ರಾಜಕಾರಣಕ್ಕೆ ಎಸ್.ಎಂ ಕೃಷ್ಣ ವಿದಾಯ, ಬಂಡಾಯ ಶಾಸಕರು ನಮಗೆ ಬೇಡ: ಕುಮಾರಸ್ವಾಮಿ, ಐಟಿ ದಾಳಿ: ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ, ಉ.ಪ್ರ ಚುನಾವಣೆ: ಬಿಜೆಪಿ ಭರವಸೆಗಳೇನು?

ಫೆ.1ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯಕ್ಕೆ ಶನಿವಾರ ಟಿಕೆಟ್ ಮಾರಾಟ ಆರಂಭವಾಗಿದ್ದು, ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಖರೀದಿಸಲು ಕ್ರೀಡಾಂಗಣದ ಬಳಿ ಸರದಿ ಸಾಲಿನಲ್ಲಿ ನಿಂತ ದೃಶ್ಯ.

ಡಿಜಿಟಲ್ ಕನ್ನಡ ಟೀಮ್:

ಎಸ್.ಎಂ ಕೃಷ್ಣ ವಿದಾಯ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ. ತಮ್ಮ ನಿರ್ಧಾರದ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಇನ್ನು ಮುಂದೆ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ, ಯಾವ ಪಕ್ಷದ ಜತೆಗೂ ಗುರುತಿಸಿಕೊಳ್ಳುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂಬ ವರದಿಗಳು ಬಂದಿವೆ. ತಮ್ಮ ನಿರ್ಧಾರದ ಬಗ್ಗೆ ನಾಳೆ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ವಿವರ ನೀಡುವುದಾಗಿಯೂ ಕೃಷ್ಣ ಅವರು ಮಾಹಿತಿ ಕೊಟ್ಟಿದ್ದಾರೆ.

ಅಡ್ಡ ಮತದಾನ ಮಾಡಿದವರು ನಮಗೆ ಬೇಡ

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಏಳು ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘ಮಾಜಿ ಸಚಿವ ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್ ಸೇರಿದಂತೆ ಏಳು ಶಾಸಕರು ದೊಡ್ಡವರಾಗಿದ್ದಾರೆ. ದೊಡ್ಡ ಪಕ್ಷಗಳಲ್ಲಿ ಅವರಿಗೆ ಭಾರಿ ಬೇಡಿಕೆ ಇದೆ. ಅವರಿಗೆ ಬೇಕಾದಂತೆ ಈ ಆಫರ್ ಗಳನ್ನು ಬಳಸಿಕೊಳ್ಳಲಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಮಾನತುಗೊಂಡವರಿಗೆ ಬಹಳ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಅವರಿಗೆ ಯಾವುದೇ ಸ್ಥಾನಮಾನ ನೀಡಿದರೂ ಸಂತೋಷ. ಬಂಡುಕೋರರು ಪಕ್ಷ ತೊರೆದರೆ, ಸಂಘಟನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದಿದ್ದಾರೆ. ಮತ್ತೊಂದೆಡೆ ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ನಡೆಯುತ್ತಿರುವ ವಿಚಾರಣೆ ಫೆ.18ಕ್ಕೆ ಮುಂದೂಡಲಾಗಿದೆ.

ಐಟಿ ದಾಳಿ ಹಿನ್ನೆಲೆಯಲ್ಲಿ ಮೋದಿ ವಿರುದ್ಧ ಸಿಎಂ ಕಿಡಿ

ಕಾಂಗ್ರೆಸ್ ಮುಖಂಡರ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ರಾಜಕೀಯ ಪ್ರೇರಿತ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಏಕೆ ಈ ದಾಳಿ ಆಗುತ್ತಿಲ್ಲ. ಅಲ್ಲಿ ಭ್ರಷ್ಟಾಚಾರ ಇಲ್ಲವೇ? ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಜನವೇದನ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಮಾತನಾಡಿದ ಮುಖ್ಯಮಂತ್ರಿಗಳು, ‘ನಮ್ಮ ಸರ್ಕಾರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭ್ರಷ್ಟ ಸರ್ಕಾರ ಎಂದು ಟೀಕಿಸುತ್ತಾರೆ. ಯಡಿಯೂರಪ್ಪ ಸೇರಿದಂತೆ ಅನೇಕ ಮುಖಂಡರು ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಬಂದಿದ್ದಾರೆ. ನೋಟು ಎಣಿಸುವ ಯಂತ್ರ ಇಟ್ಟುಕೊಂಡಿದ್ದ ಈಶ್ವರಪ್ಪ ಅವರ ಪಕ್ಕದಲ್ಲೇ ಇದ್ದಿದ್ದು, ಅವರ ಕಣ್ಣಿಗೆ ಕಾಣಲಿಲ್ಲವೇ. ಮೋದಿ ಅವರಿಗೆ ಪ್ರಜಾ ತಂತ್ರದ ಮೇಲೆ ಭರವಸೆ ಇಲ್ಲ. ಅವರೊಬ್ಬ ಸರ್ವಾಧಿಕಾರಿ. ಈ ಮಾತನ್ನು ಅರ್ಥಶಾಸ್ತ್ರಜ್ಞ ಅಮರ್ಥ್ಯಸೇನ್ ಕೂಡ ಹೇಳಿದ್ದಾರೆ. ನೋಟು ಅಮಾನ್ಯದಿಂದ ಭ್ರಷ್ಟಾಚಾರ ಕಡಿಮೆ ಆಗಿದೆಯೇ, ಉಗ್ರರನ್ನು ಸೆದೆಬಡಿಯಲಾಗಿದೆಯೇ? ಕಪ್ಪು ಹಣ ಎಷ್ಟು ದೊರಕಿದೆ? ಅಚ್ಚೆ ದಿನ ಬಂದಿದೆಯಾ?’ ಎಂದು ದಾಳಿ ಮಾಡಿದರು.

ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಬಹು ನಿರೀಕ್ಷಿತ ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶನಿವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪಕ್ಷದ ಪ್ರಣಾಳಿಕೆಯಲ್ಲಿ ಗುಂಡಾರಾಜ್ ಮುಕ್ತ, ಭ್ರಷ್ಟಾಚಾರ ಮುಕ್ತ, ಲೋಕ ಕಲ್ಯಾಣ ಸೇರಿದಂತೆ ಹಲವು ಭರವಸೆಗಳನ್ನು ಬಿಜೆಪಿ ಕೊಟ್ಟಿದೆ. ಪ್ರಣಾಳಿಕೆ ಕುರಿತಂತೆ ಅಮಿತ್ ಶಾ ಹೇಳಿದ ಪ್ರಮುಖ ಅಂಶಗಳು ಹೀಗಿವೆ…

‘ಉತ್ತರ ಪ್ರದೇಶದಲ್ಲಿರುವ ಗೂಂಡಾಗಿರಿ ಸಮಸ್ಯೆ ಹಾಗೂ ಭ್ರಷ್ಟಾಚಾರವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲರಿಗೂ ಭದ್ರತೆ ನೀಡಲಾಗುವುದು. ಪೆರೋಲ್ ಮೇಲೆ ಹೊರಗೆ ಬಂದು ಅಪರಾಧ ಮಾಡುತ್ತಿರುವ ಕ್ರಿಮಿನಲ್ ಗಳನ್ನು 45 ದಿನಗಳ ಒಳಗಾಗಿ ಜೈಲಿಗೆ ಕಳುಹಿಲಾಗುವುದು. ಜಾತಿ ಆಧಾರವಿಲ್ಲದೆ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ಹಾಕಲಾಗುವುದು. ಕೃಷಿ ಅಭಿವೃದ್ಧಿಗೆ ₹150 ಕೋಟಿ ನೀಡಲಾಗುವುದು. ಉತ್ತರ ಪ್ರದೇಶದ ಶೇ.90ರಷ್ಟು ಯುವಕರಿಗೆ ಉದ್ಯೋಗ ನೀಡಲಾಗುವುದು. 4 ಮತ್ತು 5ನೇ ದರ್ಜೆ ನೌಕರರ ನೇಮಕಾತಿಯನ್ನು ಸಂದರ್ಶನದ ಬದಲಾಗಿ ಅರ್ಹತೆ ಮೇಲೆ ನೀಡಲಾಗುವುದು. 2019ರ ವೇಳೆಗೆ ಪ್ರತಿ ಹಳ್ಳಿಗೂ ವಿದ್ಯುತ್ ಶಕ್ತಿ ಸಂಪರ್ಕ, ವಿಧವೆಯರ ವೇತನಕ್ಕೆ ವಯೋಮಾನ ಮಿತಿ ತೆರವು ಮಾಡಲಾಗುವುದು. ಕಾನೂನು ಪಾಲನೆ ಮಾಡುವ ಮೂಲಕ ಆದಷ್ಟು ಬೇಗ ರಾಮ ಮಂದಿರ ನಿರ್ಮಿಸಲಾಗುವುದು.’

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಹೃದಯ ರೋಗಿಗಳಿಗೆ ಅಳವಡಿಸುವ ಸ್ಟೆಂಟ್ ಗಳನ್ನು ಕಡು ಬಡವರಿಗೂ ಎಟಕುವ ದರದಲ್ಲಿ ನೀಡುವುದಾಗಿ ಕೇಂದ್ರ ಸರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಸ್ಟೆಂಟ್ ಗಳಿಗೆ ಲಕ್ಷಾಂತರ ಹಣ ನೀಡಬೇಕಿತ್ತು. ಮಧ್ಯಮ ಹಾಗೂ ಬಡ ಕುಟುಂಬದ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇವುಗಳನ್ನು ಕಡಿಮೆ ಮೊತ್ತದಲ್ಲಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಸಚಿವರು ತಿಳಿಸಿದರು.
  • ನೂತನ ಲೋಕಾಯುಕ್ತರಾಗಿ ನೇಮಕವಾಗಿರುವ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ವಾಜೂಭಾಯ್ ವಾಲಾ ಪ್ರತಿಜ್ಞಾ ವಿಧಿ ಭೋಧಿಸಿದರು.
  • ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ ಮುಂದುವರಿದಿದ್ದು, ಮತ್ತೆ ಐವರು ಸೈನಿಕರು ಕಣ್ಮರೆಯಾಗಿದ್ದಾರೆ. ಕುಪ್ವಾರ, ಬಂಡಿಪೋರ, ಬಾರಾಮುಲ್ಲಾ, ಗಂದೇಬಾರ್ಲಾ, ಕುಲ್ಗಾಂ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಭಾರಿ ಪ್ರಣಾಮದ ಹಿಮಪಾತ ಸಂಭವಿಸಿದೆ. ಈ ವೇಳೆ ಕರ್ತವ್ಯನಿರತರಾಗಿದ್ದ ಐವರು ಯೋಧರು ಕಣ್ಮರೆಯಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ.
  • ಪ್ರತಿಷ್ಟಿತ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತಮ್ಮ ಸಹೋದರಿ ವೀನಸ್ ವಿಲಿಯಮ್ಸ್ ವಿರುದ್ಧವೇ ಆಡಿದ ಸೆರೆನಾ 6-4, 6-4 ನೇರ ಸೆಟ್ ಗಳ ಅಂತರದಲ್ಲಿ ಜಯಿಸಿದರು. ಈ ಮೂಲಕ ಸೆರೆನಾ ತಮ್ಮ ವೃತ್ತಿ ಜೀವನದ 23ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಆ ಮೂಲಕ ಅತಿ ಹೆಚ್ಚು ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದ ಸಾಧನೆಗೂ ಸೆರೆನಾ ಭಾಜನವಾಗಿದ್ದಾರೆ.

Leave a Reply