ಟ್ರಂಪ್ ವಿರೋಧಿಗಳ ಗಮನಕ್ಕೆ: ಕುವೈತ್ ಎಂಬ ಮುಸ್ಲಿಂ ದೇಶವೇ ಪಾಕ್ ಸೇರಿದಂತೆ ಹಲವರಿಗೆ ವೀಸಾ ನಿಷೇಧಿಸಿದೆ!

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿರಿಯಾ ಸೇರಿದಂತೆ ಏಳು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶಿಸುವುದಕ್ಕೆ ವೀಸಾ ನಿಯಮ ಬಿಗಿಗೊಳಿಸಿರುವ ಕ್ರಮವನ್ನು ಜಗತ್ತು ಚರ್ಚಿಸುತ್ತಿದೆ. ಇದು ಮುಸ್ಲಿಂ ಬ್ಯಾನ್ ಅಲ್ಲ, ಯಾವೆಲ್ಲ ರಾಷ್ಟ್ರಗಳು ಉಗ್ರವಾದಕ್ಕೆ ಕಾರಣವಾಗಿಯೋ ಅವುಗಳ ಬಗ್ಗೆ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಎಂಬುದು ಟ್ರಂಪ್ ಸಮರ್ಥನೆ.

ಆದರೆ ಉದಾರವಾದಿಗಳು ಮಾತ್ರ ಇದನ್ನು ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸಿಕೊಂಡಿರುವ ಟ್ರಂಪ್ ದ್ವೇಷದ, ಪೂರ್ವಾಗ್ರಹದ ನಡೆ ಎಂದೇ ವಿವರಿಸಿಕೊಂಡುಬಂದವು. ಇದು ಟ್ರಂಪ್ ಮನಸ್ಸಲ್ಲಿರುವ ಇಸ್ಲಾಮಾಫೋಬಿಯಾ ಅಂತೆಲ್ಲ ಟೀಕೆಗಳು ಬಂದಿವೆ. ಆದರೆ, ಇದೀಗ ಸ್ಪುಟ್ನಿಕ್ ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ಅರಬ್ ದೇಶವಾದ ಕುವೈತ್ ಐದು ರಾಷ್ಟ್ರಗಳ ನಾಗರಿಕರಿಗೆ ವೀಸಾ ನಿರಾಕರಣೆ ನೀತಿಯನ್ನು ಪ್ರಕಟಿಸಿದೆ. ಹೀಗೆ ಕುವೈತಿನಿಂದ ನಿಷೇಧಕ್ಕೆ ಒಳಗಾಗುತ್ತಿರುವ ರಾಷ್ಟ್ರಗಳೆಲ್ಲ ಮುಸ್ಲಿಂ ಜನಸಂಖ್ಯಾ ಪ್ರಾಬಲ್ಯದವೇ ಎಂಬುದು ಗಮನಾರ್ಹ. ಇದನ್ನು ಯಾವ ಫೋಬಿಯಾ ಅಂತ ಕರೆಯೋದು?

ಕುವೈತ್ ವೀಸಾ ನಿರಾಕರಣೆ ಮಾಡುತ್ತಿರುವ ರಾಷ್ಟ್ರಗಳೆಂದರೆ ಸಿರಿಯಾ, ಪಾಕಿಸ್ತಾನ, ಅಫಘಾನಿಸ್ತಾನ, ಇರಾಕ್ ಮತ್ತು ಇರಾನ್. ಕುವೈತ್ ನೀಡಿರುವ ಕಾರಣವೂ ಭಯೋತ್ಪಾದನೆಯದ್ದೇ. ಈ ದೇಶಗಳ ವಲಸಿಗರಿಗೆ ಮುಕ್ತ ಪ್ರವೇಶವಿದ್ದರೆ ಅವರೊಂದಿಗೆ ತೀವ್ರವಾದವೂ ದೇಶದೊಳಗೆ ಪ್ರವೇಶಿಸುವ ಅಪಾಯವಿದೆ ಅನ್ನೋದು. ಇದೀಗ ಕುವೈತಿನ ಈ ಕ್ರಮ ಚರ್ಚೆಯಾಗುತ್ತಿರುವಾಗ ಇನ್ನೊಂದು ಆಸಕ್ತಿಕರ ಆಯಾಮವೂ ಜಾಹೀರಾಗಿದೆ. ಅದೇನೆಂದರೆ ಟ್ರಂಪ್- ಅಮೆರಿಕ ಎಲ್ಲಕ್ಕಿಂತ ಮೊದಲು ಸಿರಿಯಾಕ್ಕೆ ವೀಸಾ ನಿಷೇಧಿಸಿದ್ದು ಇದೇ ಕುವೈತ್ 2011ರಲ್ಲಿ.

ಅಂದಹಾಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಜತೆ ಮಿಲಿಟರಿ ಸಹಯೋಗ ಹೊಂದಿದೆ ಕುವೈತ್. ಬಹುಶಃ 2011ರಲ್ಲಿ ಐಎಸ್ಐಎಸ್ ಉಗ್ರ ನೆಲವಾದ ಸಿರಿಯಾವನ್ನು ನಿಷೇಧಿಸಿದ್ದ ಕುವೈತಿಗೆ ಇದೀಗ ಅಮೆರಿಕದ ನಡೆಯೇ ಇನ್ನಷ್ಟು ದೇಶಗಳ ಮೇಲಿನ ನಿಷೇಧ ಕ್ರಮಕ್ಕೆ ಶಕ್ತಿ ನೀಡಿದಂತಿದೆ. ಏಕೆಂದರೆ, 2015ರಲ್ಲಿ ಕುವೈತಿನ ಶಿಯಾ ಸಮುದಾಯದ ಪ್ರಾರ್ಥನಾ ಸ್ಥಳದ ಮೇಲೆ ದಾಳಿಯಾಗಿ 27 ಕುವೈತಿಗಳು ಮರಣಿಸಿದ್ದರು. ಆಗಲೇ ಹೀಗೊಂದು ರಕ್ಷಣಾತ್ಮಕ ನಡೆಯ ಬಗ್ಗೆ ಯೋಚಿಸಿದ್ದಿರುವ ಸಾಧ್ಯತೆ ಇದೆ.

ಅದೇನೇ ಇದ್ದರೂ ಕುವೈತ್ ನಡೆ ಟ್ರಂಪ್ ಕ್ರಮವನ್ನು ಕೇವಲ ಮುಸ್ಲಿಂ ವಿರೋಧಿ ಎಂದು ವ್ಯಾಖ್ಯಾನಿಸುವುದರಾಚೆಗೆ ಬೇರೆಯದೇ ನೆಲೆಯಲ್ಲಿ ಚರ್ಚಿಸಬೇಕಿರುವ ಒತ್ತಡ ಉಂಟುಮಾಡಿದೆ.

ಇಷ್ಟಕ್ಕೂ, ವಲಸಿಗರಿಗೆ ಮಾನವೀಯತೆ ತೋರಬೇಕು ಎಂದು ಜಗತ್ತಿನಲ್ಲೆಲ್ಲ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಯಾವ ಅರಬ್ ರಾಷ್ಟ್ರಗಳೂ ತಮ್ಮ ಮುಸ್ಲಿಂ ಸಹೋದರ-ಸಹೋದರಿಯರಿಗೆ ಆಶ್ರಯದ ಬಾಗಿಲು ತೆಗೆಯಲಿಲ್ಲ, ಯಾವ ಶೇಖ್ ಗಳ ಮನವೂ ಮಿಡಿಯಲಿಲ್ಲ ಎಂಬುದು ವಾಸ್ತವವೇ. ಇಸ್ಲಾಂ ಸೋದರತ್ವ ಅಂತೆಲ್ಲ ಮಾತಾಡಿ ಅರಬ್ಬರ ಜತೆ ತಮ್ಮನ್ನು ಸಮೀಕರಿಸಿಕೊಳ್ಳುವುದಕ್ಕೆ ಹಾತೊರೆಯುವ ಏಷ್ಯದ ಕೆಲವು ಕಟ್ಟರ್ ಮುಸ್ಲಿಮರಿಗೆ ಗೊತ್ತಿರದಕಟು ವಾಸ್ತವ ಏನೆಂದರೆ, ಅರಬ್ಬರು ಇವರನ್ನೆಲ್ಲ ತಮ್ಮವರೆಂದು ಪರಿಗಣಿಸುವುದೇ ಇಲ್ಲ ಅನ್ನೋದು!

ವೀಸಾ ನಿಷೇಧದಂಥ ಸ್ಪಷ್ಟ ನೀತಿಗಳು ಇರಲಿ, ಬಿಡಲಿ ಅರಬ್ ರಾಷ್ಟ್ರಗಳು ತಮ್ಮ ನೆಲದಲ್ಲಿ ಯಾರನ್ನು ಬಿಟ್ಟುಕೊಳ್ಳಬೇಕೆಂಬ ಬಗ್ಗೆ ತಮ್ಮದೇ ಅಲಿಖಿತ ನಿಯಮಗಳನ್ನು ಪಾಲಿಸಿಕೊಂಡಿರುತ್ತವೆ ಎಂಬ ಅಭಿಪ್ರಾಯವೂ ಇದೆ.

Leave a Reply