ಪೊಲೀಸ್ ಬಲಕ್ಕೆ ಹೊಸ ಗಸ್ತು ವಾಹನಗಳು, ಅಮಾನತಾದ ಜೆಡಿಎಸ್ ಶಾಸಕರು ಕೈಗೆ?, ರಾಜ್ಯದ ಪರಿಷ್ಕೃತ ಪಠ್ಯಕ್ಕೆ ಬಿಜೆಪಿ ಆಕ್ಷೇಪ

Chief Minister Siddaramaiah, Home Minister Dr.G.Parameshwar, Flagging Off New KSRP Buses for Public Service in front of Vidhana Soudha in Bengaluru on Friday. Organized by Karnataka State Reserve Police.

ಡಿಜಿಟಲ್ ಕನ್ನಡ ಟೀಮ್:

 ಅಪರಾಧ ನಿಯಂತ್ರಣ, ಗಾಯಾಳು ನೆರವಿಗೆ ಗಸ್ತು ವಾಹನ

ಹೆದ್ದಾರಿಗಳಲ್ಲಾಗುವ ಅಪರಾಧಗಳನ್ನು ನಿಯಂತ್ರಿಸುವುದು ಹಾಗೂ ಅಪಘಾತ ಸಂಭವಿಸಿದಾಗ  ಗಾಯಾಳುಗಳಿಗೆ ನೆರವಾಗಲು ರಾಜ್ಯ ಸರ್ಕಾರ ಪ್ರತಿ 20 ಕಿ.ಮೀ.ಗೆ ಗಸ್ತು ಪಡೆ ನೇಮಕ ಮಾಡಿದೆ.

ವಿಧಾನಸೌಧದ ಮುಂದೆ ಪೊಲೀಸ್ ಇಲಾಖೆಗೆ ಹೊಸದಾಗಿ 300 ವಾಹನಗಳನ್ನು ಹಸ್ತಾಂತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು. ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಸುಮಾರು 300 ವಾಹನಗಳನ್ನು ಗಸ್ತು ತಿರುಗುವ ಪೊಲೀಸರಿಗೆ ನೀಡಲಾಗಿದೆ. ಹೆದ್ದಾರಿ ಗಸ್ತಿಗೆ 100 ಇನ್ನೋವಾ ವಾಹನಗಳನ್ನು ಕೊಟ್ಟಿದೆ. ಕೆಎಸ್‍ಆರ್‍ಪಿ ಸಿಬ್ಬಂದಿ ದೂರದ ಊರುಗಳಿಗೆ ಸಂಚರಿಸುತ್ತಾರೆ. ಅವರಿಗೆ ಈಗ ಒದಗಿಸಿರುವ ವಾಹನಗಳಿಂದ ಅನುಕೂಲವಾಗುತ್ತದೆ.

ಮಹಿಳಾ ಪೊಲೀಸರಿಗೆ ಶೌಚಾಲಯ ಸೌಲಭ್ಯ ಹೊಂದಿರುವ ವಾಹನಗಳನ್ನು ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಅಮಾನತಾದ ಜೆಡಿಎಸ್ ಶಾಸಕರು ಕೈಗೆ?

ರಾಜ್ಯ ಸಭೆ ಹಾಗೂ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ, ಅಮಾನತ್ತುಗೊಂಡಿರುವ ಜಾತ್ಯತೀತ ಜನತಾದಳದ ಏಳು ಶಾಸಕರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ.

ಅಮಾನತ್ತುಗೊಂಡಿರುವ ಮಾಜಿ ಸಚಿವ ಚಲುವರಾಯಸ್ವಾಮಿ, ಜಮ್ಮೀರ್ ಅಹಮದ್‍ಖಾನ್, ಅಖಂಡ ಶ್ರೀನಿವಾಸಮೂರ್ತಿ, ರಮೇಶ್ ಬಂಡೀಸಿದ್ದೇಗೌಡ, ಬಾಲಕೃಷ್ಣ, ಎಸ್.ಭೀಮಾನಾಯಕ್ ಹಾಗೂ ಇಕ್ಬಾಲ್ ಅನ್ಸಾರಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ವತಿಯಿಂದ ಅವಕಾಶ ಕಲ್ಪಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಇಂದು ಬೆಳಿಗ್ಗೆ ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್ ಹಾಗೂ ಬಾಲಕೃಷ್ಣ, ಮುಖ್ಯಮಂತ್ರಿಯವರನ್ನು ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಮಾತುಕತೆ ನಡೆಸಿದರು. ಬೆಳಗಾವಿಗೆ ತೆರಳಲು ತರಾತುರಿಯಲ್ಲಿದ್ದ ಮುಖ್ಯಮಂತ್ರಿಯವರು ನಾಳೆ ಈ ಮುಖಂಡರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಭೇಟಿಗೂ ಮುನ್ನ ಈ ನಾಯಕರು ಇಂಧನ ಸಚಿವ ಡಿ.ಕೆ.ಶಿವಕುಮಾರ್‍ಅ ವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ರಾಜ್ಯದ ಪರಿಷ್ಕೃತ ಪಠ್ಯಕ್ಕೆ ಬಿಜೆಪಿ ಆಕ್ಷೇಪ

ರಾಜ್ಯ ಸರ್ಕಾರ ತರಾತುರಿಯಲ್ಲಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ಜೂನ್ ತಿಂಗಳಿನಿಂದಲೇ ಜಾರಿಗೆ ತರಲು ಹೊರಟಿದ್ದು ತಕ್ಷಣವೇ ಈ ಅವೈಜ್ಞಾನಿಕ ಕ್ರಮವನ್ನು ನಿಲ್ಲಿಸುವಂತೆ ಬಿಜೆಪಿ ಆಗ್ರಹಿಸಿದೆ.

ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಮುಂಬರುವ  ಶೈಕ್ಷಣಿಕ ವರ್ಷದಿಂದಲೇ ಹೊಸ ಪಠ್ಯಕ್ರಮವನ್ನು ಜಾರಿಗೆ ತರುವುದಾಗಿ ಸಚಿವರು ಹೇಳಿದ್ದಾರೆ.ಇದು ಇತಿಹಾಸವನ್ನು ತಿರುಚುವ ಯತ್ನವಾಗಲಿದೆ’ ಎಂದು ಆರೋಪಿಸಿದರು.

ಶಾಲಾ ಪಠ್ಯಕ್ರಮವನ್ನು ಬದಲಿಸಲು ಈ ಹಿಂದೆ ಕೇಂದ್ರ ನೀಡಿದ ಆದೇಶದಂತೆ ನಾವಿದ್ದಾಗಲೇ ಸಾಕಷ್ಟು ಕೆಲಸ ಮಾಡಿದ್ದೆವು.ಹೊಸ ಪಠ್ಯಕ್ರಮಗಳು ಹೇಗಿರಬೇಕು?ಎಂಬ ಕುರಿತು ನಿರ್ಣಾಯಕ ಚರ್ಚೆ ಮಾಡಿದ್ದೆವು.

ಅದೇ ರೀತಿ ನಮ್ಮ ಮಕ್ಕಳಿಗೆ ದೇಶದ ನಿಜವಾದ ಇತಿಹಾಸವನ್ನು ತಿಳಿಸಬೇಕು.ಅವರು ಸುಳ್ಳು ಇತಿಹಾಸವನ್ನು ಓದಬಾರದು ಎಂದು ತೀರ್ಮಾನಿಸಿದ್ದೆವು.ಆದರೆ ನಾವು ಮಾಡಿರುವುದನ್ನು ಈಗಿನ ಪಠ್ಯಪುಸ್ತಕ ಪರಿಷ್ಕೃತ ಸಮಿತಿ ತೆಗೆದು ಹಾಕಿ ಸುಳ್ಳಿನ ಕಂತೆಯನ್ನೇ ಮತ್ತೆ ಮಕ್ಕಳಿಗೆ ಭೋಧಿಸುವ ಹುನ್ನಾರ ನಡೆಸಿದೆ.

ಪೊಲೀಸ್ ಮಹಾನಿರ್ದೇಶಕ ಸ್ಥಾನಕ್ಕೆ ಆರ್ ಕೆ ದತ್ತಾ ಹೆಸರು ಶಿಫಾರಸು

rk-duttaರಾಜ್ಯ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಹಿರಿಯ ಪೊಲೀಸ್ ಅಧಿಕಾರಿ ರೂಪ್ ಕುಮಾರ್ ದತ್ತಾ ಅವರನ್ನು ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಹೊಸ ಪೊಲೀಸ್ ಮಹಾ ನಿರ್ದೇಶಕರ ನೇಮಕ ಮಾಡಲು ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಕೇಂದ್ರ ಸರ್ಕಾರದಿಂದ ಆದೇಶ ಬಂದ ಕೂಡಲೇ ರಾಜ್ಯ ಸರ್ಕಾರ ನೂತನ ಡಿಜಿಪಿಯನ್ನು ನೇಮಿಸಿ ಅಧಿಕೃತ ಆದೇಶವನ್ನು ಒಂದೆರಡು ದಿನದಲ್ಲಿ ಹೊರಡಿಸಲಿದೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಅರ್ಹ ಅಧಿಕಾರಿಗಳ ಪಟ್ಟಿಯನ್ನು ನೀಡಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಕೇಂದ್ರ ಸೇವೆಯಲ್ಲಿರುವ ಆರ್.ಕೆ.ದತ್ತಾ, ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗುವುದು ಬಹುತೇಕ ಖಚಿತವಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ನೇಮಕಕ್ಕೆ ಆಸಕ್ತಿ ವಹಿಸಿದ್ದು, ಕೇಂದ್ರ ಸೇವೆಯಲ್ಲಿರುವ ದತ್ತಾ ಅವರನ್ನು ರಾಜ್ಯಕ್ಕೆ ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಪತ್ರ ಬರೆಯಲು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹಾಲಿ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು ಇದೇ ತಿಂಗಳ 31ಕ್ಕೆ ನಿವೃತ್ತಿ ಹೊಂದಲಿದ್ದು ಅವರ ಸ್ಥಾನಕ್ಕೆ ಆರ್.ಕೆ.ದತ್ತಾ ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ.

Leave a Reply