ಪದ್ಮಶ್ರೀ ಹೆಮ್ಮೆ-3: ಆರು ದಶಕಗಳಿಂದ ಕಲರಿಪಯಟ್ಟು ವಿದ್ಯೆ ಹೇಳಿಕೊಡುತ್ತಿದ್ದಾರೆ ಮೀನಾಕ್ಷಿ ಅಮ್ಮ!

ಡಿಜಿಟಲ್ ಕನ್ನಡ ಟೀಮ್:

ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳ ಸುದ್ದಿ ಅತಿಯಾಗುತ್ತಿರುವ ಕಾಲಘಟ್ಟದಲ್ಲಿ ಮಹಿಳೆ ಸ್ವರಕ್ಷಣೆಗೆ ಶಕ್ತಳಾಗಬೇಕೆಂಬ ಪರಿಕಲ್ಪನೆ ಗಟ್ಟಿಯಾಗುತ್ತಿದೆ. ಹಾಗಲ್ಲದೇ ಸುಮ್ಮನೇ ಯೋಚಿಸುವುದಾದರೂ ಕ್ಷಾತ್ರಗುಣವೇನು ಪುರುಷನಿಗೆ ಸೀಮಿತ ಅಂಶವೇನಲ್ಲವಲ್ಲ? ಕುಸ್ತಿ, ಸಮರಕಲೆಗಳಲ್ಲಿ ಹೆಣ್ಣು ಧೀರೋದ್ದಾತವಾಗಿ ಮಿನುಗಬಲ್ಲಳೆಂಬುದು ಅಂತಾರಾಷ್ಟ್ರೀಯ ವೇದಿಕೆಗಳಲ್ಲೇ ಸಾಬೀತಾಗಿದೆ. ಇಂಥ ಸಾಧನಾಗಾಥೆಗಳನ್ನು ದಂಗಲ್ ನಂಥ ಚಿತ್ರಗಳು ಮತ್ತಷ್ಟು ಜನಪ್ರಿಯವಾಗಿಸಿರುವುದೂ ಸ್ವಾಗತಾರ್ಹವೇ.

ಇಂಥ ಎಲ್ಲ ಪರಿಕಲ್ಪನೆಗಳನ್ನು ಆರು ದಶಕಗಳಿಂದ ಸಾಕಾರಗೊಳಿಸಿಕೊಂಡು ಬರುತ್ತಿರುವ ನಿಜ ನಾಯಕಿ ಎಂದರೆ ಕೇರಳದ ಮೀನಾಕ್ಷಿ ಅಮ್ಮ. ಕಲರಿಪಯಟ್ಟು ಎಂಬ ಸಮರಕಲೆಯನ್ನು ತಾವು ಕಲಿತಿದ್ದಲ್ಲದೇ ಮುಂದಿನ ಪೀಳಿಗೆಗೆ, ವಿಶೇಷವಾಗಿ ಮಹಿಳಾ ಬಲವರ್ಧನೆಗೆ ಧಾರೆಯೆರೆಯುತ್ತಿರುವ 74ರ ಹರೆಯದ ಇವರ ಸಾಧನಾಗಾಥೆಗೆ ನಾವೆಲ್ಲ ಹೆಮ್ಮೆ ಪಡಲೇಬೇಕು. ಭಾರತದ ಪುರಾತನ ಶಸ್ತ್ರಕಲೆ ಕಲರಿಪಯಟ್ಟನ್ನು ಸುದೀರ್ಘ 68 ವರ್ಷಗಳಿಂದ ದಿನ ನಿತ್ಯದ ಭಾಗವಾಗಿಸಿಕೊಂಡು ಬಂದಿರುವ ಮೀನಾಕ್ಷಿ ಅವರು, ಕಲರಿಪಯಟ್ಟು ವಿದ್ಯೆ ಅರಿತಿರುವ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಇವರ ಈ ಸುದೀರ್ಘ ಸಾಧನೆಗೆ ಈಗ ಪದ್ಮಶ್ರೀ ಗರಿ ಸೇರಿ ಹೊಸತೊಂದು ಕಳೆ ಕಟ್ಟಿದೆ.

ಹೆಣ್ಣು ಮಕ್ಕಳು ಮನೆಕೆಲಸಕ್ಕೆ ಮಾತ್ರ ಸೀಮಿತ ಎಂದು ನೋಡುವವರೇ ಹೆಚ್ಚಾಗಿರುವ ನಮ್ಮ ಸಮಾಜದಲ್ಲಿ ಮೀನಾಕ್ಷಿ ಅವರು ನಿಜಕ್ಕೂ ಸ್ಫೂರ್ತಿಯಾಗಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. ತಮ್ಮ 16ನೇ ವಯಸ್ಸಿಗೆ ಕಲರಿಪಯಟ್ಟು ವಿದ್ಯೆ ಕಲಿತ ಮೀನಾಕ್ಷಿ ಅವರು ನೀರು ಕುಡಿದಷ್ಟೇ ಸುಲಭವಾಗಿ ಕತ್ತಿವರಸೆಯಾಗಲಿ, ಕೋಲುವರಸೆ ಮಾಡಬಲ್ಲರು. ಕಲರಿಪಯಟ್ಟನ್ನು ತಮ್ಮ ದಿನನಿತ್ಯದ ಭಾಗವಾಗಿಸಿಕೊಂಡಿರುವ ಮೀನಾಕ್ಷಿ ಅವರು, ಇಳಿ ವಯಸ್ಸಿನಲ್ಲೂ ಮುಂದಿನ ಪೀಳಿಗೆಗೆ ತಮ್ಮ ವಿದ್ಯೆಯನ್ನು ಹಂಚುತ್ತಿದ್ದಾರೆ.

ಮೀನಾಕ್ಷಿ ಅವರ ತಂದೆ ಓರ್ವ ಕಲರಿಪಯಟ್ಟು ಪಟುವಾಗಿದ್ದರು. ಹೀಗಾಗಿ 6ನೇ ವಯಸ್ಸಿನಲ್ಲೇ ಕಲರಿ ವಿದ್ಯೆ ಕಲಿಯಲು ಆರಂಭಿಸಿದರು. ಮೀನಾಕ್ಷಿ ಅವರು ಕಲರಿ ಜತೆಗೆ ಜತೆಗೆ ಸಾಂಪ್ರದಾಯಿಕ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿರುವಾಗಲೇ ಕಲರಿಪಯಟ್ಟನ್ನು ಬಿಟ್ಟು ನೃತ್ಯದತ್ತ ಹೆಚ್ಚು ಗಮನ ಹರಿಸುವಂತೆ ಈಕೆಗೆ ಸಾಕಷ್ಟು ಮಂದಿ ಸಲಹೆ ನೀಡಿದರು. ಆದರೆ ಕಲರಿಯನ್ನು ತಮ್ಮ ರಕ್ತದ ಕಣಕಣಗಳಲ್ಲೂ ತುಂಬಿಸಿಕೊಂಡಿದ್ದ ಮೀನಾಕ್ಷಿ ಅವರು ಇದರಲ್ಲೇ ಮುಂದುವರಿದರು.

ಮೀನಾಕ್ಷಿ ಅವರ ಕಲರಿ ಬದುಕಿಗೆ ಮಹತ್ವದ ತಿರುವು ಸಿಕ್ಕಿದ್ದು ಅವರು 18ನೇ ವಯಸ್ಸಿನಲ್ಲಿದ್ದಾಗ. ತಮ್ಮ ತಂದೆಯ ನೆಚ್ಚಿನ ಶಿಷ್ಯರಾಗಿದ್ದ ರಾಘವನ್ ಅವರನ್ನು ವಿವಾಹವಾದ ಮೀನಾಕ್ಷಿ ಅವರು ಮುಂದೆ ತಮ್ಮ ಪತಿಯ ಜತೆ ಕಲರಿಪಯಟ್ಟು ವಿದ್ಯೆಯನ್ನು ಹೇಳಿ ಕೊಡಲು ಆರಂಭಿಸಿದರು. ಆನಂತರ ಮೀನಾಕ್ಷಿ ಅವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಇಂದಿಗೂ ಅವರ ಕಡತ್ನದನ್ ಕಲರಿ ಸಂಗಮ ಶಾಲೆಯಲ್ಲಿ ಪ್ರತಿ ವರ್ಷ 150 ವಿದ್ಯಾರ್ಥಿಗಳು ಈ ವಿದ್ಯೆ ಕಲಿತು ಹೊರಬರುತ್ತಾರೆ.

ಸದ್ಯ ಮೀನಾಕ್ಷಿ ಅವರ ಗರಡಿಯಲ್ಲಿ ಈ ವಿದ್ಯೆ ಕಲಿಯುತ್ತಿರುವವರ ಪೈಕಿ 6 ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳೇ ಹೆಚ್ಚು. ಈ ವಿದ್ಯೆ ಹೇಳಿ ಕೊಡಲು ಮೀನಾಕ್ಷಿ ಅವರು ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಬದಲಾಗಿ ತಮ್ಮ ವಿದ್ಯಾರ್ಥಿಗಳು ಕೊಟ್ಟ ಗುರು ದಕ್ಷಿಣೆಯನ್ನು ಮಾತ್ರ ಸ್ವೀಕರಿಸುತ್ತಾರೆ. ಈ ಗುರು ದಕ್ಷಿಣೆಯೇ ಇವರಿಗೆ ಪ್ರಮುಖ ಆದಾಯ. ಆರ್ಥಿಕ ಸಂಕಷ್ಟ ಎದುರಿಸಿದರೂ ತಮ್ಮ ವಿದ್ಯೆಯನ್ನು ಹೇಳಿ ಕೊಡಲು ಯಾವುದೇ ರೀತಿಯ ಹೆಚ್ಚಿನ ಹಣಕಾಸು ನಿರೀಕ್ಷಿಸಲು ಮೀನಾಕ್ಷಿ ಅವರು ಒಪ್ಪಲಿಲ್ಲ.

ಕಲರಿಪಯಟ್ಟು ವಿದ್ಯೆಯನ್ನು ಶಾಲೆ ಮಕ್ಕಳಿಗೆ ಹೇಳಿಕೊಡಬೇಕು. ಇದನ್ನು ಪಠ್ಯಕ್ರಮದ ಭಾಗವಾಗಿಸಬೇಕು ಎಂಬ ಮಹದಾಸೆ ಮೀನಾಕ್ಷಿ ಅವರದ್ದಾಗಿದೆ. ‘ಕಲರಿಪಯಟ್ಟು ವಿದ್ಯೆ ಔಷದವಿದ್ದಂತೆ. ದೈಹಿಕ ಕ್ಷಮತೆ ವೃದ್ಧಿಸುವುದರ ಜತೆಗೆ, ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹೆಣ್ಣಿನ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ಈ ಪರಿಸ್ಥಿತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಕಲರಿಪಯಟ್ಟು ವಿದ್ಯೆ ಉತ್ತಮ’ ಎಂಬುದು ಮೀನಾಕ್ಷಿ ಅವರ ಅಭಿಪ್ರಾಯ.

Leave a Reply