ಈ ವರ್ಷವೇ ರಾಜ್ಯದಲ್ಲಿ ಚುನಾವಣೆ: ಹೆಚ್ಡಿಕೆ ಭವಿಷ್ಯ, ಜೆಡಿಎಸ್ ಭಿನ್ನರು ಕಾಂಗ್ರೆಸ್ ಸೇರ್ಪಡೆಗೆ ಪರಂ ಅಪಸ್ವರ, ಸಿಎಂ ಆರೋಗ್ಯ ಏರುಪೇರು, 2ಜಿ ಹಗರಣ: ಮಾರನ್ ಸಹೋದರರು ಆರೋಪ ಮುಕ್ತ

ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದ ಕಲಾಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಭಾರತ ಭಾಗ್ಯ ವಿಧಾತ”-ಧ್ವನಿ ಬೆಳಕು ಕಾರ್ಯಕ್ರಮದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ.

ಡಿಜಿಟಲ್ ಕನ್ನಡ ಟೀಮ್:

ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ

‘ಮುಂದಿನ ವರ್ಷ ನಡೆಯಬೇಕಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಅವಧಿಗೂ ಮುನ್ನವಾಗಿ ಅಂದರೆ ಈ ವರ್ಷವೇ ನಡೆಯಲಿದೆ…’ ಹೀಗೆಂದು ಭವಿಷ್ಯ ನುಡಿದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳನ್ನು ಉದಾಹರಣೆ ನೀಡುತ್ತಾ ಭವಿಷ್ಯ ನುಡಿದಿದ್ದಾರೆ. ‘ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗುಜರಾತ್ ಚುನಾವಣೆ ನಡೆಯಲಿದ್ದು, ಅದೇ ಸಂದರ್ಭದಲ್ಲೇ ರಾಜ್ಯದಲ್ಲೂ ಚುನಾವಣೆ ನಡೆಯಲಿದೆ. ನಾನು ಊಹೆ ಮಾಡಿ ಚುನಾವಣೆ ಬಗ್ಗೆ ಮಾತನಾಡುತ್ತಿಲ್ಲ. ಆಡಳಿತದಲ್ಲಿರುವ ಕಾಂಗ್ರೆಸ್ ಆಂತರಿಕ ಬೆಳವಣಿಗೆಗಳನ್ನು ಗಮನಿಸಿ ಚುನಾವಣೆ ಬಗ್ಗೆ ವಾಸ್ತವ ಸ್ಥಿತಿ ಹೇಳುತ್ತಿದ್ದೇನೆ. ಎಸ್.ಎಂ ಕೃಷ್ಣ ಅವರ ರಾಜಿನಾಮೆ ನಂತರ ಪಕ್ಷದ ಒಳಗೆ ಸಾಕಷ್ಟು ವಿದ್ಯಮಾನಗಳು ನಡೆಯುತ್ತಿದ್ದು, ಒಂದೆರಡು ತಿಂಗಳಲ್ಲಿ ಆಂತರಿಕ ಕಲಹ ಸಾರ್ವಜನಿಕವಾಗಿ ಸ್ಫೋಟಗೊಳ್ಳಲಿದೆ. ವಿಧಾನಸಭೆಗೆ 14 ತಿಂಗಳು ಕಾಲಾವಧಿ ಇದ್ದು ಈ ಅವಧಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣಗೊಳಿಸಲಾಗುವುದಿಲ್ಲ. ಕೇವಲ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ ಪಕ್ಷದ ಸ್ಥಿತಿಯೂ ದಯನೀಯವಾಗಿದೆ. ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರ ಗೆದ್ದು ಅಧಿಕಾರಕ್ಕೆ ಬರುವುದಾಗಿ ಬೀಗುತ್ತಿರುವ ಬಿಜೆಪಿ ನಾಯಕರು ಎಸ್.ಎಂ ಕೃಷ್ಣ ಅವರ ಮನೆ ಬಾಗಿಲು ತಟ್ಟಿ ಅವರ ಕಾಲು ಹಿಡಿಯುತ್ತಿದ್ದಾರೆ. ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ಎಲ್.ಕೆ ಅಡ್ವಾಣಿ ಅವರನ್ನೇ ವಯೋಮಿತಿ ಕಾರಣಕೊಟ್ಟು ಮೂಲೆ ಗುಂಪು ಮಾಡಿದ್ದಾರೆ. ಅಂತಹ ಮಹಾನ್ ನಾಯಕನನ್ನು ಬಳಕೆ ಮಾಡಿಕೊಳ್ಳಲಾಗದ ಬಿಜೆಪಿ ಕೃಷ್ಣ ಅವರ ಬೆನ್ನತ್ತಿದ್ದಾರೆ’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಇನ್ನು ನಂಜನಗೂಡು ವಿಧಾನಸಭೆ ಉಪಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಎಚ್ಡಿಕೆ, ‘ನಂಜನಗೂಡು ಉಪಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಕಣಕ್ಕಿಳಿಸಲು ಅಭ್ಯರ್ಥಿಯೇ ಇಲ್ಲದ ಕಾರಣ, ಕಾಂಗ್ರೆಸ್ ಪಕ್ಷದ ನಾಯಕರು ನಮ್ಮ ಪಕ್ಷದ ಕಳಲೇ ಕೇಶವಮೂರ್ತಿ ಅವರನ್ನು ಹೈಜಾಕ್ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇಲ್ಲದೆ ಕಳೆದ ಆರು ತಿಂಗಳಿನಿಂದ ನಮ್ಮ ಪಕ್ಷದ ಅಭ್ಯರ್ಥಿಯ ಕಾಲು ಹಿಡಿದು ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಹೊರಟಿದೆ’ ಎಂದು ವ್ಯಂಗ್ಯ ಮಾಡಿದರು.

ಜೆಡಿಎಸ್ ಭಿನ್ನರು ಕಾಂಗ್ರೆಸ್ ಸೇರ್ಪಡೆಗೆ ಪರಂ ಅಡ್ಡಿ?

ಜೆಡಿಎಸ್ ಪಕ್ಷದ ಭಿನ್ನಮತಿಯ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅಪಸ್ವರ ನುಡಿದಿದ್ದಾರೆ. ಈ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದಿಷ್ಟು… ‘ಜೆಡಿಎಸ್ ಬಂಡಾಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಮಾತನಾಡಿರಬಹುದು. ಆದರೆ ಸ್ಥಳೀಯ ಸ್ಥಿತಿಗತಿಗಳನ್ನು ಪರಿಗಣಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಶಾಸಕರ ವಿಧಾನಸಭಾ ಕ್ಷೇತ್ರಗಳಲ್ಲಿರುವ ಕಾಂಗ್ರೆಸ್ ಮುಖಂಡರನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಕಳೆದ ಬಾರಿ ಸೋಲನುಭವಿಸಿದ ಅಭ್ಯರ್ಥಿಗಳನ್ನು ಪರಿಗಣಿಸಿ ಪಕ್ಷ ನಿರ್ಧಾರ ಕೈಗೊಳ್ಳಲಿದೆ. ಈ ಬಗ್ಗೆ ಪಕ್ಷದ ವರಿಷ್ಠರ ಜತೆಗೆ ಸಮಾಲೋಚನೆ ನಡೆಸಿ ತೀರ್ಮಾನ ಮಾಡಲಾಗುವುದು. ಆದರೂ ಸಹ ಹಾಲಿ ಸದಸ್ಯರಿಗೆ ಟಿಕೆಟ್ ನೀಡುವ ಬಗ್ಗೆ ಭರವಸೆ ಕೊಡಲು ಸಾಧ್ಯವಿಲ್ಲ. ಇನ್ನು ಎಸ್.ಎಂ ಕೃಷ್ಣ ಅವರು ಪಕ್ಷದಲ್ಲೇ ಉಳಿಯಬೇಕಿತ್ತು ಎಂಬುದು ನಮ್ಮೆಲ್ಲರ ಬಯಕೆಯಾಗಿತ್ತು. ಆ ಕಾರಣಕ್ಕೆ ಅವರನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.’

ವಿಧಾನ ಪರಿಷತ್ತಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ

ರಾಜ್ಯ ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆಗೆ ಫೆಬ್ರವರಿ 3ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ನಾಳೆ 17 ಮಂದಿ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಈ ಚುನಾವಣೆ ವೇಳೆ 21,354 ಶಿಕ್ಷಕರು ಮತದಾನ ಮಾಡಲಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆಯನ್ನೊಳಗೊಂಡ ಆಗ್ನೇಯ ಭಾಗದಲ್ಲಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ನಿರಂತರ ಪ್ರವಾಸ ಬಿಡುವಿಲ್ಲದ ಕಾರ್ಯಕ್ರಮಗಳಿಂದ ಬಳಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಲ್ಪ ಅಸ್ವಸ್ಥರಾಗಿದ್ದಾರೆ. ಜ್ವರ, ಗಂಟಲು ನೋವಿನಿಂದ ಬಳಲುತ್ತಿರುವ ಅವರು ವೈದ್ಯರ ಸಲಹೆ ಮೇರೆಗೆ ಇಂದಿನ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ವಿಶ್ರಾಂತಿ ಪಡೆದರು.
  • ಏರ್ ಸೆಲ್ ಮ್ಯಾಕ್ಸಿಸ್ ಗೆ 2ಜಿ ತರಂಗ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಹಾಗೂ ಸಹೋದರ ಕಲಾನಿಧಿ ಮಾರನ್ ಮೇಲಿನ ಆರೋಪವನ್ನು ಸಿಬಿಐ ವಿಶೇಷ ನ್ಯಾಯಾಲಯ ತೆರವುಗೊಳಿಸಿದೆ.

Leave a Reply