ಹುತ್ಮಾತ್ಮ ಯೋಧರನ್ನು ಸ್ಮರಿಸುತ್ತಲೇ ಪರೀಕ್ಷೆ ಹೊಸ್ತಿಲಲ್ಲಿರೋ ವಿದ್ಯಾರ್ಥಿಗಳಿಗೆ ಮೋದಿ ಕೊಟ್ಟ ಸಲಹೆ ಏನು?

ಡಿಜಿಟಲ್ ಕನ್ನಡ ಟೀಮ್:

‘ಸಂತೋಷದಿಂದ ಪರೀಕ್ಷೆಯನ್ನು ಎದುರಿಸುವುದು ಉತ್ತಮ ಅಂಕ ಗಳಿಕೆಯ ಮೂಲ ಸೂತ್ರ… ಪರೀಕ್ಷೆಯಲ್ಲಿ ಗಾಬರಿಯಾದ್ರೆ ನೀವು ಓದಿದ್ದು ನೆನಪಿನಲ್ಲಿ ಉಳಿಯೋಲ್ಲ. ಹಾಗಾಗಿ ಖುಷಿಯಿಂದ ಇರಿ, ಹೆಚ್ಚು ಅಂಕ ಗಳಿಸಿರಿ…’ ಇದು ಪ್ರಸಕ್ತ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಕೊಟ್ಟ ಸಲಹೆ.

ಕಳೆದ ವರ್ಷ ತಮ್ಮ ಅಂತಿಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧದ ತಮ್ಮ ಸಮರ ಹಾಗೂ ಅದರ ಮುಂದುವರಿದ ಭಾಗವಾಗಿ ಬೇನಾಮಿ ಆಸ್ತಿ ಮೇಲಿನ ದಾಳಿ ಕುರಿತಂತೆ ಮಾತನಾಡಿದ್ದ ಮೋದಿ ಅವರು, ಈ ಬಾರಿ ದೇಶವನ್ನು ಕಾಯುತ್ತಿರುವ ಯೋಧರಿಗೆ ನಮನ, ಪರೀಕ್ಷೆ ಎದುರಿಸಲು ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವತ್ತ ಗಮನ ಹರಿಸಿದರು. ಹಾಗಾದರೆ ಬನ್ನಿ ನರೇಂದ್ರ ಮೋದಿ ಅವರು ತಮ್ಮ ಕಾರ್ಯಕ್ರಮದಲ್ಲಿ ಏನು ಹೇಳಿದರು ನೋಡೋಣ…

‘ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿರುವ ನಮ್ಮ ಯೋಧರಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಜನವರಿ 30ರಂದು ದೇಶದಾದ್ಯಂತ 2 ನಿಮಿಷಗಳ ಮೌನಾಚರಣೆ ಮಾಡೋಣ. ಮೊನ್ನೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶೌರ್ಯ ಪ್ರಶಸ್ತಿ ಪಡೆದವರಿಗೆ ನನ್ನ ಅಭಿನಂದನೆಗಳು. ಮಕ್ಕಳು ಈ ಸಾಧಕರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಇನ್ನು ಕಳೆದ ಒಂದು ವಾರದಿಂದ ಜಮ್ಮು ಕಾಶ್ಮೀರದಲ್ಲಿ ಹಿಮಪಾತದಿಂದ ಮೃತಪಟ್ಟ ವೀರ ಯೋಧರಿಗೆ ನಾನು ಸಂತಾಪ ಸೂಚಿಸುತ್ತೇನೆ.’

‘ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯ ಸಮಯ ಒಂದು ಒತ್ತಡದ ಹಾಗೂ ಬೇಸರದ ಸಮಯವಾಗಿ ಪರಿಗಣಿಸಲಾಗುತ್ತಿದೆ. ಈ ವಿಷಯದ ಬಗ್ಗೆ ಸಾಕಷ್ಟು ಜನರು ನನ್ನ ಬಳಿ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಇಂದು ಈ ವಿಷಯದ ಬಗ್ಗೆ ಮಾತನಾಡಲು ಇಚ್ಛಿಸುತ್ತೇನೆ. ಪರೀಕ್ಷೆಗಳನ್ನು ಎಂದಿಗೂ ಒತ್ತಡವೆಂದು ಪರಿಗಣಿಸಬೇಡಿ. ಪರೀಕ್ಷೆಗಳನ್ನು ಹಬ್ಬದಂತೆ ಸಂಭ್ರಮದಿಂದ ಸ್ವೀಕರಿಸಬೇಕು. ಪರೀಕ್ಷೆಗೆ ಹೇಗೆ ಸಿದ್ಧರಾಗುತ್ತೀರಿ ಎಂಬುದು ನಿಮಗೆ ಬಿಟ್ಟ ವಿಷಯ. ಆದರೆ ಪರೀಕ್ಷೆಯನ್ನು ಸಂಭ್ರಮದಿಂದ ಎದುರಿಸಿದರೆ, ನಿಮ್ಮ ನಿಜವಾದ ಸಾಮರ್ಥ್ಯ ಹೊರಬರುತ್ತದೆ. ಹೀಗಾಗಿ ಯಾರೂ ಒತ್ತಡಕ್ಕೆ ಒಳಗಾಗ ಬೇಡಿ ಎಂದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಮತ್ತು ಕುಟುಂಬದವರಿಗೆ ಮನವಿ ಮಾಡುತ್ತೇನೆ. ನಗುನಗುತ್ತಾ ಪರೀಕ್ಷೆಯನ್ನು ಎದುರಿಸಿ. ಆಗ ನೀವು ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ. ನೀವು ಒತ್ತಡ ಮುಕ್ತರಾಗಿದ್ದರೆ ನಿಮ್ಮ ನೆನಪಿನ ಶಕ್ತಿ ಉನ್ನತ ಮಟ್ಟದಲ್ಲಿರುತ್ತದೆ. ಹೀಗಾಗಿ ಸಂತೋಷದಿಂದಿರುವುದು ಉತ್ತಮ ಅಂಕಗಳಿಕೆಯ ಸೂತ್ರ. ಒತ್ತಡಕ್ಕೆ ಸಿಲುಕಿದರೆ ನಿಮ್ಮ ಜ್ಞಾನ ಸರಿಯಾಗಿ ಹೊರಬರುವುದಿಲ್ಲ. ಅಂಕಗಳಿಕೆಗೆ ಮಾತ್ರ ಓದಬೇಡಿ. ನಿಮ್ಮ ಜ್ಞಾನ ವೃದ್ಧಿಗಾಗಿ ಓದಬೇಕು. ಪರೀಕ್ಷೆಯಲ್ಲಿ ನೀವು ನಿಮ್ಮ ಜತೆ ಸ್ಪರ್ಧಿಸಬೇಕೇ ಹೊರತು ಇತರರ ಜೊತೆ ಅಲ್ಲ.’

‘ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನೇ ಉದಾಹರಣೆಗೆ ತೆಗೆದುಕೊಳ್ಳಿ. ಅವರು ತಮಗೆ ತಾವೇ ಸವಾಲು ಹಾಕಿಕೊಂಡು ತಮ್ಮ ದಾಖಲೆಯನ್ನೇ ಮುರಿಯುತ್ತಾ ಸಾಗಿದರು. ಅದು ಎಲ್ಲರಿಗೂ ಸ್ಫೂರ್ತಿಯಾಗಿ ನಿಲ್ಲುತ್ತದೆ. ಈ ಸಂದರ್ಭದಲ್ಲಿ ಎಲ್ಲ ಪೋಷಕರಿಗೆ ನಾನು ಮೂರು ಸಲಹೆಗಳನ್ನು ನೀಡಲು ಬಯಸುತ್ತೇನೆ. ಅದು ಸ್ವೀಕರಿಸುವ ಮನೋಭಾವ, ಬೋಧನೆ ಹಾಗೂ ಸಮಯ ನೀಡುವುದು. ಪೋಷಕರು ತಮ್ಮ ಮಕ್ಕಳ ಸಾಧನೆಯನ್ನು ಸ್ವೀಕರಿಸಬೇಕೆ ಹೊರತು, ಅವರಿಂದ ನಿರೀಕ್ಷೆ ಮಾಡಬಾರದು. ನಿಮ್ಮ ನಿರೀಕ್ಷೆ ಮಕ್ಕಳಿಗೆ ಹೊರೆಯಾಗಬಾರದು. ಪರೀಕ್ಷೆಯಲ್ಲಿ ಕಳ್ಳ ಕೆಲಸಕ್ಕೆ ಮುಂದಾಗಬೇಡಿ. ನೀವು ಯಾರ ಕೈಗೂ ಸಿಕ್ಕಿಬೀಳದಿದ್ದರೂ ನೀವು ಮೋಸ ಮಾಡಿರುವುದು ನಿಮಗೆ ಗೊತ್ತಿರುತ್ತದೆ. ನೀವು ಮೋಸದಿಂದ ಅಂಕ ಪಡೆಯಲು ಮುಂದಾದರೆ, ಆಗ ನಿಮಗೆ ಕಲಿಕೆಯ ಆಸಕ್ತಿ ಕಡಿಮೆಯಾಗುತ್ತದೆ. ಈ ಮೋಸ ಮಾಡುವ ಮಾರ್ಗ ಸಮಯ ಹಾಗೂ ಕ್ರಿಯಾಶೀಲತೆಯನ್ನು ಬೇಡುತ್ತದೆ. ನಿಮ್ಮ ಆ ಸಮಯ ಹಾಗೂ ಕ್ರಿಯಾಶೀಲತೆಯನ್ನು ಉತ್ತಮ ದಾರಿಯಲ್ಲಿ ಬಳಸಿಕೊಳ್ಳಿ.’

‘ಈ ಪರೀಕ್ಷೆಯ ಸಮಯದಲ್ಲಿ ಸುದೀರ್ಘ ಸಮಯದ ಓದಿನ ಜತೆಗೆ ದೇಹಕ್ಕೆ ಅಗತ್ಯ ಪ್ರಮಾಣದ ವ್ಯಾಯಾಮ ಹಾಗೂ ವಿಶ್ರಾಂತಿಯನ್ನು ನೀಡಬೇಕಿದೆ.’

Leave a Reply