ಪದ್ಮಶ್ರೀ ಹೆಮ್ಮೆ-2: ಮಾಲಿನ್ಯ ಪ್ರವಾಹದ ವಿರುದ್ಧ ನಿಂತು 160 ಕಿ.ಮೀ ಉದ್ದದ ನದಿಗೆ ಮರುಜೀವ ಕೊಟ್ಟ ಬಲ್ಬೀರ್ ಸಿಂಗ್

ಡಿಜಿಟಲ್ ಕನ್ನಡ ಟೀಮ್:

ಬಲ್ಬೀರ್ ಸಿಂಗ್ ಸೀಚೆವಾಲ್ (ಎಕೋ ಬಾಬಾ), ಪಂಜಾಬ್ ರಾಜ್ಯದಲ್ಲಿ ಒಂದು ಸಂಚಲನವನ್ನೇ ಸೃಷ್ಟಿಸಿದ ವ್ಯಕ್ತಿ. ಮಾಲಿನ್ಯದಿಂದ ತತ್ತರಿಸಿ ಜೀವ ಕಳೆದುಕೊಂಡಿದ್ದ ಕಾಲಿ ಬೈನ್ ನದಿಗೆ ಮರು ಜೀವಕೊಟ್ಟ ಹೋರಾಟಗಾರ ಈ ಬಲ್ಬೀರ್ ಸಿಂಗ್. ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಧಕರ ಪೈಕಿ ನಿಲ್ಲುವ ಮತ್ತೊಂದು ಸ್ಫೂರ್ತಿದಾಯಕ ವ್ಯಕ್ತಿ ಇವರು.

ಪಂಜಾಬ್ ನ ಕಾಲಿ ಬೈನ್, 160 ಕಿ.ಮೀ ಉದ್ದದ ನದಿಯಾಗಿದ್ದು, ಸಾವಿರಾರು ಜನರ ಜೀವನದ ಆಸರೆಯಾಗಿತ್ತು. ಸ್ಥಳೀಯರ ಅಜ್ಞಾನ ಹಾಗೂ ಕೈಗಾರಿಕೆಗಳ ಹಾವಳಿಯಿಂದ ಮಾಲಿನ್ಯಕ್ಕೆ ಒಳಗಾಗಿದ್ದ ಈ ನದಿ ಬಹುತೇಕ ಸತ್ತು ಹೋಗಿತ್ತು. ಅಂತಹ ಸಂದರ್ಭದಲ್ಲಿ ಈ ನದಿಯ ಮಹತ್ವ ಅರಿತ ಬಲ್ಬೀರ್ ಸಿಂಗ್ ಸೀಚೆವಾಲ್ ಈ ನದಿಗೆ ಜೀವ ತುಂಬಿದ ರೀತಿ ಒಂದು ಕ್ರಾಂತಿಯೇ ಸರಿ. ಅವರು ಜೀವ ಕಳೆದುಕೊಂಡಿದ್ದ ನದಿಗೆ ಮರುಹುಟ್ಟು ಕೊಟ್ಟ ಪರಿ ಹೀಗಿದೆ…

ಕೈಗಾರಿಕೆಗಳಲ್ಲಿನ ತ್ಯಾಜ್ಯ, ಅಸಮರ್ಪಕ ನಿರ್ವಹಣೆಯ ಪರಿಣಾಮವಾಗಿ ಈ ನದಿ ಬಹುತೇಕ ಸತ್ತು ಹೋಗಿತ್ತು. ಇದರಿಂದ ಈ ನದಿ ನೀರನ್ನೇ ಆಧಾರಿಸಿದ್ದ ಅನೇಕ ಕೃಷಿ ಭೂಮಿಗೆ ಬರದ ಪರಿಸ್ಥಿತಿ ಎದುರಾಯಿತು. ಈ ಹಂತದಲ್ಲಿ ನದಿ ಉಳಿಸಿಕೊಳ್ಳುವ ಮಹತ್ವ ಅರಿತ ಬಲ್ಬೀರ್, ಈ ಕಾರ್ಯಕ್ಕೆ ಮುಂದಾದರು. ಸ್ಥಳೀಯರಿಗೆ ಆ ನದಿ ನೀರಿನ ಮಹತ್ವ ಏನು ಎಂಬ ಅರಿವು ಮೂಡಿಸುವ ಮೂಲಕ ಬಲ್ಬೀರ್ ಅವರು ಈ ಕಾರ್ಯವನ್ನು ಆರಂಭಿಸಿದರು. ನದಿಯ ಉಳಿವಿಕೆಯ ಮಹತ್ವವನ್ನು ವಿವರಿಸುತ್ತಲೇ, ಇವರು ಸ್ವಯಂ ಸೇವಕರ ಪಡೆಯೊಂದನ್ನು ಕಟ್ಟಿದರು.

balbir1

ಈ ಪಡೆಯನ್ನು ಮುನ್ನಡೆಸಿದ ಬಲ್ಬೀರ್, ನದಿ ಶುದ್ಧಕಾರ್ಯಕ್ಕು ಮುನ್ನ 24ಕ್ಕೂ ಹೆಚ್ಚು ಹಳ್ಳಿಗಳಲ್ಲಿ ದೇಣಿಗೆ ಸಂಗ್ರಹಿಸಿದರು. ಈ ದೇಣಿಗೆ ಹಣದ ಮೂಲಕ ನದಿ ಶುದ್ಧೀಕರಣಕ್ಕೆ ಅಗತ್ಯವಿರುವ ಸಲಕರಣೆಗಳನ್ನು ಕೊಂಡರು. ಹಲವು ತಿಂಗಳುಗಳ ಕಠಿಣ ಶ್ರಮದಿಂದ ಈ ಪಡೆ 106 ಕಿ. ಮೀ ಉದ್ದಕ್ಕೂ ನದಿಯಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ಕಿತ್ತು ಹಾಕಿ, ನದಿಯ ಒಡಲಲ್ಲಿ ತುಂಬಿಕೊಂಡಿದ್ದ ಹೂಳನ್ನು ಎತ್ತಿದರು. ಇವರ ವರ್ಷಗಟ್ಟಲೆ ಪರಿಶ್ರಮದ ಫಲವಾಗಿ ಈ ನದಿ ಮತ್ತೆ ತುಂಬಿ ಹರಿಯಲು ಪ್ರಾರಂಭಿಸಿತು. ಆ ಮೂಲಕ ನದಿ ಮತ್ತೆ ಜೀವ ಪಡೆದು, ಸಾವಿರಾರು ರೈತರು ಮತ್ತೆ ಉಸಿರಾಡುವಂತಾಯಿತು.

ಬಲ್ಬೀರ್ ಅವರ ಈ ಪಡೆ ಕೇವಲ ನದಿಯನ್ನು ಶುದ್ದಿ ಮಾಡುವುದಷ್ಟೇ ಅಲ್ಲದೆ, ನದಿಯ ತೀರದಲ್ಲಿ ಬರುವ ಪ್ರದೇಶಗಳನ್ನು ಸ್ವಚ್ಛಗೊಳಿಸಿ, ಮರಗಿಡಗಳನ್ನು ಹಾಗೂ ರಸ್ತೆಗಳ ಸ್ಚಚ್ಛತೆ ಮೂಲಸ ಸೌಂದರ್ಯವನ್ನು ಹೆಚ್ಚಿಸಿದರು. ಇವರ ಈ ಸಾಹಸಮಯ ಕಾರ್ಯವನ್ನು ಈ ಪ್ರದೇಶದ ಜನರು ದಿನನಿತ್ಯ ಸ್ಮರಿಸುತ್ತಾರೆ. ಮಾಲಿನ್ಯದ ವಿರುದ್ಧ ಹೋರಾಡಿದ ಇವರು, ಸ್ಥಳೀಯವಾಗಿ ಬರುವ ಕೊಳಚೆ ನೀರನ್ನು ನದಿಗೆ ಬಿಡದೆ ಬೇರೆಡೆಗೆ ಸಾಗಿಸುವಂತೆ ಜನರ ಮನ ಓಲೈಸಿದರು. ಪಂಜಾಬ್ ಸರ್ಕಾರದ ನೆರವಿನೊಂದಿಗೆ ಕಡಿಮೆ ವೆಚ್ಚದಲ್ಲಿ ಭೂಮಿಯ ಒಳಗೆ ಕೊಳಚೆ ಮಾರ್ಗವನ್ನು ನಿರ್ಮಿಸಿದರು. ಈ ಕೊಳಚೆ ನೀರನ್ನು ಶುದ್ಧಿಕರಿಸಿ ಕೃಷಿ ಚಟುವಟಿಕೆಗೆ ಬಳಸಿಕೊಳ್ಳುವ ವ್ಯವಸ್ಥೆ ಮಾಡಿಕೊಟ್ಟರು.

balbir2

ಬಲ್ಬೀರ್ ಸಿಂಗ್ ಸೀಚೆವಾಲ ಅವರ ಈ ಕಾರ್ಯ ದೇಶ ಹಾಗೂ ವಿದೇಶದಲ್ಲಿ ಪ್ರಶಂಸೆಗೆ ಪಾತ್ರವಾಯಿತು. ನೀರಿನ ಅಭಾವ ಎದುರಾಗುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಇತರ ಪ್ರದೇಶಗಳಲ್ಲೂ ಮಾಲೀನ್ಯವನ್ನು ತಡೆಗಟ್ಟಿ ನದಿ ನೀರನ್ನು ಉಳಿಸಿಕೊಳ್ಳಲು ಬಲ್ಬೀರ್ ಸಿಂಗ್ ಒಂದು ಸ್ಫೂರ್ತಿಯಾಗಿ ನಿಲ್ಲುವುದರಲ್ಲಿ ಸಂಶಯವೇ ಇಲ್ಲ.

Leave a Reply