ಪದ್ಮಶ್ರೀ ಹೆಮ್ಮೆ- 5: ಬಂಗಾರ ಮನುಷ್ಯ ಚಿತ್ರದಂತೆ ನಿಜ ಜೀವನದಲ್ಲಿ ಗುಜರಾತಿನ ಕೃಷಿಕರಿಗೆ ಅಣ್ಣವ್ರಾದ ಅನಾರ್ ದಾದಾ

ಡಿಜಿಟಲ್ ಕನ್ನಡ ಟೀಮ್:

ಡಾ.ರಾಜ್ ಕುಮಾರ್ ಅವರ ಅಭಿನಯದ ಬಂಗಾರದ ಮನುಷ್ಯ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. ಆ ಕಾಲದಲ್ಲಿ ನಗರಕ್ಕೆ ಗುಳೆ ಹೋಗಿದ್ದವರು ಸಹ ಮತ್ತೆ ತಮ್ಮ ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ಕೊಟ್ಟ ಚಿತ್ರ ಅದು ಅಂತಲೇ ಬಣ್ಣಿಸಲಾಗುತ್ತದೆ. ಈಗ ಆ ಚಿತ್ರದ ಬಗ್ಗೆ ಯಾಕೆ ಚರ್ಚೆ ಅಂತಾ ಯೋಚನೆ ಮಾಡ್ತಿದ್ದೀರಾ? ಕಾರಣ ಇದೆ. ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಜಾಬಿನ ಗೆನಭಾಯ್ ದರ್ಗಾಭಾಯ್ ಪಟೇಲ್ ಅವರ ಸಾಧನೆಯೂ ಈ ಸಿನಿಮಾದಂತೆ ಕೃಷಿಕರಿಗೆ ಸ್ಫೂರ್ತಿ ಸೆಲೆಯಾಗಿ ನಿಂತಿದೆ.

ಗುಜರಾತಿನಲ್ಲಿ ದಾಳಿಂಬೆ ಬೆಳೆಯ ಕ್ರಾಂತಿಯನ್ನೇ ಮಾಡಿದ ಸಾಧಕ ರೈತ ದರ್ಗಾಭಾಯ್ ಪಟೇಲ್. ದಾಳಿಂಬೆ ಬೆಳೆಯಲ್ಲಿ ಇವರ ಸಾಧನೆಗಾಗಿ ಅಲ್ಲಿನ ಜನರು ಇವರನ್ನು ‘ಅನಾರ್ ದಾದಾ’ (ದಾಳಿಂಬೆ ದಾದಾ) ಅಂತಲೇ ಕರೆಯುತ್ತಾರೆ. ಇವರ ಸಾಧನೆಯನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಇತರರಿಗೆ ಸ್ಫೂರ್ತಿಯಾಗಿ ಉದಾಹರಣೆ ನೀಡಿದ್ದರು. ಹಾಗಾದರೆ ಇವರು ಮಾಡಿರುವ ಸಾಧನೆ ಏನು? ಅದು ಕೃಷಿಕರಿಗೆ ಹೇಗೆ ಸ್ಫೂರ್ತಿಯಾಗಿದೆ? ಎಂಬ ಕಥೆಯನ್ನು ನೋಡೋಣ ಬನ್ನಿ…

ಮೂಲತಃ ಗುಜರಾತಿನ ಬನಸ್ಕಾಂತ ಜಿಲ್ಲೆಯ ಸರ್ಕಾರಿ ಗೊಲಿಯಾ ಎಂಬ ಹಳ್ಳಿಯವರಾದ ಗನೆಭಾಯ್ ದರ್ಗಾಭಾಯ್ ಪಟೇಲ್, ಎರಡೂ ಕಾಲಿನ ಸ್ವಾದೀನವಿಲ್ಲದ ವಿಕಲಚೇತನ. ತಮ್ಮ ಅಂಗವೈಕಲ್ಯವನ್ನು ಕೃಷಿ ಚಟುವಟಿಕೆಗೆ ಸಮಸ್ಯೆ ಎಂದು ಪರಿಗಣಿಸದ ಗನೆಭಾಯ್, ಸಕ್ರಿಯವಾಗಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿ.

ಸುದೀರ್ಘ ಬರ ಪರಿಸ್ಥಿತಿ ಈ ಪ್ರದೇಶವನ್ನು ಕಾಡಿದಾಗ ಕೃಷಿಯನ್ನೇ ಆಧಾರಿಸಿದ್ದ ಅಲ್ಲಿಯ ಜನ ಆತಂಕಕ್ಕೆ ಒಳಗಾಗಿದ್ದರು. 2003-2004ರ ವೇಳೆ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ‘ಕೃಷಿ ಮಹೋತ್ಸವ’ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟ ಗನೆಭಾಯ್ ಅವರು, ಆಧುನಿಕ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ಪಡೆದರು. ಹನಿ ನಿರಾವರಿ ಪದ್ಧತಿ, ಅದರ ಅಳವಡಿಕೆ ಹಾಗೂ ಅದರಿಂದ ದಾಳಿಂಬೆ ಬೆಳೆಯನ್ನು ಯಾವ ರೀತಿ ಬೆಳೆಯಬಹುದು ಎಂಬುದರ ಬಗ್ಗೆ ವಿವರಣೆ ಪಡೆದುಕೊಂಡರು.

ಅದಾಗಲೇ ಬರದಿಂದಾಗ ಉದ್ಭವಿಸಿದ್ದ ನೀರಿನ ಅಭಾವದ ಸಮಸ್ಯೆಗೆ ಗನೆಭಾಯ್ ಅವರು ಹನಿ ನಿರಾವರಿ ಪದ್ಧತಿಯನ್ನು ಪರಿಹಾರವಾಗಿ ಕಂಡುಕೊಂಡರು. ಅದಾಗಲೇ ಕೃಷಿಯಿಂದ ಆರ್ಥಿಕವಾಗಿ ಸಾಕಷ್ಟು ಕೈಸುಟ್ಟುಕೊಂಡಿದ್ದ ಗನೆಭಾಯ್ ಅವರು ಗಟ್ಟಿ ಮನಸ್ಸು ಮಾಡಿ ಆಧುನಿಕ ಕೃಷಿ ಮಾದರಿಯ ಮೂಲಕ ದಾಳಿಂಬೆ ಬೆಳೆಯುವ ಪ್ರಯತ್ನಕ್ಕೆ ಕೈ ಹಾಕಿದರು. ಆರಂಭದಲ್ಲಿ 5 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆ ಆರಂಭಿಸಿದರು. ಮಳೆ ನೀರನ್ನು ಸಂಗ್ರಹಿಸಿ ಅದನ್ನು ಹನಿ ನಿರಾವರಿ ಪದ್ಧತಿ ಮೂಲಕ ತಮ್ಮ ಬೆಳೆಗೆ ಅಗತ್ಯ ನೀರು ಪೂರೈಕೆ ಮಾಡಿಕೊಂಡರು. ಅವರ ಈ ಪರಿಶ್ರಮಕ್ಕೆ ಫಲವಾಗಿ ಉತ್ತಮ ಬೆಳೆ ಹಾಗೂ ಬೆಲೆ ಎರಡೂ ಸಿಕ್ಕಿತು. ಬರದ ಪರಿಸ್ಥಿತಿಯ ನಡುವೆ ದಾಳಿಂಬೆ ಬೆಳೆದು ಲಾಭ ಪಡೆದ ಅನಾರ್ ದಾದಾ ಇಡೀ ಸುತ್ತಮುತ್ತಲಿನ ಗ್ರಾಮಗಳಿಗೆ ಮಾದರಿಯಾಗಿ ನಿಂತರು. ನಂತರ ಸುತ್ತಮುತ್ತಲಿನ ಪ್ರದೇಶದ ಜನರು ಸಹ ಗನೆಭಾಯ್ ಅವರ ಹಾದಿಯನ್ನೇ ಹಿಡಿದರು. ಆರಂಭದಲ್ಲಿ 5 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲು ಆರಂಭಿಸಿದ್ದ ಅನಾರ್ ದಾದಾ ಇಂದು 12 ಎಕರೆ ಪ್ರದೇಶಕ್ಕೆ ದಾಳಿಂಬೆ ಬೆಳೆ ವಿಸ್ತರಿಸಿದ್ದಾರೆ. ಇವರ ಈ ಸಾಧನೆಯಿಂದಾಗಿ ಉತ್ತರ ಗುಜರಾತಿನ ಅನೇಕ ರೈತರು ಈಗ ದಾಳಿಂಬೆ ಬೆಳೆಯನ್ನು ಆಧರಿಸಿದ್ದಾರೆ.

ಅನಾರ್ ದಾದಾ ಅವರ ಈ ಸಾಧನೆಯನ್ನು ನೋಡಲು ಅವರ ದಾಳಿಂಬೆ ತೋಟಕ್ಕೆ ಅನೇಕ ಮಂದಿ ಭೇಟಿ ನೀಡುತ್ತಾರೆ. ಅವರಿಂದ ಸೂಕ್ತ ಮಾಹಿತಿ ಪಡೆದು ದಾಳಿಂಬೆ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಗನೆಭಾಯ್ ಅವರ ತೋಟಕ್ಕೆ ಈವರೆಗೂ 35 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ.

ತಮ್ಮ ಅಂಗವೈಕಲ್ಯ ಹಾಗೂ ಬರದಿಂದಾಗಿ ಎದುರಾದ ನೀರಿನ ಅಭಾವದಿಂದ ಗನೆಭಾಯ್ ಅವರು ತಮ್ಮ ಕೈನಲ್ಲಿ ಕೃಷಿ ಮಾಡಲು ‘ಆಗದು ಎಂದು ಕೈಕಟ್ಟಿ ಕುಳಿತಿದ್ದರೆ’ ಇಂದು ಈ ಸಾಧನೆ ಆಗುತ್ತಿತ್ತೇ?

Leave a Reply