ಬಿಸಿಸಿಐಗೆ ಗುಹಾರನ್ನು ನೇಮಿಸಿದ ಸುಪ್ರೀಂ ನಿರ್ಧಾರದ ಬಗ್ಗೆ ವ್ಯಂಗ್ಯ, ಫೆ.1ರಿಂದ ಎಟಿಎಂ ಹಣ ಡ್ರಾ ಮಿತಿ ತೆರವುಗೊಳಿಸಿದ ಆರ್ಬಿಐ, ಅನ್ನಭಾಗ್ಯ: ಬಡವರಿಗೆ 8 ಕೆ.ಜಿ ಅಕ್ಕಿ ನೀಡಲು ನಿರ್ಧಾರ

ಹುತಾತ್ಮ ದಿನದ ಪ್ರಯುಕ್ತ ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಎಚ್.ಸಿ ಮಹದೇವ್ ಪ್ರಸಾದ್, ಟಿ.ಬಿ ಜಯಚಂದ್ರ, ರಮೇಶ್ ಕುಮಾರ್, ಎಚ್.ಆಂಜನೇಯ ಅವರು ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಿದರು.

ಡಿಜಿಟಲ್ ಕನ್ನಡ ಟೀಮ್:

ಬಿಸಿಸಿಐಗೆ ನೂತನ ಬಾಸ್ ವಿನೋದ್ ರಾಯ್

ಬಿಸಿಸಿಐ ಚುನಾವಣೆ ನಡೆದು ಹೊಸ ಆಡಳಿತ ಸಮಿತಿ ರಚನೆಯಾಗುವವರೆಗೂ ಮಂಡಳಿಯನ್ನು ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ತಾತ್ಕಾಲಿಕ ಆಡಳಿತ ಮಂಡಳಿಯನ್ನು ರಚಿಸಿದೆ. ಈ ಮಂಡಳಿಯಲ್ಲಿ ಮಾಡಿ ಸಿಎಜಿ ಅಧಿಕಾರಿಯಾಗಿದ್ದ ವಿನೋದ್ ರಾಯ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಳಿದಂತೆ ಹೆಸರಾಂತ ಇತಿಹಾಸಕಾರ ರಾಮಚಂದ್ರ ಗುಹಾ, ಮಾಜಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡಯಾನ ಎಡುಲ್ಜಿ ಹಾಗೂ ಐಡಿಎಫ್ ಸಿ ಅಧಿಕಾರಿ ವಿಕ್ರಮ್ ಲಿಮಯೆ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ. ಇನ್ನು ಕ್ರೀಡಾ ಸಚಿವಾಲಯದ ಕಾರ್ಯದರ್ಶಿಯನ್ನು ಮಂಡಳಿಯ ಸದಸ್ಯರನ್ನಾಗಿ ನೇಮಿಸಿ ಎಂಬ ಕೇಂದ್ರದ ಮನವಿಯನ್ನೂ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಹಳೇಯ ಆಡಳಿತ ಮಂಡಳಿಯಲ್ಲಿದ್ದ ಸದಸ್ಯರ ಅರ್ಹತೆಯನ್ನು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್, ಇತಿಹಾಸಕಾರ ರಾಮಚಂದ್ರ ಗುಹಾರನ್ನು ಯಾವ ಅರ್ಹತೆ ಆಧಾರದ ಮೇಲೆ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ ಮಾಡಿದೆ ಎಂಬ ಪ್ರಶ್ನೆಗಳು ಎದ್ದಿವೆ. ಈ ಆಯ್ಕೆನ್ನು ಪ್ರಶ್ನಿಸುವುದರ ಜತೆಗೆ ವ್ಯಂಗ್ಯಗಳು ವ್ಯಕ್ತವಾಗುತ್ತಿದೆ. ರಾಮಚಂದ್ರ ಗುಹಾರ ಆಯ್ಕೆಯನ್ನು ಟ್ವಿಟರ್ ನಲ್ಲಿ ಲೇವಡಿ ಮಾಡಿರುವ ಉದಾಹರಣೆಗಳು ಹೀಗಿವೆ…

ರಾಹುಲ್ ರೋಶನ್: ‘ಜಲ್ಲಿಕಟ್ಟು ನಂತರ ಈಗ ದಯವಿಟ್ಟು ಕ್ರಿಕೆಟ್ ಅನ್ನು ಉಳಿಸಿ…’

ನೇತಾ ಜೀ: ಇನ್ನು ಮುಂದೆ ರಾಮಚಂದ್ರ ಗುಹಾ ಅವರು ಹೊಸ ಪುಸ್ತಕಗಳನ್ನು ಬರೆಯಲಿದ್ದಾರೆ. ‘ಗುಹಾ ಪೂರ್ವ ಕ್ರಿಕೆಟ್ ಮತ್ತು ಗುಹಾ ನಂತರದ ಕ್ರಿಕೆಟ್’

ಅಂಕುರ್ ಸಿಂಗ್: ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಪ್ರಿಯಾಂಕ ಚತುರ್ವೇದಿ ಅವರನ್ನು ಆರ್ಬಿಐ ಗವರ್ನರ್ ಆಗಿ ನೇಮಿಸಿದರೆ ಯಾವುದೇ ಆಶ್ಚರ್ಯವಿಲ್ಲ.

ಸಾಗರ್: ಇನ್ನು ಮುಂದೆ ಭಾರತೀಯ ಕ್ರಿಕೆಟ್ ಆಟಗಾರರ ಹೆಲ್ಮೆಟ್ ಮೇಲೆ ಬಿಸಿಸಿಐ ಲೋಗೊ ಬದಲಿಗೆ ಜವಹಾರ್ ಲಾಲ್ ನೆಹರೂ ಲೋಗೊ ಹಾಕಲಾಗುತ್ತದೆ.

ದೃಶ್ಯಮಾನ್ ಸಾಹ: ಹಾಗಾದರೆ, ರಾಮಚಂದ್ರ ಗುಹಾ ಕ್ರಿಕೆಟ್ ಆಟಗಾರರೇ? ನನಗೆ ಗೊತ್ತೇ ಇರಲಿಲ್ಲ!

ಮೋನಿಕಾ ವರ್ಮಾ: ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಸಂಶೋಧನೆ ಮಾಡಿ ಪಿಎಚ್ಡಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ ಬೆನ್ನಲ್ಲೇ, ರಾಮಚಂದ್ರ ಗುಹಾ ಬಿಸಿಸಿಐ ಸದಸ್ಯ. ಎಂಥಾ ದುರಾದೃಷ್ಟಕರ!

ಎಟಿಎಂ ಹಣ ಡ್ರಾ ಮಿತಿ ಹಿಂಪಡೆದ ಆರ್ಬಿಐ

ನೋಟು ಅಮಾನ್ಯ ನಿರ್ಧಾರದ ನಂತರ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಳ್ಳಲು ಹೇರಲಾಗಿದ್ದ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಫೆ.1ರಿಂದ ಹಿಂಪಡೆಯುವುದಾಗಿ ತಿಳಿಸಿದೆ. ಚಾಲ್ತಿ ಖಾತೆ, ಕ್ಯಾಶ್ ಕ್ರೆಡಿಟ್ ಅಕೌಂಟ್ ಅಥವಾ ಓವರ್ ಡ್ರಾಫ್ಟ್ ಅಕೌಂಟ್ ನಿಂದ ದಿನಕ್ಕೆ ₹ 24 ಸಾವಿರ ಹಣ ಡ್ರಾ ಮಾಡಿಕೊಳ್ಳಬಹುದಾಗಿದೆ. ಇನ್ನು ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ಮತ್ತು ಚಾಲ್ತಿ ಖಾತೆಯಿಂದ ವಾರಕ್ಕೆ ₹ 1 ಲಕ್ಷ ವರೆಗೂ ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಇದನ್ನು ಹಾಗೇ ಮುಂದುವರಿಸಲು ಆರ್ಬಿಐ ನಿರ್ಧರಿಸಿದೆ. ಆದರೆ ಎಟಿಎಂ ಹಣ ಡ್ರಾ ಮಾಡುವ ಬಗ್ಗೆ ಬ್ಯಾಂಕುಗಳು ಮಿತಿ ಹೇರಬಹುದು ಎಂದು ಆರ್ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ..

ಅನ್ನಭಾಗ್ಯ ಬಡವರಿಗೆ ಇನ್ಮುಂದೆ 8 ಕೆ.ಜಿ ಅಕ್ಕಿ

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿದ್ದ 5 ಕೆ.ಜಿ ಅಕ್ಕಿಯನ್ನು 8 ಕೆ.ಜಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಕೇವಲ ಅಕ್ಕಿ ಮಾತ್ರವಲ್ಲದೇ ಪಡಿತರ ಅಂಗಡಿಗಳಲ್ಲಿ ಹೆಸರು ಕಾಳು, ಬಿಳಿ ಸೀಮೆ ಎಣ್ಣೆ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಹೇಳಿದಿಷ್ಟು, ‘ಇನ್ನು ಮುಂದೆ ಪ್ರತಿ ಕುಟುಂಬದಲ್ಲಿ ಮೂವರು ಸದಸ್ಯರಿದ್ದರೆ ಪ್ರತಿ ಯೂನಿಟ್ ಗೆ 3 ಕೆ.ಜಿ ಅಕ್ಕಿ ಹೆಚ್ಚಿಗೆ ನೀಡಲಾಗುವುದು. ಹೆಚ್ಚಿನ ಸದಸ್ಯರಿದ್ದರೆ ಇದರ ಪ್ರಮಾಣ ಕಡಿಮೆಯಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ ಮೊದಲ ವಾರದಲ್ಲಿ ಮಂಡಿಸಲಿರುವ ಬಜೆಟ್ ನಲ್ಲಿ ಅಕ್ಕಿ ಪ್ರಮಾಣದ ಹೆಚ್ಚಳ ಮತ್ತು ಯುನಿಟ್ ವಿವರಗಳನ್ನು ನೀಡಲಿದ್ದಾರೆ. ಏ.1ರಿಂದಲೇ ಈ ಹೊಸ ಪದ್ಧತಿ ಜಾರಿಗೆ ಬರಲಿದೆ. ಇನ್ನು ₹ 30ಕ್ಕೆ ಒಂದು ಕೆ.ಜಿ ಹೆಸರು ಕಾಳು ವಿತರಿಸಲಾಗುವುದು. ಅದೇ ರೀತಿ ಮುಂದಿನ ತಿಂಗಳು ತೊಗರಿಬೇಳೆ ವಿತರಿಸಲಾಗುವುದು. ಹೀಗೆ ಪ್ರತಿ ತಿಂಗಳು ಒಂದೊಂದು ಕೆ.ಜಿ ಪೌಷ್ಟಿಕಾಂಶವುಳ್ಳ ಕಾಳುಗಳನ್ನು ನೀಡಲಾಗುವುದು. ಇನ್ನು ಪಡಿತರ ಅಂಗಡಿಗಳಲ್ಲಿ ದೊರೆಯುತ್ತಿದ್ದ ಬಿಳಿ ಸೀಮೆ ಎಣ್ಣೆಯನ್ನು ಪ್ರತಿ ಲೀಟರ್ ಗೆ ₹ 17 ಬೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಲಾಗುವುದು.’

ಸೋನಿಯಾ ಯತ್ನ ವಿಫಲ

ಕಾಂಗ್ರೆಸ್ ಗೆ ವಿದಾಯ ಹೇಳಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮನವೊಲಿಸಿ ಪಕ್ಷಕ್ಕೆ ವಾಪಸ್ ಕರೆತರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪ್ರಯತ್ನ ವಿಫಲವಾಗಿದೆ. ಕೃಷ್ಣ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಕೇಂದ್ರಹಾಗೂ ರಾಜ್ಯದ ನಾಯಕರು ಮಾತುಕತೆ ನಡೆಸಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರೇ ಸೋಮವಾರ ಮಧ್ಯಾಹ್ನ ಕೃಷ್ಣ ಅವರಿಗೆ ಕರೆ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಕೃಷ್ಣ ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದು, ಸೋನಿಯಾ ಅವರ ಪ್ರಯತ್ನ ವಿಫಲವಾಗಿದೆ ಎಂದು ಮೂಲಗಳು ಮಾಹಿತಿ ಕೊಟ್ಟಿವೆ. ಇನ್ನು ಅಂತಿಮ ಪ್ರಯತ್ನವಾಗಿ ಪ್ರಿಯಾಂಕ ಗಾಂಧಿ ಅವರನ್ನು ಬೆಂಗಳೂರಿಗೆ ಕಳುಹಿಸಿ ಸಂಧಾನ ಮಾಡಲು ಕಾಂಗ್ರೆಸ್ ಹೈ ಕಮಾಂಡ್ ನಿರ್ಧರಿಸಿದ್ದಾರೆ ಎಂಬ ಮಾಹಿತಿಯೂ ಬಂದಿವೆ.

ಕೃಷ್ಣರನ್ನು ಪಕ್ಷಕ್ಕೆ ಕರೆತರುವ ಆಸಕ್ತಿ ಇಲ್ಲ: ದೇವೇಗೌಡ

ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನು ಜೆಡಿಎಸ್ ಗೆ ಕರೆತರುವ ಆಸಕ್ತಿ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೃಷ್ಣ ಅವರ ತಲೆಯಲ್ಲಿ ಏನಿದೆ ಅಂತಾ ನನಗೆ ಗೊತ್ತಿಲ್ಲ. ಪಕ್ಷ ತೊರೆಯಲು ಕಾರಣ ಏನು ಅಂತಾ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಯಾವುದೇ ವಿಚಾರ ಬಂದಿಲ್ಲ. ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನವನ್ನು ನೀಡುವುದಿಲ್ಲ’ ಎಂದಿದ್ದಾರೆ. ಇದೇ ವೇಳೆ ಮುಂಬರುವ ಚುನಾವಣೆಗಳಲ್ಲಿ ತಮ್ಮ ಕುಟುಂಬದಿಂದ ಭವಾನಿ ಅವರಾಗಲಿ ಅವರ ಪುತ್ರ ಪ್ರಜ್ವಲ್ ಅಥವಾ ನಿಖಿಲ್ ಗೌಡ ಆಗಲಿ ಸ್ಪರ್ಧಿಸುವುದಿಲ್ಲ. ಚುನಾವಣೆಗೆ ಬಿ ಫಾರಂ ಅನ್ನು ನಾನೇ ನೀಡುತ್ತೇನೆ ಎಂದು ಗೌಡ್ರು ತಿಳಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ದಾಳಿ

ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಯುಗಾದಿ ನಂತರ ದೊಡ್ಡ ಮಟ್ಟದಲ್ಲಿ ರಾಜ್ಯ ರಾಜಕೀಯ ಧ್ರುವೀಕರಣವಾಗಲಿದ್ದು ಕಾಂಗ್ರೆಸ್ ಪಕ್ಷ ಅರಬ್ಬಿ ಸಮುದ್ರದಲ್ಲೂ ಜಾಗ ಸಿಗದ ಪರಿಸ್ಥಿತಿ ಎದುರಿಸಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.

ಬಿಜೆಪಿಯ ಕಚೇರಿಯಲ್ಲಿ ನಡೆದ ಮಾಧ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಸಿ.ಟಿ ರವಿ, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಸುರೇಶ್ ಕುಮಾರ್ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ‘ಎಸ್.ಎಂ ಕೃಷ್ಣ ಅವರನ್ನು ಕೇವಲ ಮಂಡ್ಯ, ಮೈಸೂರು ಜಿಲ್ಲೆಯ ನಾಯಕ ಎಂದು ಕಾಂಗ್ರೆಸ್ ಕಡೆಗಣಿಸಿತ್ತು. ಆದರೆ ಅವರು ಇಡೀ ರಾಜ್ಯದ ನಾಯಕ. ಅವರನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಅವರು ಇಂದು ಪಕ್ಷ ತೊರೆದಿದ್ದಾರೆ. ಅಷ್ಟು ವರ್ಷ ಪಕ್ಷಕ್ಕಾಗಿ ದುಡಿದವರನ್ನೇ ನಿರ್ಲಕ್ಷಿಸಿರುವಾಗ ಕಾಂಗ್ರೆಸ್ ಜನಸಾಮಾನ್ಯರನ್ನು ನಿರ್ಲಕ್ಷಿಸದೇ ಇರುತ್ತದೆಯೇ? ಇನ್ನು ಮುಂದೆ ಕಾಂಗ್ರೆಸ್ ಕತೆ ಮುಗಿಯಿತು. ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದಂತೆ ಅರಬ್ಬಿ ಸಮುದ್ರದಲ್ಲೂ ಆ ಪಕ್ಷಕ್ಕೆ ಜಾಗ ಸಿಗುವುದಿಲ್ಲ’ ಎಂದು ಹೇಳಿದರು.

ಐವರು ಯೋಧರು ಹುತಾತ್ಮ

ಜಮ್ಮು ಕಾಶ್ಮೀರದ ಮಾಚಿಲ್ ಸೆಕ್ಟರ್ ನಲ್ಲಿ ಭಾರಿ ಹಿಮಪಾತದ ನಂತರ ರಕ್ಷಿಸಲಾಗಿದ್ದ ಐವರು ಯೋಧರು ಇಂದು ಮೃತಪಟ್ಟಿದ್ದಾರೆ. ಜ.28ರಂದು ಸಂಭವಿಸಿದ ಹಿಮಪಾತದಲ್ಲಿ ಈ ಐವರನ್ನು ರಕ್ಷಿಸಲಾಗಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಇವರನ್ನು ಶ್ರೀನಗರದ ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗಿರಲಿಲ್ಲ. ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಈ ಐವರೂ ಯೋಧರು ಇಂದು ಮೃತಪಟ್ಟಿದ್ದಾರೆ.

Leave a Reply