದ ವಿಸ್ತಾರ ಗಡಿಯುದ್ದಕ್ಕೂ ಇವತ್ತಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಬೃಹದಾಕಾರದ ಬೇಲಿ ಪ್ರಗತಿಯಲ್ಲಿದೆ. ‘ಮನುಷ್ಯ ಸೇತುವೆಗಳನ್ನು ಕಟ್ಟಬೇಕಲ್ಲದೇ ಗೋಡೆಗಳನ್ನಲ್ಲ’ ಎಂಬ ಕವಿಸಾಲುಗಳೇನು ಮೋದಿ, ರಾಜನಾಥ ಸಿಂಗ್, ಅಜಿತ್ ದೋವಲರಿಗೆ ಗೊತ್ತಿಲ್ಲ ಎಂದಲ್ಲ. ಆದರೆ ಹೀಗೆ ಹಾಯಾಗಿ ಕವಿತೆ ಬರೆದುಕೊಂಡಿರುವುದಕ್ಕಾದರೂ ದೇಶದ ಜನತೆಗೆ ಭದ್ರತೆಯೊಂದು ಬೇಕಲ್ಲ? ಹೀಗಾಗಿ ಬೇಲಿಕಾರ್ಯ.

ಉದಾರವಾದಿಯ ವೇಷ ತೊಟ್ಟು, ಗಡಿಗಳೇ ಇರಬಾರದು- ಗೋಡೆಗಳೇ ಬೇಡ ಎಂದು ಭಾಷಣ ಬಿಗಿದು ಚಪ್ಪಾಳೆ ತಟ್ಟಿಸಿಕೊಳ್ಳುವುದು ತುಂಬ ಸುಲಭದ ಕೆಲಸ. ಇಂಥ ಪಂಚತಾರಾ ಶ್ರೇಣಿಯ ಉದಾರವಾದಿ ಕಾರ್ಯಕರ್ತರ್ಯಾರೂ ತಮ್ಮ ಮನೆಯ ಹುಲ್ಲುಹಾಸಿನ ಉದ್ಯಾನದ ಸುತ್ತಲೂ ಬೇಲಿ ಹಾಕದೇ ಹಾಗೇ ಬಿಟ್ಟಿಲ್ಲ. ದಿನವೂ ನೀರೆರೆದು ಹುಲ್ಲು ಬೆಳೆಸೋಣ, ಬಿಡಾಡಿ ದನಗಳನ್ನು ಒಳಗೆ ಬಿಟ್ಟು ಮೇಯಿಸೋಣ, ಅವೂ ಜೀವಿಗಳಲ್ಲವೇ, ನಮ್ಮ ಚಾ-ಕಾಫಿ- ಚಾಕಲೆಟ್ ಚಪಲಗಳಿಗೆಲ್ಲ ಹಾಲೊದಗಿಸುವ ಅವು ಚೆನ್ನಾಗಿರಬೇಕಲ್ಲವೇ ಅಂತ ಯಾವ ಉದಾರವಾದಿಗೂ ಅನ್ನಿಸುವುದಿಲ್ಲ.

ಇವತ್ತು ಫಿಲ್ಮು, ಸಾಹಿತ್ಯ, ಅಕಾಡೆಮಿಗಳು ಇವೇ ಮುಂತಾದ ಆಯಕಟ್ಟಿನ ಜಾಗಗಳಲ್ಲಿದ್ದುಕೊಂಡು ಗಡಿಗಳಿಲ್ಲದ ಜಗತ್ತು, ಬೇಲಿಗಳಿಲ್ಲದ ಬಯಲು ಅಂತೆಲ್ಲ ಪುಂಗುತ್ತಿರುವವರೆಲ್ಲ ತಮ್ಮ ತಮ್ಮ ತೋಟಗಳ ಬೇಲಿ ಭದ್ರಪಡಿಸಿಕೊಂಡವರೇ. ನೊಂದ ವಲಸಿಗ ಅನಾಥರಿಗೆಲ್ಲ ದೇಶಗಳ ಗಡಿ ಬಾಗಿಲು ತೆರೆದು ಅಪ್ಪಿಕೊಳ್ಳುವ ದಿನಗಳು ಬರಬೇಕೆಂದು ಉದಾರವಾದ ಭೋದಿಸುವವರ್ಯಾರೂ ತಮ್ಮ ಮನೆಯ ಗೋಡೆ ಒಡೆಯೋದು ಹಾಗಿರಲಿ, ಬಾಗಿಲು ಕಿತ್ತಿಟ್ಟು ಬೀದಿಯ ಭಿಕ್ಷುಕರನ್ನೆಲ್ಲ ಬರಮಾಡಿಕೊಂಡ ಉದಾಹರಣೆಗಳಿಲ್ಲ. ಹಾಗೆ ಮಾಡಿದವರು ಕವಿತೆ- ಬಿಟ್ಟಿ ಉಪದೇಶಗಳನ್ನು ಕೊಡುವುದೂ ಇಲ್ಲ.

ಉದಾರವಾದಕ್ಕೆ, ಕವಿತೆಗೆ ಅದರದ್ದೇ ಆದ ಸ್ಥಾನವಿದೆ. ಕ್ಷಣದ ಮಟ್ಟಿಗೆ ವಾಸ್ತವವನ್ನು ಮರೆಸುವ ಅದರ ಶಕ್ತಿಯೂ ಆಗಾಗ ನಮ್ಮಾತ್ಮಗಳಿಗೆ ಬಲ ತುಂಬಲು ಬೇಕಾಗುತ್ತದೆ. ಆದರೆ ವಾಸ್ತವವನ್ನೇ ಇಲ್ಲವಾಗಿಸುತ್ತೇನೆನ್ನುವವರು ಅಂಥ ಆದರ್ಶಗಳನ್ನು ಹಾಗೂ ರಮ್ಯ ಕಲ್ಪನೆಗಳ ಸಾಕಾರವನ್ನು ತಮ್ಮ ಮನೆಯಿಂದಲೇ ಆರಂಭಿಸಿ ನಂತರ ಉಪದೇಶಕ್ಕೆ ಇಳಿಯಬೇಕಾಗುತ್ತದೆ. ಆಗ ಮಾತ್ರ ವಾಸ್ತವ ಮೀರುತ್ತೇನೆಂಬ ಬುರುಡೆಯ ನಿಜ ಬಿಸಿ ಗೊತ್ತಾಗುತ್ತದೆ.

ಮೆಕ್ಸಿಕೊ ನಡುವೆ ಅಮೆರಿಕವೋ, ಪಾಕಿಸ್ತಾನದ ನಡುವೆ ಭಾರತವೋ ಗೋಡೆ ಎಬ್ಬಿಸುತ್ತದೆ ಅಂತಾದರೆ ಅದಕ್ಕೆ ವಾಸ್ತವಿಕ ಒತ್ತಡಗಳು ತುಂಬ ಸ್ಪಷ್ಟವಿರುತ್ತವೆ. ಹಾಗೆಂದೇ ಜನಮತ ಪಡೆದು ಬಂದ ಸರ್ಕಾರಗಳು ಅಂಥ ಕಾರ್ಯಕ್ಕೆ ಮುಂದಾಗುತ್ತವೆ.

ಇಷ್ಟಾಗಿಯೂ ‘ಬೇಕಿರುವುದು ಗೋಡೆಗಳಲ್ಲ, ಸೇತುವೆಗಳು’ ಎಂಬ ಸಾಲಿನ ಮೇಲೆ ಕವಿತಾ ಸೌಧವೊಂದನ್ನು ಎದ್ದುನಿಲ್ಲಿಸುವುದು ತಪ್ಪೇನಲ್ಲ. ಆದರೆ ಅದಕ್ಕೂ ಮುನ್ನ ‘ಜಗತ್ತಿನ ಗೋಡೆಗಳೆಲ್ಲ ಕುಸಿದುಬೀಳಲಿ, ನಮ್ಮ ಮನೆಯ ಗೋಡೆ ಮಾತ್ರ ಏಷ್ಯನ್ ಪೇಂಟಿನಲ್ಲಿ ನಳನಳಿಸಲಿ’ ಎಂಬ ಬೂಟಾಟಿಕೆ ತೊರೆಯಬೇಕು.

2 COMMENTS

Leave a Reply