ಪದ್ಮಶ್ರೀ ಹೆಮ್ಮೆ- 4: ಟೀ ತೋಟದಲ್ಲಿ ಕೆಲಸ ಮಾಡುತ್ತಲೇ ಸುತ್ತಲಿನ ಇಪ್ಪತ್ತು ಹಳ್ಳಿಗಳಿಗೆ ಉಚಿತ ಬೈಕ್ ಆ್ಯಂಬುಲೆನ್ಸ್ ಸೇವೆ ಒದಗಿಸುವ ಕರಿಮುಲ್ ಹಕ್

ಡಿಜಿಟಲ್ ಕನ್ನಡ ಟೀಮ್:

ರಸ್ತೆ ಅಪಘಾತ ಸಂಭವಿಸಿದರೆ ಗಾಯಗೊಂಡ ವ್ಯಕ್ತಿಯ ನೆರವಿಗೆ ಧಾವಿಸುವ ಬದಲಿಗೆ ಮೊಬೈಲ್ ನಲ್ಲಿ ಆ ದೃಶ್ಯವನ್ನು ಸೆರೆ ಹಿಡಿಯುವವರು ಅಥವಾ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸುಮ್ಮನೆ ಹೋಗುವವರೇ ಹೆಚ್ಚಾಗಿರುವ ಪರಿಸ್ಥಿತಿಯಲ್ಲಿ ನಮಗೆ ಉದಾಹರಣೆಯಾಗಿ ನಿಲ್ಲಬಲ್ಲ ವ್ಯಕ್ತಿ ಪಶ್ಚಿಮ ಬಂಗಾಳದ ಕರಿಮುಲ್ ಹಕ್.

ಈ ಬಾರಿಯ ಪದ್ಮಶ್ರಿ ಪ್ರಶಸ್ತಿ ಗಳ ಪಟ್ಟಿಯಲ್ಲಿ, ಪಿ.ವಿ ಸಿಂಧು, ವಿರಾಟ್ ಕೊಹ್ಲಿ, ಪಿ.ಗೋಪಿಚಂದ್, ಸಾಕ್ಷಿ ಮಲಿಕ್ ರಂತಹ ಅನೇಕ ಖ್ಯಾತನಾಮರು ಹಾಗೂ ಕರ್ನಾಟಕದ ಸುಕ್ರಜ್ಜಿ, ಆಂಧ್ರದ ಮಲ್ಲೇಶಂ, ಪಂಜಾಬಿನ ಬಲ್ಬೀರ್ ಸಿಂಗ್, ಕೇರಳದ ಮೀನಾಕ್ಷಿ ಅಮ್ಮ ನಂತಹ ಸ್ಫೂರ್ತಿದಾಯಕ ಸಾಧಕರ ಜತೆ ಕರಿಮುಲ್ ಹಕ್ ಈ ಪ್ರತಿಷ್ಠಿತ ಗೌರವ ಪಡೆದಿದ್ದಾರೆ. ಹಾಗಾದರೆ ಇವರು ಮಾಡಿರುವ ಸಾಧನೆ ಏನು? ನಮ್ಮ ಸಮಾಜಕ್ಕೆ ಇವರು ಸ್ಫೂರ್ತಿಯಾಗಿ ನಿಲ್ಲುವುದೇಕೆ ಎಂಬುದನ್ನು ನೋಡೋಣ ಬನ್ನಿ.

ಕರಿಮುಲ್ ಹಕ್ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಧಲ್ಬರಿ ಎಂಬ ಗ್ರಾಮದಲ್ಲಿ ಟೀ ತೋಟದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ. ಇವರು ತಮ್ಮ ಕೆಲಸದ ಜತೆಗೆ ತಮ್ಮ ಸುತ್ತಮುತ್ತಲ ಹಳ್ಳಿಗೆ ಒಂದು ಸ್ಫೂರ್ತಿದಾಯಕ ವ್ಯಕ್ತಿಯೂ ಆಗಿದ್ದಾರೆ. ಕಾರಣ, ಇವರು ತಮ್ಮ ಬೈಕಿನಲ್ಲಿ ಸುತ್ತಮುತ್ತಲ 20 ಹಳ್ಳಿಗಳಿಗೆ ಉಚಿತ ಬೈಕ್ ಆ್ಯಂಬುಲೆನ್ಸ್ ಸೇವೆಯನ್ನು ನೀಡುತ್ತಿದ್ದಾರೆ.

ಕರಿಮುಲ್ ಅವರ ಈ ಸೇವೆಯ ಹಿಂದೆ ಒಂದು ನೋವಿನ ಕಾರಣವೂ ಇದೆ. ಅದೇನೆಂದರೆ, ಭಾರತದ ಇತರೆ ಹಳ್ಳಿಗಳಂತೆ ಇವರ ಹಳ್ಳಿಯೂ ಆಸ್ಪತ್ರೆ, ಆ್ಯಂಬುಲೆನ್ಸ್ ನಂತಹ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಒಮ್ಮೆ ಕರಿಮುಲ್ ಹಕ್ ಅವರ ತಾಯಿ ಜಫುರಾನ್ ನೆಸ್ಸಾ ಅವರು ಆರೋಗ್ಯ ಹದಗೆಡುತ್ತದೆ. ಅವರಿಗೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ದೊರೆಯದೇ ಅವರು ಪ್ರಾಣ ಬಿಡುತ್ತಾರೆ. ತಮ್ಮ ತಾಯಿ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದು, ಕರಿಮುಲ್ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು.

karimul-haque2

ನಂತರ ಟೀ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ತಮ್ಮೊಟ್ಟಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಅನಾರೋಗ್ಯದಿಂದ ಕುಸಿದು ಬಿದ್ದ. ಅಗತ್ಯ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಕರಿಮುಲ್ ಆ ವ್ಯಕ್ತಿಯನ್ನು ಬೈಕಿನಲ್ಲಿ ಕೂರಿಸಿ ತನಗೆ ಕಟ್ಟಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದರು. ಆನಂತರ ಆ ವ್ಯಕ್ತಿ ಚಿಕಿತ್ಸೆ ಪಡೆದು ಗುಣಮುಖರಾದರು.

ಈ ಘಟನೆಯ ನಂತರ ಇದೇ ರೀತಿಯ ಸೇವೆಯನ್ನು ಆರಂಭಿಸಲು ನಿರ್ಧರಿಸಿದ ಕರಿಮುಲ್ ಹಕ್, ಹೊಸತೊಂದು ಬೈಕ್ ಖರೀದಿಸಿ ಅದನ್ನು ಉಚಿತ ಬೈಕ್ ಆ್ಯಂಬುಲೆನ್ಸ್ ಸೇವೆಗೆ ಬಳಸಲು ಆರಂಭಿಸಿದರು. ಕೇವಲ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುವುದು ಮಾತ್ರವಲ್ಲ. ಸ್ಥಳೀಯ ವೈದ್ಯರಿಂದ ತರಬೇತಿ ಪಡೆದು ಪ್ರಾಥಮಿಕ ಚಿಕಿತ್ಸೆ ನೀಡುವುದನ್ನು ಕಲಿತಿರುವ ಕರಿಮುಲ್ ಹಕ್, ಅಗತ್ಯ ಸಂದರ್ಭದಲ್ಲಿ ತಾವೇ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ಕರೆದೊಯ್ಯುತ್ತಾರೆ.

ಟೀ ತೋಟದಲ್ಲಿ ದುಡಿದು ತಿಂಗಳಿಗೆ ₹ 4 ಸಾವಿರ ದುಡಿಯುವ ಕರಿಮುಲ್ ಹಕ್ ತನ್ನ ಸಂಪಾದನೆಯ ಶೇ.25 ರಷ್ಟನ್ನು ಪೆಟ್ರೋಲ್ ಗಾಗಿ, ಮತ್ತೆ ಶೇ.25 ರಷ್ಟನ್ನು ತನ್ನ ಬೈಕಿನ ಕಂತಿಗಾಗಿ ಮೀಸಲಿಟ್ಟಿದ್ದಾರೆ. ನಾಲ್ವರು ಮಕ್ಕಳ ತಂದೆಯಾಗಿರುವ 50 ವರ್ಷದ ಕರಿಮುಲ್ ಹಕ್ ತನ್ನ ಇಬ್ಬರೂ ಹೆಣ್ಣು ಮಕ್ಕಳಿಗೂ ಮದುವೆ ಮಾಡಿದ್ದಾರೆ. ಇನ್ನು ಉಳಿದ ಇಬ್ಬರು ಗಂಡು ಮಕ್ಕಳು ಮೊಬೈಲ್ ರಿಪೇರಿ ಮಾಡುವ ಕೆಲಸದಲ್ಲಿದ್ದಾರೆ. ಹೀಗಾಗಿ ಕರಿಮುಲ್ ತನ್ನ ಸಂಪಾದನೆಯನ್ನು ತಮ್ಮ ಸೇವೆಗೆ ಮುಡಿಪಾಗಿಡುತ್ತಾರೆ. ಇವರ ಈ ಸೇವೆಗೆ ಕುಟುಂಬ ಸದಸ್ಯರು ಪ್ರೋತ್ಸಾಹ ನೀಡುತ್ತಿದ್ದಾರೆ.

ತಮ್ಮ ಈ ಸೇವೆಗೆ ಯಾವುದೇ ರೀತಿಯ ಹಣ ಪಡೆಯದ ಬಗ್ಗೆ ಕರಿಮುಲ್, ‘ನನಗೆ ದುಡ್ಡು ಬೇಡ. ನನ್ನ ಈ ಸೇವೆಯಿಂದ ಭಗವಂತ ನನ್ನ ತಾಯಿಗೆ ಸ್ವರ್ಗದಲ್ಲಿ ಜಾಗ ಕೊಟ್ಟರೆ ಸಾಕು’ ಎಂದು ಹೇಳುತ್ತಾರೆ. ತಮ್ಮ ಹಳ್ಳಿಗಳಿಗೆ ಸುಸಜ್ಜಿತ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಬೇಕು ಎಂಬುದು ಕರಿಮುಲ್ ಅವರ ದೊಡ್ಡ ಬಯಕೆ.

Leave a Reply