ಇಸ್ರೆಲ್ ಕಟ್ಟರ್ ಬೆಂಬಲದಿಂದ ಹಿಂದೆ ಸರಿದ ಟ್ರಂಪ್, ಇದು ಮೊದಲ ಯೂಟರ್ನ್?

ಡಿಜಿಟಲ್ ಕನ್ನಡ ಟೀಮ್:

ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಡೊನಾಲ್ಡ್ ಟ್ರಂಪ್ ತಾವು ಚುನಾವಣೆ ವೇಳೆ ನೀಡಿದ್ದ ಹಲವು ಭರವಸೆಗಳನ್ನು ಪೂರ್ಣಗೊಳಿಸಲು ಮುಂದಾಗಿರೋದು ಗೊತ್ತಿರುವ ವಿಚಾರ. ಆದರೆ ಈಗ ಟ್ರಂಪ್ ಮೊದಲ ಬಾರಿಗೆ ತಮ್ಮ ನಿರ್ಧಾರದಿಂದ ಯೂಟರ್ನ್ ಹೊಡೆಯುತ್ತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಕಾರಣ, ಇಸ್ರೆಲ್ ಗೆ ಬೆಂಬಲ ಸೂಚಿಸುತ್ತಿದ್ದ ಟ್ರಂಪ್, ಈಗ ವಿವಾದಿತ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಜನ ವಸತಿ ನಿರ್ಮಾಣದ ಇಸ್ರೆಲ್ ನಿರ್ಧಾರವನ್ನು ಹಿಂಪಡೆಯುವಂತೆ ಎಚ್ಚರಿಕೆ ನೀಡಿದ್ದಾರೆ.

ಇಸ್ರೆಲ್ ಹಾಗೂ ಪ್ಯಾಲೆಸ್ತೀನ್ ನಡುವಣ 1967ರ ಯುದ್ಧದಲ್ಲಿ ಇಸ್ರೆಲ್ ವಶಪಡಿಸಿಕೊಂಡಿರುವ ವೆಸ್ಟ್ ಬ್ಯಾಂಕ್ ಹಾಗೂ ಪೂರ್ವ ಜೆರುಸಲೇಮ್ ಪ್ರದೇಶಗಳಲ್ಲಿ ಜನವಸತಿ ನಿರ್ಮಾಣಕ್ಕೆ ಈ ಹಿಂದಿನ ಬರಾಕ್ ಒಬಾಮ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಎರಡು ದೇಶಗಳ ನಡುವಣ ತಿಕ್ಕಾಟದ ಪರಿಸ್ಥಿತಿಯಲ್ಲಿ ಇಸ್ರೇಲ್ ಜನ ವಸತಿ ನಿರ್ಮಾಣ ಸರಿಯಲ್ಲ ಎಂದು ಒಬಾಮಾ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.

ಆದರೆ ಇಸ್ರೇಲಿನ ಈ ನಿರ್ಧಾರಕ್ಕೆ ಈ ಹಿಂದೆ ಬೆಂಬಲ ಸೂಚಿಸಿದ್ದ ಡೊನಾಲ್ಡ್ ಟ್ರಂಪ್ ಈಗ ಉಲ್ಟಾ ಹೊಡೆದಿದ್ದಾರೆ. ‘ಈಗಾಗಲೇ ನಿರ್ಮಾಣವಾಗಿರುವ ಜನ ವಸತಿ ಪ್ರದೇಶವನ್ನು ಮತ್ತಷ್ಟು ವಿಸ್ತರಿಸುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಶಾಂತಿ ಸ್ಥಾಪಿಸುವ ಉದ್ದೇಶದಿಂದ ಈ ಪ್ರದೇಶದಲ್ಲಿ ಮತ್ತೆ ಜನ ವಸತಿ ನಿರ್ಮಾಣ ಮಾಡುವುದು ಸೂಕ್ತ ಪರಿಹಾರ ಮಾರ್ಗವಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರದೇಶದಲ್ಲಿ ಇಸ್ರೆಲ್ ಈಗಾಗಲೇ ಜನ ವಸತಿಯನ್ನು ನಿರ್ಮಿಸಿದೆ. ಅದಾಗ್ಯೂ ಸಹ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲೇ ಇನ್ನು 3000 ಜನವಸತಿ ನಿರ್ಮಾಣ ಮಾಡುವ ನಿರ್ಧಾರವನ್ನು ಇಸ್ರೆಲ್ ಬುಧವಾರ ಪ್ರಕಟಿಸಿತು. ಟ್ರಂಪ್ ಅಧಿಕಾರಕ್ಕೆ ಬಂದ ಎರಡೇ ವಾರಗಳ ಅಂತರದಲ್ಲಿ ಇಸ್ರೆಲ್ ಮೂರನೇ ಬಾರಿಗೆ ಈ ರೀತಿಯಾದ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಹೀಗಾಗಿ ಇಸ್ರೆಲ್ ತನ್ನ ಬೆಂಬಲವನ್ನು ದುರಪಯೋಗ ಮಾಡಿಕೊಳ್ಳಬಾರದು ಎಂದು ಟ್ರಂಪ್ ಎಚ್ಚರಿಕೆ ರವಾನಿಸಿದ್ದಾರೆ.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನ ಇಸ್ರೇಲಿ ಅಧ್ಯಕ್ಷ ಬೆಂಜಮೆನ್ ನೆತಾನ್ಯುಹು ಅವರಿಗೆ ಈ ಜನವಸತಿ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಟ್ರಂಪ್ ಭರವಸೆ ನೀಡಿದ್ದರು. ಆದರೆ ಈಗ ‘ಇಸ್ರೇಲ್ ಈ ಪ್ರದೇಶಗಳಲ್ಲಿ ಜನವ ವಸತಿ ನಿರ್ಮಾಣದ ಕ್ರಮದಿಂದ ಹಿಂದೆ ಸರಿಯಬೇಕು’ ಎಂಬ ಎಚ್ಚರಿಕೆ ರವಾನಿಸಿದ್ದಾರೆ. ಹೀಗಾಗಿ ಟ್ರಂಪ್ ತಮ್ಮ ನಿಲುವು ಬದಲಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಇಸ್ರೆಲ್ ನ ಈ ಕ್ರಮದ ಬಗ್ಗೆ ಟ್ವಿಟರ್ ನಲ್ಲಿ ಟ್ರಂಪ್ ಅತೃಪ್ತಿ ವ್ಯಕ್ತಪಡಿಸಿರುವುದು ಹೀಗೆ… ‘ಇಸ್ರೇಲ್ ಅಮೆರಿಕದ ಉತ್ತಮ ಸ್ನೇಹಿತ ರಾಷ್ಟ್ರಗಳಲ್ಲಿ ಒಂದು. ಆದರೆ ಇಂತಹ ನಿರ್ಧಾರದ ಮೂಲಕ ಅಮೆರಿಕದ ಸ್ನೇಹವನ್ನು ದುರ್ಬಳಕೆ ಮಾಡಿಕೊಳ್ಳುವುದು ಅಥವಾ ಅಗೌರವ ತೋರುವುದು ಸರಿಯಲ್ಲ.’

ಟ್ರಂಪ್ ಹೀಗೆ ತಮ್ಮ ವರಸೆಯನ್ನೇ ಬದಲಾಯಿಸಿರುವುದು, ಇಸ್ರೆಲಿನ ಕಟ್ಟರ್ ಬೆಂಬಲದಿಂದ ಟ್ರಂಪ್ ಹಿಂದೆ ಸರಿಯುತ್ತಿದ್ದಾರೆಯೇ? ಆ ಮೂಲಕ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ಟ್ರಂಪ್ ಯೂಟರ್ನ್ ಹೊಡೆದಿದ್ದಾರೆಯೇ? ಎಂಬ ಪ್ರಶ್ನೆಗಳು ಮೂಡುತ್ತಿವೆ.

Leave a Reply