‘ಆತ್ಮಗೌರವಕ್ಕೆ ಧಕ್ಕೆ ಬಂದ ಜಾಗದಲ್ಲಿ ಇರುವುದು ಸೂಕ್ತವಲ್ಲ…’ ಇದು ಎಸ್.ಎಂ ಕೃಷ್ಣ ಅವರ ರಾಜಿನಾಮೆ ಹಿಂದಿನ ಕಾರಣ

ಡಿಜಿಟಲ್ ಕನ್ನಡ ಟೀಮ್:

‘ಆತ್ಮಗೌರವಕ್ಕೆ ಧಕ್ಕೆ ಬರುವ ಜಾಗದಲ್ಲಿ ಇರುವುದು ಸೂಕ್ತವಲ್ಲ… ಹಿರಿಯರಿಗೆ ಯಾವ ಪಕ್ಷ ಗೌರವ ನೀಡುವುದಿಲ್ಲವೋ ಆ ಪಕ್ಷಕ್ಕೆ ಭವಿಷ್ಯ ಇರುವುದಿಲ್ಲ. ಹೀಗಾಗಿ ನಾನು ನೋವಿನಿಂದ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಿದ್ದೇನೆ…’ ಇದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ತಮ್ಮ ರಾಜಿನಾಮೆ ನಿರ್ಧಾರಕ್ಕೆ ನೀಡಿದ ಸಮರ್ಥನೆ.

ಸುದೀರ್ಘ 46 ವರ್ಷಗಳ ಕಾಲ ರಾಜಕೀಯದಲ್ಲಿ ಭಾಗವಾಗಿ ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ, ರಾಜ್ಯಪಾಲರ ಜವಾಬ್ದಾರಿಯನ್ನು ನಿಭಾಯಿಸಿರುವ ಎಸ್.ಎಂ ಕೃಷ್ಣ ಅವರು ಕಾಂಗ್ರೆಸ್ ಪಕ್ಷವನ್ನು ಬಿಡುತ್ತಾರೆ ಎಂಬ ಸುದ್ದಿ ಶನಿವಾರ ದಟ್ಟವಾಗಿ ಹರಡಿತ್ತು. ಈ ನಿರ್ಧಾರದ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಪ್ರಕಟಿಸಿರುವ ಕೃಷ್ಣ ಅವರು, ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಸಿಗಬೇಕಿದ್ದ ಗೌರವ ಸಿಕ್ಕಿಲ್ಲ ಎಂಬ ಅಸಮಾಧಾನ ಹೊರ ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ, ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ತಮಗೆ ಆದ ಕಹಿ ಅನುಭವ ಹಾಗೂ ಈ ನಿರ್ಧಾರಕ್ಕೆ ಕಾರಣವಾದ ಅಂಶಗಳನ್ನು ಎಸ್.ಎಂ ಕೃಷ್ಣ ಅವರು ವಿವರಿಸಿದ್ದು ಹೀಗೆ…

‘2012ರಲ್ಲಿ ನನ್ನನ್ನು ವಿದೇಶಾಂಗ ವ್ಯವಹಾರಗಳ ಸಚಿವ ಸ್ಥಾನದಿಂದ ತೆಗೆದು ಹಾಕಿದರು. ಅವರ ನಿರ್ಧಾರಕ್ಕೆ ಏನು ಕಾರಣ ಎಂದು ಈವರೆಗೂ ಗೊತ್ತಿಲ್ಲ. ನನ್ನ ನಂತರ ಆ ಸ್ಥಾನಕ್ಕೆ ಬಂದವರು ಯಾವ ಮಹತ್ವದ ಸಾಧನೆ ಮಾಡಿದರು ಎಂಬುದೂ ನನಗೆ ಗೊತ್ತಿಲ್ಲ. ವಯಸ್ಸಾಗಿದೆ ಎಂಬ ಕಾರಣ ಕೊಟ್ಟು ನಿಷ್ಠಾವಂತ ಕಾರ್ಯಕರ್ತನನ್ನು ಮೂಲೆಗುಂಪು ಮಾಡುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲೂ ನಾನು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೆ. ಅವರು ನೇರವಾಗಿ ರಾಜ್ಯಸಭೆ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರೆ, ನಾನೇ ನನಗೆ ಇಚ್ಛೆ ಇಲ್ಲ ಎಂದು ಹೇಳಿ ಸುಮ್ಮನಾಗುತ್ತಿದ್ದೆ. ಆದರೆ, ನೇರವಾಗಿ ಹೇಳದೇ ನಾನು ಬೆಂಗಳೂರಿಗೆ ಆಗಮಿಸಿದ ಮೇಲೆ ಅವರ ನಿರ್ಧಾರ ಬದಲಾಯಿಸಿದ್ದು ಸೂಕ್ತವೆಂದು ಕಾಣಿಸಲಿಲ್ಲ. ಮನಸ್ಸಿಗೆ ತುಂಬಾ ಬೇಸರವಾಗಿದೆ. ಇದರಿಂದ ಹಿರಿತನಕ್ಕೆ ಸಿಕ್ಕ ಬೆಲೆ ಏನು ಎಂಬುದು ಗೊತ್ತಾಗುತ್ತದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ ನನ್ನನ್ನು ಈ ರೀತಿಯಾಗಿ ನಡೆಸಿಕೊಂಡಿರುವುದು ಸರಿಯಲ್ಲ. ಆತ್ಮ ಗೌರವಕ್ಕೆ ಚ್ಯುತಿ ಬಂದ ಜಾಗದಲ್ಲಿ ಇರುವುದು ಸೂಕ್ತವಲ್ಲ. ನಾನು ಎಂದಿಗೂ ಪಕ್ಷ ನಿಷ್ಠೆಯನ್ನು ಬಿಟ್ಟವನಲ್ಲ. ಯಾವ ಪಕ್ಷದಲ್ಲಿ ಹಿರಿಯರಿಗೆ ಬೆಲೆ ಕೊಡುವುದಿಲ್ಲವೋ ಆ ಪಕ್ಷಕ್ಕೆ ಭವಿಷ್ಯ ಇರುವುದಿಲ್ಲ. ಜನ ಸಮುದಾಯದ ನಾಯಕರು ಬೇಕೋ ಅಥವಾ ಬೇಡವೋ ಎಂಬ ಗೊಂದಲ ಕಾಂಗ್ರೆಸ್ ಪಕ್ಷದಲ್ಲಿ ಮನೆ ಮಾಡಿದೆ. ಪರಿಸ್ಥಿತಿಯನ್ನು ನಿಭಾಯಿಸುವ ಮ್ಯಾನೇಜರ್ ಗಳು ಸಿಕ್ಕರೆ ಸಾಕು ಮುನ್ನಡೆದುಕೊಂಡು ಹೋಗಬಹುದು ಎಂಬ ಮನಸ್ಥಿತಿಗೆ ಕಾಂಗ್ರೆಸ್ ಬಂದಿದೆ.’

ಹೀಗೆ ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದರು. ಇದಕ್ಕೂ ಮುನ್ನ ತಾವು ಸ್ವಯಂ ಶಕ್ತಿಯಿಂದ ರಾಜಕಾರಣದಲ್ಲಿ ಬೇರುರಿದ್ದಾಗಿ ಸ್ಪಷ್ಟನೆ ನೀಡಿದ ಅವರು, ‘1962ರಲ್ಲಿ ನಾನು ಅಮೆರಿಕಾದಿಂದ ಭಾರತಕ್ಕೆ ಮರಳಿದಾಗ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿತ್ತು. ಈ ಚುನಾವಣೆಯಲ್ಲಿ ನಾನು ಪ್ರಜಾ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದೆ. ಆಗ ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ನಾಯಕರ ವಿರುದ್ಧ ನಿಂತಿದ್ದೆ. ಆ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಸ್ವತಃ ನೆಹರೂ ಅವರೇ ಆಗಮಿಸಿದ್ದರು. ಆ ಸಂದರ್ಭದಲ್ಲೂ ನಾನು ನನ್ನ ಪರಿಶ್ರಮದಿಂದ ಹೋರಾಟ ಮಾಡಿ ಗೆಲವು ಸಾಧಿಸಿದ್ದೆ. ಈ ಮೂಲಕ ನಾನು ಯಾವುದೇ ಅಲೆಯಲ್ಲಿ ರಾಜಕಾರಣಕ್ಕೆ ಬಂದವನಲ್ಲ’ ಎಂದು ವಿವರಿಸಿದರು.

‘ಸುಮಾರು 40 ವರ್ಷಗಳಿಂದ ನೆಮ್ಮದಿಯಾಗಿ ವಾಸ ಮಾಡಿದ್ದ ಮನೆಯನ್ನು ಈಗ ಬಿಟ್ಟು ಹೋಗುವ ಸಂದರ್ಭ ಎದುರಾಗಿದೆ. ಹಿರಿಯರನ್ನೇ ಹಿಂಬಾಲಿಸಿ ಎಂದು ನಾನು ಹೇಳುವುದಿಲ್ಲ. ಆದರೆ ಹಿರಿತನಕ್ಕೆ ಸಿಗಬೇಕಾದ ಕನಿಷ್ಠ ಗೌರವ ಸಿಗಲೇಬೇಕು. ಆತ್ಮಗೌರವಕ್ಕೆ ಧಕ್ಕೆ ಬಂದ ಜಾಗದಲ್ಲಿ ಇರುವುದು ಸೂಕ್ತವಲ್ಲ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ಬಿಡಲು ನಿರ್ಧರಿಸಿದ್ದೇನೆ.’

‘ಕಾಂಗ್ರೆಸ್ ಪಕ್ಷದಲ್ಲಿ ನಾನು ಕಹಿ ಮತ್ತು ಸಿಹಿ ಎರಡೂ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಪಕ್ಷದಲ್ಲಿ ನನ್ನ ಯೋಗ್ಯತೆ ಆಧಾರದ ಮೇಲೆ ಹುದ್ದೆ ಸಿಕ್ಕಿತ್ತೇ ಹೊರತು ಯಾವುದೇ ಲಾಭಿಯಿಂದ ಅಧಿಕಾರ ಪಡೆದಿಲ್ಲ. ಕಾಂಗ್ರೆಸ್ ನಲ್ಲಿ ಇಂದಿರಾ ಗಾಂಧಿ ಅವರ ಜತೆಯಿಂದ ಇಲ್ಲಿಯವರೆಗೂ ಮೂರು ತಲೆಮಾರಿನ ನಾಯಕರ ಜತೆ ಕೆಲಸ ಮಾಡಿದ್ದೇನೆ. ನನಗೆ ಸೋನಿಯಾ ಗಾಂಧಿ ಅವರ ಮೇಲೆ ಗೌರವ ಇದೆ. ಅವರ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ನಿತ್ಯ ಪ್ರಾರ್ಥಿಸುತ್ತೇನೆ’ ಎಂದು ಹೇಳಿದರು.

ಪಕ್ಷದ ಹೈಕಮಾಂಡ್ ಬಗ್ಗೆ ಸುದ್ದಿಗಾರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ಪಕ್ಷ ಎಂದರೆ ನಾವು ಅದರ ಅಧ್ಯಕ್ಷರನ್ನು ನೋಡುತ್ತೇವೆಯೋ ಹೊರತು, ನಿನ್ನೆ ಮೊನ್ನೆ ಬಂದ ಉಪಾಧ್ಯಕ್ಷರು, ಕಾರ್ಯದರ್ಶಿಗಳನ್ನು ನೋಡುವುದಿಲ್ಲ ಎಂದು ಉತ್ತರಿಸುವ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿ ಅವರಿಗೆ ಟಾಂಗ್ ಕೊಟ್ಟರು.

ಇದೇ ವೇಳೆ ತಮ್ಮ ಈ ನಿರ್ಧಾರ ಕೇಂದ್ರದ ನಾಯಕರಿಗೆ ಸಂಬಂಧಿಸಿದ್ದೇ ಹೊರತು, ರಾಜ್ಯ ನಾಯಕರಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಕೇವಲ ನನ್ನ ನಿರ್ಧಾರವಾಗಿದ್ದು, ನನ್ನ ಜತೆ ಬನ್ನಿ ಎಂದು ಯಾರನ್ನು ಕರೆದಿಲ್ಲ. ನನ್ನ ಈ ನಿರ್ಧಾರ ಮರುಪರಿಶೀಲನೆ ಮಾಡುವ ಪ್ರಶ್ನೆಯೇ ಇಲ್ಲ ಎಂದ ಕೃಷ್ಣ ಅವರು, ತಮ್ಮ ಮುಂದಿನ ನಡೆ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ.

Leave a Reply