ಸಾವು ಬದುಕಿನ ಮಧ್ಯೆ ಹೋರಾಡುವವರ ನೆರವಿಗೆ ಧಾವಿಸದೇ ಮೊಬೈಲ್ ನಲ್ಲಿ ಸೆರೆ ಹಿಡಿಯುವ ನಮ್ಮ ಸಮಾಜದ ಮನಸ್ಥಿತಿ ಬದಲಾಗುವುದಾದರೂ ಯಾವಾಗ?

ಡಿಜಿಟಲ್ ಕನ್ನಡ ಟೀಮ್:

ಎತ್ತ ಸಾಗುತ್ತಿದೆ ನಮ್ಮ ಸಮಾಜ…? ಕಷ್ಟದಲ್ಲಿದ್ದವರಿಗೆ ಸಹಾಯಕ್ಕೆ ಧಾವಿಸುತ್ತಿದ್ದ ನಮ್ಮ ಜನ ಈಗ ಮಾನವೀಯತೆಯನ್ನೇ ಮರೆತು ಕಲ್ಲು ಮನಸ್ಸಿನವರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ನಿಂತಿರುವುದು ನಿನ್ನೆ ಕೊಪ್ಪಳದ ರಸ್ತೆ ಅಪಘಾತದಲ್ಲಿ 18 ವರ್ಷದ ಯುವಕ ರಕ್ತದ ಮಡುವಿನಲ್ಲಿ ಬಿದ್ದು ‘ನನ್ನ ಪ್ರಾಣ ಕಾಪಾಡಿ’ ಎಂದು ಅಂಗಲಾಚಿ ಬೇಡುತ್ತಿದ್ದರೆ, ಅಲ್ಲಿದ್ದ ಜನರು ಆ ಪರಿಸ್ಥಿತಿಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದದ್ದು ಹಾಗೂ ಕಳೆದ ಶನಿವಾರ ಮೈಸೂರಿನ ಕಾರು ಅಪಘಾತದಲ್ಲಿ 38 ವರ್ಷದ ಪೊಲೀಸ್ ಅಧಿಕಾರಿ ಸಾವು ಬದುಕಿನ ಮಧ್ಯೆ ಹೋರಾಡುವಾಗ ಜನರು ಮೂಕರಾಗಿ ನೋಡುತ್ತಿದ್ದ ಪ್ರಕರಣಗಳು.

ರಸ್ತೆ ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಧಾವಿಸಿ, ಅವರ ಪ್ರಾಣ ಉಳಿಸಿ ಎಂದು ಪದೇ ಪದೇ ಮಾಧ್ಯಮಗಳು ವರದಿ ಮಾಡಿದರೂ, ಸರ್ಕಾರ ಜಾಹೀರಾತು ನೀಡಿದರೂ ನಮ್ಮ ಜನ ಮಾತ್ರ ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವ ಯಾವುದೇ ಆಸಕ್ತಿ ತೋರುತ್ತಿಲ್ಲ.

ಕೊಪ್ಪಳದಲ್ಲಿ ಸೈಕಲ್ ಮೇಲೆ ಹೋಗುತ್ತಿದ್ದ ಅನ್ವರ್ ಅಲಿ ಎಂಬ 18 ವರ್ಷದ ಬಾಲಕನ ಮೇಲೆ ಬಸ್ ಹರಿದ ಪರಿಣಾಮ ಆತ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ. ಸುಮಾರು 20 ನಿಮಿಷಗಳ ಕಾಲ ಸುಡು ಬಿಸಿಲಿನಲ್ಲಿ ರಸ್ತೆಯ ಮೇಲೆ ಬಿದ್ದು ‘ನಾನು ಬದುಕಬೇಕು ನನ್ನನ್ನು ಆಸ್ಪತ್ರೆಗೆ ಸೇರಿಸಿ, ಪ್ರಾಣ ಉಳಿಸಿ’ ಎಂದು ಬೇಡಿದರೂ ಸುತ್ತ ನೆರೆದಿದ್ದ ಜನರ ಮನಸ್ಸು ಮಾತ್ರ ಕರಗಲೇ ಇಲ್ಲ. ಪರಿಣಾಮ ಆತನ ಪ್ರಾಣ ಇಹ ಲೋಕ ತ್ಯಜಿಸಿತು.

ಇನ್ನು ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಮತ್ತೊಂದು ಘಟನೆ ಸಹ ಇದೇ ರೀತಿ ಕರುಣಾಜನಕವಾಗಿತ್ತು. ಮೈಸೂರಿನಲ್ಲಿ ಪೊಲೀಸ್ ಜೀಪ್ ಹಾಗೂ ಬಸ್ ನಡುವಣ ಅಪಘಾತದಲ್ಲಿ ಜೀಪ್ ಚಾಲಿಸುತ್ತಿದ್ದ ಕಾನ್ಸ್ ಟೇಬಲ್ ಲಕ್ಷ್ಮಣ್ ಸ್ಥಳದಲ್ಲೇ ಮೃತಪಟ್ಟ. ಅವರ ಜೀಪ್ ನಲ್ಲಿ ಇದ್ದ ಮಹೇಶ್ ಕುಮಾರ್ ಎಂಬ 38 ವರ್ಷದ ಪೊಲೀಸ್ ಅಧಿಕಾರಿ ಗಂಭೀರ ಗಾಯವಾಗಿ ಜೀಪ್ ಒಳಗೆ ಸಿಲುಕಿ ಹೊರಬಾರಲಾಗದೆ ಸುಮಾರು ಒಂದು ಗಂಟೆಗಳ ಕಾಲ ವಿಲವಿಲನೆ ಒದ್ದಾಡುತ್ತಿದ್ದರು. ಈ ಘಟನೆಯನ್ನು ಅಲ್ಲಿನ ಜನರು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಂತು, ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದರೇ ಹೊರತು, ಆ ಪೊಲೀಸ್ ಅಧಿಕಾರಿಯ ನೆರವಿಗೆ ಧಾವಿಸಲೇ ಇಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮಹೇಶ್ ಪ್ರಾಣ ಬಿಟ್ಟರು.

ಈ ಎರಡು ಘಟನೆಗಳು ನಮ್ಮ ಸಮಾಜ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಕ್ರೂರತೆಯನ್ನು ತುಂಬಿಕೊಂಡಿರುವುದನ್ನು ಸಾರಿ ಸಾರಿ ಹೇಳುತ್ತಿವೆ. ಕಳೆದ ವರ್ಷ ಹರೀಶ್ ಎಂಬಾತನ ದೇಹ ರಸ್ತೆ ಅಪಘಾತದಲ್ಲಿ ಎರಡು ಭಾಗವಾಗಿ ತುಂಡರಿಸಿ ಬಿದ್ದ ಪ್ರಕರಣದ ಸಾಕಷ್ಟು ಸುದ್ದಿ ಮಾಡಿತ್ತು. ಆ ಪ್ರಕರಣದ ನಂತರ ರಸ್ತೆ ಅಪಘಾತದಲ್ಲಿ ಒಳಗಾದವರಿಗೆ ನೆರವಿಗೆ ಧಾವಿಸಬೇಕೆಂದು ಮಾಧ್ಯಮಗಳು ಜನರಲ್ಲಿ ಅರಿವು ಮೂಡಿಸುವ ವರದಿ- ಕಾರ್ಯಕ್ರಮಗಳನ್ನು ಪ್ರಕಟಿಸಿದವು. ಅತ್ತ ಸುಪ್ರೀಂ ಕೋರ್ಟ್ ಸಹ ರಸ್ತೆ ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸುವವರಿಗೆ ಪೊಲೀಸರು ಅಥವಾ ಕಾನೂನು ವಿಚಾರಣೆ ಪ್ರಕ್ರಿಯೆಯಿಂದ ಯಾವುದೇ ಕಿರಿಕಿರಿಯಾಗದಂತೆ ನೋಡಿಕೊಳ್ಳುವಂತೆ ಆದೇಶವನ್ನು ನೀಡಿತು. ಈ ಬಗ್ಗೆ ಕೇಂದ್ರ ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡಿ ಜಾಹೀರಾತುಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿತ್ತು ಮಾಡುತ್ತಲೇ ಇದೆ. ಇನ್ನು ಕರ್ನಾಟಕ ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಹರೀಶ್ ಹೆಸರಿನಲ್ಲಿ ಯೋಜನೆಯನ್ನು ಪರಿಚಯಿಸಿ ರಸ್ತೆ ಅಪಘಾತದಲ್ಲಿದ್ದವರಿಗೆ ನೆರವು ಮಾಡಿದವರಿಗೆ ಬಹುಮಾನವನ್ನು ನೀಡುವುದಾಗಿಯೂ ಪ್ರಕಟಿಸಿತು. ಈ ಎಲ್ಲ ಪ್ರಯತ್ನಗಳ ಫಲಿತಾಂಶ ಶೂನ್ಯ ಎಂಬುದು ಈಗ ಸಾಬೀತಾಗಿದೆ.

ಸಾವು ಬದುಕಿನ ನಡುವೆ ಹೋರಾಡುತ್ತಿರುವವರು, ನನ್ನನ್ನು ರಕ್ಷಿಸಿ ಎಂದು ಬೇಡುವವರನ್ನು ನೋಡಿ ಅವರ ರಕ್ಷಣೆಗೆ ಮುಂದಾಗುವ ಬದಲು ಮೊಬೈಲ್ ನಲ್ಲಿ ಸೆರೆ ಹಿಡಿಯುವ ಮಟ್ಟಿಗೆ ಹದಗೆಟ್ಟಿರುವ ನಮ್ಮ ಜನರ ಮನಸ್ಥಿತಿ ನಿಜವಾಗಿಯು ಸುಧಾರಿಸುತ್ತದೆಯೇ ಎಂಬ ಪ್ರಶ್ನೆ ಕಾಡಲಾರಂಭಿಸುತ್ತಿದೆ.

Leave a Reply