ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಕಾನೂನು ತಿದ್ದುಪಡಿಗೆ ಬದ್ಧ ಅಂದ್ರು ಸಿದ್ದರಾಮಯ್ಯ, ಕೇಂದ್ರ ಬಜೆಟ್ ಬಗ್ಗೆ ಪರಮೇಶ್ವರ್ ಅಸಮಾಧಾನ, ಯೋಧ ಸಂದೀಪ್ ಅಂತ್ಯಕ್ರಿಯೆ

ಡಾ.ಸರೋಜಿನಿ ಮಹಿಷಿ ಅವರ ವರದಿಯನ್ನು ಪರಿಷ್ಕರಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ ಸಿದ್ದರಾಮಯ್ಯ ಅವರ ಸಮಿತಿ ತನ್ನ ವರದಿಯನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿತು. 

ಡಿಜಿಟಲ್ ಕನ್ನಡ ಟೀಮ್:

ಐಟಿ ಬಿಟಿಯಲ್ಲಿ ಕನ್ನಡಿಗರಿಗೆ ಮೀಸಲು

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಾಗೂ ಜೈವಿಕ ತಂತ್ರಜ್ಞಾನ ಸೇರಿದಂತೆ ಎಲ್ಲ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ.80 ರಿಂದ 100 ರಷ್ಟು ಉದ್ಯೋಗ ಮೀಸಲಾತಿ ಜಾರಿಗೆ ತರಲು ಕಾನೂನಿಗೆ ತಿದ್ದುಪಡಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ ಸಿದ್ದರಾಮಯ್ಯ ನೇತೃತ್ವದ ಸಮಿತಿ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ನೀಡಿದ ಶಿಫಾರಸ್ಸುಗಳನ್ನು ಬುಧವಾರ ಸ್ವೀಕರಿಸಿದ ಮುಖ್ಯಮಂತ್ರಿಗಳು, ‘ಐಟಿ ಬಿಟಿ, ಮನರಂಜನಾ ಕೇಂದ್ರಗಳು, ಹೋಟೆಲ್ ಗಳು ಸೇರಿದಂತೆ ಎಲ್ಲ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಅನಿವಾರ್ಯವಾಗಿದೆ. ಕಾಲ ಬದಲಾದಂತೆ ಅದಕ್ಕೆ ಅನುಗುಣವಾಗಿ ವರದಿಯನ್ನು ಪರಿಷ್ಕರಿಸುವ ಅನಿವಾರ್ಯತೆ ಇತ್ತು. ಈಗ ಅಗತ್ಯವಿರುವ ಅಂಶಗಳನ್ನು ಪರಿಗಣಿಸಿ ಈ ಸಮಿತಿ ಎರಡು ಹಂತಗಳಲ್ಲಿ ವರದಿ ನೀಡಿದೆ. ಖಾಸಗಿ ವಲಯಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಿರುವ ಹಂತದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ. ಇದರ ಪೂರಕವಾಗಿ ಹೆಜ್ಜೆ ಇಡಲು ಸರ್ಕಾರ ಸಿದ್ಧ’ ಎಂದರು.

ಕೇಂದ್ರ ಬಜೆಟ್ ಬಗ್ಗೆ ಪರಂ ನಿರಾಸೆ

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಪ್ರಯೋಜನಕಾರಿ ಅಂಶಗಳಿಲ್ಲದೇ ನಿರಾಶಾದಾಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್. ಈ ಬಜೆಟ್ ಬಗ್ಗೆ ಅವರು ಹೇಳಿದ್ದಿಷ್ಟು…

‘ಕೇಂದ್ರ ಬಜೆಟ್ ತುಂಬಾ ನಿರಾಸೆ ಮೂಡಿಸಿದೆ. ಯಾವುದೇ ಹೊಸ ವಿಚಾರ, ಆವಿಷ್ಕಾರ ಆಯವ್ಯಯದಲ್ಲಿಲ್ಲ. ರುಪಾಯಿ ಅಪಮೌಲ್ಯ, ಕಪ್ಪು ಹಣಕ್ಕೆ ಕಡಿವಾಣ, ಭಯೋತ್ಪಾದನೆ ನಿಯಂತ್ರಣ, ನಕಲಿ ನೋಟು ಹಾವಳಿಗೆ ಕಡಿವಾಣ ಹಾಕುವ ಕ್ರಮಗಳು ಬಜೆಟ್ ನಲ್ಲಿ ಪ್ರಕಟವಾಗುವ ನಿರೀಕ್ಷೆ ಇತ್ತು. ಜತೆಗೆ ರೈತರ ಸಾಲ ಮನ್ನಾ ವಿಚಾರ ಪ್ರಸಾಪವಾಗಿಲ್ಲ. ರೈತರಿಗೆ ಇತರೆ ಯಾವುದೇ ರೂಪದಲ್ಲೂ ಪರಿಹಾರ ಘೋಷಿಸಿಲ್ಲ. ತೆರಿಗೆ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ತರುವ ನಿರೀಕ್ಷೆಯೂ ಹುಸಿಯಾಗಿದೆ. ರೈಲ್ವೇ ಕ್ಷೇತ್ರದಲ್ಲೂ ಯಾವುದೇ ಹೊಸತನವಿಲ್ಲ. ಹೊಸ ರೈಲು ಮಾರ್ಗ ನೀಡಿಲ್ಲ, ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದರೂ ಪೆಟ್ರೋಲ್ ಬೆಲೆ ಇಳಿಕೆಯಾಗಿಲ್ಲ.’

ಯೋಧ ಸಂದೀಪ್ ಅಂತ್ಯಕ್ರಿಯೆ

ಜಮ್ಮು ಕಾಶ್ಮೀರದಲ್ಲಿನ ಹಿಮಪಾತಕ್ಕೆ ಸಿಲುಕಿ ಮೃತಪಟ್ಟ ಹಾಸನ ಮೂಲದ ಯೋಧ ಸಂದೀಪ್ ಕುಮಾರ್ ಶೆಟ್ಟಿ ಅವರ ಅಂತ್ಯಕ್ರಿಯೆ ಬುಧವಾರ ನೆರವೇರಿದೆ. ಬುಧವಾರ ಬೆಳಗಿನ ಜಾವ 2.30ರ ಸುಮಾರಿಗೆ ಹಾಸನ ಜಿಲ್ಲಾಸ್ಪತ್ರೆಗೆ ಸಂದೀಪ್ ಅವರ ಪಾರ್ಥೀವ ಶರೀರವನ್ನು ಸೇನೆಯ ಅಧಿಕಾರಿಗಳ ತಂಡ ಕರೆತಂದಿತು. ಬೆಳಗ್ಗೆ 8 ಗಂಟೆಯಿಂದ 9 ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಶರೀರವನ್ನು ಅವರ ಸ್ವಗ್ರಾಮ ದೇವಿಹಳ್ಳಿಗೆ ತೆಗೆದುಕೊಂಡು ಹೋಗಲಾಗಿತ್ತು. ನಂತರ ಮಧ್ಯಾಹ್ನ ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಂದೀಪ್ ಅವರ ಅಂತ್ಯಕ್ರಿಯೆಗೆ ಸಾವಿರಾರು ಜನ ಆಗಮಿಸಿ ಗೌರವ ಸಲ್ಲಿಸಿದರು.

Leave a Reply