ಆಸ್ಟ್ರೇಲಿಯಾ ಓಪನ್ ಗೆದ್ದು ಪ್ರಶಸ್ತಿಯ ಬರ ನೀಗಿಸಿಕೊಂಡ ಫೆಡರರ್ ಮುಡಿಗೆ 18ನೇ ಗ್ರಾನ್ ಸ್ಲಾಮ್ ಗರಿ!

ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ರೋಜರ್ ಫೆಡರರ್ (ಬಲ) ಮತ್ತು ರನ್ನರ್ ಅಪ್ ಆದ ರಾಫೆಲ್ ನಡಾಲ್ (ಎಡ)… (ಚಿತ್ರಕೃಪೆ: ಟ್ವಿಟರ್)

ಡಿಜಿಟಲ್ ಕನ್ನಡ ಟೀಮ್:

ವಿಶ್ವದ ಮಾಜಿ ನಂಬರ್ ಒನ್ ಟೆನಿಸಿಗ ರೋಜರ್ ಫೆಡರರ್ ಅವರ ಸುದೀರ್ಘ ನಾಲ್ಕು ವರ್ಷಗಳ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಬರ ಕೊನೆಗೂ ನೀಗಿದೆ. ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಫೆಡರರ್ ತಮ್ಮ ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತರಾಗಿರುವ ಸ್ಪೇನಿನ ರಾಫೆಲ್ ನಡಾಲ್ ಅವರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಮೆಲ್ಬೋರ್ನ್ ನ ರಾಡ್ ಲಾವೆರ್ ಅರೆನಾದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ರೋಜರ್ ಫೆಡರರ್ 6-4, 3-6, 6-1, 3-6, 6-3 ಸೆಟ್ ಗಳ ಅಂತರದಲ್ಲಿ ರಾಫೆಲ್ ನಡಾಲ್ ಅವರನ್ನು ಪರಾಭವಗೊಳಿಸಿ ಪ್ರಶಸ್ತಿ ಗೆದ್ದುಕೊಂಡರು.

ಸಾಕಷ್ಟು ನಿರೀಕ್ಷೆ, ಕುತೂಹಲಗಳಿಂದಾಗಿ ಇಂದಿನ ಫೈನಲ್ ಪಂದ್ಯ ಇಡೀ ಕ್ರೀಡಾಭಿಮಾನಿಗಳ ಚಿತ್ತವನ್ನು ತನ್ನತ್ತ ಸೆಳೆದುಕೊಂಡಿತ್ತು. ಟೆನಿಸ್ ಇತಿಹಾಸದಲ್ಲೇ ಒಂದು ಟ್ರೆಂಡ್ ಸೃಷ್ಟಿಸಿದ ಎದುರಾಳಿಗಳಾದ ಫೆಡರರ್ ಹಾಗೂ ನಡಾಲ್ ಮುಖಾಮುಖಿಯಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈ ಇಬ್ಬರೂ ಸಹ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದು ಸಾಕಷ್ಟು ಸಮಯವೇ ಆಗಿದ್ದು ಕುತೂಹಲವನ್ನು ಇಮ್ಮಡಿಗೊಳಿಸಿತ್ತು. ಫೆಡರರ್ 2012ರ ವಿಂಬಲ್ಡನ್ ಪ್ರಶಸ್ತಿ ಗೆದ್ದ ನಂತರ ಮತ್ತೆ ಯಾವುದೇ ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ ಚಾಂಪಿಯನ್ ಆಗಿರಲಿಲ್ಲ. ಇನ್ನು ರಾಫೆಲ್ ನಡಾಲ್ ಗೆ 2014ರ ಫ್ರೆಂಚ್ ಓಪನ್ ಪ್ರಶಸ್ತಿ ಕಡೇಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿತ್ತು. ಹೀಗಾಗಿ ಈ ಇಬ್ಬರೂ ಆಟಗಾರರಿಗೆ ಈ ಪಂದ್ಯ ಮಹತ್ವದ್ದಾಗಿ ಪರಿಣಮಿಸಿತ್ತು.

ಕಳೆದ ನಾಲ್ಕು ವರ್ಷಗಳಲ್ಲಿ ನೋವಾಕ್ ಜೊಕೊವಿಚ್ ಅಮೋಘ ಫಾರ್ಮ್, ಆ್ಯಂಡಿ ಮರ್ರೆ ಹಾಗೂ ಸ್ಟಾನಿಸ್ಲಾಸ್ ವಾವ್ರಿಂಕಾ ಅವರಂತಹ ಯುವ ಆಟಗಾರರ ಅತ್ಯುತ್ತಮ ಪ್ರದರ್ಶನದಿಂದಾಗಿ ರೋಜರ್ ಫೆಡರರ್ ಮತ್ತೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲದೇ ವಿದಾಯ ಹೇಳುತ್ತಾರಾ? ಎಂಬ ಆತಂಕ ಅವರ ಅಭಿಮಾನಿಗಳಲ್ಲಿ ಮನದ ಮೂಲೆಯಲ್ಲಿ ಹುಟ್ಟುಕೊಂಡಿತ್ತು. ಆದರೆ, ತಮ್ಮ ಪರಿಶ್ರಮವನ್ನು ಬಿಡದೇ ಸತತ ಪ್ರಯತ್ನವನ್ನು ಹಾಕಿದ ಫೆಡರರ್ ಇಂದು ಮತ್ತೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ನಿಂತಿದ್ದಾರೆ.

ಕಳೆದ ವರ್ಷ ಗಾಯದ ಸಮಸ್ಯೆಗೆ ತುತ್ತಾದ ಬಳಿಕ ಆರು ತಿಂಗಳ ಕಾಲ ಟೆನಿಸ್ ಕೋರ್ಟ್ ನಿಂದ ದೂರ ಉಳಿದಿದ್ದ ಫೆಡರರ್ ಈಗಷ್ಟೇ ಚೇತರಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲೇ ತಮ್ಮ 18ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಯನ್ನು ಬೆನ್ನತ್ತುತ್ತಿರುವುದಾಗಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದ ರೋಜರ್ ಫೆಡರರ್, ಕೇವಲ 29 ದಿನಗಳಲ್ಲಿ ತಮ್ಮ ಮಾತನ್ನು ಪೂರ್ಣಗೊಳಿಸಿದ್ದಾರೆ.

feddy-tweet

ಹೊಸ ವರ್ಷದ ಸಂದರ್ಭದಲ್ಲಿ ಫೆಡರರ್ ತಮ್ಮ 18ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಬೆನ್ನತ್ತಿರುವ ಬಗ್ಗೆ ಮಾಡಿದ್ದ ಟ್ವೀಟ್…

ನಿರೀಕ್ಷೆಯಂತೆ ಈ ಪಂದ್ಯ ಮದಗಜಗಳ ಕಾದಾಟದಂತೆಯೇ ನಡೆಯಿತು. ಆಧುನಿಕ ಟೆನಿಸ್ ನ ಇಬ್ಬರು ಮಹಾನ್ ಆಟಗಾರರು ತಮ್ಮ ಅಸ್ಥಿತ್ವ ಸಾಬೀತುಪಡಿಸುವ ಒಂದು ಸಮರವಾಗಿ ಈ ಪಂದ್ಯ ಬಿಂಬಿತವಾಗಿತ್ತು. ಇದುವರೆಗೂ ಈ ಇಬ್ಬರ ಮುಖಾಮುಖಿಯಲ್ಲಿ ನಡಾಲ್ ಮೇಲುಗೈ ಸಾಧಿಸಿದ್ದೇ ಹೆಚ್ಚಾಗಿತ್ತು. ಹೀಗಾಗಿ ಅಂಕಿ ಅಂಶಗಳು ನಡಾಲ್ ಪರವಾಗಿ ನಿಂತಿತ್ತು. ಆದರೆ ಇದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ತಮ್ಮ ಆಟದತ್ತ ಮಾತ್ರ ಗಮನ ಹರಿಸಿದ ಫೆಡರರ್ ಅಂತಿಮವಾಗಿ ಗೆಲುವಿನ ನಗೆ ಬೀರಿದರು.

ಪಂದ್ಯದ ಮೊದಲ ಸೆಟ್ ನಲ್ಲೇ 6-4 ಅಂತರದ ಮುನ್ನಡೆ ಪಡೆದ ಫೆಡರರ್ ಪಂದ್ಯದಲ್ಲಿ ಶುಭಾರಂಭ ಮಾಡಿದರು. ಮೊದಲ ಸೆಟ್ ಹಿನ್ನಡೆಯ ಬೆನ್ನಲ್ಲೇ ಹೋರಾಟ ಮಾಡಿದ ನಡಾಲ್ ಎರಡನೇ ಸೆಟ್ ನಲ್ಲಿ 6-3 ಅಂತರದ ಮುನ್ನಡೆ ಪಡೆದು ಪಂದ್ಯದಲ್ಲಿ ಸಮಬಲ ಸಾಧಿಸಿದರು. ಇನ್ನು ಮೂರನೇ ಸೆಟ್ ಅನ್ನು 6-1 ರಿಂದ ತನ್ನ ಮಡಿಲಿಗೆ ಹಾಕಿಕೊಂಡ ಫೆಡರರ್ ಪಂದ್ಯದ ಗೆಲುವಿಗೆ ಒಂದೇ ಹೆಜ್ಜೆ ಹಿಂದೆ ಉಳಿದಿದ್ದರು. ಈ ಹಂತದಲ್ಲಿ ಫೆಡರರ್ ವಿರುದ್ಧ ತೊಡೆ ತಟ್ಟಿ ನಿಂತ ನಡಾಲ್ ನಾಲ್ಕನೇ ಸೆಟ್ ಅನ್ನು 6-3 ಅಂತರದಲ್ಲಿ ತಮ್ಮದಾಗಿಸಿಕೊಂಡರು. ಪರಿಣಾಮ ಪಂದ್ಯ ನಿರ್ಣಾಯಕ ಐದನೇ ಸೆಟ್ ಗೆ ಜಾರಿತು.

ಅಂತಿಮ ಸೆಟ್ ನ ಆರಂಭದಲ್ಲಿ ಎಡವಿದ ಫೆಡರರ್ 0-2 ಅಂಕಗಳ ಹಿನ್ನಡೆ ಅನುಭವಿಸಿದ್ದರು. ಈ ಸಂದರ್ಭದಲ್ಲೇ ಒತ್ತಡಕ್ಕೆ ಸಿಲುಕದೆ ತಮ್ಮ ದಶಕಗಳ ಟೆನಿಸ್ ಅನುಭವವನ್ನು ಬಳಸಿಕೊಂಡ ಫೆಡರರ್ ಸಮಯೋಚಿತ ಆಟ ಪ್ರದರ್ಶಿಸಿದರು. ಈ ಹಂತದಲ್ಲಿ ನಡಾಲ್ ಮಾಡಿದ ಸಣ್ಣ ತಪ್ಪುಗಳನ್ನೇ ಬಳಸಿಕೊಂಡ ಫೆಡರರ್ ನಂತರ 3-3 ಅಂಕಗಳ ಸಮಬಲ ಸಾಧಿಸಿದರು. ಇದೇ ಲಯವನ್ನು ಅಂತ್ಯದವರೆಗೂ ಮುಂದುವರಿಸಿದ ಫೆಡರರ್ ಪಂದ್ಯವನ್ನು ಗೆದ್ದು, ಭಾವುಕರಾದರು.

ಈ ಗೆಲುವಿನಿಂದ ಫೆಡರರ್ ಬರೆದ ದಾಖಲೆಗಳು…

  • ದಾಖಲೆಯ 18ನೇ ಗ್ರ್ಯಾನ್ ಸ್ಲಾಂ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡ ಫೆಡರರ್.
  • ಮೂರು ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಐದು ಬಾರಿ ಚಾಂಪಿಯನ್ ಆದ ಮೊದಲ ಟೆನಿಸಿಗ. (ಆಸ್ಟ್ರೇಲಿಯಾ ಓಪನ್: 2004, 2006, 2007, 2010, ವಿಂಬಲ್ಡನ್: 2003, 2004, 2005, 2006, 2007, 2009, 2012, ಯುಎಸ್ ಓಪನ್: 2004, 2005, 2006, 2007, 2008). ಫೆಡರರ್ ಫ್ರೆಂಚ್ ಓಪನ್ ಟೂರ್ನಿಯನ್ನು ಒಂದು ಬಾರಿ ಅಂದರೆ 2009ರಲ್ಲಿ ಗೆದ್ದಿದ್ದರು.
  • 2010ರ ನಂತರ ಮತ್ತೆ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆಲುವು. ಸುದೀರ್ಘ 7 ವರ್ಷಗಳ ನಂತರ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಆಟಗಾರ ಎಂಬ ಖ್ಯಾತಿಗೂ ಭಾಜನ. ಈ ಹಿಂದೆ ಆ್ಯಂಡ್ರೆ ಅಗಸ್ಸಿ ಹಾಗೂ ಬೋರಿಸ್ ಬೆಕರ್ 5 ವರ್ಷಗಳ ಅಂತರದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

Leave a Reply