ದೇವರಾಜ ಅರಸು ಅವರ ತಮ್ಮ ಕೆಂಪರಾಜ ಅರಸರ ಕೊಡುಗೆಯು ಜನ್ಮ ಶತಮಾನೋತ್ಸವದ ನೆನಕೆಗೆ ಅರ್ಹ

ನಳ ದಮಯಂತಿ ಚಿತ್ರದಲ್ಲಿ ಕೆಂಪರಾಜ ಅರಸರು ಹಾಗೂ ಭಾನುಮತಿ ಅವರು…

author-ssreedhra-murthyಮಾಜಿ ಮುಖ್ಯಮಂತ್ರಿ, ಸಮಾನತೆಯ ಕನಸುಗಾರ ದೇವರಾಜ ಅರಸರ ಜನ್ಮ ಶತಮಾನೋತ್ಸವವನ್ನು ರಾಜ್ಯ ಸರ್ಕಾರವೇ ಮುಂದೆ ನಿಂತು ವಿಜೃಂಭಣೆಯಿಂದ ಆಚರಿಸಿತು. ಆದರೆ ಇನ್ನೆರಡು ದಿನಕ್ಕೆ (ಜನನ ಫೆಬ್ರವರಿ 5, 1917) ಅವರ ಸ್ವಂತ ತಮ್ಮ ಕೆಂಪ ರಾಜ ಅರಸರ ಜನ್ಮ ಶತಮಾನೋತ್ಸವ ಬರಲಿದೆ. ಆದರೆ ಆಚರಣೆ ಇರಲಿ ನೆನಪೂ ಕೂಡ ಯಾರಿಗೂ ಇಲ್ಲ. ಕೆಂಪರಾಜ ಅರಸರು ದೇವರಾಜ ಅರಸರಿಗೆ ಸಾಟಿ ಎನ್ನಿಸಬಲ್ಲ ಸಾಧನೆಯನ್ನು ಮಾಡಿದವರೇ! ಆದರೆ ಅವರ ಸಾಧನೆಯ ಕ್ಷೇತ್ರ ಸಿನಿಮಾ. ಕನ್ನಡ ಚಿತ್ರರಂಗದ ನಿರ್ಮಾತೃಗಳಲ್ಲಿ ಅವರೂ ಒಬ್ಬರು. ಅವರು ನಿರ್ಮಿಸಿ ನಿರ್ದೇಶಿಸಿದ ‘ರಾಜ ವಿಕ್ರಮ’ ಕನ್ನಡ ಚಿತ್ರರಂಗದಲ್ಲಿ 25 ವಾರಗಳ ಪ್ರದರ್ಶನ ಕಂಡ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆ ಪಡೆದಿದೆ.

ಕೆಂಪರಾಜ ಅರಸರ ಜೀವನವೇ ಒಂದು ಸಿನಿಮಾ ತರಹ ಇದೆ. ವೈದ್ಯರಾಗಬೇಕು ಅಂತ ಹೊರಟವರಿಗೆ ಸ್ವಾತಂತ್ರ್ಯ ಚಳುವಳಿಯ ಸೆಳೆತ, ಚಳುವಳಿಯಲ್ಲಿ ಸಕ್ರಿಯರಾದಾಗ ಇಂಗ್ಲೀಷ್ ಸಾಹಿತ್ಯ ಓದುತ್ತಿದ್ದ ಲಲಿತಾ ಅವರ ಪರಿಚಯ ಪ್ರೇಮಕ್ಕೆ ತಿರುಗಿತು. ಅದು ಅಂತರ್ಜಾತಿ ವಿವಾಹ. ಅರಮನೆಯಿಂದ ಬರುತ್ತಿದ್ದ ಸ್ಕಾಲರ್ ಶಿಪ್ ನಿಲ್ಲುವ ಬೆದರಿಕೆ ಬಂದಿತು. ಅಣ್ಣ ದೇವರಾಜ ಅರಸರೊಬ್ಬರೇ ಬೆಂಬಲ ನೀಡಿದ್ದು. ಎಲ್ಲರನ್ನೂ ಎದುರಿಸಿ ವಿವಾಹವಾಗಿದ್ದೂ ಆಯಿತು. ಕಷ್ಟದ ದಿನಗಳು ಎದುರಾದವು. ವೈದ್ಯರಾಗುವ ಕನಸಿಗೆ ತಿಲಾಂಜಲಿ ಇಡಬೇಕಾಯಿತು. ಜೀವನ ನಡೆಯ ಬೇಕಲ್ಲ. ಗುಬ್ಬಿ ವೀರಣ್ಣನವರ ಮನೆಯ ಕದ ತಟ್ಟಿದರು. ಅರಮನೆ ಹುಡುಗ ನಾಟಕದಲ್ಲಿ ಪಾತ್ರ ಮಾಡಿಸಿದರೆ ದೊರೆಗಳು ಮೆಚ್ಚುವರೇ ಎಂದು ಯೋಚಿಸಿದ ವೀರಣ್ಣನವರು ತಮ್ಮ ‘ಜೀವನ ನಾಟಕ’ ಚಿತ್ರದ ನಾಯಕನನ್ನಾಗಿಸಿದರು. ಮುಂಬೈನಿಂದ ಬಂದ ‘ಆದ್ಮಿ’ ಚಿತ್ರದ ಮೂಲಕ ಹೆಸರು ಮಾಡಿದ್ದ ಶಾಂತಾ ಹುಬ್ಳಿಕರ್ ನಾಯಕಿ. ಅ.ನ.ಕೃ ಅವರ ಸಂಭಾಷಣೆ. ಚಿತ್ರದ ಮೂಲಕ ಕೆಂಪರಾಜ ಅರಸು ಹೆಸರು ಮಾಡಿದರು. ಕನಸುಗಳನ್ನು ಕಟ್ಟಿಕೊಂಡು ಮುಂಬೈಗೆ ಹೋಗಿದ್ದೂ ಆಯಿತು. ಆದರೆ ಅವಕಾಶ ಸಿಗಲಿಲ್ಲ.

ಮರಳಿ ಕನ್ನಡಕ್ಕ ಬಂದವರಿಗೆ ಸಿಕ್ಕಿದ್ದು ‘ಕೃಷ್ಣಲೀಲೆ’ ಚಿತ್ರದ ಕಂಸನ ಪಾತ್ರ. ಅದರಲ್ಲಿಯೂ ಗಮನ ಸೆಳೆದರು. ‘ಮಹಾನಂದ’ ಚಿತ್ರದಲ್ಲಿ ಗುರುವಿನ ಪಾತ್ರ ಮಾಡಿದರು. ಮಹಾತ್ಮ ಪಿಕ್ಚರ್ಸ್‍ ಅವರ  ‘ಭಕ್ತ ರಾಮದಾಸ’ ಚಿತ್ರಕ್ಕೆ ಪಾಲುದಾರರಾಗಿ ನಿರ್ದೇಶನ ಮಾಡಿದರು. ಅದರಲ್ಲಿ ಬಾದ್‍ಶಹಾ ಪಾತ್ರವನ್ನೂ ಮಾಡಿದರು. ವರಕವಿ ಬೇಂದ್ರೆಯವರಿಂದಲೇ ಗೀತೆಗಳನ್ನು ಬರೆಸಿದರು. ಕಾಳಿಂಗ ರಾಯರನ್ನು ಸಂಗೀತ ನಿರ್ದೇಶಕರಾಗಿಸಿದರು. ಆದರೆ ಚಿತ್ರ ಗೆದ್ದರೂ ಪಾಲಿನ ಹಣ ಮಾತ್ರ ಸಿಗಲಿಲ್ಲ. ಬದುಕು ಮತ್ತೆ  ಕವಲು ದಾರಿ ಹಿಡಿಯಿತು. ಕೈಯಲ್ಲಿ ಹಣ ಇಲ್ಲ ಜೊತೆಗೆ ಮೂವರು ಹೆಣ್ಣುಮಕ್ಕಳನ್ನು ಸಾಕುವ ಹೊಣೆಗಾರಿಕೆ. ಕೊನೆಗೆ ಮಡದಿ ತಮ್ಮ ಬಳಿ ಇದ್ದ ಚಿನ್ನವನ್ನೆಲ್ಲಾ  ಗಂಡನಿಗೆ ಕೊಟ್ಟು ಏನಾದರೂ ದಾರಿ ಹುಡುಕಿ ಎಂದರು. ಗಫೂರ್ ಅನ್ನೋವವರ ಪರಿಚಯವಾಯಿತು. ಗೊತ್ತಿದ್ದು ಒಂದೇ,  ಸಿನಿಮಾ ಮಾಡುವುದು. ಹಳ್ಳಿಯಲ್ಲಿ ನೋಡಿದ್ದ ಶನಿ ಮಹಾತ್ಮ ಕಥೆ ನೆನಪಾಯಿತು. ಜಯಮ್ಮ ಮತ್ತು ರಾಜಮ್ಮ ಇಬ್ಬರನ್ನೂ ನಾಯಕಿಯರನ್ನಾಗಿಸಿಕೊಂಡು ‘ರಾಜಾ ವಿಕ್ರಮ’ ಸಿನಿಮಾವನ್ನು ಕನ್ನಡ ಮತ್ತು ತಮಿಳು ಎರಡೂ ಭಾಷೆಯಲ್ಲಿ ಮಾಡಿದರು. ಹೀಗೆ ಎರಡೂ ಭಾಷೆಯಲ್ಲಾದ ಮೊದಲ ಕನ್ನಡ ಚಿತ್ರ ಇದು. ಕೆಂಪೇಗೌಡ ರಸ್ತೆಯಲ್ಲಿನ ಒಂದೂ ಥಿಯೇಟರ್ ಸಿಗಲಿಲ್ಲ. ಸಿಕ್ಕಿದ್ದು ಚಿಕ್ಕಪೇಟೆಯ ವಿಜಯಾ ಮತ್ತು ವಿಶ್ವೇಶ್ವರಪುರಂನಲ್ಲಿನ ಮಿನರ್ವ ಚಿತ್ರಮಂದಿರಗಳು. ಅಲ್ಲಿಯೇ ಚಿತ್ರ ಜಯಭೇರಿ ಹೊಡೆಯಿತು. ಕನ್ನಡ ಚಿತ್ರಗಳು 5-6 ವಾರ ಓಡಿದರೇ ದಾಖಲೆ ಎನ್ನುವ ಕಾಲದಲ್ಲಿ 25 ವಾರಗಳ ಕಾಲ ಓಡಿ ಅಂತಹ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ ಎನ್ನಿಸಿಕೊಂಡಿತು. ಇಂತಹ ಗೆಲುವಿನ ನಂತರವೂ ಕೆಂಪರಾಜ ಅರಸರ ಕೈಗೆ ಹಣ ಬರಲಿಲ್ಲ. ವಿತರಕರ ಜೊತೆ 20 ವರ್ಷ ಕೇಸ್ ನಡೆದು ಹಣ ಬಂದರೂ ಅಷ್ಟು ಹೊತ್ತಿಗೆ ಅವರ ಚಿತ್ರ ಜೀವನ ಮುಗಿದಿತ್ತು. ಪತ್ನಿ ಲಲಿತಾ ಅವರ ಸಲಹೆಯಂತೆ ಅಲೆಕ್ಸಾಂಡರ್ ಡ್ಯೂಮ ಅವರ ‘ಕೌಂಟ್ ಆಫ್ ಮಾಂಟೆ ಕ್ರೊಸ್ಟ್’ ಕಾದಂಬರಿ ಆಧರಿಸಿದ ‘ಜಲದುರ್ಗ’ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರೂ. ಪ್ರಯೋಗಶೀಲವಾಗಿದ್ದ ಚಿತ್ರ ಕೈಕಚ್ಚಿತು.

ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಗಳಲ್ಲಿ ಕೆಂಪರಾಜ ಅರಸರು ‘ನಳ ದಮಯಂತಿ’ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಆಗಿನ ಪ್ರಸಿದ್ಧ ಗಾಯಕಿ ಮತ್ತು ನಾಯಕಿ ಭಾನುಮತಿ ದಮಯಂತಿಯಾದರು. ಭಾನುಮತಿ ಅಭಿನಯಿಸಿದ ಏಕೈಕ ಕನ್ನಡ ಚಿತ್ರ ಇದು.  ಸ್ವತಃ ನಳನ ಪಾತ್ರವನ್ನು ವಹಿಸಿದ ಅರಸರು ವಿಶಿಷ್ಠವಾಗಿ ಚಿತ್ರವನ್ನೋನೋ ರೂಪಿಸಿದರು. ಆದರೆ ಮೂರು ಭಾಷೆಗಳ ವ್ಯವಹಾರ ಅವರಿಗೆ ತೊಡಕಾಯಿತು. ಕನ್ನಡ ಮತ್ತು ತಮಿಳು ಭಾಷೆಗಳರೆಡಲ್ಲೂ ನಿರ್ಮಿಸಿದ ‘ಕಾಡಿನ ಕಥೆ’ ಅವರ ಕೊನೆಯ ಚಿತ್ರವಾಯಿತು. ಕನ್ನಡ ಅವತರಣಿಕೆ ತೆರೆ ಕಾಣಲೇ ಇಲ್ಲ ತಮಿಳಿನ ‘ಅಲಗರ ಮಲೈ ಕಳ್ಳನ್’ ಮಾತ್ರ ತೆರೆ ಕಂಡು ಸೋಲನ್ನು ಅನುಭವಿಸಿತು. ಸಕಲ ಆಸ್ತಿಯನ್ನೂ ಕಳೆದು ಕೊಂಡು ಚಿತ್ರರಂಗದ ಸಹವಾಸದಿಂದ ದೂರವಾದರು. ಅಣ್ಣ ದೇವರಾಜ ಅರಸು ಮುಖ್ಯಮಂತ್ರಿಯಾದಾಗ ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದರು. ಆಗ ಅವರು ರೂಪಿಸಿದ್ದ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ. ನಿರ್ಮಾಣದ ಬದಲು ವಿತರಣೆಗೆ ನೆರವು, ತರಬೇತಿ, ದಾಖಲಾತಿ ವ್ಯವಸ್ಥೆ, ಕಲಾವಿದರಿಗೆ ಮಾಸಾಶನ ಇದರ ಜೊತೆಗೆ ಚಿತ್ರನಗರಿಯ ಕನಸನ್ನು ಕಂಡ ಮೊದಲಿಗರು ಅವರು. ಆದರೆ ರಾಜಕೀಯ ಒತ್ತಡದಲ್ಲಿ ಅವೆಲ್ಲವೂ ಅಪೂರ್ಣವಾದವು. ಕೆಂಪರಾಜ ಅರಸರು ತಮ್ಮ ಆತ್ಮಕಥೆ ‘ಅರವತ್ತು ವರ್ಷಗಳು’ ದಲ್ಲಿ ಈ ರಾಜಕೀಯ ಷಡ್ಯಂತರಗಳನ್ನು ವರ್ಣರಂಜಿತವಾಗಿ ವಿವರಿಸಿದ್ದಾರೆ. ಕೊನೆಯ ದಿನಗಳಲ್ಲಿ ರಾಜಕೀಯವಾಗಿ ಸಕ್ರಿಯವಾಗಿದ್ದ ಕೆಂಪರಾಜ ಅರಸರು ಅದಕ್ಕಾಗಿಯೇ ವಿವಾದಕ್ಕೂ ಕಾರಣರಾದರು. 1982ರ ಮೇ 18ರಂದು ಕೆಂಪರಾಜ ಅರಸರು ನಿಧನರಾದರು. ಇದಾದ ಹದಿನೆಂಟೇ ದಿನಕ್ಕೆ ಅಣ್ಣ ದೇವರಾಜ ಅರಸರೂ ನಿಧನರಾದರು. ಕನ್ನಡ ನಾಡಿಗೆ ಅದರಲ್ಲೂ ಚಿತ್ರರಂಗಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದ ಕೆಂಪರಾಜ ಅರಸರನ್ನು ಶತಮಾನೋತ್ಸವದ ಸಂದರ್ಭದಲ್ಲಿ  ಚಿತ್ರರಂಗದವರಾದರೂ ಸ್ಮರಿಸಬೇಕು.

Leave a Reply