ಗಲ್ಫ್ ವಲಸಿಗರ ಬದುಕು ಕದಡಿ ಜೈಲುಪಾಲಾದಾಗಲೆಲ್ಲ ಮಿಡಿದಿದೆ ಈ ಚಿನ್ನದ ಹೃದಯ!

ಡಿಜಿಟಲ್ ಕನ್ನಡ ವಿಶೇಷ:

ಫಿರೋಜ್ ಮರ್ಚಂಟ್. ವಯಸ್ಸು 53. ಪ್ಯೂರ್ ಗೋಲ್ಡ್ ಜುವೆಲರ್ಸ್ ಅಧ್ಯಕ್ಷ. ದುಬೈ ಅನ್ನು ಕೇಂದ್ರೀಕರಿಸಿಕೊಂಡಿರುವ ಆಭರಣ ಸಾಮ್ರಾಜ್ಯ ಮಧ್ಯಪ್ರಾಚ್ಯದ ಸುಮಾರು 100 ಅಂಗಡಿಗಳಲ್ಲಿ ಹರಡಿಕೊಂಡಿದೆ.

ಫಿರೋಜ್ ಮರ್ಚೆಂಟ್ ಶ್ರೀಮಂತಿಕೆಯೂ ಒಂದು ಸಾಧನಾಗಾಥೆಯೇ. ಆದರೆ ಶ್ರೀಮಂತ, ಯಶಸ್ವಿ ಉದ್ಯಮಿ ಎಂಬ ಕಾರಣಕ್ಕೆ ಇಲ್ಲಿ ನೆನೆಸಿಕೊಳ್ಳುತ್ತಿಲ್ಲ. ಅದನ್ನೇ ಮಾನದಂಡವಾಗಿಟ್ಟುಕೊಂಡು ಹುಡುಕಹೋದರೆ ಮರುಭೂಮಿ ರಾಷ್ಟ್ರಗಳಲ್ಲಿ ಇಂಥ ಶ್ರೀಮಂತಿಕೆ ಕತೆಗಳು ಬಹಳ ಸಿಗಬಹುದೇನೋ. 1989ರಲ್ಲಿ ಮುಂಬೈ ತೊರೆದು, ಆಸ್ತಿ ವ್ಯವಹಾರ ಮಾಡಿಕೊಂಡಿದ್ದ ತಮ್ಮ ಕುಟುಂಬಕ್ಕೆ ಅಪರಿಚಿತವಾಗಿದ್ದ ಚಿನ್ನಾಭರಣ ವಹಿವಾಟನ್ನು ದುಬೈನಲ್ಲಿ ಪ್ರಾರಂಭಿಸಿದ ವ್ಯಕ್ತಿ ಫಿರೋಜ್ ಮರ್ಚೆಂಟ್.

ಆದರೆ…

ಬದಲಾಗುತ್ತಿರುವ ವಲಸೆ ನೀತಿಗಳು, ಜಗತ್ತನ್ನು ರಕ್ಷಣಾತ್ಮಕವಾಗಿಸುತ್ತಿರುವ ಆರ್ಥಿಕ ಒತ್ತಡಗಳು ಈ ಎಲ್ಲದರ ಹಿನ್ನೆಲೆಯಲ್ಲಿ ಫಿರೋಜ್ ಮರ್ಚೆಂಟ್, ಅವರ ಸಿರಿವಂತಿಕೆ ಹೊರತಾದ ಬೇರೆ ಕಾರಣಕ್ಕೆ ಪ್ರಸ್ತುತರಾಗುತ್ತಾರೆ. ಸಾಲದ ಸುಳಿಗೆ ಸಿಕ್ಕು ಜೈಲು ಸೇರಬೇಕಾಗಿ ಬಂದ ವಲಸಿಗರನ್ನು ಶಿಕ್ಷೆಯಿಂದ ಬಿಡಿಸಿ ತಾಯ್ನಾಡಿಗೆ ಕಳುಹಿಸಿಕೊಡುವ ಕಾರ್ಯದಲ್ಲಿ ಫಿರೋಜ್ ಹೆಸರಾಗಿದ್ದಾರೆ. ಭಾರತವಷ್ಟೇ ಅಲ್ಲದೇ ಪಾಕಿಸ್ತಾನ, ಶ್ರೀಲಂಕಾ, ಸೊಮಾಲಿಯ, ಇಥಿಯೋಪಿಯ, ಮೊರಾಕ್ಕೊ, ಅಫಘಾನಿಸ್ತಾನದ ಕೈದಿಗಳಿಗೂ ಫಿರೋಜರ ಸಹಾಯಹಸ್ತ ಸಿಕ್ಕಿದೆ. ಈ ಕಾರ್ಯಕ್ಕೆಂದೇ ಸುಮಾರು 8 ಲಕ್ಷ ಡಾಲರುಗಳನ್ನು ಎತ್ತಿಟ್ಟು ಒಂದೆರಡು ಸ್ವಯಂಸೇವಾ ಸಂಸ್ಥೆಗಳ ಜತೆಗೂ ಬೆರೆತು ಈ ಬಿಡುಗಡೆ ಭಾಗ್ಯದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಫಿರೋಜ್.

ಯಾರನ್ನಾದರೂ ಜೈಲಿನಿಂದ ಬಿಡಿಸುವುದು ಒಳ್ಳೆಯ ಕಾರ್ಯವಾಗುತ್ತದೆಯೇ? ಇಲ್ಲಿ ಫಿರೋಜರು ಬಿಡಿಸುತ್ತಿರುವುದು ಅಪರಾಧಿಗಳನ್ನಲ್ಲ, ಬದಲಿಗೆ ಆರ್ಥಿಕ ಕುಸಿತದ ಕಾರಣದಿಂದ ಸಾಲ ತೀರಿಸಲಾಗದೇ, ಖಾತೆಯಲ್ಲಿ ಹಣವಿಲ್ಲದೇ, ತಮ್ಮ ಚೆಕ್ ಗಳು ಬೌನ್ಸ್ ಆಗಿದ್ದಕ್ಕಾಗಿ ಜೈಲು ಸೇರುತ್ತಿರುವ ವಲಸಿಗ ಕಾರ್ಮಿಕ ಸಮುದಾಯಕ್ಕೆ ಫಿರೋಜ್ ನೆರವು ಸಲ್ಲುತ್ತಿದೆ.

2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾದಾಗ ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ನಿರ್ಮಾಣ ಕಾಮಗಾರಿಗಳು ಕುಂಠಿತಗೊಂಡವು. ನಂತರ ಪರಿಸ್ಥಿತಿ ಸುಧಾರಿಸಿದರೂ ಕಚ್ಚಾತೈಲ ಬೆಲೆ ಇಳಿಕೆ, ಅನಿಶ್ಚಿತತೆಗಳ ಕಾರಣದಿಂದ ಬಹಳಷ್ಟು ಕೆಲಸಗಳು ಕಡಿತವಾದವು. ಪರಿಣಾಮವಾಗಿ ಅಲ್ಲಿನ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡ ಬಹುದೊಡ್ಡ ವಲಸಿಗ ವರ್ಗಕ್ಕೆ ಸಂಬಳ ವಿಳಂಬವಾಗುವುದು, ಸಂಬಳ ಸಿಗದಿರುವುದು ಮುಂತಾದ ಪರಿಸ್ಥಿತಿ ಸೃಷ್ಟಿಯಾಯಿತು. ಆದರೆ ಮನೆಗೆಂದೋ, ಮತ್ಯಾವ ಕಾರಣಕ್ಕೋ ಮಾಡಿದ್ದ ಸಾಲಗಳ ತಿಂಗಳ ಕಂತನ್ನು ಕಟ್ಟಲೇಬೇಕಿತ್ತು. ಅದು ಸಾಧ್ಯವಾಗದಿದ್ದಾಗ ಅಲ್ಲಿನ ಕಠಿಣ ಕಾನೂನುಗಳ ಅನುಸಾರವಾಗಿ ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಜೈಲುಪಾಲಾದರು.

ಇಂಥವರನ್ನು ಗುರುತಿಸಿ, ಕಾನೂನು ನೆರವು ನೀಡಿ ಜೈಲಿನಿಂದ ಹೊರತರುವುದಲ್ಲದೇ ನಂತರ ವಿಮಾನಯಾನದ ಖರ್ಚುಗಳನ್ನು ಹಾಕಿಕೊಂಡು ಅವರನ್ನು ತಾಯ್ನಾಡಿನ ಕುಟುಂಬಗಳಿಗೆ ಸೇರಿಸುವ ಕೆಲಸವನ್ನು ಫಿರೋಜ್ ಮಾಡಿಕೊಂಡು ಬಂದಿದ್ದಾರೆ. ಆರೋಗ್ಯ, ಮಕ್ಕಳ ಶಿಕ್ಷಣ ಇಂಥ ವಿಷಯಗಳಲ್ಲಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡ ವಲಸಿಗರಿಗೂ ಅವರು ಸಹಾಯ ಮಾಡುತ್ತಿದ್ದಾರೆ. ಇದುವರೆಗೆ ಸುಮಾರು 4500 ಕೈದಿಗಳನ್ನು ಬಿಡುಗಡೆಗೊಳಿಸಿ ತಾಯ್ನಾಡಿಗೆ ಕಳುಹಿಸಿರುವುದಾಗಿ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇಷ್ಟೆಲ್ಲ ಮಾಡುವುದಕ್ಕಿಂತ, ಯುಎಇಯ ರಾಜ ಮನೆತನಕ್ಕೇ ಮನವರಿಕೆ ಮಾಡಿಸಿ ಕಾಯ್ದೆಗಳನ್ನೇ ಸಡಿಲವಾಗುವಂತೆ ಮಾಡಲಾಗದೇ ಎಂಬ ಪ್ರಶ್ನೆಯೂ ಇವರಿಗೆ ಎದುರಾಗಿದೆ. ಅದಕ್ಕವರ ಉತ್ತರ- ‘ನೆಲೆ ಕೊಟ್ಟ ದೇಶದ ಕಾನೂನನ್ನು ಪ್ರಶ್ನಿಸುವುದು ಉಚಿತವಲ್ಲ. ಪ್ರತಿಯೊಬ್ಬರೂ ಅವರ ದೇಶದ ಕಾಯ್ದೆ-ಕಟ್ಟಳೆ ಗೌರವಿಸಬೇಕಾಗುತ್ತದೆ. ಇದಕ್ಕೆ ಹೊರತಾಗಿ ನಮ್ಮ ಸಾಮರ್ಥ್ಯದಲ್ಲಿ ಏನು ಮಾಡಬಹುದೆಂದು ಯೋಚಿಸಬೇಕಷ್ಟೆ. ನೀನು ಎಷ್ಟೇ ದೊಡ್ಡವನಾದರೂ ಮನುಷ್ಯತ್ವದಲ್ಲಿ ದೊಡ್ಡತನ ಸಾಧಿಸಿದರೆ ಮಾತ್ರವೇ ದೇವರು ಮೆಚ್ಚುತ್ತಾನೆಂಬ ಅಮ್ಮನ ನುಡಿಗಳೇ ಆದರ್ಶ.’

ಗಲ್ಫ್ ರಾಷ್ಟ್ರಗಳಲ್ಲಿ ಇತ್ತೀಚೆಗೆ ಭಾರತೀಯ ಕಾರ್ಮಿಕರಿಗೆ ತೊಂದರೆ ಆದಾಗಲೆಲ್ಲ ಭಾರತ ಸರ್ಕಾರ ನೆರವಿಗೆ ಧಾವಿಸಿದೆ. ವಿದೇಶಾಂಗ ಖಾತೆ ಸಹಾಯಕ ಸಚಿವರಾದ ಎಂಜೆ ಅಕ್ಬರ್, ವಿ ಕೆ ಸಿಂಗ್ ಇವರೆಲ್ಲ ಕೆಲವು ತಿಂಗಳ ಹಿಂದೆ ಭಾರತೀಯ ಕಾರ್ಮಿಕರ ಹಿತರಕ್ಷಣೆ ಸಲುವಾಗಿ ಗಲ್ಫ್ ರಾಷ್ಟ್ರಗಳೊಂದಿಗೆ ಸುದೀರ್ಘ ಮಾತುಕತೆಗಳನ್ನೂ ನಡೆಸಿದ್ದರು. ಏರ್ಲಿಫ್ಟ್ ನಂಥ ಸಿನಿಮಾಗಳು ಹಲವು ದಶಕಗಳ ಹಿಂದೆ ಮಧ್ಯಪ್ರಾಚ್ಯದಲ್ಲಿ ಕ್ಷಿಪ್ರಕ್ರಾಂತಿಯಂಥ ವಿದ್ಯಮಾನ ನಡೆದಾಗ ಭಾರತೀಯ ಕೆಲಸಗಾರರನ್ನು ಹಿಂದಕ್ಕೆ ಕರೆತಂದ ಯಶೋಗಾಥೆಯನ್ನು ಕಟ್ಟಿಕೊಟ್ಟಿದೆ. ಇವೆಲ್ಲವೂ ಮೆಚ್ಚುಗೆಗೆ ಅರ್ಹ.

ಅಂತೆಯೇ, ಫಿರೋಜ್ ಮರ್ಚೆಂಟ್ ಅವರಂಥ ವ್ಯಕ್ತಿಗಳು ತಮ್ಮ ಪಾಡಿಗೆ ಮಾನವೀಯ ಸೇವೆ ಒದಗಿಸಿಕೊಂಡಿರುತ್ತಾರೆ. ಇಂಥ ಮಾದರಿಗಳಿಗೂ ನಮ್ಮ ಮನ ತುಂಬಿ ಬರಲಿ. ಇದೂ ದೇಶಸೇವೆ.

Leave a Reply