ಜಲ್ಲಿಕಟ್ಟು ಆಚರಣೆಯ ನೂತನ ಕಾನೂನಿಗೆ ಸುಪ್ರೀಂ ತಡೆ ಇಲ್ಲ , ಬಿಪಿಎಲ್ ಕಾರ್ಡುದಾರರಿಗೆ ಆಹಾರ ಬದಲು ಹಣ ಕೊಡ್ಬೇಡಿ ಅಂದ್ರು ಮುಮಂ, ಪೊಲೀಸ್ ಮಹಾನಿರ್ದೇಶಕರಾಗಿ ಆರ್.ಕೆ ದತ್ತ ಅಧಿಕಾರ ಸ್ವೀಕಾರ

ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಕೈ ವಾಕ್ ಹಾಗೂ ಖ್ಯಾತ ಕವಿ ದ.ರಾ ಬೇಂದ್ರ ಅವರ ಪ್ರತಿಮೆಯನ್ನು ಮಂಗಳವಾರ ಅನಾವರಣಗೊಳಿಸಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಬಿಬಿಎಂಪಿ ಮೇಯರ್ ಪದ್ಮಾವತಿ…

ಡಿಜಿಟಲ್ ಕನ್ನಡ ಟೀಮ್:

ಜಲ್ಲಿಕಟ್ಟಿಗೆ ಸುಪ್ರೀಂ ಅನುಮತಿ

ಜಲ್ಲಿಕಟ್ಟು ಆಚರಣೆಗಾಗಿ ತಮಿಳುನಾಡು ಸರ್ಕಾರ ರೂಪಿಸಿರುವ ನೂತನ ಕಾನೂನಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ ಈ ಕಾನೂನಿನ ವಿರುದ್ಧವಾಗಿ ಸಲ್ಲಿಸಲಾಗುವ ಅರ್ಜಿಯ ವಿಚಾರಣೆಯನ್ನು ನಡೆಸಲು ನ್ಯಾಯಾಲಯ ಒಪ್ಪಿಗೆ ನೀಡಿದೆ.

ಜಲ್ಲಿಕಟ್ಟು ಆಚರಣೆ ಪರವಾಗಿ ವ್ಯಾಪಕ ಪ್ರತಿಭಟನೆಗಳು ನಡೆದ ಪರಿಣಾಮ ತಮಿಳುನಾಡು ಸರ್ಕಾರ ಜ.23 ರಂದು ಈ ಆಚರಣೆಗೆ ಸಂಬಂಧಿಸಿದಂತೆ ಹೊಸ ಕಾನೂನನ್ನು ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಳೆದ ಬುಧವಾರ ಪ್ರಾಣಿ ಹಿತರಕ್ಷಣಾ ಮಂಡಳಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಈ ಕಾನೂನಿಗೆ ತಡೆ ನೀಡುವಂತೆ ಕೋರಿತ್ತು. ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ಕಾನೂನಿಗೆ ತಡೆ ನೀಡಲು ನಿರಾಕರಿಸಿದೆ. ಆ ಮೂಲಕ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಯನ್ನು ಮುಂದುವರಿಸಬಹುದಾಗಿದೆ. ಇನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಜಲ್ಲಿಕಟ್ಟು ಆಚರಣೆಗೆ ನೀಡಿದ್ದ ಅಧಿಸೂಚನೆಯನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ.

ಇನ್ನು ಜಲ್ಲಿಕಟ್ಟು ಆಚರಣೆಗೆ ಸಂಬಂಧಿಸಿದಂತೆ ಹೊಸದಾಗಿ ರಚಿಸಲಾಗಿರುವ ಕಾನೂನಿನ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಸ್ಪಷ್ಟನೆ ಕೇಳಿರುವ ಸುಪ್ರೀಂ ಕೋರ್ಟ್, ಈ ಬಗ್ಗೆ 6 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಇನ್ನು ಈ ವಿಚಾರವಾಗಿ ನಡೆದ ಪ್ರತಿಭಟನೆ ಹಾಗೂ ಕಾನೂನು ಸುವ್ಯವಸ್ಥೆ ಉಲ್ಲಂಘನೆಗಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಹಣ ಕೊಡಬೇಡಿ ಅಂದ್ರು ಸಿಎಂ

ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನೇ ಕೊಡಬೇಕೆ ಹೊರತು, ಯಾವುದೇ ಕಾರಣಕ್ಕೂ ಹಣ ಕೊಡಬೇಡಿ… ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ. ಫಲಾನುಭವಿಗಳು ಆಹಾರ ಧಾನ್ಯ ಅಥವಾ ಅದರ ಬದಲಾಗಿ ಹಣ ನೀಡುವ ಯೋಜನೆಗೆ ಈ ಇಲಾಖೆ ಮುಂದಾಗಿತ್ತು. ಇದಕ್ಕೆ ಸಾರ್ವಜನಿಕವಾಗಿಯೂ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಯನ್ನು ಕೈಬಿಡಿ ಎಂದು ಆದೇಶ ನೀಡಿದ್ದಾರೆ. ‘ಕರ್ನಾಟಕವನ್ನು ಹಸಿವು ಮುಕ್ತ ಮಾಡಲು ಬಿಪಿಎಲ್ ಕಾರ್ಡುದಾರರಿಗೆ ಉಚಿತ ಆಹಾರ ಧಾನ್ಯ ನೀಡಲು ಮುಂದಾಗಿದೆ. ಆ ಉದ್ದೇಶಕ್ಕೆ ಧಕ್ಕೆಯಾಗುವುದು ಬೇಡ’ ಎಂದರು.

ಡಿಸೆಂಬರ್ ಒಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿ

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ಡಿಸೆಂಬರ್ ಅಂತ್ಯದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು, ‘ಕೊಳವೆ ಬಾವಿ ಕೊರೆದು 3 ರಿಂದ 4 ವರ್ಷವಾದರೂ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ನೀರು ಉಳಿಯುವುದೇ? ಈ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಮಾರ್ಚ್ ಅಂತ್ಯದೊಳಗೆ ಕೊರೆದು ಅವುಗಳಿಗೆ ವಿದ್ಯುತ್ ಸಂಪರ್ಕ ನೀಡಿ’ ಎಂದು ಸೂಚಿಸಿದರು.

ನೂತನ ಪೊಲೀಸ್ ಮಹಾನಿರ್ದೇಶಕರಾಗಿ ರೂಪಕ್ ಕುಮಾರ್

ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ರೂಪಕ್ ಕುಮಾರ್ ದತ್ತ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಇಂದು ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಿರ್ಗಮಿತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ದತ್ತ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಉತ್ತರ ಪ್ರದೇಶ ಮೂಲದ ಆರ್.ಕೆ ದತ್ತ ಅವರು 1981ರಲ್ಲಿ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕ ಕೇಡರ್ ನಿಂದ ಆಯ್ಕೆಯಾಗಿದ್ದರು. ದಾವಣಗೆರೆ, ಉತ್ತರಕನ್ನಡ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಗುಪ್ತದಳದ ಡಿಐಜಿ, ಉತ್ತರ ವಲಯ, ಈಶಾನ್ಯ ವಲಯದ ಐಜಿಪಿ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಹಲವು ವಿಭಾಗಗಳಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ.

ಬಿಎಸ್ ವೈ ಸಂಧಾನ ಸೂತ್ರ ಅನುಸರಿಸದಿದ್ರೆ ಮತ್ತೆ ಈಶ್ವರಪ್ಪ ಕೈಲಿ ಬ್ರಿಗೆಡ್ ಬಾವುಟ

ರಾಜ್ಯ ಬಿಜೆಪಿಯಲ್ಲಿನ ಭಿನ್ನಮತಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆಯಾದರೂ ಅದು ತುಂಬಾ ದಿನ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಂಧಾನ ಸೂತ್ರದಂತೆ ಫೆಬ್ರವರಿ 10ರೊಳಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಪಕ್ಷದೊಳಗೆ ಮೇಜರ್ ಸರ್ಜರಿ ಮಾಡದಿದ್ದರೆ ಈಶ್ವರಪ್ಪನವರು ಮತ್ತೆ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಬಾವುಟ ಹಾರಿಸಲು ಮುಂದಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಫೆ.10ರೊಳಗೆ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪಟ್ಟಿಯನ್ನು ಬದಲಿಸಿ ವರದಿ ನೀಡುವಂತೆ ಅಮಿತ್ ಶಾ ನಾಲ್ಕು ಮಂದಿಯ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಯಡಿಯೂರಪ್ಪ, ಮುರಳೀಧರರಾವ್, ಸಂತೋಷ್ ಜೀ ಮತ್ತು ಅರುಣ್ ಕುಮಾರ್ ಇದ್ದಾರೆ. ಅಮಿತ್ ಶಾ ಅವರ ಸೂಚನೆಯಂತೆ ಎಲ್ಲವೂ ಸಾಗದಿದ್ದರೆ ಬ್ರಿಗೆಡ್ ಮುಂದುವರಿಯುವುದು ನಿಶ್ಚಿತ ಎಂದು ಈಶ್ವರಪ್ಪನವರು ಹೇಳಿಕೊಂಡಿರುವುದಾಗಿ ಮಾಹಿತಿಗಳು ಬಂದಿವೆ.

Leave a Reply