ತೆರಿಗೆ ವಿನಾಯಿತಿ, ಕೃಷಿ ಸಾಲಕ್ಕೆ ಹೆಚ್ಚಿನ ಅನುದಾನ, ಮೂಲಭೂತ ಸೌಕರ್ಯಕ್ಕೆ ಒತ್ತು… ಈ ಬಾರಿ ಬಜೆಟ್ ನ ಪ್ರಮುಖ ಅಂಶಗಳು

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಬಾರಿಯ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಮಂಡಿಸಿದ್ದಾರೆ. ನೋಟು ಅಮಾನ್ಯ ನಿರ್ಧಾರದ ನಂತರ ಜನರಿಗೆ ಸರ್ಕಾರ ಯಾವ ರೀತಿಯ ಉಡುಗೊರೆ ನೀಡಲಿದೆ ಎಂಬ ಕುತೂಹಲ ಮೂಡಿತ್ತು. ಆ ಪೈಕಿ ನಿರೀಕ್ಷೆಯಂತೆ ತೆರಿಗೆ ವಿನಾಯಿತಿ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಡಿಜಿಟಲ್ ವ್ಯವಸ್ಥೆ ಅಳವಡಿಕೆಗೆ ಒತ್ತು ನೀಡಲಾಗಿದೆ.

ಈ ಬಾರಿ ಸಾಮಾನ್ಯ ಹಾಗೂ ರೈಲ್ವೇ ಬಜೆಟ್ ಅನ್ನು ವಿಲೀನಗೊಳಿಸಲಾಗಿದೆ. ಬುಧವಾರ ಸಂಸತ್ತಿನ ಕಲಾಪದಲ್ಲಿ ನಿನ್ನೆ ರಾತ್ರಿ ನಿಧನರಾದ ಮಾಜಿ ಕೇಂದ್ರ ಸಚಿವ ಇ ಅಹ್ಮದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆ ನಂತರ ಕಲಾಪ ಮುಂದೂಡಲು ಪ್ರತಿಪಕ್ಷಗಳು ಒತ್ತಡ ಹಾಕಿದರೂ, ಅರುಣ್ ಜೇಟ್ಲಿ ತಮ್ಮ ನಾಲ್ಕನೇ ಬಜೆಟ್ ಮಂಡನೆ ಆರಂಭಿಸಿದರು. ಈ ಬಾರಿ ಬಜೆಟ್ ನಲ್ಲಿ ಯಾವ ಕ್ಷೇತ್ರಗಳಿಗೆ ಏನು ಸಿಕ್ಕಿದೆ ಎಂಬ ಪ್ರಮುಖ ಅಂಶಗಳು ಹೀಗಿವೆ…

ಆದಾಯ ತೆರಿಗೆ ಪ್ರಮಾಣದ ಬದಲಾವಣೆ:

 • ವಾರ್ಷಿಕ ಆದಾಯದ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ₹ 2.5 ಲಕ್ಷದಿಂದ ₹ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ.
 • ₹ 2.5 ಲಕ್ಷದಿಂದ ₹ 5 ಲಕ್ಷದವರೆಗೂ ಇದ್ದ ಶೇ.10 ರಷ್ಟು ತೆರಿಗೆ ಪ್ರಮಾಣವನ್ನು ಈಗ ಶೇ.5ಕ್ಕೆ ಇಳಿಸಲಾಗಿದೆ. ಉಳಿದಂತೆ ₹ 5 ಲಕ್ಷದಿಂದ ₹ 10 ಲಕ್ಷದ ವರೆಗೂ ಶೇ.20 ರಷ್ಟು, ₹ 10 ಲಕ್ಷಕ್ಕೂ ಹೆಚ್ಚು ಆದಾಯ ಇರುವವರಿಗೆ ₹ 30 ರಷ್ಟು ತೆರಿಗೆ ಪ್ರಮಾಣ ಮುಂದುವರಿಸಲಾಗಿದೆ.
 • ಇನ್ನು ₹ 50 ಲಕ್ಷದಿಂದ ₹ 1 ಕೋಟಿ ವರೆಗಿನ ಆದಾಯದ ಮೇಲೆ ಶೇ.10 ರಷ್ಟು ಸರ್ಜ್ ಚಾರ್ಜ್ (ತೆರಿಗೆ ಸುಂಕ), ಇನ್ನು ₹ 1 ಕೋಟಿಗೂ ಹೆಚ್ಚು ಆದಾಯ ಇರುವವರಿಗೆ ಶೇ.15 ರಷ್ಟು ಸರ್ಜ್ ಚಾರ್ಜ್ ಮುಂದುವರಿಕೆ.
 • ಸಣ್ಣ ಕಂಪನಿಗಳಿಗೆ ಶೇ.30 ರಿಂದ ಶೇ25 ರಷ್ಟು ತೆರಿಗೆ ವಿನಾಯಿತಿ.
 • ಎಲ್ಎನ್ ಜಿ ಮೇಲಿನ ಸುಂಕ ಶೇ.2.5ಕ್ಕೆ ಇಳಿಕೆ.

ಕೃಷಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು:

 • ರೈತರಿಗೆ ಸಾಲ ನೀಡಲು ₹ 10 ಲಕ್ಷ ಕೋಟಿ ಮೀಸಲು.
 • ರೈತರ ಕೃಷಿ ಸಾಲದ ಮೇಲಿನ ಬಡ್ಡಿ ವಿನಾಯಿತಿ 60 ದಿನಗಳಿಗೆ ವಿಸ್ತರಣೆ.
 • ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮಿನಿ ಲ್ಯಾಬ್.
 • ರೈತರ ಅಭಿವೃದ್ಧಿಗಾಗಿ ಮಣ್ಣಿನ ಕಾರ್ಡ್, ಬೆಳೆ ವಿಮೆಗೆ ₹ 9 ಸಾವಿರ ಕೋಟಿ ಮೀಸಲು.
 • ಹಾಲು ಉತ್ಪಾದನೆಗೆ ₹ 8 ಸಾವಿರ ಕೋಟಿ ನಿಧಿ ಸ್ಥಾಪನೆ.
 • ನೀರಾವರಿ ದೀರ್ಘಾವಧಿ ಯೋಜನೆಗೆ ₹ 20 ಸಾವಿರ ಕೋಟಿ ಮೀಸಲು.
 • ಹಳ್ಳಿಗಳಲ್ಲಿ 10 ಲಕ್ಷ ಕೆರೆ ನಿರ್ಮಾಣದ ಗುರಿ, ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಫಸಲು ಭೀಮಾ ಯೋಜನೆಗೆ ₹ 9 ಸಾವಿರ ಕೋಟಿ.
 • ಸಣ್ಣ ನೀರಾವರಿಗೆ ನಬಾರ್ಡ್ ನಿಂದ ಹಣ ಬಿಡುಗಡೆ.

ಮೂಲಭೂತ ಸೌಕರ್ಯ ವಲಯದ ಪ್ರಮುಖ ಅಂಶಗಳು:

 • 50 ಸಾವಿರ ಗ್ರಾಮ ಪಂಚಾಯ್ತಿಗಳನ್ನು ಬಡತನ ಮುಕ್ತ ಮಾಡಲು ನರೇಗಾ ಮೂಲಕ ಅನುದಾನ ಹೆಚ್ಚಳ.
 • 2018ರ ಮೇ ಒಳಗೆ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಪೂರ್ಣ. ವಿದ್ಯುತ್ ಯೋಜನೆಗಳಿಗೆ ₹ 45 ಸಾವಿರ ಕೋಟಿ ಮೀಸಲು.
 • ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ 1 ಕೋಟಿ ಮನೆ ನಿರ್ಮಾಣಕ್ಕೆ ₹ 27 ಸಾವಿರ ಕೋಟಿ. ಬಯಲು ಶೌಚ ಮುಕ್ತ ಮಾಡಲು ಅಪಾರ ದೀನ್ ದಯಾಳ್ ಉಪಾಧ್ಯಾಯ ಯೋಜನೆಯಡಿ ₹ 418 ಕೋಟಿ ಮಂಜೂರು.
 • ಗ್ರಾಮೀಣಾಭಿವೃದ್ಧಿ ಹಾಗೂ ರಸ್ತೆಗಳ ಅಭಿವೃದ್ಧಿಗೆ ₹ 3 ಲಕ್ಷ ಕೋಟಿ ಅನುದಾನ.
 • ಸಾರಿಗೆ ಕ್ಷೇತ್ರಕ್ಕೆ ₹ 2.41 ಕೋಟಿ ಅನುದಾನ, ಕರಾವಳಿ ಹೈವೇಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ.
 • ಸಣ್ಣ ನಗರಗಳಲ್ಲೂ ವಿಮಾನ ನಿಲ್ದಾಣ ನಿರ್ಮಾಣ. ವಿಮಾನ ನಿಲ್ದಾಣ ಪ್ರಾಧಿಕಾರದ ಜಾಗ ವಾಣಿಜ್ಯ ಉದ್ದೇಶಗಳಿಗೆ ಬಳಕೆ.
 • 2 ಸಾವಿರ ಕಿ.ಮೀ ಕರಾವಳಿ ಸಂಪರ್ಕಿಸುವ ರಸ್ತೆಗಳ ನಿರ್ಮಾಣ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಒತ್ತು.
 • 50 ಕೋಟಿ ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಯೋಜನೆಗೆ ₹ 10 ಸಾವಿರ ಕೋಟಿ ಮೀಸಲು. ಹಣಕಾಸು ಸಚಿವಾಲಯದಲ್ಲಿ ಸೈಬರ್ ಸೆಕ್ಯೂರಿಟಿಗೂ ಒತ್ತು.

ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಕಾಣಿಕೆ:

 • ಸಂಕಲ್ಪ ಯೋಜನೆ ಅಡಿಯಲ್ಲಿ ಜವಳಿಯಂತೆ ಚರ್ಮೋದ್ಯಮ ವಲಯದಲ್ಲೂ ಉದ್ಯೋಗ ಸೃಷ್ಟಿಗೆ ಒತ್ತು, ₹ 2 ಸಾವಿರ ಕೋಟಿ ಘೋಷಣೆ.
 • ಜವಳಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಯೋಜನೆ, ₹ 38,833 ಕೋಟಿಗಳಿಂದ ₹ 53 ಸಾವಿರ ಕೋಟಿಗೆ ಅನುದಾನ ಹೆಚ್ಚಳ.
 • ದೇಶದಲ್ಲಿ 2 ಹೊಸ ತೈಲಾಗಾರ ಸ್ಥಾಪನೆಗೆ ಯೋಜನೆ.
 • ಸರಕು ಸಾಗಾಣೆ ವಲಯದಲ್ಲಿ ಖಾಸಗೀಕರಣ.

ರೈಲ್ವೇ ಕ್ಷೇತ್ರಕ್ಕೆ ನೀಡಲಾದ ಒತ್ತು:

 • ಪ್ರಯಾಣಿಕರ ರಕ್ಷಾ ಕೋಶಕ್ಕೆ ‍₹ 1 ಲಕ್ಷ ಕೋಟಿ, ರೈಲ್ವೇ ಸುರಕ್ಷತೆಗೆ ₹ 1.31 ಕೋಟಿ ಮೀಸಲು.
 • 3500 ಕಿ.ಮಾ ಹೊಸ ರೈಲು ಮಾರ್ಗ. ತೇಜಸ್ ಎಕ್ಸ್ ಪ್ರೆಸ್ ಪ್ರಾರಂಭ.
 • 7 ಸಾವಿರ ರೈಲ್ವೇ ನಿಲ್ದಾಣಗಳಲ್ಲಿ ಸೈರ ಶಕ್ತಿ ವ್ಯವಸ್ಥೆ ಅಳವಡಿಕೆ.
 • ರೈಲಿನ ಎಲ್ಲಾ ಕೋಚ್ ಗಳಿಗೆ ಬಯೋ ಟಾಯ್ಲೆಟ್.
 • 2020ರ ವೇಳೆಗೆ ಮಾನವ ರಹಿತ ರೈಲ್ವೇ ಕ್ರಾಸಿಂಗ್ ವ್ಯವಸ್ಥೆ ನಿರ್ಮಾಣ.
 • ತೀರ್ಥಯಾತ್ರೆಗಳಿಗೆ ವಿಶೇಷ ರೈಲು, ನೂತನ ಮೆಟ್ರೊ ರೈಲು ನೀತಿ ಘೋಷಣೆ.
 • ನಗದು ರಹಿತ ಟಿಕೆಟ್ ಬುಕಿಂಗ್, ಇ ಟಿಕೆಟ್ ಗಳಿಗೆ ಸೇವಾ ಶುಲ್ಕ ರದ್ದು.
 • ರೈಲ್ವೇ ಮಾರ್ಗ ಅಭಿವೃದ್ಧಿಗೆ ₹ 1.31 ಲಕ್ಷ ಕೋಟಿ ಅನುದಾನ.
 • 25 ರೈಲ್ವೇ ನಿಲ್ದಾಣ ನವೀಕರಣ ಮತ್ತು ಅಭಿವೃದ್ಧಿ.

ಯುವಕರು, ಮಹಿಳೆಯರು, ವೃದ್ಧರಿಗೆ ಸರ್ಕಾರದ ಕೊಡುಗೆ:

 • ಸ್ತ್ರೀ ಸಬಲೀಕರಣಕ್ಕೆ ₹ 500 ಕೋಟಿ ಮೀಸಲು, ಮಹಿಳಾ ಶಕ್ತಿ ಕೇಂದ್ರ ಸ್ಥಾಪನೆ, 14 ಲಕ್ಷ ಅಂಗನವಾಡಿಗಳ ಸ್ಥಾಪನೆ, ಗ್ರಾಮೀಣ ಭಾಗಗಳಲ್ಲಿ ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ.
 • ಸ್ಕಿಲ್ ಇಂಡಿಯಾ ಯೋಜನೆ ಅಡಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಗಳನ್ನು 600 ಜಿಲ್ಲೆಗಳಿಗೆ ವಿಸ್ತರಣೆ. ವಿದೇಶದಲ್ಲಿ ಕೆಲಸ ಪಡೆಯಲು ಅನುಕೂಲವಾಗಲು 100 ಅಂತಾರಾಷ್ಟ್ರೀಯ ಕೌಶಲ್ಯ ಕೇಂದ್ರ ಸ್ಥಾಪನೆ.
 • ಶಾಲೆಗಳಲ್ಲಿ ಕಲಿಕೆಗೆ ಹೊಸ ಸುಧಾರಣೆ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಜಾರಿ, ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆ.
 • ಎಸ್ಸಿಎಸ್ಟಿ ನಿಧಿಯಲ್ಲಿ ಶೇ.35 ರಷ್ಟು ಹೆಚ್ಚಳ, ಮಹಿಳಾ ಕಲ್ಯಾಣಕ್ಕೆ ₹ 1.48 ಲಕ್ಷ ಕೋಟಿ ಹಣ ಮೀಸಲು.
 • ಹಿರಿಯ ನಾಗರೀಕರಿಗೆ ಆಧಾರ್ ಕಾರ್ಡ್ ಆಧಾರಿತ ಆರೋಗ್ಯ ಕಾರ್ಡ್, ಪಿಂಚಣಿ ಗ್ಯಾರೆಂಟಿ. ಹಿರಿಯರಿಗೆ ಎಲ್ಐಸಿ ವಿಶೇಷ ಯೋಜನೆ ಜಾರಿ.
 • ಗರ್ಭಿಣಿಯರಿಗೆ ₹ 6 ಸಾವಿರ ಹಣ ನೇರವಾಗಿ ಖಾತೆಗೆ ಜಮಾ.

ಬ್ಯಾಂಕಿಂಗ್ ಕ್ಷೇತ್ರ…

 • ಪಾರದರ್ಶಕ ನಗದು ವಹಿವಾಟು ನಡೆಸಲು ₹ 3 ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ.
 • ರಾಷ್ಟ್ರೀಯ ಬ್ಯಾಂಕುಗಳಿಗೆ ₹ 10 ಸಾವಿರ ಕೋಟಿ ಅನುದಾನ. ಪೇಮೆಂಟ್ ನಿಯಂತ್ರಣ ಮಂಡಳಿ ಸ್ಥಾಪನೆ. ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಡಿಜಿಟಲ್ ಪಾವತಿ ಕಡ್ಡಾಯ.
 • ಅಕ್ರಮ ಚಿಟ್ ಫಂಡ್ ಗಳಿಗೆ ಬ್ರೇಕ್ ಹಾಕಲು ಕಠಿಣ ಕ್ರಮ.
 • ದೇಶದಲ್ಲಿ 25 ಲಕ್ಷ ಜನರಿಂದ ಭೀಮ್ ಆ್ಯಪ್ ಬಳಕೆ. ಈ ಆ್ಯಪ್ ಬಳಕೆದಾರರಿಗೆ 2 ಹೊಸ ಯೋಜನೆ.
 • 2020ರ ಒಳಗಾಗಿ 20 ಲಕ್ಷ ಆಧಾರ್ ಕಾರ್ಡ್ ಆಧಾರಿತ ಸ್ವೈಪ್ ಮಷಿನ್ ನೀಡಿಕೆ.

ಶಿಕ್ಷಣ ಕ್ಷೇತ್ರ:

 • ಯುಜಿಸಿಯಲ್ಲಿ ಕೆಲವು ಸುಧಾರಣೆಗಳನ್ನು ಜಾರಿಗೆ ತಂದು ಹೆಚ್ಚು ಕಾಲೇಜುಗಳಿಗೆ ಸ್ವಾಯತ್ತತೆ ನೀಡಲು ನಿರ್ಧಾರ.
 • 5 ಸಾವಿರ ಹೆಚ್ಚುವರಿ ಮೆಡಿಕಲ್ಸ್ ಪಿಜಿ ಸೀಟುಗಳು.
 • ಎಲ್ಲಾ ಪರೀಕ್ಷೆಗಳಿಗೂ ಒಂದೇ ಪ್ರಾಧಿಕಾರ ಸ್ಥಾಪನೆ.

ಇತರೆ….

 • ರಕ್ಷಣಾ ವಲಯಕ್ಕೆ ₹ 2 ಲಕ್ಷ 74 ಸಾವಿರ ಕೋಟಿ ಮೀಸಲು.
 • ರಕ್ಷಣೆಗೆ ಸಂಬಂಧಿಸಿದ ವಿಜ್ಞಾನ ಸಚಿವಾಲಯಕ್ಕೆ ಅನುದಾನ.
 • ರಕ್ಷಣೆ ವಿಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ₹ 3.16 ಲಕ್ಷ ಕೋಟಿ.
 • ಲಲಿತ್ ಮೋದಿ ಮತ್ತು ವಿಜಯ್ ಮಲ್ಯರಂತಹವರ ವಿರುದ್ಧ ಕ್ರಮಕ್ಕೆ ಹೊಸ ಕಾನೂನು. ಸಾಲ ಮರುಪಾವತಿಸದಿದ್ದರೆ ಕಠಿಣ ಕ್ರಮ.
 • ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ್ ಲಭ್ಯ.
 • ರಾಜಕೀಯ ಪಕ್ಷಗಳಿಗೆ ₹ 2 ಸಾವಿರಕ್ಕಿಂತ ಹೆಚ್ಚು ದೇಣಿಗೆ ನೀಡಿದರೆ, ಅವರ ಮಾಹಿತಿ ಕಡ್ಡಾಯ. ₹ 2 ಸಾವಿರವರೆಗೂ ನಗದಿನ ಮೂಲಕ ದೇಣಿಗೆ ನೀಡಬಹುದು. ಅದಕ್ಕಿಂತ ಹೆಚ್ಚಿನ ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಮೂಲಕವೇ ಪಾವತಿ.

Leave a Reply