ಮೂನ್ ಎಕ್ಸ್ ಪ್ರೆಸ್ ಮೂಲಕ ಚಂದ್ರನ ತಲುಪುವ ಭಾರತೀಯ ಸಂಜಾತನ ಕನಸಿಗೆ ಗೂಗಲ್, ನಾಸಾ ಸಹಯೋಗ

ಮೂನ್ ಎಕ್ಸ್ ಪ್ರೆಸ್…

author-ananthramuಅಮೆರಿಕ ಒಂದು ಸಂಗತಿಯನ್ನಂತೂ ಮುಚ್ಚಿಟ್ಟಿತ್ತು. ಈಗಷ್ಟೇ ಅದನ್ನು ಬಹಿರಂಗಪಡಿಸಿದೆ. ಇದು ಅಪೊಲೋ-11 ಚಂದ್ರಯಾನಕ್ಕೆ ಸಂಬಂಧಿಸಿದ್ದು. ಜುಲೈ 21, 1969-ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಕಾಲೂರಿ ಕುಪ್ಪಳಿಸಿ 22 ಗಂಟೆ ಕಳೆದ ನಂತರ ಭೂಮಿಗೆ ಮರಳುವ ಸಿದ್ಧತೆಯಲ್ಲಿದ್ದರು. ಅದೇ ಹೊತ್ತಿಗೆ ಅಮೆರಿಕದ ಅಧ್ಯಕ್ಷ ನಿಕ್ಸನ್ ಅವರ ಮೇಜಿನ ಮೇಲೆ ಒಂದು ಸಂದೇಶ ಬರೆದಿಡಲಾಗಿತ್ತು. `ಶಾಂತಿಯ ದೂತರಾಗಿ ಚಂದ್ರನನ್ನು ಪರಿಶೋಧಿಸಲು ಹೋಗಿರುವ ಗಗನಯಾನಿಗಳು ಅಲ್ಲಿಯೇ ಉಳಿಯುತ್ತಾರೆ, ಚಿರಶಾಂತಿಯಲ್ಲಿ. ಅದು ವಿಧಿಬರಹ.’ ಈ ಸಂದೇಶದ ಪಾಠ ಇನ್ನೂ ಉದ್ದವಿದೆ. ಈ ಇಬ್ಬರು ಗಗನಯಾನಿಗಳ ಕುಟುಂಬಕ್ಕೆ ಯಾರು ಸಂದೇಶ ಮುಟ್ಟಿಸಬೇಕು ಮತ್ತು ಹೇಗೆ ಎನ್ನುವ ವಿವರಣೆ ಜೊತೆಗೆ ಅಧ್ಯಕ್ಷ ನಿಕ್ಸನ್ ಈ ಸಂದೇಶ ಓದಿ ಮುಗಿಸುವ ಹೊತ್ತಿಗೆ ನಾಸಾ ನಿಯಂತ್ರಣ ಕಚೇರಿಯಿಂದ ಗಗನಯಾನಿಗಳೊಡನೆ ಸಂಪರ್ಕವನ್ನು ಬಂದ್ ಮಾಡಬೇಕು ಎಂಬ ವಿಚಾರವೂ ಇತ್ತು.

ಅಮೆರಿಕದ ಆಗಿನ ಪರಿಸ್ಥಿತಿ ಹಾಗಿತ್ತು. ಚಂದ್ರ ಯಾತ್ರೆಯೆಂದರೆ ಜೀವ ಕಳೆದುಕೊಳ್ಳಬೇಕಾಗಿ ಬರುತ್ತದೆ ಎಂಬ ಅಳುಕು. ವಾಸ್ತವವಾಗಿ ನಿಕ್ಸನ್ ಗೆ ಈ ಸಂದೇಶವನ್ನು ಓದುವ ಪರಿಸ್ಥಿತಿಯೇನೂ ಬರಲಿಲ್ಲ. ಸುಖವಾಗಿ ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಮತ್ತು ಲೂನಾರ್ ಮಾಡ್ಯೂಲ್ ನಲ್ಲಿದ್ದ ಕಾಲಿನ್ಸ್ ಸುಖವಾಗಿ ಮರಳಿದರು, ಜಗತ್ತು ಮೆಚ್ಚುವಂತೆ. ಮೊದಲು ಚಂದ್ರನ ಮೇಲೆ ಕಾಲಿಟ್ಟ ಆರ್ಮ್ ಸ್ಟ್ರಾಂಗ್ ತನ್ನ 82ನೇ ವಯಸ್ಸಿನವರೆಗೂ ಬದುಕಿ ಹೀರೋ ಎನಿಸಿಕೊಂಡ. ಈಗ ಪರಿಸ್ಥಿತಿ ಬದಲಾಗಿದೆ ಬಿಡಿ. ಆದರೂ ವ್ಯೋಮಯಾನ ಸುಲಭವಾಗಿ ಎಟುಕುವ ತಂತ್ರವಲ್ಲ. ಚಂದ್ರನನ್ನು ಸ್ಪರ್ಶಮಾಡಿದ ನಂತರವೂ ಬೇರೆ ಬೇರೆ ಗುರಿಗಳನ್ನು ಇಟ್ಟುಕೊಂಡು ಹೊರಟ ಗಗನಯಾನಿಗಳು ಅಪಘಾತಕ್ಕೆ ತುತ್ತಾಗಿದ್ದಾರೆ. ಕಲ್ಪನಾ ಛಾವ್ಲಾ ಸೇರಿದಂತೆ ಏಳು ಮಂದಿ ಗಗನಯಾನಿಗಳು ಕೊಲಂಬಿಯ ದುರಂತದಲ್ಲಿ 2003ರಲ್ಲಿ ಸುಟ್ಟು ಭಸ್ಮವಾಗಿಬಿಟ್ಟರು. ಹಾಗೆಯೇ 1986ರ ಚಾಲೆಂಜರ್ ಅಪಘಾತದಲ್ಲಿ ಅದು ಟೇಕ್ ಆಫ್ ಆದ 73 ಸೆಕೆಂಡುಗಳಲ್ಲೇ ಮತ್ತೆ ಏಳು ಮಂದಿ ಸುಟ್ಟುಹೋದರು. ಹಾಗೆಂದು ವ್ಯೋಮಯಾನಗಳೇನೂ ನಿಂತಿಲ್ಲ ಬದಲು ಇನ್ನಷ್ಟು ತೀವ್ರವಾಗಿವೆ. ಅಮೆರಿಕದ ಶ್ರೀಮಂತ ವ್ಯಾಪಾರಿ ಡೆನ್ನಿಸ್ ಟಿಟೋ 2001ರಲ್ಲಿ ರಷ್ಯದ ಸುಯೆಜ್ ವ್ಯೋಮನೌಕೆಯನ್ನು ಏರಿ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ತಲುಪಿ ಭೂಮಿಯನ್ನು ಸುತ್ತಿ ನಾಗರಿಕ ಯಾನ ಮಾಡಿದ ಮೊದಲಿಗ ಎನ್ನಿಸಿಕೊಂಡ, 20 ಮಿಲಿಯನ್ ಡಾಲರ್ ತೆತ್ತಿದ್ದ. ಅಂತರಿಕ್ಷ ಪ್ರವಾಸಕ್ಕೆ ಇದು ಕುಮ್ಮಕ್ಕು ಕೊಟ್ಟಿತ್ತು. ಅಷ್ಟೇ ಅಲ್ಲ, ಪ್ರವಾಸದ ಕಲ್ಪನೆಯನ್ನೇ ಬದಲಾಯಿಸಿತು. ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ನಿಂತ ನಂತರ ಇನ್ನೂ ಹನ್ನೊಂದು ಮಂದಿ ಚಂದ್ರಯಾನ ಮಾಡಿದ್ದಾರೆ. ಕೊನೆಯ ಯಾನ ಅಪೊಲೋ-12ರದು -1972.

ಚಂದ್ರ ಏಕೆ ನಮ್ಮ ಗುರಿಯಾಗಬಾರದು? ಅಲ್ಲಿಗೇಕೆ ಪ್ರವಾಸಿಗರನ್ನು ಒಯ್ಯಬಾರದು? ಈ ಕುರಿತು ಅನೇಕ ದೇಶಗಳು ಯೋಚಿಸುತ್ತಿವೆ. ನಿಜವಾಗಿಯೂ ಹನಿಮೂನ್ ಎಂದರೆ ಮೂನಿಗೇ ಹೋಗಬಹುದಲ್ಲ ಎಂಬ ಆಸೆಯನ್ನೂ ಚಿಗುರಿಸಿವೆ. ದೊಡ್ಡ ಬಂಡವಾಳ ಹೂಡಿ ದೊಡ್ಡ ಹಣಮಾಡುವ ಖಾಸಗಿ ಪ್ರವಾಸಿ ಕಂಪನಿಗಳ ಗುರಿ ಈಗ ಚಂದ್ರ. ಈಗ ಇಂಥ ಖಾಸಗಿ ಪ್ರವಾಸ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವುದು ಅಮೆರಿಕದ ಫ್ಲೋರಿಡದಲ್ಲಿ ಸ್ಥಾಪನೆಯಾಗಿರುವ `ಮೂನ್ ಎಕ್ಸ್ ಪ್ರೆಸ್’ ಸಂಸ್ಥೆ. ಅಂತರಿಕ್ಷವನ್ನು ಹೇಗೆಂದರೆ ಹಾಗೆ ಬಳಸಿಕೊಳ್ಳುವಂತಿಲ್ಲ. ವಿಶ್ವಸಂಸ್ಥೆಯ ಒಪ್ಪಿಗೆ ಬೇಕು. ಅಂಥ ಏಜೆನ್ಸಿಗಳಿಗೆ ಆ ರಾಷ್ಟ್ರ ಒಪ್ಪಿಗೆ ನೀಡಬೇಕು. ಈಗ `ಮೂನ್ ಎಕ್ಸ್‍ಪ್ರೆಸ್’ ಯೋಜನೆಗೆ ಅಮೆರಿಕದ `ಫೆಡರಲ್ ಏವಿಯೇಷನ್ ಅಡ್‍ಮಿನಿಸ್ಟ್ರೇಷನ್’ ಹಸಿರು ನಿಶಾನೆ ತೋರಿಸಿದೆ. ದೊಡ್ಡ ಮೊತ್ತದ ಫಂಡ್ ಎತ್ತಿದೆ. ತಾನು ಕೈಗೊಳ್ಳುವ ಯಾನಕ್ಕೆ ಇರುವ ಗುರಿಗಳನ್ನು ಪಟ್ಟಿಮಾಡಿದೆ. ಭೂಮಿಯ ಆರ್ಥಿಕ ಕ್ಷೇತ್ರವನ್ನು ಚಂದ್ರನಿಗೂ ವಿಸ್ತರಿಸುವುದು. ಚಂದ್ರನನ್ನು ಎಂಟನೆಯ ಖಂಡವೆಂದೇ ಈ ಪ್ರವಾಸಿ ಸಂಸ್ಥೆ ಭಾವಿಸಿದೆ. ಅತಿ ಕಡಿಮೆ ಖರ್ಚಿನಲ್ಲಿ ಚಂದ್ರಯಾನ ಮಾಡಿ ವಿದ್ಯಾರ್ಥಿಗಳಿಗೆ, ವಿಜ್ಞಾನಿಗಳಿಗೆ ಹಾಗೂ ಮುಂದೆ ಚಂದ್ರಯಾನ ಮಾಡುವ ಸಂಸ್ಥೆಗಳಿಗೆ ಸ್ಥೈರ್ಯಕೊಡುವುದು. ಇದಲ್ಲದೆ ಇನ್ನೂ ಒಂದು ಅಂಶವನ್ನು ಅದು ಸ್ಪಷ್ಟಮಾಡಿದೆ. `ನಮ್ಮ ಕಂಪನಿಗೆ ಆರ್ಥಿಕ ಆಸಕ್ತಿಯೂ ಇದೆ.’

ಬಹುಶಃ ಆರ್ಥಿಕ ಆಸಕ್ತಿಯೇ ದೊಡ್ಡದಿರಬಹುದು ಎಂಬ ಗುಲ್ಲೂ ಕೇಳಿಬರುತ್ತಿದೆ. ಚಂದ್ರನಲ್ಲಿರುವ ವಿರಳ ಧಾತುಗಳನ್ನು ಸಂಗ್ರಹಿಸುವುದು. ಅನೇಕ ವಿರಳ ಧಾತುಗಳು ನಮ್ಮ ಭೂಮಿಯೆಡೆ ತೂರಿಬರುತ್ತದ್ದರೂ ಭೂಮಿಗಿರುವ ಕಾಂತಕ್ಷೇತ್ರ ಅದನ್ನು ಹೊರತಳ್ಳುತ್ತಿದೆ. ಇಲ್ಲಿ ಸಂಚಯಿಸಲು ಅವಕ್ಕೆ ಅವಕಾಶವಿಲ್ಲ. ಚಂದ್ರನಲ್ಲಿ ನಿಯೋಬಿಯಂ ದೊಡ್ಡ ಪ್ರಮಾಣದಲ್ಲಿದೆ ಎಂದು ಅಂದಾಜು. ಇದು ಸ್ಟೀಲ್‍ಗೆ ಗಡಸುತನ ಕೊಡುವ ಧಾತು ಜೊತೆಗೆ ಸೂಪರ್ ಕಂಡಕ್ಟರ್ ಆಗಿ ಒದಗಿಬರುತ್ತದೆ. ಇದರ ಜೊತೆಗೆ ಎಲ್.ಇ.ಡಿ. ಬಲ್ಬ್ ಗಳಲ್ಲಿ ಹಾಗೂ ಟಿ.ವಿ. ಕ್ಯಾಥೋ ಟ್ಯೂಬ್‍ಗಳಲ್ಲಿ ಬಳಸುವ ಯಿಟ್ರಿಯಂ ಅಲ್ಲದೆ ಪರಮಾಣು ಸ್ಥಾವರಗಳಲ್ಲಿ ನ್ಯೂಟ್ರಾನ್ ಹೀರಲು ಬಳಸುವ ಕಂಬಿಗಳಲ್ಲಿ ಉಪಯೋಗಿಸುವ ಡೈಸ್ಟ್ರೋನಿಯಂ ಎಂಬ ವಿರಳ ಧಾತುಗಳು ಚಂದ್ರನಲ್ಲಿ ದೊಡ್ಡ ಪ್ರಮಾಣದಲ್ಲಿರಬಹುದು ಎಂಬ ಅಂದಾಜಿದೆ. ಇದರ ಜೊತೆಗೆ ಹೀಲಿಯಂ-3, ನ್ಯೂಕ್ಲಿಯರ್ ರಿಯಾಕ್ಟರುಗಳಲ್ಲಿ ಬಳಸುವ ಧಾತು. ಇದು ವಿಕಿರಣ ಹೊರಸೂಸುವುದಿಲ್ಲ ಎಂಬುದು ಇದಕ್ಕಿರುವ ದೊಡ್ಡ ಗುಣ. ಇವೆಲ್ಲವನ್ನೂ ಗಣಿಮಾಡಲು ಸಾಧ್ಯವಾಗುವುದಾದರೆ ಹಲವು ಟ್ರಿಲಿಯನ್ ಡಾಲರ್ ಆದಾಯವಂತೂ ಇದ್ದೇ ಇದೆ.

naveen-jain-min

ಗುರುತ್ವ ತೇಲಾಟದಲ್ಲಿ ನವೀನ್ ಜೈನ್…

ಈ ವರ್ಷವೇ ಮೂನ್ ಎಕ್ಸ್ ಪ್ರೆಸ್ ರೋಬಾಟ್ ಅನ್ನು ಚಂದ್ರನಲ್ಲಿ ಇಳಿಸುವ ಯೋಜನೆ ಇದೆ. ಇದಕ್ಕೆ ಅಮೆರಿಕದ ನಾಸಾ ಸಂಸ್ಥೆಯ ತಾಂತ್ರಿಕ ಬೆಂಬಲವಿದೆ. ಇದಲ್ಲದೆ `ಗೂಗಲ್ ಲೂನಾರ್ ಎಕ್ಸ್ ಪ್ರೈಜ್’ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಮೂನ್ ಎಕ್ಸ್ ಪ್ರೆಸ್, 20 ದಶಲಕ್ಷ ಡಾಲರ್ ಬಹುಮಾನ ಪಡೆದಿದೆ. ಖಾಸಗಿ ವ್ಯೋಮಯಾನ ಮಾಡುವ ಕಂಪನಿಗಳು ಹೊಸ ತಂತ್ರಜ್ಞಾನ ಬಳಸುವಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿ ಇದಕ್ಕೆ ಸಂದಿದೆ. 16 ಬೇರೆ ಬೇರೆ ತಂಡಗಳು ಇದರಲ್ಲಿ ಸ್ಪರ್ಧೆಗಿಳಿದಿದ್ದವು. ಈ ಕನಸಿನ ಯೋಜನೆಯ ಸ್ಥಾಪಕರಲ್ಲಿ ಒಬ್ಬ ಭಾರತೀಯ ಸಂಜಾತ ನವೀನ್ ಜೈನ್. ಅಮೆರಿಕದಲ್ಲಿ ಇನ್ಫೊಸ್ಪೇಸ್ ಸಂಸ್ಥಾಪಕ, 1989ರಲ್ಲಿ ಮೈಕ್ರೋಸಾಫ್ಟ್ ನಲ್ಲಿ ಇದ್ದ ಈ ಪ್ರತಿಭಾವಂತ ಇದೀಗ ಚಂದ್ರನ ಕನಸನ್ನು ಕಂಡಿದ್ದಾನೆ. `ನಮ್ಮ ಮೂನ್ ಎಕ್ಸ್ ಪ್ರೆಸ್ ಗೆ ಆಕಾಶವೂ ಮಿತಿಯಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಅಸೀಮ ಭವಿಷ್ಯ ಕಟ್ಟಿಕೊಡಲು ಇದು ಆರಂಭ. ಬಹುಶಃ ಮುಂದಿನ ಹದಿನೈದು ವರ್ಷಗಳಲ್ಲಿ ಚಂದ್ರ ನಮ್ಮ ಸಮರ್ಥ ಎರಡನೇ ಮನೆಯಾಗಲಿದೆ. ಅಮೆರಿಕ ಈಗಾಗಲೇ ಚಂದ್ರಯಾನ ಮಾಡಿ ಅಲ್ಲಿನ ಶಿಲೆಗಳನ್ನು ತಂದಿದೆ. ಯಾವ ದೇಶವೂ ಅಪಸ್ವರ ಎತ್ತಿಲ್ಲ. ಅಂತಾರಾಷ್ಟ್ರೀಯ ಜಲವನ್ನು ನಾವು ಹೇಗೆ ಬಳಸುತ್ತೇವೋ, ಚಂದ್ರನನ್ನು ಕೂಡ ಹಾಗೆ ಬಳಸಬಹುದು. ಯಾರೂ ಅಂತಾರಾಷ್ಟ್ರೀಯ ಜಲವನ್ನು ನಮ್ಮದು ಎನ್ನುವಂತಿಲ್ಲ. ಆದರೆ ಒಂದಷ್ಟು ಮಾರ್ಗಸೂತ್ರಗಳನ್ನು ಅನುಸರಿಸಬೇಕು’ ಎನ್ನುತ್ತಾರೆ ನವೀನ್ ಜೈನ್. ಈ ವರ್ಷದ ಕೊನೆಗಂತೂ ರೋಬಟ್ ಸಜ್ಜಿತ ನೌಕೆ ಚಂದ್ರಯಾನ ಮಾಡಲೇಬೇಕು. ಆ ನೆಲದಲ್ಲಿ ಕನಿಷ್ಠ 50 ಮೀಟರ್ ಚಲಿಸಲೇಬೇಕು. ಉತ್ತಮ ಗುಣಮಟ್ಟದ ಚಿತ್ರಗಳನ್ನು ರವಾನಿಸಬೇಕು. ಆ ಷರತ್ತಿಗೆ ಲೂನಾರ್ ಎಕ್ಸ್ ಪ್ರೆಸ್ ಬದ್ಧವಾಗಿದೆ.

ಇದರ ಜೊತೆಗೆ ಇಸ್ರೋ ಮೂಲದ `ಸ್ಪೇಸ್ ಐ.ಎಲ್’, ಹದಿನೈದು ದೇಶಗಳು ರಚಿಸಿಕೊಂಡ `ಸಿನರ್ಜಿ ಮೂನ್’, ನಮ್ಮ ಭಾರತದ `ಇಂಡಸ್’, ಜಪಾನಿನ `ಹಕುಟೋ’ ಕೂಡ ಯಾನಮಾಡಲು ಹೊರಟಿವೆ. ವಿಶೇಷವೆಂದರೆ `ಇಂಡಸ್’ ಮತ್ತು `ಹಕುಟೋ’ ಒಟ್ಟಿಗೆ ಇಸ್ರೋದ ಪಿ.ಎಸ್.ಎಲ್.ವಿ. ರಾಕೆಟ್ ಮೂಲಕ ಚಂದ್ರಕಕ್ಷೆಗೆ ಸೇರಲಿವೆ. ಏನಿದ್ದರೂ 2017ರಲ್ಲೇ ಇವೆಲ್ಲವೂ ಸಾಧಿಸಬೇಕು.

Leave a Reply