‘ಇದು ಮುಸ್ಲಿಂ ಬ್ಯಾನ್ ಅಲ್ಲ’ ಎಂದು ವಲಸೆ ನೀತಿ ಸಮರ್ಥಿಸಿಕೊಂಡ ಟ್ರಂಪ್, ಪಾಕಿಸ್ತಾನದ ಮೇಲೂ ನಿಷೇಧ ಸಾಧ್ಯತೆ ಎನ್ನುತ್ತಿದೆ ಶ್ವೇತ ಭವನ

ಡಿಜಿಟಲ್ ಕನ್ನಡ ಟೀಮ್:

‘ನಾನು ಅಮೆರಿಕದಿಂದ ಇಡೀ ಮುಸ್ಲಿಂ ಸಮುದಾಯವನ್ನು ನಿಷೇಧಿಸಿಲ್ಲ… ಕೇವಲ ಉಗ್ರರ ಪ್ರಭಾವ ಹೆಚ್ಚಿರುವ ಏಳು ದೇಶಗಳ ಮೇಲೆ ಮಾತ್ರ ನಿಷೇಧ ಹೇರಿದ್ದೇನೆ…’ ಇದು ಅಮೆರಿಕದ ನೂತನ ವಲಸೆ ನೀತಿ ವಿರುದ್ಧ ಎದ್ದಿರುವ ಆಕ್ರೋಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಸಮರ್ಥನೆ. ಅಲ್ಲದೆ ಉಗ್ರರ ಆಶ್ರಯ ತಾಣವಾಗುತ್ತಿರುವ ಪಾಕಿಸ್ತಾನವನ್ನು ಭವಿಷ್ಯದಲ್ಲಿ ಈ ನಿಷೇಧ ರಾಷ್ಟ್ರಗಳ ಪಟ್ಟಿಗೆ ಸೇರಿಸುವ ಬಗ್ಗೆ ಶ್ವೇತ ಭವನ ಸೂಚನೆ ನೀಡಿದೆ.

ಕಳೆದ ಶುಕ್ರವಾರ ನೂತನ ವೆಟೊಗೆ ಸಹಿ ಹಾಕುವ ಮೂಲಕ ಟ್ರಂಪ್, ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ರಾಷ್ಟ್ರಗಳಿಂದ ಬರುವ ಪ್ರವಾಸಿಗರು ಹಾಗೂ ನಿರಾಶ್ರಿತರಿಗೆ ನಿಷೇಧ ಹೇರಿದ್ದರು. ಟ್ರಂಪ್ ಅವರ ಈ ನಿರ್ಧಾರಕ್ಕೆ ಅಮೆರಿಕ ಸೇರಿದಂತೆ ಜಗತ್ತಿನ ಇತರೆ ದೇಶಗಳಿಂದಲೂ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಈ ಎಲ್ಲ ಬೆಳವಣಿಗೆಗಳ ನಡುವೆ ಭಾನುವಾರ ಈ ನಿರ್ಧಾರವನ್ನು ಶ್ವೇತ ಭವನ ಸಮರ್ಥಿಸಿಕೊಂಡಿದೆ. ಈ ವಿಷಯದ ಬಗ್ಗೆ ಶ್ವೇತ ಭವನ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ನೀಡಿರುವ ಸ್ಪಷ್ಟನೆ ಹೀಗಿದೆ…

‘ಇದು ಅಮೆರಿಕದಿಂದ ಇಡೀ ಮುಸ್ಲಿಂ ಸಮುದಾಯವನ್ನು ನಿಷೇಧಿಸುವ ನಿರ್ಧಾರವಲ್ಲ. ಈ ಹಿಂದಿನ ಅಧ್ಯಕ್ಷರಾದ ಬರಾಕ್ ಒಬಾಮಾ ಅವರು 2011ರಲ್ಲಿ ಇರಾಕ್ ದೇಶದ ಪ್ರಜೆಗಳು ಹಾಗೂ ನಿರಾಶ್ರಿತರ ಮೇಲೆ ನಿಷೇಧ ಹೇರಿದ್ದ ಮಾದರಿಯಲ್ಲೇ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೆ ಈಗ ನಿಷೇಧ ಹೇರಲಾಗಿರುವ ಏಳು ಮುಸ್ಲಿಂ ರಾಷ್ಟ್ರಗಳು ಭಯೋತ್ಪಾದಕರ ಮೂಲ ಎಂದು ಒಬಾಮಾ ಅವರ ಆಡಳಿತ ಸರ್ಕಾರವೇ ಪಟ್ಟಿ ಮಾಡಿತ್ತು. ಈ ರಾಷ್ಟ್ರಗಳಲ್ಲಿ ಉಗ್ರರ ಚಟುವಟಿಕೆ ಹೆಚ್ಚಿದೆ ಎಂಬ ಕಾರಣಕ್ಕೆ ಒಬಾಮಾ ಅವರ ಸರ್ಕಾರ ಈ ಪಟ್ಟಿಯನ್ನು ಸಿದ್ಧ ಮಾಡಿತ್ತು. ಇವುಗಳ ಜತೆಗೆ ಪಾಕಿಸ್ತಾನ ಹಾಗೂ ಇತರೆ ರಾಷ್ಟ್ರಗಳಲ್ಲೂ ಭಯೋತ್ಪಾದಕ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಈ ರಾಷ್ಟ್ರಗಳ ಮೇಲೂ ನಿಷೇಧ ಹೇರುವ ಸಾಧ್ಯತೆ ಇದೆ.’

‘ಇದು ಮುಸ್ಲಿಮರನ್ನು ನಿಷೇಧಿಸುವ ನಿರ್ಧಾರವಲ್ಲ. ಮಾಧ್ಯಮಗಳು ತಪ್ಪು ವರದಿ ಮಾಡಿವೆ. ಇದು ಭಯೋತ್ಪಾದನೆಯ ವಿರುದ್ಧದ ನಿರ್ಧಾರವೇ ಹೊರತು ಧರ್ಮದ ವಿರುದ್ಧದ ನಿರ್ಧಾರವಲ್ಲ. ಈ ಏಳು ರಾಷ್ಟ್ರಗಳ ಹೊರತಾಗಿ ಜಗತ್ತಿನ ಉಳಿದ 40ಕ್ಕೂ ಹೆಚ್ಚು ಮುಸಲ್ಮಾನರನ್ನು ಹೊಂದಿರುವ ರಾಷ್ಟ್ರಗಳು ಈ ನಿರ್ಧಾರಕ್ಕೆ ಒಳಪಡುವುದಿಲ್ಲ.’

ಇನ್ನು ಅಮೆರಿಕದ ಕೆಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರತಿಭಟನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಈ ನಿರ್ಧಾರವನ್ನು ಹಿಂಪಡೆಯಲು ನಿರಾಕರಿಸಿರುವ ಟ್ರಂಪ್, ‘ಇಡೀ ಜಗತ್ತು ಭಯೋತ್ಪಾದನೆಯಿಂದಾಗಿ ನಲುಗುತ್ತಿದೆ. ಯುರೋಪ್ ರಾಷ್ಟ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಒಮ್ಮೆ ನೋಡಿ. ಹೀಗಾಗಿ ನಮ್ಮ ದೇಶಕ್ಕೆ ಕಠಿಣ ಗಡಿ ನೀತಿ ಹಾಗೂ ವೆಟೊ ಕಾನೂನು ಜಾರಿಯ ಅಗತ್ಯವಿದೆ’ ಎಂದು ಟ್ವೀಟ್ ಮಾಡಿದ್ದರು.

Leave a Reply