ಗಲಾಟೆ ಮಾಡುವುದರಿಂದ ಗೆಲುವು ಶತಸಿದ್ಧ ಎನ್ನುವುದಾದ್ರೆ ನ್ಯಾಯಕ್ಕೆ, ಸತ್ಯಕ್ಕೆ ಗೆಲುವು ಹೇಗೆ ಸಾಧ್ಯ?

author-geetha‘ಈ ವಾರ ಯಾವುದರ ಬಗ್ಗೆ ಬರೆಯುತ್ತೀರಿ?’

‘ಯಾಕೆ?… ಯಾವುದರ ಬಗ್ಗೆ ಬರೆಯಲಿ?’

‘ಕಳೆದ ವಾರ ತುಂಬಾ ಘಟನೆಗಳು ಸಂಭವಿಸಿವೆ. ನೀವು ಯಾವುದರ ಬಗ್ಗೆ ಬರೆಯುವಿರಿ ಅನ್ನೋ ಕುತೂಹಲ ಅಷ್ಟೇ…’

‘ನಿಜ… ಹಲವು ಘಟನೆಗಳು ಇವೆ… ನನ್ನ ಕಾಡುತ್ತಿವೆ. ಬಿಗ್ ಬಾಸ್ ನಲ್ಲಿ ಪ್ರಥಮ್ ಗೆದ್ದದ್ದು, ಪದ್ಮಾವತಿ ಸಿನಿಮಾ ಸೆಟ್ ನಲ್ಲಿ ಸಂಜಯ್ ಲೀಲಾ ಬನ್ಸಾಲಿಯವರನ್ನು ಹೊಡೆದದ್ದು, ಕನ್ನಡದಲ್ಲಿ ಬರುತ್ತೆ ಎಂದು ಟ್ರೈಲರ್ ತೋರಿಸಿದ ಸೀರಿಯಲ್ಲಲ್ಲಿ ಆ ನಾಯಕ ದೇವರ ಸನ್ನಿಧಿಯಲ್ಲಿ ಸಿಗರೇಟ್ ಸೇದಿದ, ಚಪ್ಪಲಿ ಹಾಕಿಕೊಂಡಿದ್ದ ಎಂದು ಆದ ಗಲಾಟೆ… ಅಮೆರಿಕದಲ್ಲಿ ಟ್ರಂಪ್ ವಿಸಾ ಕೊಡುವ ಮತ್ತು ಕೊಡದಿರುವ ಕಥೆ, ಜಲ್ಲಿಕಟ್ಟು ನಮ್ಮ ಸಂಸ್ಕೃತಿ ಅದನ್ನು ಬಿಡುವುದಕ್ಕೆ ಆಗುವುದಿಲ್ಲ ಎಂದು ಚೆನ್ನೈನಲ್ಲಿ ಆದ ಗಲಾಟೆ… ಅದಕ್ಕೆ ಬೆಂಬಲವಾಗಿ ನಮ್ಮ ಬೆಂಗಳೂರು, ಮೈಸೂರಿನಲ್ಲಿ ಕೂಡ Protest! ಕಂಬಳ ನಮ್ಮ ಸಂಸ್ಕೃತಿ ಎಂಬ ನೆನಪು… ಒಂದೇ ಎರಡೇ… ಸಂಸ್ಕೃತಿ ರಕ್ಷಣೆಗೆ ಟೊಂಕ ಕಟ್ಟಿರುವ ಯುವ ಜನರನ್ನು ನೋಡಿದರೆ ಗಾಬರಿಯೇ ಆಗುತ್ತದೆ.’

‘ಏನು ಬರೆಯುತ್ತೀರಿ?’

‘ಇದೆಲ್ಲದರ ಹಿಂದೆ ಒಂದೆಳೆ ಇದೆ. ಒಂದು ಭಾವನೆ ಇದೆ. ಅದು ಅಸಹನೆ ಅನ್ನಿಸುವುದಿಲ್ಲವೇ? ಎಲ್ಲದರಲ್ಲೂ ಸದಾ ತಪ್ಪು ಹುಡುಕುತ್ತಿರುತ್ತೇವೆ. ತಪ್ಪು ಹುಡುಕುವವರನ್ನು ಬೈಯ್ಯುತ್ತೇವೆ. ಕೆಟ್ಟ ಭಾಷೆಯಲ್ಲಿ ಮಾತನಾಡುವ ಅದಕ್ಕಿಂತ ಕೆಟ್ಟ ಮನಃಸ್ಥಿತಿಯ ಪ್ರಥಮನನ್ನು ಬೈಯ್ಯುತ್ತೇವೆ. ಆದರೆ ಅವನಿಗೆ ವೋಟ್ ಮಾಡಿ ಗೆಲ್ಲಿಸುತ್ತೇವೆ.

ಫಿಲ್ಟರ್ ಇಲ್ಲದೆ, ಮುಖವಾಡ ಇಲ್ಲದೆ ಇದ್ದಾನೆ… ತಪ್ಪು ಮಾಡಿದ್ದರೆ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಅವನು ಒಳ್ಳೆಯ ಹುಡುಗ… ಹೌದಾ ಅಷ್ಟೆಯೇ? ಬಾಯಿಗೆ ಬಂದ ಹಾಗೆ ಮಾತನಾಡಿ ಅಸಭ್ಯವಾಗಿ ನಡೆದುಕೊಂಡು ಜೋರು ಗಂಟಲಿನಲ್ಲಿ ಕಿರುಚಿ ಬೇಕಾದ್ದೆಲ್ಲಾ ಮಾಡಿ… ಕೊನೆಗೆ ಕ್ಷಮೆ ಕೇಳಿದರೆ ಆಯಿತೇ? ಒಂದು ಘನತೆ ಇರಬೇಕಲ್ಲವೇ? ಸಮಾಜದಲ್ಲಿ ಇರುವಾಗ ಒಂದು ರೀತಿಯ ನಡತೆ ಇರಬೇಕಲ್ಲವೇ? ನಾನು ತುಂಬಾ ಓಪನ್ನು, ಫ್ರ್ಯಾಂಕು, ನೇರ, ದಿಟ್ಟ… ಅಂತೆಲ್ಲಾ ಅಂದುಕೊಂಡು ಇನ್ನೊಬ್ಬರನ್ನು ನೊಯ್ಯಿಸುವುದು ಎಷ್ಟು ಸರಿ? ಹಾಗೆ ನೊಯ್ಯಿಸುವವರೇ, ಕನಿಷ್ಠ ಸಭಾಮರ್ಯಾದೆ ಕೂಡ ಕೊಡದವರು ಗೆದ್ದರೆ ಹೆದರಿಕೆಯಾಗುತ್ತದೆ.

ಮಿಸ್ಟರ್ ಅಂಡ್ ಮಿಸೆಸ್ ರಾಮಚಾರಿ ಸಿನಿಮಾದಲ್ಲಿ ಒಂದು ಸೀನ್ ಇದೆ. ಎಂಟತ್ತು ಜನ ರೌಡಿಗಳು ಮಾಲ್ ಒಂದರಲ್ಲಿ ದಾಂಧಲೆ ಎಬ್ಬಿಸುತ್ತಾ ಹುಡುಗಿಯರ ದುಪ್ಪಟ ಕಿತ್ತುಕೊಳ್ಳುತ್ತಿರುತ್ತಾರೆ. ನಾಯಕಿ ಎದುರಿಸಿ ನಿಂತಾಗ, ಎರಡನೇ ನಾಯಕ ಇಂತಹವರ ಸಹವಾಸ ಬೇಡ… ಪೊಲೀಸರಿಗೆ ಫೋನ್ ಮಾಡುವ ಎಂದಾಗ… 100 ಬೇಡ 108ಗೆ ಅಂದರೆ ಆ್ಯಂಬುಲೆನ್ಸ್ ಗೆ ಫೋನ್ ಮಾಡಿ ಎಂದು ಹೇಳುತ್ತಾ ನಾಯಕ ಬರುತ್ತಾನೆ. ರೌಡಿಗಳನ್ನು ಹಿಡಿದು ಚಚ್ಚುತ್ತಾನೆ. ಥಿಯೇಟರ್ ಭರ್ತಿ ಸಿಳ್ಳೆ ಚಪ್ಪಾಳೆ.

ಹಲವು ಚಿತ್ರಗಳಲ್ಲಿಯಂತೂ ನಾಯಕ ಸುಳ್ಳು ಹೇಳಿ ನಾಯಕಿಯನ್ನು ಮದುವೆಯಾಗುತ್ತಾನೆ… ಅಲ್ಲಿ ನಾಯಕ ಸುಳ್ಳು ಹೇಳಿ ನಾಯಕಿಯನ್ನು ಗಿಟ್ಟಿಸಿಕೊಂಡಾಗ ಸುಳ್ಳು ಹೇಳುವುದು ತಪ್ಪೇನಿಲ್ಲ ಎಂಬ ಕಲಿಕೆ ಆಗುತ್ತದೆ. ಅವನ ಫ್ಯಾನ್ ಗಳಿಗೆ ಕೊನೆಯ ಕ್ಷಮೆ ಕೇಳಿದನಲ್ಲ ಎಂಬ ಸಮಜಾಯಿಷಿ. ಅಂತಹವರನ್ನು ಬಿಂಬಿಸುವ, ಅದೇ ರೀತಿ ಬೇಜವಾಬ್ದಾರಿತನವನ್ನು ಬಿಗ್ ಬಾಸ್ ನಲ್ಲಿ ಪ್ರದರ್ಶಿಸಿದ ಪ್ರಥಮ್ ನನಗೆ ಹೆದರಿಕೆ ಹುಟ್ಟಿಸುತ್ತಾನೆ. ಅಷ್ಟೊಂದು ಮಂದಿ ಅವನಿಗೆ ಮತ ಕೊಟ್ಟು ಗೆಲ್ಲಿಸಿದನೆಂದರೆ ಅವನು ಅವರಿಗೆ ಐಡಿಯಲ್! ನಾವು ಸಾಗಿರುವ ದಾರಿಯ ಬಗ್ಗೆ ಹೆದರಿಕೆ ಹುಟ್ಟಿದೆ.

ಪ್ರಶ್ನಿಸಿದವರು ಹೊರಟು ಹೋಗಿದ್ದರು… ಯಾವುದೋ ಚಾನೆಲ್ಲಿನಲ್ಲಿ ಅವನ ಸಂದರ್ಶನ ಬರುತ್ತಲ್ಲಿದೆಯೇನೋ.

ಗೆದ್ದ ಅಷ್ಟು ಹಣವನ್ನು ಆತ ದಾನ ಮಾಡಿಬಿಟ್ಟ… He is great… ದುಡ್ಡು, Prize money was the end Means was unimportant… ಗೆಲವು, ಟ್ರೋಫಿ, ದುಡ್ಡು ಹಾದಿಯ ಕೊನೆ. ಗುರಿ ಹಾದಿಯಲ್ಲಿ ನಡೆದದ್ದು ಹೇಗೆ ಎನ್ನುವುದು ಮುಖ್ಯ. Journey is important than the goal.. ಗುರಿಗಿಂಥ ಸವೆಸಿದ ಹಾದಿ ಮುಖ್ಯ.

ಶಿಲ್ಪಾ ಶೆಟ್ಟಿ Big Brother ಗೆದ್ದಾಗಲೇ ಇಂತಹ ಒಂದು Show ಇದೆ ಅಂತಾ ಗೊತ್ತಾಗಿದ್ದು… ಅಲ್ಲಿ ಅವಳಿಗೆ ಅವಮಾನವಾಗಿತ್ತು. As usual ಅದು ನಮಗೆ ಅಂದರೆ ಭಾರತೀಯರಿಗೆ ಆದ ಅವಮಾನ ಎಂದು ಅವಳ ಹಿಂದೆ ನಿಂತು ಗೆಲ್ಲಿಸಿದ್ದು.

ಮಾತುಗಾರಿಕೆಗಿಂಥ, ಕೊಟ್ಟ ಟಾಸ್ಕ್ (ಕೆಲಸ!) ಅನ್ನು ಎಷ್ಟು ಚೆಂದಾಗಿ, ಜನರನ್ನು ರಂಜಿಸುತ್ತಾ ಮಾಡುತ್ತಾರೆ ಎನ್ನುವುದಕ್ಕಿಂಥ ಅವರ ವ್ಯಕ್ತಿತ್ವ ಎಂತಹುದು ಎನ್ನುವುದು ಮುಖ್ಯವಾಗಬೇಕಿತ್ತು. ದುಡ್ಡು ಕೊಟ್ಟು, ದಾನ ಮಾಡಿ… ಗ್ರೇಟ್ ಅನ್ನಿಸಿಕೊಳ್ಳುವವರು ಅದನ್ನು ಸಂಪಾದಿಸಿದ್ದು ಹೇಗೆ ಎನ್ನುವುದು ಮುಖ್ಯವಾಗಬೇಕು… ದುಡ್ಡು, ದಾನ, ಕೆಟ್ಟ ಮನಃಸ್ಥಿತಿಯನ್ನು ಮರೆಮಾಚುತ್ತದೆ ಎಂದಾದರೆ ನಾವು ಎಲ್ಲೊ ಎಡವಿದ್ದೇವೆ ಅನ್ನಿಸುತ್ತದೆ ಅಲ್ಲವೇ?

Authentic history ಅಂದರೆ ಏನು? ದಾಖಲೆಗಳು ಏನಿವೆ? ಬರೆದವರು ಯಾರು? History is written by winners ಅಂತಾರೆ… ಗೆದ್ದವರು ಇತಿಹಾಸ ಬರೆಯುತ್ತಾರೆ… ಸೋತವರ ಕಥೆ, ವ್ಯಥೆ ನಮಗೆ ಓದಲು ಸಿಗುವುದಿಲ್ಲ. ಬಾಯಿಂದ ಬಾಯಿಗೆ ಕಥೆ ದಾಟಿದಾಗ ಅದರ ಸ್ವರೂಪ ಬದಲಾಗುತ್ತದೆ. ಇತಿಹಾಸ Lore ಆಗಿಬಿಡುತ್ತದೆ. ನಾಯಕ ನಾಯಕಿಯರ ಅವಶ್ಯಕತೆ ಇರುವ ನಾವು ಅವರಿಗೆ ನಮಗೆ ಬೇಕಾದ ಬಣ್ಣ ಹಾಕುತ್ತೇವೆ. ನಾಯಕ ವಿರಾಧಿವೀರನಾಗುತ್ತಾನೆ. ನಾಯಕಿ ತ್ರಿಲೋಕ ಸುಂದರಿಯಾಗುತ್ತಾಳೆ… ಬಣ್ಣ, ರೂಪ, ಗುಣ ಎಲ್ಲಾ ನಮಗೆ ಬೇಕಾದಂತೆ History becomes fiction.

Sholay ಚಿತ್ರದಲ್ಲಿ ಖಳನಾಯಕ… ನಾಯಕನನ್ನು ಮೀರಿಸಿದ. ಖಳನಾಯಕ ಇಷ್ಟವಾದ, ಖಳನೇ ನಾಯಕನಾದರೆ ಚೆಂದವೆನ್ನಿಸಿ ಆ ಬಗೆಯ ಹಲವು ಚಿತ್ರಗಳು ಎಲ್ಲಾ ಭಾಷೆಗಳಲ್ಲಿ ಬಂದವು. ಡಾ. ರಾಜಕುಮಾರ್ ಅವರ ಹಿರಣ್ಯಕಶಿಪು ಪಾತ್ರ ಮರೆಯುವುದು ಹೇಗೆ? ಹಿರಣ್ಯಕಶಿಪು ಇಷ್ಟವಾಗಿ ಬಿಟ್ಟ ನಮಗೆ… ರಾವಣ, ದುರ್ಯೋಧನನ ಪಾತ್ರಗಳಲ್ಲಿ ನಾಯಕ ನಟ ಅಭಿನಯಿಸಿದರೆ ಆ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆದರೆ ಖಳನೇ ಇಷ್ಟವಾಗಿಬಿಡುತ್ತಾನೆ. ಅಲಾವುದ್ದೀನ್ ಖಿಲ್ಜಿಯ ಪಾತ್ರ ರಣ್ವೀರ್ ಸಿಂಗ್ ಮಾಡಿದರೆ… ಆ ಪಾತ್ರಕ್ಕೆ ಚೆಂದದ ಪೋಷಣೆ ಸಿಕ್ಕರೆ ಖಿಲ್ಜಿ ಕೂಡ ಇಷ್ಟವಾಗಿಬಿಡುತ್ತಾನೆ. ಈ ರಜಪೂತ್ ಗಳು ತಿಂದುಂಡು ಹಾಯಾಗಿದ್ದರು. ಅವನು ದಂಡೆತ್ತಿ ಬಂದ… ಹೀಗೆ ಕಥೆ… ದಂಡೆತ್ತಿ ಬಂದ ಖಿಲ್ಜಿ, ಸಿಂಹಾಸನದ ಮೇಲೆ ಕೂತಿದ್ದ ರಾಜನಿಗಿಂತ ಚೆಂದ ಕಂಡನೇ ರಾಣಿಗೆ? ಖಿಲ್ಜಿಯ ಕಲ್ಪನೆಯಲ್ಲಿ ಅವನು ರಾಣಿಗೆ ಮುತ್ತಿಟ್ಟನೇ? ಇದು Historical Movie ಅಲ್ಲ, ಇತಿಹಾಸದ ದಾಖಲೆ ಅಲ್ಲ, ಇದು ಸಂಜಯ್ ಲೀಲಾ ಬನ್ಸಾಲಿಯ ಚಿತ್ರ ಪದ್ಮಾವತಿ. ಮೂವಿಗೆ ಮೊದಲು Disclaimer ಹಾಕುತ್ತಾರೆ ಬಿಡಿ. ಕಾನೂನು ಕೈಗೆ ತೆಗೆದುಕೊಂಡು ಅಥವಾ ಪರಿಗಣಿಸದೆ ಹೊಡೆಯುವುದು, ಸೆಟ್ ನಾಶ ಮಾಡುವುದು ತಪ್ಪು. ಆದರೆ ಇತಿಹಾಸವನ್ನು, ಎಲ್ಲರೂ ನಂಬಿರುವ, ಓದಿರುವ ಇತಿಹಾಸವನ್ನು ತಿರುಚಿ, ಮೊಗಚಿ ನಾಯಕನನ್ನು ಪೇಲವವಾಗಿ, ನಾಯಕಿಯನ್ನು ಸ್ತ್ರೀವಾದಕಿಯಂತೆ. ಖಳನಾಯಕನನ್ನು ವೀರನಂತೆ ಬಿಂಬಿಸಿ ಚಿತ್ರ ಮಾಡಿ… ಕೊನೆಯಲ್ಲಿ ಇದು… ಆ ಇತಿಹಾಸದ ಮೇಲೆ ರೂಪಗೊಂಡಿದೆ ಅಷ್ಟೇ… ಇದೇ ಇತಿಹಾಸವಲ್ಲ ಎಂದು Disclaimer ಹಾಕಿಬಿಟ್ಟರೆ (ಯಾರೂ ಓದದ) ಆಯಿತೇ? ಇತಿಹಾಸ ಸತ್ಯವಲ್ಲದೇ ಹೋದರೂ ಜನರಿಗೆ ಅದೇ ಸತ್ಯ. ಅವರ ಭಾವನೆಗೆ, ನಂಬಿಕೆಗೆ ಬೆಲೆ ಕೊಡಬೇಕು.

ಹೌದೇ? ಹಾಗೆ ಮಾಡಬೇಕೇ? ಗೋಡ್ಸೆ ನಾಯಕನಾಗಿ ಗಾಂಧೀಜಿ ಹಠಮಾರಿ ಮುದುಕನಂತೆ ಬಿಂಬಿಸಿ ಬರೆದ ಕೃತಿಗಳಿವೆ. ಮುಂದೆ ಒಂದು ದಿನ ಒಸಾಮ ಬಿನ್ ಲಾಡೆನ್ ನನ್ನು ನಾಯಕನಂತೆ ಬಿಂಬಿಸಿ ಚಿತ್ರ ಮಾಡಬಹುದು. ವೀರಪ್ಪನ್ ಕೂಡ ನಾಯಕನೇ ಆದ… ತೆರಿಗೆ ವಂಚನೆ ಮಾಡಿ, ಸಾಲ ತೀರಿಸದೆ ದೇಶ ಬಿಟ್ಟು ಹೋದ ಮಲ್ಯ ನಾಯಕನಾಗಬಹುದು. ಇಡೀ ದೇಶಕ್ಕೆ ಹೇಗೆ ಚಳ್ಳೆಹಣ್ಮು ತಿನ್ನಿಸಿದ ನೋಡಿ… ಎಂದು ಜನ ಮೆಚ್ಚಬಹುದು.

ನ್ಯಾಯವೋ, ಅನ್ಯಾಯವೋ, ತಪ್ಪೋ ಸರಿಯೋ, ಜನ ಒಪ್ಪಬೇಕು… ಮೆಚ್ಚಬೇಕು. ಆದರೆ ಜನ ಸರಿಯಾದುದ್ದನೇ ಒಪ್ಪುತ್ತಾರೆ. ನ್ಯಾಯವನ್ನೇ ಮೆಚ್ಚುತ್ತಾರೆ ಎಂದು ಹೇಗೆ ನಂಬುವುದು? Truth is bitter… justices is Hard to digest. Righteousness is tough to follow. But these three are the virtues for life. Time tested virtues.

ಸತ್ಯ, ನ್ಯಾಯ, ಉತ್ತಮ ಹಾದಿ ಮುಖ್ಯ. ಆದರೆ ಗುಂಪು ಕಟ್ಟಿಕೊಂಡು ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಸಾಧಿಸಬಹುದು. ಗುಂಪಾಗಿ ಗಲಾಟೆ ಮಾಡುವುದರಿಂದ (ಜಲ್ಲಿಕಟ್ಟು)… ಒಂಟಿಯಾಗಿ ಗಲಾಟೆ ಮಾಡುವುದರಿಂದ (ಬಿಗ್ ಬಾಸ್ ನ ಪ್ರಥಮ) ಗೆಲುವು ಶತಸಿದ್ಧ ಎನ್ನುವುದಾದರೆ… ನ್ಯಾಯಕ್ಕೆ, ಸತ್ಯಕ್ಕೆ ಗೆಲುವು ಹೇಗೆ ಸಾಧ್ಯ? ಕಿರುಚಬಾರದು, ಇನ್ನೊಬ್ಬರ ನೋವಿನಲ್ಲಿ ಸೋಲಿನಲ್ಲಿ ಸಂತಸಪಡಬಾರದು ಎಂದು ನಾವು ಮಕ್ಕಳಿಗೆ ಹೇಳಿಕೊಡುವುದೇ ತಪ್ಪಾಗುತ್ತದೆ. ತಪ್ಪು, ಸರಿ, ನ್ಯಾಯ, ಅನ್ಯಾಯಕ್ಕಿಂಥ ಜೋರು ದನಿ ಇರಬೇಕು… ಬೆಂಬಲಕ್ಕೆ ಗುಂಪು ಇರಬೇಕು ಅಷ್ಟೇ. ಬೇರೆಯವರ ಮಾತು ಯಾರ ಕಿವಿಗೂ ಬೀಳದ ಹಾಗೆ ಕಿರುಚಬೇಕು. Loud is truth. ಸುಳ್ಳನ್ನು ಜೋರಾಗಿ ಹತ್ತು ಹಲವು ಬಾರಿ ಹೇಳಿದರೆ ಅದು ಸತ್ಯವಾಗಿಬಿಡುತ್ತದೆ. ಹೆದರಿಕೆಯಾಗುತ್ತದೆ.

ಅಮೆರಿಕದಲ್ಲಿ ಕೂತು ಟ್ರಂಪ್ ಟ್ರಂಪೆಟ್ ಊದುತ್ತಿದ್ದಾನೆ… ಬರೆಯುತ್ತೇನೆ ಆ ಸಂಗೀತದ ಬಗ್ಗೆ… ಮುಂದಿನ ವಾರ…

1 COMMENT

Leave a Reply