ಅಮೆರಿಕದ ಎಚ್-1ಬಿ ವೀಸಾ ಬಿಗಿ ನಿಯಮ ಭಾರತಕ್ಕೆ ಆಘಾತವೋ, ಅವಕಾಶವೋ?

 

ಡಿಜಿಟಲ್ ಕನ್ನಡ ವಿಶೇಷ:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಚುನಾವಣಾಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನೆಲ್ಲ ಯಾವುದೇ ವಿಳಂಬವಿಲ್ಲದೇ ಅನುಷ್ಠಾನಕ್ಕೆ ತರುತ್ತಿದ್ದಾರೆ. ವಿದೇಶದ ಅಗ್ಗದ ಕೆಲಸಗಾರರಿಂದ ಅಮೆರಿಕದಲ್ಲಿ ದೇಶೀಯರಿಗೆ ಉದ್ಯೋಗ ಕಡಿತವಾಗುವುದನ್ನು ನಿಲ್ಲಿಸುವ ವಾಗ್ದಾನ ಮಾಡಿದ್ದರು ಟ್ರಂಪ್. ಇದೀಗ ಅದರ ಕರಡು ಸಿದ್ಧವಾಗಿದೆ. ಈಗಿಂದ್ದೀಗೇ ಕಾರ್ಯಾಂಗ ಆದೇಶದ ಮೂಲಕ ಎಚ್-1ಬಿ ವೀಸಾ ನಿಯಮ ಬಿಗಿಗೊಳಿಸಿದರೂ ನಿಗದಿತ ದಿನಗಳ ಒಳಗೆ ಅದು ಅಲ್ಲಿನ ಸಂಸತ್ತಿನಲ್ಲಿ ಅಂಗೀಕಾರವಾಗಬೇಕು. ಸದ್ಯಕ್ಕೆ ಮಂಗಳವಾರ ಸುದ್ದಿಯಾಗಿರುವ ವೀಸಾ ಬಿಗಿ ನಿಯಮ ಕರಡಿನಲ್ಲಿರುವ ಮುಖ್ಯಾಂಶ ಎಂದರೆ ಎಚ್-1ಬಿ ವೀಸಾ ಮೇಲೆ ಅಲ್ಲಿನ ಕಂಪನಿಗಳು ಯಾರಿಗೇ ಕೆಲಸ ಕೊಟ್ಟರೂ ಅವರ ಕನಿಷ್ಠ ವೇತನ 1,30,00 ಡಾಲರುಗಳಾಗಗಿರಬೇಕು.

ಕರಡಿನ ಈ ಅಂಶ ಪ್ರಕಟವಾಗುತ್ತಲೇ ಇನ್ಫೊಸಿಸ್, ಟಿಸಿಎಸ್ ಸೇರಿದಂತೆ ಹಲವು ಭಾರತೀಯ ಕಂಪನಿಗಳ ಶೇರುಗಳು ನೆಲಕಚ್ಚಿವೆ. ಭಾರತದ ಐಟಿ ವಲಯಕ್ಕೆ ಭಾರಿ ಆಘಾತವನ್ನು ನೀಡಲಿರುವ ಕ್ರಮ ಇದು ಎಂದು ಬಣ್ಣಿಸಲಾಗುತ್ತಿದೆ. ಆದರೆ ಇನ್ನೊಂದೆಡೆ ಕೇಳಿಬರುತ್ತಿರುವ ವಾದ ಎಂದರೆ, ಉದ್ಯೋಗದ ದೃಷ್ಟಿಯಿಂದ ನೋಡಿದರೆ ಇದು ಆಘಾತವೇ ಆದರೂ, ಕೇವಲ ಅಮೆರಿಕಕ್ಕೆ ಅಗ್ಗದ ಕಾರ್ಮಿಕರನ್ನು ಒದಗಿಸಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದ ಭಾರತೀಯ ಐಟಿ ಕಂಪನಿಗಳು ಈಗ ಹೊಸದನ್ನು ಚಿಂತಿಸಬೇಕಾದ ಒತ್ತಡಕ್ಕೆ ಬೀಳಲಿರುವುದು ಒಳ್ಳೆಯದೇ ಆಗಲಿದೆ ಎನ್ನುವಂಥದ್ದು. ಸಂಕ್ಷಿಪ್ತವಾಗಿ ಹೇಳುವುದಾದರೆ- ತಂತ್ರಜ್ಞಾನದ ಕೋರ್ಸು ಮುಗಿಸಿ ಅಮೆರಿಕ ಸೇರಿಕೊಂಡುಬಿಡುತ್ತೇನೆ ಎಂದು ಯೋಚಿಸುತ್ತಿದ್ದ ಭಾರತದ ಪ್ರತಿಭಾವಂತ, ಬಿಗಿ ನಿಯಮದ ಕಾರಣದಿಂದ ಇಲ್ಲೇ ನವೋದ್ದಿಮೆ ಆರಂಭಿಸುವುದಕ್ಕೋ ಇಲ್ಲವೇ ಇನ್ಯಾವುದಾದರೂ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಲಿದೆ. ಇದು ದೀರ್ಘಾವಧಿಯಲ್ಲಿ ಭಾರತಕ್ಕೆ ಒಳಿತನ್ನೇ ಮಾಡೀತೇನೋ ಎಂಬ ಆಶಾಭಾವವೂ ಇದೆ.

ಇಷ್ಟಕ್ಕೂ ಎಚ್-1ಬಿ ವೀಸಾ ಭಾರತಕ್ಕೆ ಅದರಲ್ಲೂ ಐಟಿಗೆ ಏಕೆ ನಿರ್ಣಾಯಕ?

ತನ್ನ ಕಾರ್ಮಿಕ ಕೊರತೆ ನೀಗಿಸುವುದಕ್ಕೆ 1990ರಲ್ಲಿ ಈ ವೀಸಾ ರೂಪಿಸಿದ್ದ ಅಮೆರಿಕವು ಪ್ರತಿವರ್ಷ ಸುಮಾರು 65 ಸಾವಿರ ಎಚ್1ಬಿ ವೀಸಾ ಕೊಡುತ್ತಿತ್ತು. ಹೆಚ್ಚುವರಿಯಾಗಿ ಅಮೆರಿಕದಲ್ಲಿ ಉನ್ನತಾಭ್ಯಾಸ ಮಾಡಿದ ವಿದೇಶಿಯರಿಗೆ 20 ಸಾವಿರ ವೀಸಾ ನೀಡುತ್ತಿತ್ತು. ಇದನ್ನು ಅತಿಹೆಚ್ಚಾಗಿ ಬಳಸಿಕೊಂಡಿದ್ದು ಭಾರತದ ತಂತ್ರಜ್ಞಾನ ಕಂಪನಿಗಳು. 2016ರಲ್ಲಿ ಅಮೆರಿಕವು ವಿಶ್ವದಾದ್ಯಂತ ವಿತರಿಸಿದ್ದ ಎಚ್1ಬಿ ವೀಸಾ ಪೈಕಿ ಶೇ. 72ರಷ್ಟನ್ನು ಭಾರತೀಯರೇ ಬಳಸಿಕೊಂಡಿದ್ದರು!

ನಿಯಮ ಬದಲಾವಣೆಯಿಂದ ಆಗಲಿರುವ ಕಷ್ಟವೇನು?

ಎಚ್1ಬಿ ವೀಸಾದಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಇನ್ಫೊಸಿಸ್, ಟಾಟಾ ಕಂಪನಿಗಳ ಉದ್ಯೋಗಿಗಳು 65 ಸಾವಿರದಿಂದ 75 ಸಾವಿರ ಅಮೆರಿಕನ್ ಡಾಲರುಗಳ ಸಂಬಳ ಪಡೆಯುತ್ತಿದ್ದರು. ಈಗಿನ ಕರಡು ಮಸೂದೆ ಪ್ರಕಾರ ಇವರಿಗೆಲ್ಲ ದುಪ್ಪಟ್ಟು ವೇತನ ಕೊಡಬೇಕಾಗುತ್ತದೆ. ಏಕೆಂದರೆ ಕನಿಷ್ಠ ವೇತನವನ್ನೇ 1,30,000 ಡಾಲರುಗಳಿಗೆ ನಿಗದಿಪಡಿಸುವುದರಿಂದ, ಭಾರತೀಯರನ್ನು ಕೆಲಸದಲ್ಲಿಟ್ಟುಕೊಳ್ಳುವುದು ಅತಿ ದುಬಾರಿಯಾಗಿ ಅಮೆರಿಕನ್ನರಿಗೇ ಹೆಚ್ಚು ಉದ್ಯೋಗ ಕೊಡಬೇಕಾಗುತ್ತದೆ.

ಡೊನಾಲ್ಡ್ ಟ್ರಂಪ್ ಉದ್ದೇಶವೇನು?

ಎಚ್1ಬಿ ವೀಸಾದಲ್ಲಿರುವವರಿಗೆ ಕೊಡಬೇಕಾಗುವ ಸಂಬಳ ಅತಿಯಾಗುವುದರಿಂದ ಅಮೆರಿಕದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಕಂಪನಿಗಳಾಗಲೀ, ಅಮೆರಿಕ ಕಂಪನಿಗಳಾಗಲೀ ಅತಿ ಅವಶ್ಯ ಎನ್ನುವ ಉನ್ನತ ಕೌಶಲ್ಯದ ಹುದ್ದೆಗಳಿಗೆ ಮಾತ್ರ ಇಂಥವರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಉಳಿದಂತೆ ಅಮೆರಿಕನ್ನರಿಗೇ ಉದ್ಯೋಗ ನೀಡಬೇಕಾಗುತ್ತದೆ. ಟ್ರಂಪ್ ಹೇಳುತ್ತಿರುವುದು ಇದನ್ನೇ. ‘ಅಮೆರಿಕಕ್ಕೆ ವಲಸಿಗರು ಬೇಡ ಎಂದಲ್ಲ. ಆದರೆ ಅತಿ ಪ್ರತಿಭಾವಂತ ಹೊರಗಿನವರನ್ನು ಮಾತ್ರ ಹೀರಿಕೊಂಡು ಉಳಿದಂತೆ ಅಮೆರಿಕದ ಅಭ್ಯುದಯಕ್ಕೆ ಇಲ್ಲಿನ ಕೈಗಳಿಗೇ ಕೆಲಸ ಕೊಡುತ್ತೇವೆ’ ಅನ್ನೋದು.

ಅಶುಭದ ನಡುವಿನ ಆಶಾಭಾವವೇನು?

ಈ ಕರಡು ಮಸೂದೆ ಕಾಯ್ದೆಯಾಗಿದ್ದೇ ಆದಲ್ಲಿ ಅಮೆರಿಕದಲ್ಲಿ ಇನ್ಫೋಸಿಸ್ ಮತ್ತು ಟಿಸಿಎಸ್ ಗಳ ಕಾರ್ಯವೆಚ್ಚ ಅತಿಯಾಗಿ ಏರಲಿದೆ. ಏಕೆಂದರೆ ಇವು ಶೇ. 60ರಷ್ಟು ಎಚ್1ಬಿ ವೀಸಾದಾರರನ್ನೇ ಹೊಂದಿವೆ ಎಂಬ ಅಂದಾಜಿದೆ. ಹೀಗೆ ವೆಚ್ಚ ಹೆಚ್ಚಿ ಲಾಭದ ಪಾಲು ಕಡಿಮೆಯಾದಾಗ ಅವು ಅಮೆರಿಕದಿಂದ ಬಿಡಾರ ಕೀಳುವ ಯೋಚನೆಯನ್ನೂ ಮಾಡಬೇಕಾಗುತ್ತದೆ. ಹಾಗಾದಾಗ ಅವು ಸ್ವದೇಶದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತವೆಯೇ ಅಥವಾ ಇನ್ನೇನು ಮಾಡುತ್ತವೆ ಎಂಬುದರ ಮೇಲೆ ಭವಿಷ್ಯದ ಔದ್ಯೋಗಿಕ ಚಿತ್ರಣ ತೆರೆದುಕೊಳ್ಳುತ್ತದೆ. ಲಾಭ ಕಾಣಲಾಗದ ಕಂಪನಿಗಳು ಅಮೆರಿಕದಿಂದ ಹೊರಹೋಗುವ ನಿರ್ಧಾರ ತೆಗೆದುಕೊಂಡಲ್ಲಿ ಅದು ಉದ್ಯೋಗ ಉಳಿಸಿಕೊಳ್ಳಲು ಹೋದ ಟ್ರಂಪ್ ನಿರ್ಧಾರವನ್ನು ಮತ್ತೊಂದು ಬಗೆಯ ಆಘಾತದಿಂದ ಬುಡಮೇಲು ಮಾಡೀತು!

ಅಮೆರಿಕದಲ್ಲೇ ಉನ್ನತ ವ್ಯಾಸಂಗ ಮಾಡಿದರೂ ಎಚ್1ಬಿ ವೀಸಾ ಹೊಂದಿದ ಭಾರತೀಯ 1,30,000 ಡಾಲರುಗಳ ವೇತನಕ್ಕೇ ಕೆಲಸಕ್ಕೆ ಸೇರಬೇಕಾಗುತ್ತದೆ. ಎಲ್ಲರಿಗೂ ಇದು ಅಸಾಧ್ಯವಾದಾಗ ಅಂಥ ಪ್ರತಿಭೆಗಳು ಕೆಲಕಾಲ ಭಾರತಕ್ಕೆ ಹಿಂತಿರುಗಿ ಇಲ್ಲಿ ಉದ್ಯೋಗದ ಅನುಭವ ಗಳಿಸಿಕೊಂಡು ನಂತರ ಆ ಸಂಬಳಕ್ಕೆ ಅರ್ಹರೆನಿಸಿಕೊಳ್ಳಬೇಕಾಗುತ್ತಾದ್ದರಿಂದ ಇದೊಂದು ಬೇರೆಯದೇ ಬಗೆಯ ಉದ್ಯೋಗ ಸಮೀಕರಣವನ್ನು ಹುಟ್ಟುಹಾಕಲಿದೆ.

ಎಷ್ಟು ದಿನ ಅಂತ ಅಮೆರಿಕಕ್ಕೆ ಅಗ್ಗದ ಕೆಲಸಗಾರರನ್ನು ಒದಗಿಸಿ ವ್ಯಾಪಾರ ಮಾಡಿಕೊಂಡಿರ್ತೀರಿ? ನಿಮ್ಮ ಬಳಿ ನಿಮ್ಮದೂ ಅಂತ ಎಷ್ಟು ಪೇಟೆಂಟ್ ಇದೆ- ಇವೆಲ್ಲ ಭಾರತದ ಐಟಿ ಕಂಪನಿಗಳಿಗೆ ಆಗಾಗ ಸಲ್ಲುತ್ತಿದ್ದ ಟೀಕೆಗಳು. ಟ್ರಂಪ್ ಪರ್ವದ ವೀಸಾ ಬಿಗಿ ನಿಯಮ ಈ ಚಿತ್ರಣ ಬದಲಿಸುವುದಕ್ಕೆ ಮುನ್ನುಡಿ ಆದೀತೇ?

ಇಷ್ಟಕ್ಕೂ ಭಾರತದ ಐಟಿ ಉದ್ಯಮ ಪ್ರತಿಕ್ರಿಯಿಸುತ್ತಿರುವಂತೆ, ಕರಡಿನಲ್ಲಿರುವ ಒಂದಂಶವನ್ನು ಹಿಡಿದುಕೊಂಡು ಕೆಟ್ಟದ್ದೋ- ಒಳ್ಳೆಯದೋ ಹೇಳಲಾಗುವುದಿಲ್ಲ. ನಿಜಕ್ಕೂ ವೀಸಾ ನಿಯಮ ಬಿಗು ಯಾವ ಮಟ್ಟದ್ದು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ ಮಸೂದೆಯ ಎಲ್ಲ ಆಯಾಮಗಳು ಬೆಳಕಿಗೆ ಬರಬೇಕು.

ಹೀಗಾಗಿ ಟ್ರಂಪ್ ನಿರ್ಧಾರ ಭಾರತಕ್ಕೆ ಆಘಾತವೋ- ಅವಕಾಶವೋ ಅಂತ ಅಷ್ಟು ಸುಲಭದಲ್ಲಿ ನಿರ್ಧರಿಸಲಾಗದು.

Leave a Reply