ಕಂಬಳ ಮೇಲಿನ ನಿಷೇಧ ತೆರವಿಗೆ ಹೈಕೋರ್ಟ್ ನಕಾರ, ವಿಶೇಷ ಶಾಸನ ರೂಪಿಸಲು ಮುಂದಾಗುವುದೇ ರಾಜ್ಯ ಸರ್ಕಾರ?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದ ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆ ಕಂಬಳ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ ಈ ಕುರಿತ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಕಂಬಳ ಕ್ರೀಡೆ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕೆಂಬ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ರಾಜ್ಯ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ ಮುಖರ್ಜಿ, ‘ಕಂಬಳ ಕ್ರೀಡೆಯಲ್ಲಿ ಕೋಣಗಳನ್ನು ಬಳಸಲಾಗುತ್ತಿದೆ. ಕೋಣಗಳು ಕ್ರೀಡೆಯಲ್ಲಿ ಭಾಗವಹಿಸುವಂತಹ ಪ್ರಾಣಿಯಲ್ಲ. ಬೇಕಾದರೆ ಕಂಬಳದಲ್ಲಿ ಕೋಣಗಳ ಬದಲು ಕುದುರೆಗಳನ್ನು ಬಳಸಿಕೊಳ್ಳಿ. ಹೀಗಾಗಿ ಕಂಬಳದ ಮೇಲಿನ ನಿಷೇಧವನ್ನು ಸದ್ಯಕ್ಕೆ ತೆರವು ಮಾಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಮುಂದಿನ ದಿನಗಳಲ್ಲಿ ನೀಡಲಿರುವ ತೀರ್ಪನ್ನು ಕಾದು ನೋಡಿ’ ಎಂದು ಸೂಚನೆ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕಂಬಳ ಮೇಲಿನ ನಿಷೇಧ ತೆರವು ಆಗ್ರಹಿಸಿ ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಮಧ್ಯ ಹೈ ಕೋರ್ಟ್ ನಿಷೇಧ ತೆರವಿಗೆ ನಿರಾಕರಿಸಿದೆ. ಇತ್ತ ರಾಜ್ಯ ಸರ್ಕಾರ ಕಂಬಳ ಕ್ರೀಡೆಯನ್ನು ಉಳಿಸಿಕೊಳ್ಳಲು ಸಂಪೂರ್ಣ ಬದ್ಧವಾಗಿದ್ದು, ಹೈಕೋರ್ಟ್ ತೀರ್ಪಿನ ನಂತರ ಯಾವ ರೀತಿಯ ಹೆಜ್ಜೆ ಇಡಬೇಕು ಎಂಬುದನ್ನು ನಿರ್ಧರಿಸಲಾಗುವುದು. ಅಗತ್ಯ ಬಿದ್ದರೆ ವಿಶೇಷ ಶಾಸನವನ್ನು ಜಾರಿಗೊಳಿಸುವ ಮೂಲಕ ಕಂಬಳವನ್ನು ಉಳಿಸಿಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಭರವಸೆ ನೀಡಿದ್ದರು. ಹೀಗಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

Leave a Reply