ವೆಟೊ ಮೂಲಕ ಏಳು ಮುಸ್ಲಿಂ ರಾಷ್ಟ್ರಗಳ ಮೇಲೆ ಟ್ರಂಪ್ ನಿಷೇಧ, ವ್ಯಾಪಕ ಟೀಕೆ

ಡಿಜಿಟಲ್ ಕನ್ನಡ ಟೀಮ್:

ನಿರಾಶ್ರಿತರ ಆಗಮನ ನಿಷೇಧ ಹಾಗೂ ಇಸ್ಲಾಂ ಉಗ್ರವಾದವನ್ನು ಹತ್ತಿಕ್ಕುವ ಉದ್ದೇಶದೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಳು ಮುಸ್ಲಿಂ ರಾಷ್ಟ್ರಗಳಿಗೆ ನಿರ್ಬಂಧ ಹೇರಿದ್ದಾರೆ. ಈ ನಿರ್ಧಾರದಿಂದ ಸಹಜವಾಗಿಯೇ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಚುನಾವಣಾ ಪ್ರಚಾರದ ವೇಳೆ ತಾನು ನೀಡಿದ್ದ ಭರವಸೆಗಳಲ್ಲಿ ಅತ್ಯಂತ ವಿವಾದಾತ್ಮಕ ಭರವಸೆಯನ್ನು ಟ್ರಂಪ್ ಈ ಮೂಲಕ ಪೂರೈಸಿದ್ದಾರೆ. ಪೆಂಟಗಾನ್ ನಲ್ಲಿ ನೂತನ ವೆಟೊಗೆ ಸಹಿ ಹಾಕುವ ಮೂಲಕ ಟ್ರಂಪ್, ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ರಾಷ್ಟ್ರಗಳಿಂದ ಬರುವ ಪ್ರವಾಸಿಗರು ಹಾಗೂ ನಿರಾಶ್ರಿತರಿಗೆ ನಿಷೇಧ ಹೇರಿದ್ದಾರೆ. ಈ ದೇಶಗಳ ವಲಸಿಗರು ಅಥವಾ ಪ್ರವಾಸಿಗರಿಗೆ 90 ದಿನಗಳ ಕಾಲ ವಿಸಾ ನೀಡದಂತೆಯೂ ನಿರ್ಧರಿಸಲಾಗಿದೆ. ಈ ವೆಟೊನಿಂದಾಗಿ ಈ ಏಳು ರಾಷ್ಟ್ರಗಳ ಪ್ರಜೆಗಳಿಗೆ ವಿಸಾ ಸಿಗುವುದು ಕಷ್ಟಕರವಾಗಿದ್ದು, ಅತಿ ವಿಶೇಷ ಸಂದರ್ಭ ಹಾಗೂ ಕಾರಣಗಳಿದ್ದರೆ ಮಾತ್ರ ವಿಸಾ ನೀಡಲಾಗುವುದು. ಇತರೆ ರಾಷ್ಟ್ರಗಳಿಗೆ ಇರುವ ಅವಕಾಶಗಳು ಈ ರಾಷ್ಟ್ರಗಳ ಪ್ರಜೆಗಳಿಗೆ ಸಿಗುವುದಿಲ್ಲ.

ಕಳೆದ ವರ್ಷ ಬರಾಕ್ ಒಬಾಮಾ ಅವರ ಅಧಿಕಾರ ಅವಧಿಯಲ್ಲಿ ಅಮೆರಿಕ 84,995 ನಿರಾಶ್ರಿತರಿಗೆ ಆಶ್ರಯ ನೀಡಿತ್ತು. ಅದರಲ್ಲಿ 12,587 ಮಂದಿ ಸಿರಿಯಾ ನಿರಾಶ್ರಿತರಾಗಿದ್ದರು.

ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ವೆಟೊ ಮೂಲಕ ಈ ಕಾನೂನು ತಂದಿರುವ ಟ್ರಂಪ್, ‘ನಾನು ಅಮೆರಿಕವನ್ನು ಇಸ್ಲಾಮಿಕ್ ಉಗ್ರಗಾಮಿಗಳಿಂದ ರಕ್ಷಿಸುತ್ತಿದ್ದೇನೆ. ಇದೊಂದು ಮಹತ್ವದ ನಿರ್ಣಯವಾಗಿದ್ದು, ಅಮೆರಿಕಕ್ಕೆ ವಿದೇಶಿ ಉಗ್ರಗಾಮಿಗಳು ಆಗಮಿಸದಂತೆ ರಕ್ಷಣೆ ಒದಗಿಸುತ್ತಿದ್ದೇನೆ. ಹೊಸ ವೆಟೊ ಮೂಲಕ ಇಸ್ಲಾಂ ಉಗ್ರವಾದವನ್ನು ಅಮೆರಿಕದಿಂದ ಹೊರಗಿಡುವ ಪ್ರಯತ್ನ ಇದಾಗಿದ್ದು, ಅವರು ನಮ್ಮ ರಾಷ್ಟ್ರದಲ್ಲಿ ಇರುವುದು ಬೇಡ. ನಮ್ಮ ದೇಶವನ್ನು ಬೆಂಬಲಿಸುವ ನಮ್ಮ ಜನರನ್ನು ಪ್ರೀತಿಸುವವರು ಮಾತ್ರ ಅಮೆರಿಕವನ್ನು ಪ್ರವೇಶಿಸಬಹುದು’ ಎಂದು ಹೇಳಿದ್ದಾರೆ.

ಟ್ರಂಪ್ ಅವರ ಈ ನಿರ್ಧಾರಕ್ಕೆ ನಿರೀಕ್ಷೆಯಂತೆ ವ್ಯಾಪಕ ಟೀಕೆಗಳು ಎದುರಾಗಿದ್ದು, ‘ಮುಸ್ಲಿಂ ಸಮುದಾಯದವದ ವಿರುದ್ಧ ತಾರತಮ್ಯ ಮಾಡಲು ಟ್ರಂಪ್ ಈ ವೆಟೊ ನಿರ್ಧಾರ ಬಳಸಿಕೊಳ್ಳುತ್ತಿದ್ದಾರೆ. ಜತೆಗೆ ಈ ನಿರ್ಧಾರ ಅಮೆರಿಕ ಧರ್ಮ ತಾರತಮ್ಯದ ಮೇಲೆ ಹೇರಿರುವ ನಿಷೇಧವನ್ನು ಉಲ್ಲಂಘಿಸಿದಂತಾಗಲಿದೆ’ ಎಂದು ವಾದಿಸಿದ್ದಾರೆ ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಆಂಟೋನಿ ರೊಮೆರೊ.

Leave a Reply