ಅಮೆರಿಕದಲ್ಲಿ ಟ್ರಂಪ್ ಸುದ್ದಿ ಮಾಡುತ್ತಿರುವ ಹೊತ್ತಲ್ಲಿ ಕೆನಡಾದಲ್ಲೊಬ್ಬ ಪ್ರತಿನಾಯಕ

ಡಿಜಿಟಲ್ ಕನ್ನಡ ಟೀಮ್:

ನೂತನ ವಲಸೆ ನೀತಿ ಮೂಲಕ ಏಳು ಮುಸ್ಲಿಂ ರಾಷ್ಟ್ರಗಳ ನಿರಾಶ್ರಿತರಿಗೆ ಡೊನಾಲ್ಡ್ ಟ್ರಂಪ್ ನಿಷೇಧ ಹೇರಿರುವ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ಈ ಸಂದರ್ಭದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೆವ್ ಮಾತ್ರ ವಿಶ್ವದ ಎಲ್ಲಾ ನಿರಾಶ್ರಿತರಿಗೂ ತಮ್ಮ ದೇಶಕ್ಕೆ ಬರುವಂತೆ ಆಹ್ವಾನ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಭಯೋತ್ಪಾದನೆ ನಿಗ್ರಹ, ನಿರಾಶ್ರಿತರ ಸಮಸ್ಯೆಗೆ ಪರಿಹಾರ, ದೇಶದಲ್ಲಿನ ಭದ್ರತೆ ಹೀಗೆ ಅನೇಕ ಕಾರಣಗಳನ್ನು ನೀಡುತ್ತಾ ಟ್ರಂಪ್ ತಮ್ಮ ನೂತನ ವಲಸೆ ನೀತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಟ್ರಂಪ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಂದರ್ಭದಲ್ಲೇ ತನ್ನ ಈ ನಿಲುವುಗಳನ್ನು ವ್ಯಕ್ತಪಡಿಸಿ ಟೀಕೆಯನ್ನು ಎದುರಿಸಿದ್ದರೂ ನಂತರ ಚುನಾವಣೆಯಲ್ಲಿ ಭರ್ಜರಿ ಜಯ ಸಂಪಾದಿಸಿ ಅಧಿಕಾರದ ಗದ್ದುಗೆ ಏರಿರುವುದು ಈಗ ಇತಿಹಾಸ. ಟ್ರಂಪ್ ನಿರಾಶ್ರಿತರನ್ನು ತಡೆಯುವ ನಿಲುವು ಎಷ್ಟರ ಮಟ್ಟಿಗೆ ಇದೆ ಎಂದರೆ, ನಿರಾಶ್ರಿತರನ್ನು ತಡೆಯಲು ಅಗತ್ಯ ಬಿದ್ದರೆ ಮೆಕ್ಸಿಕೊ ದೇಶದ ಗಡಿಯಲ್ಲಿ ಗೋಡೆಯನ್ನು ನಿರ್ಮಿಸಲು ಸಿದ್ಧ ಎಂದು ಟ್ರಂಪ್ ವಾದ ಮಂಡಿಸಿದ್ದರು. ಟ್ರಂಪ್ ಅವರ ಈ ನಿಲುವನ್ನು ಎಷ್ಟು ಜನ ವಿರೋಧಿಸುವವರು ಇದ್ದಾರೋ ಅದೇ ರೀತಿ ಬೆಂಬಲಿಸುವವರು ಇದ್ದಾರೆ.

ಈ ಪರಿಸ್ಥಿತಿಯ ನಡುವೆ ಅಮೆರಿಕದ ನೆರೆಯ ರಾಷ್ಟ್ರ ಕೆನಡಾ ಮಾತ್ರ ನಿರಾಶ್ರಿತರ ವಿಚಾರದಲ್ಲಿ ಸಂಪೂರ್ಣವಾಗಿ ಭಿನ್ನ ನಿಲುವು ತಾಳಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೆವ್, ‘ಯಾರೆಲ್ಲಾ ಭಯೋತ್ಪಾದನೆ, ಯುದ್ಧದಿಂದ ಬೇಸತ್ತಿದ್ದೀರಾ ಅವರಿಗೆಲ್ಲಾ ಕೆನಡಿಗರು ಸ್ವಾಗತಕೋರುತ್ತಾರೆ. ವಿವಿಧತೆ ನಮ್ಮ ದೇಶದ ಶಕ್ತಿಯಾಗಿದ್ದು, ನಮ್ಮ ರಾಷ್ಟ್ರಕ್ಕೆ ಆಗಮಿಸುವಂತೆ ನಿಮ್ಮೆಲ್ಲರಿಗೂ ಸ್ವಾಗತ ಕೋರುತ್ತೇನೆ’ ಎಂದು ಟ್ವೀಟ್ ಮೂಲಕ ಇಡೀ ವಿಶ್ವಕ್ಕೆ ಸಂದೇಶ ರವಾನಿಸಿದ್ದಾರೆ. ಕೇವಲ ಆಹ್ವಾನ ನೀಡುವುದಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಟ್ರಂಪ್ ಜತೆಗಿನ ಮಾತುಕತೆ ಸಂದರ್ಭದಲ್ಲಿ ವಲಸಿಗರು ಕೆನಡಾಕ್ಕೆ ಯಾವ ರೀತಿಯ ಕೊಡುಗೆ ನೀಡಿದ್ದಾರೆ ಹಾಗೂ ಅವರಿಂದಾಗಿರುವ ಸಕಾರಾತ್ಮಕ ಲಾಭದ ಬಗ್ಗೆ ವಿವರಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಈ ಇಬ್ಬರು ನಾಯಕರ ನಿಲುವು ಸಂಪೂರ್ಣವಾಗಿ ಭಿನ್ನವಾಗಿದ್ದು, ಇದರಲ್ಲಿ ಯಾರು ಸರಿ, ಯಾರು ತಪ್ಪು ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಆದರೆ ಜಾಗತಿಕ ಮಟ್ಟದಲ್ಲಿ ಈ ಇಬ್ಬರ ಧೋರಣೆಗಳು ಸಾಕಷ್ಟು ಗಮನ ಸೆಳೆದಿರುವುದಂತೂ ನಿಜ.

Leave a Reply