ಬನ್ಸಾಲಿ ಮೇಲೆ ಹಲ್ಲೆ ಮಾಡಿದ ಗೂಂಡಾಗಳು ಶಿಕ್ಷಾರ್ಹರು… ರೇ…ಆದರೆ ಏನಿಲ್ಲ, ಟ್ವಿಟ್ಟರಿನಲ್ಲಿ ಸಮರ್ಥನೆ ಯತ್ನದಲ್ಲಿರುವ ಬಲಪಂಥೀಯರಿಗೇಕೆ ಬುದ್ಧಿಯಿಲ್ಲ?

ಪ್ರವೀಣ್ ಕುಮಾರ್

ರಾಣಿ ಪದ್ಮಾವತಿ ಕುರಿತ ಸಿನಿಮಾ ಚಿತ್ರೀಕರಣವಾಗುತ್ತಿದ್ದಾಗ ಸ್ಥಳಕ್ಕೆ ನುಗ್ಗಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ಮಾಡಿದ ಗೂಂಡಾಗಳು ಶಿಕ್ಷಾರ್ಹರು. ಇದು ರಾಜಸ್ಥಾನ ಸರ್ಕಾರಕ್ಕೆ, ವಿಶೇಷವಾಗಿ ಅಲ್ಲಿನ ಸ್ಥಳೀಯಾಡಳಿತಕ್ಕೆ ಸವಾಲು. ಕಾನೂನು ನಿಜಕ್ಕೂ ಸರ್ಕಾರದ ಕೈಯಲ್ಲಿದೆಯೋ ಅಥವಾ ಥರಾವರಿ ಹೆಸರುಗಳನ್ನು ಹೊತ್ತ ಸೇನೆಗಳ ಕೈಯಲ್ಲೋ? ತಮಗೆ ಬೇಕಾದ ನಿಯಂತ್ರಣಾಧಿಕಾರಗಳನ್ನು ಪುಡಿ ಸೇನೆಗಳಿಗೆ ವಹಿಸುತ್ತಾರೆ ಎಂದಾದರೆ ಸರ್ಕಾರ ಮನೆಗೆ ಹೋಗುವುದಕ್ಕೆ ಲಾಯಕ್ಕು.

ರಜಪೂತ ಸಮುದಾಯದ ಗೌರವವನ್ನು ಕಾನೂನು ಕೈಗೆತ್ತಿಕೊಂಡು ಕಾಪಾಡುತ್ತೇವೆ ಅಂತ ಹೊರಟ ಅದ್ಯಾವುದೋ ಕಾರ್ನಿ ಸೇನೆ, ಹಲ್ಲೆ- ಚಿತ್ರೀಕರಣದ ಉಪಕರಣಗಳ ಧ್ವಂಸದಲ್ಲಿ ತೊಡಗಿಸಿಕೊಂಡಿದ್ದೂ ಅಲ್ಲದೇ ಆನಂತರ ಕೊಡುತ್ತಿರುವ ಹೇಳಿಕೆಗಳು ಜೈಪುರದಲ್ಲೇನು ಕಾನೂನು ಇದೆಯೋ ಇಲ್ಲವೋ ಎಂಬ ಸಂಶಯ ಹುಟ್ಟಿಸುತ್ತವೆ.

ಮೊದಲಿಗೆ ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿ ಚಿತ್ರದಲ್ಲಿ ರಾಣಿಯನ್ನು ಹೇಗೆ ಚಿತ್ರಿಸಲಾಗಿದೆ ಎಂದು ಈ ಸೇನೆಗೆ ಗೊತ್ತಾಗಿದ್ದು ಹೇಗೆ? ಮುಸ್ಲಿಂ ದೊರೆ ಖಿಲ್ಜಿ ಜತೆ ಪದ್ಮಾವತಿಯ ಸಲ್ಲಾಪವಿದೆ ಎಂದು ಹೇಗೆ ಖಾತ್ರಿ ಮಾಡಿಕೊಂಡರು? ಇತಿಹಾಸ ತಿರುಚಲಾಗುತ್ತಿದೆ ಎಂಬ ಬೊಬ್ಬೆ ಯಾರನ್ನಾದರೂ ಥಳಿಸುವುದಕ್ಕೆ, ಆಸ್ತಿನಾಶಕ್ಕೆ ಇರುವ ಪರವಾನಗಿಯೇ?

ತನ್ನ ಸಂಘಟನೆಯ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತ ಅದರ ಮುಖ್ಯಸ್ಥ ಬಿಡುತ್ತಿರುವ ಪುಂಖಾನುಪುಂಖ ಪ್ರಶ್ನೆಗಳು ಹೀಗಿವೆ- ಇವರು ಚಿತ್ರೀಕರಣಕ್ಕೆ ಅರಣ್ಯ ಇಲಾಖೆ ಪರವಾನಗಿ ಪಡೆದಿದ್ದರೇ? ಅರಮನೆಯ ಪರವಾನಗಿ ಪಡೆದಿದ್ದರೇ?…

ಈ ಧ್ವನಿ ಏಕೆ ಬರುತ್ತಿದೆ ಎಂದರೆ, ಯಾವಾಗ ಕೆಲವು ಹಿಂದಿ ಪತ್ರಿಕೆಗಳಲ್ಲಿ ಬಿಂಬಿಸಿರುವಂತೆ ಅಲ್ಲಾವುದ್ದೀನ್ ಖಿಲ್ಜಿ ಪಾತ್ರಧಾರಿ ರಣವೀರ್ ಸಿಂಗ್ ಹಾಗೂ ಪದ್ಮಾವತಿ ಪಾತ್ರಧಾರಿ ದೀಪಿಕಾ ನಡುವೆ ರೊಮಾನ್ಸ್- ಹಾಡು ಯಾವುದೂ ಇಲ್ಲ ಎಂದು ಈ ಹಿಂದೆಯೇ ಚಿತ್ರತಂಡ ಪತ್ರಿಕೆಗಳಿಗೆ ನೀಡಿದ್ದ ಸ್ಪಷ್ಟೀಕರಣ ಹಾಗೂ ಈಗ ಮಾಡುತ್ತಿರುವ ಟ್ವೀಟುಗಳು ದಾಳಿಕೋರರು ತಮ್ಮ ಸಮರ್ಥನೆಯ ವ್ಯಾಖ್ಯಾನ ವ್ಯಾಪ್ತಿ ಹೆಚ್ಚಿಸಿಕೊಳ್ಳುವಂತೆ ಮಾಡಿವೆ.

ಈ ಸಂದರ್ಭದಲ್ಲಿ ಟ್ವಿಟ್ಟರಿನಲ್ಲಿ ‘ಬಾಲಿವುಡ್ ಅನ್ನೋದು ಹಿಂದು ವಿರೋಧಿ’ ಎಂಬ ವಿಷಯ ಇಟ್ಟುಕೊಂಡು ಬಲಪಂಥೀಯತೆ ಉಮೇದಿನಲ್ಲಿರುವವರು ಟ್ರೆಂಡ್ ಸಹ ಮಾಡುತ್ತಿದ್ದಾರೆ. ಗೂಂಡಾಗಿರಿಯನ್ನು ಖಂಡಿಸುತ್ತ ‘ಆದರೆ…’ ಅಂತೊಂದು ಮಾತು ಅಂಟಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲಿ ಇತಿಹಾಸ ಹೇಗೆ ಬಿಂಬಿಸಲಾಗುತ್ತಿದೆ ಎಂಬುದು ಚರ್ಚೆಗೆ ಅತೀತ ಎಂದಲ್ಲ. ಆದರೆ ಆ ಅನುಮಾನದ ಮೇಲೆ ಸೆಟ್ಟಿಗೆ ನುಗ್ಗಿ ಹೊಡೆಯುವುದನ್ನು ಸಮರ್ಥಿಸಿಕೊಳ್ಳುತ್ತಿರುವವರು ಕಾನೂನುರಹಿತ ರಾಜ್ಯಭಾರವನ್ನು ಪ್ರತಿಪಾದಿಸುತ್ತಿದ್ದಾರೆ ಎಂದಾಯಿತು. ಪರವಾನಗಿ ಇಲ್ಲದ ಚಿತ್ರೀಕರಣ ಅಥವಾ ಇನ್ಯಾವುದೇ ಆಕ್ಷೇಪಗಳಿದ್ದಲ್ಲಿ ಅದನ್ನು ಸ್ಥಳೀಯಾಡಳಿತದ ಗಮನಕ್ಕೆ ತರುವಲ್ಲಿ, ಆ ಕುರಿತ ಕ್ರಮಕ್ಕೆ ಆಗ್ರಹಿಸುವಲ್ಲಿ ಎಲ್ಲ ದೇಶರಕ್ಷಕ, ಸಂಸ್ಕೃತಿ ರಕ್ಷಕರ ಅಧಿಕಾರ ಅಂತ್ಯಗೊಳ್ಳುತ್ತದೆ. ಇಷ್ಟಕ್ಕೂ ಹೀಗೆಲ್ಲ ಬಲಪಂಥದಲ್ಲಿ ಗುರುತಿಸಿಕೊಳ್ಳುತ್ತಿರುವ ಹಾಗೂ ಗೂಂಡಾಗಿರಿ ಸಮರ್ಥಿಸುವವರು ಅದಾಗಲೇ ಮುಕ್ಕಾಲು ಪಾಲು ಭಾರತ ಕಾಂಗ್ರೆಸ್ ಮುಕ್ತವಾಗಿದೆ ಅಂತ ಖುಷಿಯಲ್ಲಿದ್ದಾರಲ್ಲವೇ? ರಾಜಸ್ಥಾನದಲ್ಲೂ ವಸುಂಧರಾ ರಾಜೆಯ ಕೇಸರಿ ಸರ್ಕಾರವೇ ಇದೆಯಲ್ಲ? ಬನ್ಸಾಲಿಯೋ ಮತ್ಯಾರೋ ಕಾನೂನು ಉಲ್ಲಂಘಿಸಿದ್ದಾರೆ ಎಂದಾದರೆ ಆ ಬಗ್ಗೆ ತ್ವರಿತ ಕ್ರಮಕ್ಕೆ ನಿಮ್ಮದೇ ಆಪ್ತ ಸರ್ಕಾರದ ಮೇಲೆ ಒತ್ತಡ ಹೇರಿ, ಪ್ರತಿಭಟನೆ ನಡೆಸಬೇಕಲ್ಲದೇ ಚಿತ್ರೀಕರಣಕ್ಕೆ ನುಗ್ಗಿ ಬಡಿಯುವುದಲ್ಲವಲ್ಲ?

ಕೆಲ ವರ್ಷಗಳ ಹಿಂದಿನವರೆಗೂ ಬಲಪಂಥೀಯರ ಹತಾಶೆಗಳಿಗೆ ಎಲ್ಲೋ ಮೂಲೆಯಲ್ಲಾದರೂ ಸಹಾನುಭೂತಿ ಸಿಗುತ್ತಿತ್ತು. ಏಕೆಂದರೆ ಅಧಿಕಾರದಿಂದ ದೂರ ಉಳಿದಿರುವ ಇವರಿಗೆ ಕಲೆ- ಜ್ಞಾನ ಮಾದರಿಗಳ ಅಭಿವೃದ್ಧಿಗೆ ಅವಕಾಶವಾಗದೇ ಸಂತ್ರಸ್ತ ಜಾಗದಲ್ಲಿದ್ದಾರೆ ಎಂಬ ಭಾವನೆ ಇತ್ತು. ಆದರೆ ಈಗಲೂ ಸಂತ್ರಸ್ತ ಪಟ್ಟವನ್ನೇ ಆನಂದಿಸಿಕೊಂಡಿರುವ ಜಾಗದಲ್ಲಿ ಬಲಪಂಥೀಯರಿಲ್ಲ. ಅಯ್ಯಯ್ಯೋ ಬಾಲಿವುಡ್ ಇತಿಹಾಸ ತಿರುಚುತ್ತದೆ ಅನ್ನೋದೆ ಆಗಿಹೋಯಿತು. ಇವರು ಸೃಜನಶೀಲರಾಗಿ ಮಾಡುತ್ತಿರುವುದಾದರೂ ಏನನ್ನು? ಬಲಪಂಥೀಯರ ಪಾಳೆಯದಿಂದ ಎದ್ದುಹೋಗಿ ಯಾವನಾದರೂ ಸೃಜನಶೀಲ ತುರ್ತು ಪರಿಸ್ಥಿತಿ ಬಗ್ಗೆ ಜನಮೆಚ್ಚುವ ಫಿಲ್ಮ್ ಮಾಡಿದೀನಿ ನೋಡ್ರೀ ಎನ್ನುವ ವಾತಾವರಣವಿದೆಯಾ? ಇಲ್ಲ… ಏಕೆಂದರೆ ಟ್ವಿಟ್ಟರ್, ಫೇಸ್ಬುಕ್ ಗಳ ಮೂಲಕ ಈ ಕಾರ್ನಿ ಸೇನೆಯಂಥ ವಿಧ್ವಂಸಕ ಮನಸ್ಥಿತಿಯವರನ್ನು ಬೆಂಬಲಿಸುತ್ತಿರುವ ತಥಾಕಥಿತ ಬಲಪಂಥೀಯರು ಸೃಜನಶೀಲತೆಯಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಇನ್ನು ಹತ್ತು ವರ್ಷ ಹೋದರೂ ಬನ್ಸಾಲಿ ಇತಿಹಾಸ ತಿರುಚಿದರು ಎಂಬ ಬೊಬ್ಬೆಯಲ್ಲೇ ಖುಷಿಪಡುತ್ತಾರಾಗಲೀ ಶಿವಾಜಿಯನ್ನೋ, ರಜಪೂತ ರಾಜರುಗಳನ್ನೋ ‘ತಮ್ಮ ವೈಭವೇತಿಹಾಸದ ದೃಷ್ಟಿ’ಯಿಂದ ಕಟ್ಟಿಕೊಡುವ ಯಾವ ನಿರ್ದೇಶಕನೂ ಬರುವುದಿಲ್ಲ. ಏಕೆಂದರೆ ವಿರೋಧ-ವಿಧ್ವಂಸ- ಸಂತ್ರಸ್ತಗಿರಿಗಳನ್ನೇ ಬಂಡವಾಳವಾಗಿಸಿಕೊಂಡಿರುವವರನ್ನೇ ಸಾಮಾಜಿಕ ತಾಣಗಳಲ್ಲಿ ಹೀರೋಗಳನ್ನಾಗಿಸುವಲ್ಲಿ ಬಲಪಂಥೀಯರು ಉತ್ಸುಕರು. ವಿವೇಕ್ ಅಗ್ನಿಹೋತ್ರಿ, ಅನುಪಮ್ ಖೇರ್ ಅವರನ್ನು ತಮ್ಮವರನ್ನಾಗಿಸಿಕೊಳ್ಳುವ ಉತ್ಸಾಹವೊಂದೇ ಬಲಪಂಥೀಯ ಪಾಳೆಯದಲ್ಲಾಗಿರುವ ಅತಿದೊಡ್ಡ ಪ್ರಗತಿ! ‘ಬುದ್ಧ ಇನ್ ಟ್ರಾಫಿಕ್ ಜಾಮ್’ (ಒಳ್ಳೆಯ ಚಿತ್ರವೇ ನಿಜ..) ಪ್ರಚಾರಕ್ಕೆ ಎಬಿವಿಪಿಯನ್ನು ತುಂಬ ಚೆನ್ನಾಗಿ ಬಳಸಿಕೊಂಡ ನಿರ್ದೇಶಕನನ್ನು ಬಲಪಂಥೀಯ ಮನಸ್ಸುಗಳು ಅತಿ ಪುಳಕಿತವಾಗಿ ಅಪ್ಪಿಕೊಳ್ಳುತ್ತಿರುವುದನ್ನು ನೋಡಿದರೆ, ಕಾಳಿದಾಸನ ನಂತರ ಅತ್ಯದ್ಭುತ ರೋಮಾನ್ಸು ಅಂತ ಬಂದಿದ್ದು ‘ಹೇಟ್ ಸ್ಟೋರಿ’ಯಲ್ಲೇ ಅಂತ ಈ ಚಿಂತಕಗಣ ಪ್ರತಿಪಾದಿಸಿ ತಮ್ಮ ಸಂಸ್ಕೃತಿಯ ಪತಾಕೆ ಪಟಪಟಾಯಿಸಿದರೆ ಅದರಲ್ಲೇನೂ ಆಶ್ಚರ್ಯವಿಲ್ಲ!

ರಾಣಿ ಪದ್ಮಾವತಿಯನ್ನು ಬನ್ಸಾಲಿ ಚಿತ್ರಿಸುತ್ತಿರುವ ರೀತಿ ಇಷ್ಚವಾಗಿಲ್ಲ ಅಂತ ಸಿಟ್ಟು ಬಂದವರೆಲ್ಲ ಇನ್ನೊಂದು ಚಿತ್ರ ಮಾಡೋದಕ್ಕೆ ಸಾಧ್ಯವೇ? ಅದು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ ಅಂತ ಎಲ್ಲರಿಗೂ ಗೊತ್ತು. ಆದರೆ ಬಲಪಂಥೀಯರೆನಿಸಿಕೊಂಡವರು ಕಲ್ಲು ಹೊಡೆಯುವುದು ಹಾಗೂ ಕಲ್ಲು ಹೊಡೆದವರಿಗೆ ಸಹಾನುಭೂತಿ ನೀಡುವದರಲ್ಲಿ ತಮ್ಮ ಶ್ರಮವನ್ನೆಲ್ಲ ತೋಯಿಸುವುದನ್ನು ಬಿಟ್ಟು ‘ನಿಮ್ಮ ವ್ಯಾಖ್ಯಾನ’ ಕಟ್ಟಿ. ರಾಮಸೇತುವೋ, ಕಾಶ್ಮೀರಿ ಪಂಡಿತರ ನೋವೋ, ಸಾಗರದಾಳದ ದ್ವಾರಕೆಯೋ…. ನೀವು ಪ್ರತಿಪಾದಿಸುವ ಇತಿಹಾಸ ಕಲಾಕೃತಿಯಾಗಿ ಅರಳಿದರಷ್ಟೇ ಅದು ಎದುರಾಳಿಯನ್ನು ಗೆಲ್ಲಬಹುದಾದ ಮಾರ್ಗ.

ಹಾಗಾದರೆ ಪ್ರತಿಭಟನೆ, ವಿರೋಧ ಲೇಖನ, ಚರ್ಚೆ, ಜನಾಭಿಪ್ರಾಯ ಇವಕ್ಕೆಲ್ಲ ಬೆಲೆ ಇಲ್ಲವೇ? ಈ ಬಗ್ಗೆ ತೀರ ಗೊಂದಲವೇನೂ ಬೇಕಾಗಿಲ್ಲ. ತಿರುಚಿದ್ದು, ಭಾವನೆಗೆ ಘಾಸಿಯಾಗಿದ್ದು ಇವನ್ನೆಲ್ಲ ನೋಡಬೇಡಿ ಎನ್ನುವುದರಲ್ಲಿ, ನೋಡುವುದಿಲ್ಲ ಎಂದು ನಿರ್ಧಾರ ತಾಳುವುದರಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ ಒಪ್ಪಿಕೊಳ್ಳಲಾಗದ ಅಂಶ ಎಂದರೆ ಯಾವಾಗ ಯಾವುದೇ ಗುಂಪು ಇಂಥದ್ದನ್ನು ನೋಡಬೇಡಿ, ಇಂಥದ್ದನ್ನು ಮಾಡಬೇಡಿ ಅಂತ ಥಿಯೇಟರ್ ಪ್ರವೇಶ ದ್ವಾರದಲ್ಲಿ, ಚಿತ್ರೀಕರಣದ ಜಾಗಗಳಲ್ಲಿ ಬಡಿಗೆ ಹಿಡಿದು ನುಗ್ಗುತ್ತಾರೋ ಆವಾಗ.

ಈ ಬಡಿಗೆ ಹಿಡಿದ ಗುಂಪನ್ನು ಓಲೈಸುತ್ತ, ನಾವು ಲೆಫ್ಟಿಸ್ಟರನ್ನು ಗೆದ್ದುಬಿಡುತ್ತೇವೆ ಅಂತ ಹಾರಾಡಿಕೊಂಡು ಮಜಾ ಪಡೆದುಕೊಂಡಿರುವಷ್ಟು ಕಾಲವೂ ಬಲಪಂಥೀಯ ಪಾಳೆಯದಿಂದ ಯಾವ ಸೃಜನಶೀಲತೆಯೂ ಅರಳುವುದಿಲ್ಲ. ಪರ್ಯಾಯ ಸೃಷ್ಟಿಯಿಲ್ಲದೇ ಯಾವ ಸಮರವನ್ನೂ ಗೆಲ್ಲಲಾಗುವುದಿಲ್ಲ.

Leave a Reply