ಗೃಹ ಬಂಧನದಲ್ಲಿ ಹಫೀಜ್ ಸೈಯದ್, ಇದು ಮೋದಿ- ಟ್ರಂಪ್ ಮಾತುಕತೆಯ ಪರಿಣಾಮ ಎಂದ ಉಗ್ರ

ಡಿಜಿಟಲ್ ಕನ್ನಡ ಟೀಮ್:

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಪರೋಕ್ಷವಾಗಿ ಅನುಕೂಲವೊಂದು ದೊರೆತಿದೆ. ಅದೇನೆಂದರೆ, 2008 ರ ಮುಂಬೈ ದಾಳಿಯ ರೂವಾರಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸೈಯದ್ ನನ್ನು ಸೋಮವಾರ ಪಾಕಿಸ್ತಾನ ಗೃಹ ಬಂಧನದಲ್ಲಿ ಇರಿಸಿದೆ.

ಹಫೀಜ್ ಸೈಯದ್ ಗೃಹ ಬಂಧನ ಡೊನಾಲ್ಡ್ ಟ್ರಂಪ್ ಅವರಿಂದ ಭಾರತಕ್ಕೆ ಆದ ಪರೋಕ್ಷ ಅನುಕೂಲ ಎಂದೇ ಪರಿಗಣಿಸಲಾಗುತ್ತಿದೆ. ಪಾಕಿಸ್ತಾನ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ವಾದಿಸಿದರೂ ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದರ ಜತೆಗೆ ಚೀನಾ ಸಹ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿತ್ತು. ಈ ಎಲ್ಲ ಪರಿಸ್ಥಿತಿಗಳ ನಡುವೆ ಈಗ ಪಾಕಿಸ್ತಾನ ಹಫೀದ್ ಸೈಯದ್ ವಿರುದ್ಧ ಗೃಹ ಬಂಧನದಲ್ಲಿ ಇಡುವಂತೆ ಒತ್ತಡ ನಿರ್ಮಾಣವಾಗಿರುವುದು ಭಾರತಕ್ಕೆ ಕೊಂಚ ನೆಮ್ಮದಿ ತಂದಿದೆ.

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡೊನಾಲ್ಡ್ ಟ್ರಂಪ್ ಭಯೋತ್ಪಾದನೆ ವಿರುದ್ಧ ಬಿಗಿ ನಿಲುವು ತಾಳುತ್ತಿರುವುದು ಪಾಕಿಸ್ತಾನಕ್ಕೆ ಚುರುಕು ಮುಟ್ಟಿರುವುದು ಈ ಮೂಲಕ ಸ್ಪಷ್ಟವಾಗುತ್ತಿದೆ. ಟ್ರಂಪ್ ಕಳೆದ ವಾರವಷ್ಟೇ ನೂತನ ವಲಸೆ ನೀತಿ ಜಾರಿ ಮಾಡುವ ಮೂಲಕ ಉಗ್ರರ ತಾಣವಾಗಿದ್ದ ಏಳು ಮುಸ್ಲಿಂ ರಾಷ್ಟ್ರಗಳ ಮೇಲೆ ನಿಷೇಧ ಹೇರಿತ್ತು. ಇದರ ಬೆನ್ನಲ್ಲೇ ಉಗ್ರರ ಚಟುವಟಿಕೆ ಕೇಂದ್ರವಾಗುತ್ತಿರುವ ಪಾಕಿಸ್ತಾನವೂ ಭವಿಷ್ಯದಲ್ಲಿ ಈ ನಿಷೇಧ ರಾಷ್ಟ್ರಗಳ ಪಟ್ಟಿಗೆ ಸೇರುವ ಸಾಧ್ಯತೆ ಇದೆ ಎಂದು ಶ್ವೇತ ಭವನ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಅಮೆರಿಕ ಏಕಾಏಕಿ ಈ ರೀತಿಯಾದ ಬಿಗಿ ನಿಲುವು ತಾಳುತ್ತಿದ್ದಂತೆ ಪಾಕಿಸ್ತಾನಕ್ಕೆ ಆತಂಕ ಎದುರಾಗಿದೆ. ಹೀಗಾಗಿ ತಾನೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತೋರಿಸಿಕೊಳ್ಳಲು ಹಫೀಜ್ ಸೈಯದ್ ನನ್ನು ಗೃಹ ಬಂಧನದಲ್ಲಿಡುವ ಪ್ರಹಸನ ನಡೆಸುತ್ತಿದೆ.

ಭಾರತ ಇಷ್ಟು ವರ್ಷಗಳಿಂದ ವಿಶ್ವಸಂಸ್ಥೆಯಲ್ಲಿ ಎಷ್ಟೇ ಧ್ವನಿ ಎತ್ತಿದರೂ ಯಾರೂ ಹಫೀಜ್ ಸೈಯದ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟ್ರಂಪ್ ಅವರ ಬಿಗಿ ನಿಲುವು ಹಫೀಜ್ ಸೈಯದ್ ನನ್ನು ಗೃಹ ಬಂಧಿನದಲ್ಲಿಡುವಂತೆ ಮಾಡಿರುವುದು ಭಾರತಕ್ಕೆ ಆಗಿರುವ ಪರೋಕ್ಷ ಅನುಕೂಲ.

ಹಫೀಜ್ ಸೈಯದ್ ಗೃಹ ಬಂಧನದ ಹಿಂದೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವೂ ಇದೆ… ಹೀಗೆಂದು ಸ್ವತಃ ಹಫೀಜ್ ಸೈಯದ್ ಹೇಳಿದ್ದಾನೆ. ಸೋಮವಾರ ಬಂಧನಕ್ಕೆ ಒಳಗಾಗುವ ಮುನ್ನ ಹಫೀಜ್ ಸೈಯದ್ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ‘ತನ್ನ ಈ ಪರಿಸ್ಥಿತಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಣ ಮಾತುಕತೆಯೇ ಕಾರಣ’ ಎಂದು ಹೇಳಿದ್ದಾನೆ.

ಇತ್ತೀಚೆಗೆ ಟ್ರಂಪ್ ಹಾಗೂ ಮೋದಿ ಅವರ ನಡುವಣ ದೂರವಾಣಿ ಮಾತುಕತೆ ವೇಳೆ, ‘ಭಯೋತ್ಪಾದನೆ ವಿರುದ್ಧ ಎರಡು ದೇಶಗಳು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಬದ್ಧ’ ಎಂದು ಉಭಯ ನಾಯಕರು ನಿರ್ಧರಿಸಿದ್ದರು. ಅದರ ಫಲಿತಾಂಶದ ಮೊದಲ ಭಾಗವಾಗಿ ಹಫೀಜ್ ಸೈಯದ್ ಗೃಹ ಬಂಧನ ಎಂದು ಹೇಳಲಾಗುತ್ತಿದೆ.

Leave a Reply