ಜೇಟ್ಲಿ ಬಜೆಟ್ ನಲ್ಲಿ ಯಾವುದಕ್ಕೆ ಸುಂಕ ಏರಿಕೆಯ ಕಹಿ- ಇಳಿಕೆಯ ಸಿಹಿ?

ಡಿಜಿಟಲ್ ಕನ್ನಡ ಟೀಮ್:

ಪ್ರತಿ ಬಾರಿ ಬಜೆಟ್ ಮಂಡನೆಯಾದಾಗಲೂ ಯಾವ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಹಾಕಲಾಗಿದೆ, ಯಾವ ಪದಾರ್ಥಗಳ ಮೇಲೆ ತೆರಿಗೆ ಕಡಿಮೆ ಮಾಡಲಾಗಿದೆ ಎಂಬುದು ಜನ ಸಾಮಾನ್ಯರ ಗಮನ ಸೆಳೆಯುತ್ತದೆ. ಈ ಬಾರಿ ಅರುಣ್ ಜೇಟ್ಲಿ ತಮ್ಮ ಬಜೆಟ್ ನಲ್ಲಿ ಯಾವುದರ ಮೇಲೆ ಸುಂಕದ ಬರೆ ಎಳೆದಿದ್ದಾರೆ, ಯಾವುದರ ಮೇಲೆ ತೆರಿಗೆ ಭಾರ ಕಡಿಮೆ ಮಾಡಿದ್ದಾರೆ ನೋಡೋಣ ಬನ್ನಿ…

ತೆರಿಗೆ ಏರಿಕೆ: ಕ್ಲಬ್ ಹಾಗೂ ಮನರಂಜನಾ ಸ್ಥಳ, ಸಿಗರೇಟು- ತಂಬಾಕು- ಪಾನ್ ಮಸಾಲ, ವಿಮಾನಯಾನ, ಐಶಾರಾಮಿ ರೆಸ್ಟೊರೆಂಟ್ ಊಟ, ಸ್ಮಾರ್ಟ್ ಫೋನ್ ಮತ್ತು ಮೊಬೈಲ್ ಬಿಲ್, ಆಮದು ಪದಾರ್ಥಗಳು, ಗೋಡಂಬಿ.

ತೆರಿಗೆ ಇಳಿಕೆ: ಸೌರಶಕ್ತಿ ಉಪಕರಣ, ಜೀವ ರಕ್ಷಕ ಔಷಧ, ರಾಸಾಯನಿಕ ಆಮ್ಲಗಳು, ಸಿಎನ್ಸಿ ಯಂತ್ರ, ಎಲ್ ಇಡಿ, ನೈಲಾನ್, ಎಟಿಎಂ- ಫಿಂಗರ್ ಪ್ರಿಂಟ್ ಸ್ಕ್ಯಾನರ್, ಇ ರೈಲ್ವೇ ಟಿಕೆಟ್, ಹಣ್ಣು ತರಕಾರಿ, ನೈಸರ್ಗಿಕ ಅನಿಲ, ನಿಕ್ಕೆಲ್ ಲೋಹ, ಜೈವಿಕ ಅನಿಲ ಯಂತ್ರ, ಎಲ್ ಇಡಿ ವಸ್ತುಗಳ ಉತ್ಪಾದನೆ.

ಇನ್ನು ಈ ಬಾರಿಯ ಬಜೆಟ್ ಕುರಿತಂತೆ ಸರ್ಕಾರ ಸಮರ್ಥನೆಗೆ ಮುಂದಾದರೆ, ವಿರೋಧ ಪಕ್ಷಗಳು ಟೀಕೆ ಮಾಡಿವೆ.

ಇನ್ನು ಬಜೆಟ್ ಮಂಡನೆಯಾದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಅರುಣ್ ಜೇಟ್ಲಿ ಅವರು ಅತ್ಯುತ್ತಮ ಬಜೆಟ್ ಮಂಡನೆ ಮಾಡುವ ಮೂಲಕ ಬಡವರ ಕೈಗೆ ಬಲ ತುಂಬಿದ್ದಾರೆ. ಎಲ್ಲ ಕ್ಷೇತ್ರಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಭ್ರಷ್ಟಾಚಾರ ಹಾಗೂ ಕಪ್ಪು ಹಣ ನಿರ್ಮೂಲನೆಗೆ ಸರ್ಕಾರದ ಬದ್ಧತೆ ಈ ಬಜೆಟ್ ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬದಲಾಗುತ್ತಿರುವ ನಮ್ಮ ದೇಶಕ್ಕೆ ಈ ಬಜೆಟ್ ಹಲವು ರೀತಿಯಲ್ಲಿ ನೆರವಾಗಲಿದೆ. ಗ್ರಾಮಗಳ ಅಭಿವೃದ್ಧಿ, ರೈತರ ಹಿತಾಸಕ್ತಿ, ಮಹಿಳೆಯರ ಸಬಲೀಕರಣ ಬಗ್ಗೆ ವಿಶೇಷ ಆದ್ಯತೆ ನೀಡಲಾಗಿದೆ’ ಎಂದು ಅಭಿಪ್ರಾಯಪಟ್ಟರು.

ವಿರೋಧ ಪಕ್ಷದ ಕಡೆಯಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಅರುಣ್ ಜೇಟ್ಲಿ ಅವರ ಬಜೆಟ್ ಮೇಲೆ ನಾವು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಆದರೆ ಹೇಳಿಕೊಳ್ಳುವಂತಹ ಯಾವುದೇ ಉತ್ತಮ ಅಂಶ ಸಿಗಲಿಲ್ಲ. ಜೇಟ್ಲಿ ಅವರ ಬಜೆಟ್ ಕೇವಲ ಕಾವ್ಯಮಯವಾಗಿತ್ತು. ಚುನಾವಣೆಗೂ ಮುನ್ನ ಸರ್ಕಾರ ಯಾವುದಾದರು ಬಂಪರ್ ಕೊಡುಗೆ ನೀಡಬಹುದಿತ್ತು. ಆದರೆ ರೈತರಿಗೆ ಯಾವುದೇ ಕೊಡುಗೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿರುವ ರೈಲ್ವೇ ಸುರಕ್ಷತೆ ಬಗ್ಗೆಯೂ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ. ಇದನ್ನು ಉತ್ತಮ ಬಜೆಟ್ ಎಂದು ಹೇಳಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

Leave a Reply