ಟ್ಯಾಕ್ಸ್ ಹೆವನ್ ದೇಶಗಳು ಎಂದರೇನು? ಇವುಗಳಿಂದ ಏನು ಪ್ರಯೋಜನ? ಇಂತಹ ಹಣಕಾಸು ವ್ಯವಸ್ಥೆ ಹುಟ್ಟಿಕೊಂಡದ್ದು ಹೇಗೆ?

authors-rangaswamyರಾಜಕೀಯವಾಗಿ ಮತ್ತು ಆರ್ಥಿಕ ಸ್ಥಿರತೆಯುಳ್ಳ ದೇಶ, ತನ್ನ ದೇಶದ ಪ್ರಜೆಯಲ್ಲದವನಿಗೆ ಯಾವುದೇ ಪ್ರಶ್ನೆ ಕೇಳದೆ ಆತನ ಹಣವನ್ನು ತನ್ನ ದೇಶದಲ್ಲಿ ಇಡಲು ಅನುಮತಿ ನೀಡುತ್ತದೆ. ಆತನನ್ನು ತನ್ನ ದೇಶದಲ್ಲಿ ವಾಸಿಸಬೇಕು ಆಥವಾ ವ್ಯಾಪಾರ ಮಾಡಬೇಕು ಎಂದು ಕೂಡ ಒತ್ತಾಯಿಸುವುದಿಲ್ಲ. ಅಲ್ಲದೆ ಆತನ ಬಗ್ಗೆಯ ಮಾಹಿತಿಯನ್ನು ಗೌಪ್ಯವಾಗಿ ಇಡುವುದಾಗಿ ಭರವಸೆ ಕೂಡ ನೀಡುತ್ತದೆ. ಇವೆಲ್ಲಕ್ಕೆ ಬದಲಾಗಿ ಒಂದಷ್ಟು ಹಣವನ್ನು ಸೇವಾ ಶುಲ್ಕದ ಮೂಲಕ ಪಡೆಯುತ್ತದೆ. ಹೀಗೆ ಈ ರೀತಿಯ ಸೇವೆಯನ್ನು ನೀಡುವ ದೇಶಗಳನ್ನು ಟ್ಯಾಕ್ಸ್ ಹೆವನ್ ದೇಶಗಳು ಏಂದು ಕರೆಯುತ್ತಾರೆ.

ಇದರಿಂದ ಏನು ಪ್ರಯೋಜನ?

ಇಂತಹ ದೇಶದಲ್ಲಿ ತನ್ನ ಹಣವನ್ನು ಇಟ್ಟಿರುವ ವ್ಯಕ್ತಿ ಅಥವಾ ಸಂಸ್ಥೆ ತನ್ನ ದೇಶದಲ್ಲಿ ಕಟ್ಟಬೇಕಾದ ತೆರಿಗೆಯ ಅಲ್ಪ ಭಾಗವನ್ನು ಸೇವಾಶುಲ್ಕ ಕೊಟ್ಟು ಹೆಚ್ಚಿನ ತೆರಿಗೆಯಿಂದ ಮುಕ್ತನಾಗಬಹುದು. ಸರಳವಾಗಿ ಹೇಳಬೇಕೆಂದರೆ ಟ್ಯಾಕ್ಸ್ haven ಅಂದರೆ ಟ್ಯಾಕ್ಸ್ evasion (ತೆರಿಗೆ ವಂಚನೆ). ಇದು ವ್ಯಕ್ತಿಗೆ ಅಥವಾ ಸಂಸ್ಥೆಗೆ ಆದ ಲಾಭ. ಇನ್ನು ಈ ರೀತಿಯ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗೆ ಇಂತಹ ಸೇವೆ ನೀಡಲು ಮುಂದಾಗುವ ದೇಶಗಳಿಗೆ ತಮ್ಮ ದೇಶದ ಅಭಿವೃದ್ಧಿಗೆ ಬೇಕಾದ ಬಂಡವಾಳ ದೊರಕುತ್ತದೆ. ಜೊತೆಗೆ ಸೇವಾ ಶುಲ್ಕದ ಹೆಸರಲ್ಲೂ ಒಂದಷ್ಟು ಹಣ ಹರಿದು ಬರುತ್ತದೆ.

ಅಮೆರಿಕಾದಲ್ಲಿ ಕಾರ್ಪೊರೇಟ್ ಟ್ಯಾಕ್ಸ್ 35 ಪ್ರತಿಶತವಿದೆ. ಹೀಗಾಗಿ ಆಪಲ್, ಸಿಸ್ಕೋ, ಮೈಕ್ರೋಸಾಫ್ಟ್, ಒರಾಕಲ್, ಅಲ್ಫಬೆಟ್ ಹೀಗೆ ಅನೇಕ ಕಂಪನಿಗಳು ತಮ್ಮ ಹಣವನ್ನು ಅಮೇರಿಕಾದಲ್ಲಿ ಇಡದೆ ಟ್ಯಾಕ್ಸ್ ಹವೆನ್ ದೇಶಗಳಲ್ಲಿ ಇಟ್ಟಿದ್ದಾರೆ.

ಅಂದೋರ, ಬಹಾಮಾಸ್, ಮಾರಿಷಸ್, isle of men, ಹಾಕಾಂಗ್, ಮೊನಾಕೊ, ಪನಾಮ, ಸೇಂಟ್ ಕಿಟ್ಸ್, ದುಬೈ, ಬಹರೈನ್, ಬರ್ಮುಡಾ, Luxembourg, ಸ್ವಿಸ್ಸೆರ್ಲ್ಯಾಂಡ್, Liechtenstein ಜಗತ್ತಿನ ಕೆಲವು ಮುಖ್ಯ ಟ್ಯಾಕ್ಸ್ ಹೆವನ್ ದೇಶಗಳು.

ಜಗತ್ತಿನ ವಿವಿಧ ಭಾಗಗಳಲ್ಲಿ ಆಗುವ ವಿದೇಶಿ ನೇರ ಹೂಡಿಕೆಗಳು (FDI) ಹರಿದು ಬರುವುದು ಟ್ಯಾಕ್ಸ್ ಹೆವನ್ ದೇಶಗಳ ಮೂಲಕವೇ ! ಈ ದಾರಿಯನ್ನು ಉಪಯೋಗಿಸಿ ಆದ ಕಾರ್ಪೊರೇಟ್ ತೆರಿಗೆ ವಂಚನೆ ಎಷ್ಟಿರಬಹದು? ಎನ್ನುವ ಅಂದಾಜು ಲೆಕ್ಕ ಕೂಡ ಕೊಡಲು ಯಾರು ಇನ್ನೂ ಮನಸ್ಸು ಮಾಡಿಲ್ಲ.!! ವೈಯಕ್ತಿಕ ತೆರಿಗೆ ವಂಚನೆಯ ಮೊತ್ತ ವರ್ಷ ಒಂದಕ್ಕೆ 800 ಬಿಲಿಯನ್ ಡಾಲರ್ ನಿಂದ 1 ಟ್ರಿಲಿಯನ್ ಡಾಲರ್ ಇರಬಹದು ಎನ್ನುತ್ತದೆ ಒಂದು ಅಂದಾಜು.

ಇಂತಹ ಹಣಕಾಸು ವ್ಯವಸ್ಥೆ ಹುಟ್ಟುಕೊಂಡಿದ್ದು ಹೇಗೆ?

ಟ್ಯಾಕ್ಸ್ ಅಥವಾ ತೆರಿಗೆ ಯಾವ ದಿನದಿಂದ ಶುರುವಾಯಿತು ಅಂದಿನಿಂದಲೇ ತೆರಿಗೆ ವಂಚನೆಯ ರೂಪುರೇಷೆ ಕೂಡ ಸಿದ್ದವಾಯಿತು ಎಂದು ನಿರ್ಭಿಡೆಯಿಂದ ಹೇಳಬಹದು. ಹಿಂದೆ ಹಣಕಾಸು ವ್ಯವಹಾರ ಕೆಲವೇ ಪ್ರಸಿದ್ಧ ಸಂಸ್ಥೆ ಮತ್ತು ವ್ಯಕ್ತಿಗಳ ಹಿಡಿತದಲ್ಲಿತ್ತು. ಒಂದು ಕೈಯಲ್ಲಿ ತೊಟ್ಟಿಲು ತೂಗುವುದು ಮತ್ತೊಂದು ಕೈಯಲ್ಲಿ ಮಗುವ ಜಿಗುಟುವ ಧನಿಕರ ಮನಸ್ಥಿತಿ ಇಂತಹ ಹಣಕಾಸು ವ್ಯವಸ್ಥೆ ಹುಟ್ಟಿಹಾಕಿತು. ಅಮೇರಿಕಾ ದೇಶದ ನ್ಯೂಜೆರ್ಸಿ ಮತ್ತು ಡೆಲಾವೇರ್ ರಾಜ್ಯಗಳನ್ನು ಇಂತದೊಂದು ವ್ಯವಸ್ಥೆಯ ಹುಟ್ಟಿಹಾಕಿದವರು ಎನ್ನಬಹದು. ಹಾಗೆ ನೋಡಲು ಹೋದರೆ ಜಗತ್ತಿನ ಟ್ಯಾಕ್ಸ್ ಹೆವನ್ ದೇಶಗಳ ಪಟ್ಟಿಯಲ್ಲಿ ಇವೆರಡು ಬರುವುದೇ ಇಲ್ಲ!! ಹಾಗಾದರೆ ಇವು ಟ್ಯಾಕ್ಸ್ ಹೆವನ್ ದೇಶಗಳು ಹೇಗಾದವು? ನಿಜ, ಇವು ಟ್ಯಾಕ್ಸ್ ಹೆವನ್ ರಾಜ್ಯಗಳಲ್ಲ.  ನ್ಯೂಯೋರ್ಕ್ ನ ಒಬ್ಬ ವಕೀಲ ಡೆಲ್ ಎನ್ನುವಾತ ‘ಈಜಿ ಇನ್ಕಾರ್ಪೋರೇಶನ್’  ಅಂದರೆ ಸುಲಭ ನೊಂದಾವಣಿ ಎನ್ನುವ ಒಂದು ಹೊಸ ಪರಿಕಲ್ಪನೆಯೊಂದಿಗೆ ನ್ಯೂಜೆರ್ಸಿಯ ಅಂದಿನ ಗವರ್ನರ್ ನನ್ನ ಭೇಟಿ ಮಾಡುತ್ತಾನೆ. ನ್ಯೂಜೆರ್ಸಿ ಅಂದಿನ ಸಮಯದಲ್ಲಿ ಅಂದರೆ 1880 ರಲ್ಲಿ ಹಣಕಾಸಿನ ಮುಗ್ಗಟ್ಟು ಎದುರಿಸುತಿತ್ತು. ಮಿಕ್ಕಿದ್ದು ಚರಿತ್ರೆ. ಟ್ಯಾಕ್ಸ್ ಹೆವನ್ ದೇಶಗಳು ಇಂದಿಗೂ ಪಾಲಿಸುತ್ತಿರುವುದು ಡೆಲ್ ನ ಸುಲಭ ನೋಂದಾವಣಿ ಪರಿಕಲ್ಪನೆಯನ್ನೇ. ರಗಳೆ, ಪ್ರಶ್ನಾವಳಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ, ಮೂಲ ಪ್ರದೇಶಕ್ಕಿಂತ ಅತಿ ಕಡಿಮೆ ತೆರಿಗೆ, ಗೌಪ್ಯತೆ ಇವು ಸುಲಭ ನೋಂದಾವಣಿಯ ವಿಶೇಷತೆಗಳು. ಇದನ್ನು ಇಂಗ್ಲೆಂಡ್ ಬಹು ಬೇಗ ತನ್ನದಾಗಿಸಿಕೊಂಡಿತು. 1929/30 ರಲ್ಲಿ ಆದ ಹಣಕಾಸು ಕುಸಿತದಿಂದ ಹೊರಬರುವ ದಾರಿ ಎಲ್ಲಾ ದೇಶಗಳು ಹುಡುಕುತ್ತಿದವು. ಸ್ವಿಸ್ 1934 ರಲ್ಲಿ ತನ್ನ ಹೊಸ ಬ್ಯಾಂಕಿಂಗ್ ನೀತಿಯಲ್ಲಿ ‘absolute silence in respect to a professional secret’ ಎನ್ನುವ ಹೊಸ ಪರಿಚ್ಚೇದ ಮಂಡಿಸುತ್ತದೆ. ಅಂದರೆ ಅರ್ಥ ಇಷ್ಟೇ ಯಾರು ಎಲ್ಲಿಂದ ಹೇಗಾದರೂ ಹಣ ತರಲಿ ಎಷ್ಟಾದರೂ ತರಲಿ ಅದನ್ನು ನಮ್ಮಲ್ಲಿ ಇಡಲಿ ಅದರ ಪರಿಪೂರ್ಣ ಜವಾಬ್ಧಾರಿ ನಮ್ಮದು. ಪರಿಪೂರ್ಣ ಗೌಪ್ಯತೆ ಕಾಯ್ದು ಕೊಳ್ಳಲಾಗುವುದು. ಎಷ್ಟರ ಮಟ್ಟಿಗೆ ಎಂದರೆ ಸ್ವಿಸ್ ದೇಶದ ಅಧಿಕಾರಸ್ಥ ರಾಜಕೀಯ ಪಕ್ಷಗಳಿಗೂ ತನ್ನ ಗ್ರಾಹಕನ ಪಟ್ಟಿ ನೀಡದಷ್ಟು! ಸ್ವಿಸ್ ಎಂದರೆ ಹಣಕಾಸು ಸಂಸ್ಥೆಗಳು.., ಬ್ಯಾಂಕ್ ಎನ್ನುವ ಮಟ್ಟಿಗೆ ಸ್ವಿಸ್ ಬೆಳದದ್ದು ತೆರಿಗೆ ವಂಚನೆಯಲ್ಲಿ ಸಹಾಯ ಮಾಡಿ.

ಇಂದಿಗೂ ಇವೆಲ್ಲಾ ಅಭಾದಿತವಾಗಿ ನಡೆಯುತ್ತಲೇ ಇದೆ. ಪನಾಮ ಲೀಕ್ಸ್ ನಲ್ಲಿ ಭಾರತದ ಒಂದಷ್ಟು ಜನರ ಹೆಸರು ಕೇಳಿಬಂದಷ್ಟೇ ವೇಗವಾಗಿ ಕರಗಿಯೂ ಹೋಯಿತು. ಜನ ಸಾಮಾನ್ಯ ಮಾತ್ರ ಇನ್ಕಮ್ ಟ್ಯಾಕ್ಸ್ ನೋಟೀಸ್ ಬಂದರೆ ಆಕಾಶವೇ ಕಳಚಿ ಬಿದ್ದಂತೆ ಒತ್ತಡಕ್ಕೆ ಒಳಗಾಗುವುದು ಕೂಡ ಗ್ಲೋಬಲ್.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

1 COMMENT

  1. ಅಲ್ಲ,ಸ್ವಸ್ ಬ್ಯಾಂಕ್ ನಲ್ಲಿರುವ ಹಣವನ್ನು ಡಿಜಿಟಲ್ ಕರೆನ್ಸಿ ಎಂದು ಕರೆಯಲಾಗುತ್ತದೆ. ಹಾಗೆಂದರೇನು?ಈಗ ನೋಟ್ ಬ್ಯಾನ್ ನಿಂದ ಸರಿಸುಮಾರು ಸಂಪೂರ್ಣ ಪ್ರಮಾಣದ ಹಣ ತಿರುಗಿ ಬ್ಯಾಂಕ್ ಗಳಿಗೆ ಬಂದಿದೆಯಲ್ಲ,ಅದು ಹೇಗೆ ಸಾದ್ಯ?ಅಂದರೆ ಬೇರೆ ದೇಶಗಳಲ್ಲಿ ನಮ್ಮವರು ಹಣವನ್ನೇ ಇಟ್ಟಿರಲಿಲ್ಲವೇ?

Leave a Reply